ಮೋದಿ 3.0 | ಒಬಿಸಿ, ದಲಿತರಿಗೆ ಸಂಪುಟದಲ್ಲಿ ಅವಕಾಶವಿಲ್ಲ: ಸಮುದಾಯಗಳ ಅಸಮಾಧಾನ
x

ಮೋದಿ 3.0 | ಒಬಿಸಿ, ದಲಿತರಿಗೆ ಸಂಪುಟದಲ್ಲಿ ಅವಕಾಶವಿಲ್ಲ: ಸಮುದಾಯಗಳ ಅಸಮಾಧಾನ


ಒಂದು ಕಡೆ ಪ್ರಧಾನಿ ಮೋದಿಯವರ ಸಂಪುಟದಲ್ಲಿ ಕರ್ನಾಟಕಕ್ಕೆ ಸಿಂಹಪಾಲು ಸಿಕ್ಕಿರುವ ಬಗ್ಗೆ ಚರ್ಚೆಯಾಗುತ್ತಿರುವ ಹೊತ್ತಿಗೇ, ಮತ್ತೊಂದು ಕಡೆ ಆ ಸಿಂಹಪಾಲು ಸಿಕ್ಕಿರುವುದು ಯಾವ ಸಮುದಾಯಗಳಿಗೆ? ಎಂಬ ಪ್ರಶ್ನೆಗಳೂ ಎದ್ದಿವೆ.

ಭಾನುವಾರ ಸಂಜೆ ಪ್ರಧಾನಿ ಮೋದಿಯವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ 72 ಮಂದಿ ಸಚಿವರ ಪಟ್ಟಿಯಲ್ಲಿ ಕರ್ನಾಟಕದ ನಾಲ್ವರು ನೂತನ ಸಂಸದರು ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್‌ ಅವರ ಹೆಸರುಗಳೂ ಇದ್ದವು. ಆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಈ ಬಾರಿ ಐದು ಸಚಿವ ಸ್ಥಾನಗಳು ಸಿಕ್ಕಿವೆ ಎಂಬುದು ಬಿಜೆಪಿ ಮತ್ತು ಅದರ ಪರಿವಾರದ ವಲಯದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಆದರೆ, ಅದೇ ವೇಳೆ ಈ ಐದೂ ಮಂದಿ ರಾಜ್ಯದ ಪ್ರಬಲ ಸಮುದಾಯಗಳಿಗೆ ಸೇರಿದವರು, ಬಿಜೆಪಿಗೆ ದಶಕಗಳಿಂದ ಪ್ರಬಲ ಬೆಂಬಲಿಗರಾಗಿ ನಿಂತಿರುವ ರಾಜ್ಯದ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಈ ಬಾರಿ ಯಾವ ಅವಕಾಶವನ್ನೂ ನೀಡಿಲ್ಲ ಎಂಬ ಸಂಗತಿ ಕೂಡ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಇಬ್ಬರು ಬ್ರಾಹ್ಮಣ, ಇಬ್ಬರು ಒಕ್ಕಲಿಗ ಮತ್ತು ಒಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಪ್ರಲ್ಹಾದ ಜೋಷಿ ಮತ್ತು ನಿರ್ಮಲಾ ಸೀತಾರಾಮನ್‌ ಅವರು ಬ್ರಾಹ್ಮಣ ಸಮುದಾಯದವರಾದರೆ, ಎಚ್‌ ಡಿ ಕುಮಾರಸ್ವಾಮಿ ಮತ್ತು ಶೋಭಾ ಕರಂದ್ಲಾಜೆ ಅವರು ಒಕ್ಕಲಿಗ ಸಮುದಾಯದವರು. ಇನ್ನು ವಿ ಸೋಮಣ್ಣ ಅವರು ಲಿಂಗಾಯತ ಸಮುದಾಯದ ಮುಖಂಡ. ಈ ಮೂರೂ ಸಮುದಾಯಗಳು ಬಿಜೆಪಿ ಈ ಬಾರಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸುವಲ್ಲಿ ನಿರ್ಣಾಯಕರು ಎಂಬುದು ಈ ಸಮುದಾಯಗಳಿಗೆ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲು ಕಾರಣವಿರಬಹುದು.

ಆದರೆ, ರಾಜ್ಯದ ದಲಿತ ಮತ್ತು ಒಬಿಸಿ ಸಮುದಾಯಗಳು ಕೂಡ ಬಿಜೆಪಿಯ ಸ್ಥಾನ ಗಳಿಕೆಯಲ್ಲಿ ಮಹತ್ತರ ಪಾತ್ರ ವಹಿಸಿವೆ. ಆದರೆ ಪಕ್ಷದ ಹೈಕಮಾಂಡ್‌ ಸಚಿವ ಸ್ಥಾನ ಹಂಚಿಕೆಯ ವೇಳೆ ಈ ಸಮುದಾಯಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಇದು ಆ ಪಕ್ಷದ ದಲಿತ ಮತ್ತು ಒಬಿಸಿ ಸಮುದಾಯಗಳ ವಿರೋಧಿ ಧೋರಣೆಗೆ ಕನ್ನಡಿ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಹಿರಿಯ ನಾಯಕರಿದ್ದರೂ ಕಡೆಗಣನೆ

ರಾಜ್ಯದಿಂದ ಈ ಬಾರಿ ಆಯ್ಕೆಯಾಗಿರುವ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯ ಎನ್‌ಡಿಎ ಅಭ್ಯರ್ಥಿಗಳಲ್ಲಿ ಐವರು ಲಿಂಗಾಯತರು, ನಾಲ್ವರು ಒಕ್ಕಲಿಗರು, ಮೂವರು ಬ್ರಾಹ್ಮಣ ಜಾತಿಗೆ ಸೇರಿದವರಿದ್ದರೆ, ಒಬಿಸಿ ಸಮುದಾಯದ ನಾಲ್ವರು ಹಾಗೂ ದಲಿತ ಸಮುದಾಯದ ಮೂವರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಪ್ರಬಲ ಜಾತಿಗಳಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದ್ದು, ಒಬಿಸಿ ಹಾಗೂ ದಲಿತ ಸಮುದಾಯಕ್ಕೆ ಸೇರಿದ ಸಂಸದರಿಗೆ ಸಚಿವ ಸ್ಥಾನ ನೀಡದಿರುವುದು ಆ ಸಮುದಾಯಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳು (ಒಬಿಸಿ) ಬಿಜೆಪಿ ಬೆಂಬಲಕ್ಕೆ ನಿಂತಿದ್ದವು. ಬಿಲ್ಲವ- ಈಡಿಗ ಮತದಾರರ ಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯಗಳೂ ಬಿಜೆಪಿ ಬೆನ್ನಿಗೆ ಬಲವಾಗಿ ನಿಂತಿದ್ದವು. ಹೀಗಾಗಿ ಈ ಬಾರಿ ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯ ದೊರಕಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಆ ಸಮುದಾಯಗಳ ಯಾರೊಬ್ಬರಿಗೂ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ.

ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗಿರುವ ಹಿರಿಯ ನಾಯಕ ರಮೇಶ ಜಿಗಜಿಣಗಿ ಅಥವಾ ಗೋವಿಂದ ಕಾರಜೋಳ ಇಬ್ಬರಲ್ಲಿ ಒಬ್ಬರಿಗೆ ಪರಿಶಿಷ್ಟ ಜಾತಿಯ ಕೋಟಾದಡಿ ಸಂಪುಟದಲ್ಲಿ ಅವಕಾಶ ದೊರಕಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ದಾಖಲೆಯ 7 ಬಾರಿ ಬಾರಿ ಜಯಗಳಿಸಿದ ರಮೇಶ ಜಿಗಜಿಣಗಿ ಅವರಿಗೆ ಈ ಬಾರಿಯೂ ಮೋದಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಜನತಾ ಪರಿವಾರದ ಹಿನ್ನೆಲೆಯಿಂದ ಬಂದ ಇವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 3 ಬಾರಿ, ನಂತರ ವಿಜಯಪುರ ಮೀಸಲು ಕ್ಷೇತ್ರದಲ್ಲಿ 4 ಬಾರಿ ಸೇರಿ ಸತತ 7 ಬಾರಿ ಜಯಗಳಿಸಿರುವ ರಮೇಶ ಜಿಗಜಿಣಗಿ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ದೊರೆಯದಿರುವುದು ಬೆಂಬಲಿಗರಲ್ಲಿ ನಿರಾಸೆ ತಂದಿದೆ.

ಹಾಗೇ ನಾಲ್ಕು ದಶಕದಿಂದ ರಾಜಕಾರಣದಲ್ಲಿದ್ದು ಮೂರು ಬಾರಿ ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ ಅನುಭವಿ ರಾಜಕಾರಣಿಯಾಗಿರುವ ಗೋವಿಂದ್‌ ಕಾರಜೋಳ ಅವರಿಗೂ ಹಿರಿತನ ಮತ್ತು ಪಕ್ಷದ ಬದ್ಧತೆಯ ಹಿನ್ನೆಲೆಯಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅವರಿಗೂ ಅವಕಾಶ ಸಿಕ್ಕಿಲ್ಲ.

ಇನ್ನು ಹಿಂದುಳಿದ ವರ್ಗಗಳಿಗೆ ಸೇರಿದ ಪಿ ಸಿ ಮೋಹನ್(ಬಲಿಜ) ನಾಲ್ಕನೇ ಬಾರಿಗೆ ಬಿಜೆಪಿಯ ಅಭ್ಯರ್ಥಿಯಾಗಿ ಲೋಕಸಭೆಗೆ ಪ್ರವೇಶಿಸಿದ್ದಾರೆ. ಅವರ ಹಿರಿತನಕ್ಕೂ ಮನ್ನಣೆ ಸಿಕ್ಕಿಲ್ಲ. ಬೆಂಗಳೂರು ಪ್ರಾತಿನಿಧ್ಯದ ಕೋಟಾದಲ್ಲಿ ಕೂಡ ಅವರಿಗೆ ಅವಕಾಶವಾಗಿಲ್ಲ. ಹಾಗೇ ಎರಡು ಬಾರಿ ಸಚಿವರಾಗಿ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕರಾಗಿ ಪಕ್ಷನಿಷ್ಠೆ ಮತ್ತು ಸಿದ್ಧಾಂತ ಬದ್ಧತೆಗೆ ಹೆಸರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ(ಬಿಲ್ಲವ) ಅವರಿಗೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಹಿರಿತನ, ಪಕ್ಷ ನಿಷ್ಠೆ, ಅನುಭವಗಳ ಹೊರತಾಗಿಯೂ ಸಾಲು ಸಾಲು ದಲಿತ ಮತ್ತು ಹಿಂದುಳಿದ ವರ್ಗಗಳ ಸಂಸದರಿಗೂ ಪ್ರಧಾನಿ ಮೋದಿಯವರ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಆದರೆ, ಮೇಲ್ಜಾತಿಯ ಕೆಲವೇ ಸಮುದಾಯಗಳಿಗೆ ಐದೂ ಸ್ಥಾನಗಳು ಹಂಚಿಹೋಗಿವೆ ಎಂಬ ಸಂಗತಿ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಒಳಗಾಗಿದೆ.

Read More
Next Story