BPL CARDS | ಅಕ್ರಮ ಬಿಪಿಎಲ್‌ ಕಾರ್ಡು ಪತ್ತೆ ಮಾಡಿ ಕ್ರಮ: ಸಿಎಂ ಖಡಕ್‌ ಸೂಚನೆ
x

BPL CARDS | ಅಕ್ರಮ ಬಿಪಿಎಲ್‌ ಕಾರ್ಡು ಪತ್ತೆ ಮಾಡಿ ಕ್ರಮ: ಸಿಎಂ ಖಡಕ್‌ ಸೂಚನೆ

ಈ ಪ್ರಕ್ರಿಯೆಯಲ್ಲಿ ಒಬ್ಬನೇ ಒಬ್ಬ ಅರ್ಹನ ಬಿಪಿಎಲ್‌ ಕಾರ್ಡ್‌ ಕೂಡ ರದ್ದಾಗದಂತೆ ಎಚ್ಚರ ವಹಿಸುವಂತೆಯೂ ಅವರು ತಾಕೀತು ಮಾಡಿದ್ದಾರೆ.


ಅಕ್ರಮ ಬಿಪಿಎಲ್‌ ಪಡಿತರ ಚೀಟಿಗಳ ರದ್ದು ವಿವಾದ ಬಳಿಕ ರಾಜ್ಯ ಸರ್ಕಾರ ಇದೀಗ ಮತ್ತೊಂದು ಕಠಿಣ ಕ್ರಮಕ್ಕೆ ಮುಂದಾಗಿದ್ದು, ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅನರ್ಹರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಆದರೆ, ಈ ಪ್ರಕ್ರಿಯೆಯಲ್ಲಿ ಒಬ್ಬನೇ ಒಬ್ಬ ಅರ್ಹನ ಬಿಪಿಎಲ್‌ ಕಾರ್ಡ್‌ ಕೂಡ ರದ್ದಾಗದಂತೆ ಎಚ್ಚರವಹಿಸುವಂತೆಯೂ ಅವರು ತಾಕೀತು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಿಎಂ ಗೃಹ ಕಚೇರಿಯಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಳಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಸೂಚನೆ ನೀಡಿದ್ದಾರೆ.

ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರು ಸ್ವಯಂಪ್ರೇರಿತರಾಗಿ ತಮ್ಮ ಕಾರ್ಡುಗಳನ್ನು ವಾಪಸ್‌ ಮಾಡಲು ಅವಕಾಶ ನೀಡಬೇಕು. ಬಳಿಕ ಅಂಥವರಿಗೆ ಇಲಾಖಾ ನೋಟಿಸ್‌ ನೀಡಿ, ಕಾರ್ಡುಗಳನ್ನು ರದ್ದು ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಅನರ್ಹ ಬಿಪಿಎಲ್‌ ಕಾರ್ಡುದಾರರ ಪತ್ತೆ ಅಭಿಯಾನದಲ್ಲಿ ಈಗಾಗಲೇ ಸುಮಾರು ನಾಲ್ಕು ಸಾವಿರ ಸರ್ಕಾರಿ ನೌಕರರು ಬಿಪಿಎಲ್‌ ಕಾರ್ಡ್‌ ಹೊಂದಿರುವುದನ್ನು ಪತ್ತೆ ಮಾಡಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್‌ ಮುನಿಯಪ್ಪ ವಿವರ ನೀಡಿದರು.

ಅಲ್ಲದೆ, ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಯಡಿ 4692 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅಕ್ಟೋಬರ್ ಅಂತ್ಯದವರೆಗೆ 3253 ಕೋಟಿ ರೂ. ವೆಚ್ಚ ಮಾಡಲಾಗಿದೆ. 4,44,48,294 ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಸಚಿವರು ವಿವರಿಸಿದರು.

ಸಚಿವರ ವಿವರಣೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಪಡಿತರ ಹಾಗೂ ಆಹಾರ ಧಾನ್ಯ ವಿತರಣಾ ವ್ಯವಸ್ಥೆಯನ್ನು ತಳಹಂತದಲ್ಲಿ ಬಲಪಡಿಸುವ ಮೂಲಕ ಜಾಗೃತಿ ಸಮಿತಿಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಬೇಕು. ಸಮಿತಿ ನಿಯಮಿತವಾಗಿ ಸಭೆ ನಡೆಸಬೇಕು. ಪೆಟ್ರೋಲ್ ಬಂಕ್‍ಗಳ ತಪಾಸಣೆಯನ್ನು ಹೆಚ್ಚಿಸಿ ಅಳತೆ ಮತ್ತು ಗುಣಮಟ್ಟದಲ್ಲಿ ಮೋಸವಾಗದಂತೆ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.

ಅಲ್ಲದೆ, ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಆಹಾರ ಧಾನ್ಯ ಸಂಗ್ರಹಿಸಲು ಎಲ್ಲ ವ್ಯವಸ್ಥೆ ಮಾಡಬೇಕು. ರೈತರಿಗೆ ಸಮಸ್ಯೆಯಾಗದಂತೆ ತ್ವರಿತವಾಗಿ ಕನಿಷ್ಟ ಬೆಂಬಲ ಬೆಲೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

Read More
Next Story