ಕೊಳವೆ ಬಾವಿ ದುರಂತ | ನಿಲ್ಲದ ನಿರ್ಲಕ್ಷ್ಯ: ಕಡತಗಳಲ್ಲಿಯೇ ಉಳಿಯಿತೇ ಸರ್ಕಾರಿ ಆದೇಶ?
x

ಕೊಳವೆ ಬಾವಿ ದುರಂತ | ನಿಲ್ಲದ ನಿರ್ಲಕ್ಷ್ಯ: ಕಡತಗಳಲ್ಲಿಯೇ ಉಳಿಯಿತೇ ಸರ್ಕಾರಿ ಆದೇಶ?

ರಾಜ್ಯದಲ್ಲಿ ಕಳೆದೆರಡು ದಶಕಗಳಿಂದ ಏಳೆಂಟು ಕೊಳವೆ ಬಾವಿ ದುರಂತ ಪ್ರಕರಣಗಳು ವರದಿಯಾಗಿವೆ. ಕೊಳವೆ ಬಾವಿ ದುರಂತಕ್ಕೆ ಜಿಲ್ಲಾಧಿಕಾರಿಯೇ ಹೊಣೆ ಎಂದು ಸರ್ಕಾರ ಹೇಳಿತ್ತಾದರೂ, ದುರಂತಗಳು ಮಾತ್ರ ನಿಂತೇ ಇಲ್ಲ.


ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ 14 ತಿಂಗಳ ಮಗು ಸಾತ್ವಿಕ್‌ ತೆರೆದ ಬೋರ್ ವೆಲ್ ಗೆ ಬಿದ್ದು ಸಕಾಲಿಕ ರಕ್ಷಣಾ ಕಾರ್ಯಾಚರಣೆಯಿಂದಾಗಿ ಬದುಕಿ ಬಂದಿದ್ದಾನೆ. ಆದರೆ, ಈ ಘಟನೆ, ರಾಜ್ಯದಲ್ಲಿ ಕೊಳವೆ ಬಾವಿ ದುರಂತ ಪ್ರಕರಣದ ಕುರಿತಂತೆ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

ಕಳೆದ ಎರಡೂವರೆ ದಶಕದಲ್ಲಿ ಇದುವರೆಗೂ 8 ಕೊಳವೆ ಬಾವಿ ದುರಂತಗಳು ರಾಜ್ಯದಲ್ಲಿ ನಡೆದಿದ್ದು, ಒಂದು ಪ್ರಕರಣದಲ್ಲಿ ಮಾತ್ರ ಇದುವರೆಗೂ ಯಶಸ್ವಿಯಾಗಿ ರಕ್ಷಿಸಲಾಗಿತ್ತು. ಇದೀಗ ಸಾವು ಗೆದ್ದು ಬಂದಿರುವ ಸಾತ್ವಿಕ್‌ ಪ್ರಕರಣ ಎರಡನೆಯದು.

ಕೊಳವೆ ಬಾವಿ ದುರಂತವನ್ನು ತಪ್ಪಿಸಲು ಸರ್ಕಾರ ಕಠಿಣ ಕ್ರಮ ಕೈಗೊಂಡಿತ್ತಾದರೂ, ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಲ್ಲಲ್ಲಿ ಕೊಳವೆ ಬಾವಿಗಳು ಮೃತ್ಯು ಕೂಪದಂತೆ ಬಾಯ್ದೆರೆದು ನಿಂತಿರುವ ಬಗ್ಗೆ ವರದಿಯಾಗುತ್ತಲೇ ಇದೆ. ಇದೀಗ, ವಿಜಯಪುರದ ಘಟನೆಯಿಂದಾಗಿ ಕೊಳವೆ ಬಾವಿ ದುರಂತ ತಡೆಗಟ್ಟುವ ಬಗ್ಗೆ ಇನ್ನಷ್ಟು ಕಠಿಣ ನಿಲುವು ತಳೆಯುವಂತೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿ ಬಂದಿದೆ.

ಕೊಳವೆ ಬಾವಿ ದುರಂತ ಸರಣಿ

ರಾಜ್ಯದಲ್ಲಿ ಈವರೆಗೆ ನಡೆದಿರುವ ಎಂಟು ಕೊಳವೆ ಬಾವಿ ದುರಂತ ಪ್ರಕರಣದಲ್ಲಿಐದು ಪ್ರಕರಣಗಳು ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲೇ ನಡೆದಿದೆ.

2000ನೇ ಸಾಲಿನಲ್ಲಿ ಮೊದಲ ಪ್ರಕರಣ

ದಾವಣಗೆರೆಯಲ್ಲಿ ಕೊಳವೆ ಬಾವಿ ದುರಂತ ಸಂಭವಿಸಿತ್ತು. ಆಟವಾಡುತ್ತಿದ್ದ ವೇಳೆ ಕರಿಯ ಎಂಬ ಬಾಲಕ ಕೊಳವೆ ಬಾವಿಯೊಳಗೆ ಬಿದ್ದಿದ್ದ. ಆ ಕಾಲದಲ್ಲಿ ಸಾಕಷ್ಟು ತಂತ್ರಜ್ಞಾನ ಇರದಿದ್ದರಿಂದ, ರಕ್ಷಣಾ ಕಾರ್ಯಾಚರಣೆಗೆ ಸಾಕಷ್ಟು ತೊಂದರೆಯಾಗಿತ್ತು. ಸತತವಾಗಿ ಪ್ರಯತ್ನ ನಡೆಸಿದರೂ ಬಾಲಕನನ್ನು ಜೀವಂತವಾಗಿ ಕರೆತರಲು ಸಾಧ್ಯವಾಗಿರಲಿಲ್ಲ.

2006ರಲ್ಲಿ ಕಲ್ಲವ್ವನ ಪ್ರಕರಣ

ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದಲ್ಲಿ ಕಲ್ಲವ್ವ ಎಂಬ ಮಹಿಳೆಯೊಬ್ಬಳು ಕೊಳವೆ ಬಾವಿಗೆ ಬಿದ್ದಿದ್ದಳು. ಹೊಲಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ ಕಲ್ಲವ್ವಳನ್ನು ಸುರಂಗ ಕೊರೆದು ರಕ್ಷಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿತ್ತು. ರಾಜ್ಯದಲ್ಲಿ ನಡೆದ ಕೊಳವೆ ಬಾವಿ ದುರಂತ ಪ್ರಕರಣದಲ್ಲಿ ಬಾವಿಗೆ ಬಿದ್ದವರನ್ನು ಯಶಸ್ವಿಯಾಗಿ ಜೀವಂತವಾಗಿ ಹೊರತಂದ ಮೊದಲ ಪ್ರಕರಣ ಇದು.

2007ರಲ್ಲಿ ನೀರಮಾನ್ವಿ ಸಂದೀಪ್

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಎಂಬಲ್ಲಿ ಏಪ್ರಿಲ್ 27 ರಂದು ರಾಜ್ಯದ ಎರಡನೇ ಕೊಳವೆ ಬಾವಿ ದುರಂತ ನಡೆದಿತ್ತು(ಸಾವು ಸಂಭವಿಸಿದ). ಸಂದೀಪ್ ಎಂಬ ಮಗುವೊಂದು ತೆರೆದ ಬೋರ್ ವೆಲ್ ಒಳಗೆ ಬಿದ್ದಿದ್ದು, ಮಗುವನ್ನು ಹೊರ ತೆಗೆಯಲು ಸತತ ಮೂರು ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಮಗುವನ್ನು ಜೀವಂತವಾಗಿ ಹೊರ ತೆಗೆಯಲು ಸಾಧ್ಯವಾಗಿರಲಿಲ್ಲ.

2008ರಲ್ಲಿ ವಿಜಯಪುರದ ಕಾಂಚನಾ

ವಿಜಯಪುರ ಜಿಲ್ಲೆಯ ಕಾಂಚನಾ ಎಂಬ ಬಾಲಕಿ ಆ ವರ್ಷದ ಸೆಪ್ಟೆಂಬರ್ ನಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ಈ ಪ್ರಕರಣದಲ್ಲೂ ಮಗುವನ್ನು ಜೀವಂತವಾಗಿ ಮೇಲೆತ್ತುವ ರಕ್ಷಣಾ ತಂಡ ಪ್ರಯತ್ನ ಯಶಸ್ವಿಯಾಗಿರಲಿಲ್ಲ.

2014 ರ ಸೋಳಿಕೇರಿ ತಿಮ್ಮಣ್ಣ ಪ್ರಕರಣ

ಬಾಗಲಕೋಟೆಯ ಸೂಳಿಕೇರಿ ಗ್ರಾಮದಲ್ಲಿ ಆಗಸ್ಟ್ 4, 2014 ರಂದು ಆಟವಾಡುತ್ತಿದ್ದ 6 ವರ್ಷದ ತಿಮ್ಮಣ್ಣ ಎಂಬ ಮಗು 350 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿತ್ತು. ರಾತ್ರಿ-ಹಗಲು ಮಗುವಿನ ರಕ್ಷಣೆಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆದಿತ್ತಾದರೂ ಮಗು ಬದುಕಿ ಬಂದಿರಲಿಲ್ಲ.

2014 ನಾಗಠಾಣಾ ಅಕ್ಷತಾ ದುರಂತ

ವಿಜಯಪುರದಲ್ಲಿ ಎರಡನೇ ಕೊಳವೆ ಬಾವಿ ದುರಂತ ಪ್ರಕರಣ 2014 ರಲ್ಲಿ ನಡೆದಿತ್ತು. ಜೂನ್ 17ರಂದು ಜಿಲ್ಲೆಯ ನಾಗಠಾಣಾ ಹಳ್ಳಿಯಲ್ಲಿ ಅಕ್ಷತಾ ಎಂಬ ಬಾಲಕಿ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದಳು. ಅಟ್ಟಿಸಿಕೊಂಡು ಬಂದ ನಾಯಿಯಿಂದ ತಪ್ಪಿಸಿಕೊಳ್ಳುವ ವೇಳೆ ಅಕ್ಷತಾ ಕೊಳವೆಬಾವಿಗೆ ಬಿದ್ದಿದ್ದಳು. ರಕ್ಷಣಾ ತಂಡಗಳು ನಿರಂತರ ಪ್ರಯತ್ನ ಪಟ್ಟರೂ ಅಕ್ಷತಾಳನ್ನು ಜೀವಂತವಾಗಿ ಹೊರತರಲು ಸಾಧ್ಯವಾಗಿರಲಿಲ್ಲ.

2017 ರ ಝಂಜರವಾಡ ಕಾವೇರಿ ಪ್ರಕರಣ

2017 ಏಪ್ರಿಲ್ 23 ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡ ಗ್ರಾಮದಲ್ಲಿ 4 ವರ್ಷದ ಕಾವೇರಿ ಎಂಬ ಮಗು ಕೊಳವೆ ಬಾವಿಯೊಳಗೆ ಬಿದ್ದು ಸಾವನ್ನಪ್ಪಿತ್ತು. ಈ ಪ್ರಕರಣದಲ್ಲಿ ಬೋರ್ ವೆಲ್ ಮುಚ್ಚಲು ನಿರ್ಲಕ್ಷ್ಯ ವಹಿಸಿದಕ್ಕೆ ಜಮೀನು ಮಾಲೀಕನನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಬಳಿಕ ರಾಜ್ಯದಲ್ಲಿ ಮತ್ತೆ ಮತ್ತೆ ಸಂಭವಿಸುತ್ತಿರುವ ಕೊಳವೆ ಬಾವಿ ದುರಂತ ಪ್ರಕರಣಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು.

ದುರಂತ ತಪ್ಪಿಸಲು ಸರ್ಕಾರದ ಕ್ರಮ

ದೇಶಾದ್ಯಂತ ವರದಿಯಾದ ಬೋರ್ ವೆಲ್ ದುರಂತ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಪಾಳುಬಿದ್ದ ಮತ್ತು ನೀರಿಲ್ಲದ ಕೊಳವೆ ಬಾವಿಗಳನ್ನು ಮುಚ್ಚಲು ಏನು ಕಷ್ಟ ಎಂದು 2009ರ ಫೆಬ್ರವರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಟುವಾಗಿ ಪ್ರಶ್ನಿಸಿತ್ತು. ನಂತರ, ವಿವಿಧ ಸರ್ಕಾರಗಳು ಕೊಳವೆ ಬಾವಿಯನ್ನು ಮುಚ್ಚದಿದ್ದರೆ ಜಮೀನು ಮಾಲೀಕರು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆರಂಭಿಸಿದ್ದವು.

2014ರಲ್ಲಿ ಕೆಲವೇ ತಿಂಗಳ ಅಂತರದಲ್ಲಿ ಇಬ್ಬರು ಮಕ್ಕಳು ಕೊಳವೆ ಬಾವಿ ದುರಂತದಲ್ಲಿ ಮೃತಪಟ್ಟ ಬಳಿಕ, ಅಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಳವೆ ಬಾವಿ ದುರಂತ ತಡೆಗಟ್ಟುವ ಸಲುವಾಗಿ ಕಠಿಣ ಮಾರ್ಗಸೂಚಿ ಹೊರಡಿಸಿತ್ತು. ತೆರೆದ ಕೊಳವೆಬಾವಿಗಳನ್ನು ಮುಚ್ಚದಿದ್ದರೆ ಪಿಡಿಒ, ಎಇಇ, ಉಪ ತಹಸೀಲ್ದಾರ್ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಹೇಳಿತ್ತು.

ಬೋರ್ ವೆಲ್ ಅನ್ನು ಸರಿಯಾಗಿ ಮುಚ್ಚಲಾಗಿದೆ ಎಂದು ಪರಿಶೀಲಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯ ರಚನೆ ಮಾಡಲಾಗಿತ್ತು. ಆ ವರ್ಷದಲ್ಲಿ ಒಟ್ಟು 1.47 ಲಕ್ಷ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ ಎಂದು ಸರ್ಕಾರ ಹೇಳಿತ್ತು.

ಕೊಳವೆ ಬಾವಿ ಕೊರೆಯಲು ಪರವಾನಗಿ ಕಡ್ಡಾಯವಾಗಿರುವುದರಿಂದ ಪ್ರತೀ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿ ಕೊರೆಯಲಾದ ಕೊಳವೆ ಬಾವಿಗಳ ಸ್ಥಿತಿಗತಿ ತಿಳಿಯುವುದು ಕಷ್ಟವೇನಲ್ಲ. ಅಲ್ಲದೆ, ಕೊಳವೆ ಬಾವಿ ಮುಚ್ಚುವ ಸಂಬಂಧ ಕಠಿಣ ನಿಯಮ, ಕಾನೂನುಗಳೂ ಇವೆ. ಆದರೆ, ಕಟ್ಟು ನಿಟ್ಟಾಗಿ ಅದು ಅನುಷ್ಠಾನವಾಗುತ್ತಿಲ್ಲ ಎಂಬುದಕ್ಕೆ ಆ ಆದೇಶದ ಬಳಿಕವೂ ರಾಜ್ಯದಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿರುವ ಕೊಳವೆ ಬಾವಿ ದುರಂತಗಳೇ ನಿದರ್ಶನ.

ʼದಿ ಫೆಡೆರಲ್ ಕರ್ನಾಟಕʼ ಕಳಕಳಿ

ಬೇಸಿಗೆ ಬಂತೆಂದರೆ ಕೊಳವೆ ಬಾವಿಗಳು ಸುದ್ದಿಯ ಮೂಲವಾಗುತ್ತದೆ. ಅಂತರ್ಜಲದ ಕೊರತೆಯ ನಡುವೆಯೂ ನೀರಿನ ಆಕರ ಹುಡುಕಿ ಬರ ಪ್ರದೇಶಗಳಲ್ಲಿ ನೀರಿಗಾಗಿ ಕೊಳವೆ ಬಾಯಿ ಕೊರೆಸುವುದು ಸರ್ಕಾರಗಳಿಗೂ ಅನಿವಾರ್ಯ.

ರಾಜಕೀಯ ಪಕ್ಷಗಳಿಗೆ ಒಂದರ್ಥದಲ್ಲಿ ಇದು ಹಣ ಸಂಗ್ರಹದ ಹುಂಡಿ. ಈ ನಡುವೆ, ಲಚ್ಯಾಣದಲ್ಲಿ 14 ತಿಂಗಳ ಮಗು ಬರೋಬ್ಬರಿ 21 ಗಂಟೆಗಳ ಕಾಲ ಅನ್ನ, ನೀರಿಲ್ಲದೆ ಸಾವು ಬದುಕಿನ ನಡುವೆ ಹೋರಾಟ ಮಾಡಿ, ಜಯಿಸಿ ಬಂದಿದೆ. ವ್ಯವಸ್ಥೆಯ ಪುನರಾವರ್ತಿತ ಪ್ರಮಾದ ಇಂಥ ಹಲವು ಘಟನೆಗಳಿಗೆ ಕಾರಣವಾಗುತ್ತಿದೆ. ಇಂಥ ಹಲವು ಘಟನೆಗಳು ದೇಶದಲ್ಲಿ-ರಾಜ್ಯದಲ್ಲಿ ನಡೆಯುತ್ತಿದ್ದರೂ, ಮತ್ತೆ ಈ ಘಟನೆ ಸಂಭವಿಸಿರುವುದಕ್ಕೆ ಆಡಳಿತ ವ್ಯವಸ್ಥೆ ತಲೆ ತಗ್ಗಿಸಲೇ ಬೇಕಿದೆ.

ಕಳೆದ ಎರಡು ದಶಕಗಳಲ್ಲಿ ರಾಜ್ಯದಲ್ಲಿ ಏಳೆಂಟು ಇಂತಹ ಪ್ರಕರಣಗಳು ನಡೆದಿದೆ. ತೆರೆದ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ಮುಚ್ಚುವ ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಿದ್ದರೆ, ವಿಜಯಪುರದಲ್ಲಿ ಈ ಘಟನೆ ಪುನರಾವರ್ತನೆಯಾಗುತ್ತಿರಲಿಲ್ಲ. ಜನರ ಜೀವ ನಷ್ಟ-ಯಾತನೆಗಳು ಅಧಿಕಾರಿಗಾಗಲೀ, ಜನಪ್ರತಿನಿಧಿಗಳಿಗಾಗಲೀ ತಟ್ಟಿದಂತೆ ತೋರುವುದಿಲ್ಲ. ಹೋಗಲಿ! ಇಂಥ ತೆರೆದ ಕೊಳವೆ ಬಾವಿಗಳಿರುವಾಗ ಎಚ್ಚರದಿಂದಿರಬೇಕಾದ ತಿಳಿವಳಿಕೆಯೂ ಜನರಿಗಿದ್ದಂತಿಲ್ಲ.

ಕೆಲವು ವರ್ಷದ ಹಿಂದೆ ಇಂಥ ದುರಂತ ನಡೆಯದಂತೆ ತಡೆಯಲು ಸರ್ಕಾರ ಸ್ಥಳೀಯ ಮಟ್ಟದ ಸಮಿತಿಗಳನ್ನು ರಚಿಸಿತ್ತು. ಇಂಥ ಘಟನೆಗಳಿಗೆ ಜಿಲ್ಲಾಧಿಕಾರಿಯೇ ಹೊಣೆ ಎಂದಿತ್ತು. ಇಂದು ಆ ಮಾತುಗಳು ಅರ್ಥ ಕಳೆದುಕೊಂಡಿದೆ.

ನಿರ್ಲಕ್ಷ್ಯ ತೋರಿದ ಇಂಥ ಬೋರ್ ವೆಲ್ ಗಳ ಜಮೀನು ಮಾಲೀಕರ ಬಗ್ಗೆ ಕ್ರಮ ಕೈಗೊಳ್ಳದೆ, ಘಟನೆಯ ಬಗ್ಗೆ ಚರ್ಚಿಸದೆ, ಮುಂಜಾಗೃತಾ ಕ್ರಮದ ಬಗ್ಗೆ ಚಿಂತಿಸದೆ ಕೇವಲ ಪರಸ್ಪರ ಆರೋಪ ಮಾಡುವಲ್ಲಿ ರಾಜಕಾರಣಿಗಳು-ಅಧಿಕಾರಿಗಳು ನಿರತರಾಗಿದ್ದಾರೆ.

ಸರ್ಕಾರ ತನ್ನ ಚುನಾವಣಾ ತುರ್ತಿನ ನಡುವೆ ಅಮಾಯಕ ಕಂದಮ್ಮಗಳ ಸುರಕ್ಷತೆಯ ಬಗ್ಗೆಯೂ ಗಮನಹರಿಸಬೇಕಿದೆ ಎಂಬುದು ʼದಿ ಫೆಡೆರಲ್ ಕರ್ನಾಟಕʼದ ಕಳಕಳಿ.

Read More
Next Story