
ಮಹಾರಾಷ್ಟ್ರ ಸಂಸದ ಧೈರ್ಯವಂತ ಮಾನೆ ಅವರು ಸ್ಪೀಕರ್‌ಗೆ ದೂರು ನೀಡಿದರು
ಗಡಿ ಪ್ರವೇಶಕ್ಕೆ ತಡೆ; ಬೆಳಗಾವಿ ಡಿಸಿ ವಿರುದ್ಧ ಲೋಕಸಭೆ ಸ್ಪೀಕರ್‌ಗೆ ದೂರು
ಎಂಇಎಸ್ ಕರಾಳ ದಿನ ಆಚರಣೆಗೆ ಅನುಮತಿ ನೀಡದ ಜಿಲ್ಲಾಧಿಕಾರಿ ವಿರುದ್ಧ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಕ್ಕುಚ್ಯುತಿ ಉಲ್ಲಂಘನೆ ಆರೋಪದ ದೂರು ಸಲ್ಲಿಸಿದ್ದಾರೆ.
ಬೆಳಗಾವಿ ಗಡಿ ವಿವಾದದಲ್ಲಿ ಎಂಇಎಸ್ ಹಾಗೂ ಶಿವಸೇನೆ ಮತ್ತೆ ಕ್ಯಾತೆ ತೆಗೆದಿವೆ. ನ.1 ರಂದು ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆಗೆ ಅನುಮತಿ ನೀಡದ ಹಾಗೂ ಬೆಳಗಾವಿ ಪ್ರವೇಶ ನಿರ್ಬಂಧಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ವಿರುದ್ಧ ಕ್ರಮ ಜರುಗಿಸುವಂತೆ ಶಿವಸೇನೆ (ಶಿಂಧೆ ಬಣ) ಸಂಸದ ಧೈರ್ಯಶೀಲ ಮಾನೆ ಅವರು ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದಾರೆ.
ಎಂಇಎಸ್ ಕರಾಳ ದಿನ ಆಚರಣೆಗೆ ಅನುಮತಿ ನೀಡದ ಜಿಲ್ಲಾಧಿಕಾರಿ ವಿರುದ್ಧ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಕ್ಕುಚ್ಯುತಿ ಉಲ್ಲಂಘನೆ ಆರೋಪದ ದೂರು ಸಲ್ಲಿಸಿದ್ದಾರೆ. ತಮಗೆ ಬೆಳಗಾವಿ ಪ್ರವೇಶ ನಿರಾಕರಿಸುವ ಮೂಲಕ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಸಂಸದರ ಹಕ್ಕಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿ ವರ್ಷ ನ.1ರಂದು ಕರ್ನಾಟಕ ರಾಜ್ಯೋತ್ಸವದಂದೇ ಎಂಇಎಸ್ ಸಂಘಟನೆ 'ಕರಾಳ ದಿನ' ಆಚರಿಸುತ್ತಿತ್ತು.ಆದರೆ, ಈ ವರ್ಷ ಜಿಲ್ಲಾಡಳಿತ ಕರಾಳ ದಿನ ಆಚರಣೆಗೆ ನಿಷೇಧ ಹೇರಿತ್ತು. ಕರಾಳದಿನ ಆಚರಣೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಬರುತ್ತಿದ್ದ ಸಂಸದ ಮಾನೆ ಅವರನ್ನು ಕರ್ನಾಟಕ ಪೊಲೀಸರು ಗಡಿಯಲ್ಲೇ ತಡೆದು ವಾಪಸ್ ಕಳುಹಿಸಿದ್ದರು. ಇದರಿಂದ ಸಂಸದ ಮಾನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ದೂರಿನಲ್ಲಿ ಏನಿದೆ?
1956ರ ಗಡಿ ವಿವಾದ ಪ್ರಸ್ತಾಪಿಸಿರುವ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಅವರು, ಬೆಳಗಾವಿ ಸೇರಿದಂತೆ 865 ಮರಾಠಿ ಭಾಷಿಕ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಲಾಗಿದೆ. ತಾವು ಮಹಾರಾಷ್ಟ್ರದ ಗಡಿ ವಿವಾದ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದು, ಕರಾಳ ದಿನದಲ್ಲಿ ಭಾಗವಹಿಸುವುದು ನನ್ನ ಹಕ್ಕಾಗಿತ್ತು. ಆದರೆ, ಬೆಳಗಾವಿ ಜಿಲ್ಲಾಧಿಕಾರಿ ಅದಕ್ಕೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗಡಿಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಕನ್ನಡ ವಿರೋಧಿ ಕೃತ್ಯಗಳನ್ನು ತಡೆಯಲು ಡಿಸಿ ಮೊಹಮ್ಮದ್ ರೋಷನ್ ತೆಗೆದುಕೊಂಡ ಕ್ರಮಕ್ಕೆ ಕನ್ನಡಿಗರಿಂದ ಬೆಂಬಲ ವ್ಯಕ್ತವಾಗಿದೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು, ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ಎಲ್ಲರ ವಿರುದ್ಧ ಶೀಘ್ರದಲ್ಲೇ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದರು.
ಕರಾಳ ದಿನ ಆಚರಣೆಗಾಗಿ ಶಿವಸೇನೆ ಬಣದ ನಾಯಕರು ಬೆಳಗಾವಿ ಪ್ರವೇಶಕ್ಕೆ ಯತ್ನಿಸಿದರೂ, ಪೊಲೀಸರು ಗಡಿಯಲ್ಲೇ ಅವರನ್ನು ತಡೆದಿದ್ದರು. ಬೆಳಗಾವಿ, ನಿಪ್ಪಾಣಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ್ದರಿಂದ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ದೂರು ಖಂಡನೀಯ: ಚಂದರಗಿ
ಬೆಳಗಾವಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಲು ಬರುತ್ತಿದ್ದ ಶಿವಸೇನೆ ಸಂಸದ ಧೈರ್ಯವಂತ ಮಾನೆ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿ ಗಡಿಯಲ್ಲಿ ತಡೆದಿದ್ದು ಒಳ್ಳೆಯದು. ಇದರ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿರುವುದು ಖಂಡನೀಯ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕ್ರಮಕ್ಕೆ ಕನ್ನಡಿಗರ ಬೆಂಬಲವಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಹೇಳಿದ್ದಾರೆ.

