
ಬಾನು ಮುಷ್ತಾಕ್
ಈ ಬಾರಿಯ ದಸರಾ ಮಹೋತ್ಸವಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಚಾಲನೆ
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ, ಈ ಸಾಲಿನ ದಸರಾ ಉದ್ಘಾಟಕನ್ನು ಆಯ್ಕೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳಿಗೆ ವಹಿಸಲಾಗಿತ್ತು.
ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025 ಅನ್ನು ಉದ್ಘಾಟಿಸಲು ಈ ಬಾರಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಕನ್ನಡ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಪ್ರಕಟಿಸಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ, ಈ ಸಾಲಿನ ದಸರಾ ಉದ್ಘಾಟಕನ್ನು ಆಯ್ಕೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳಿಗೆ ವಹಿಸಲಾಗಿತ್ತು. ಸಭೆಯಲ್ಲಿ ಮಹಿಳಾ ಸಾಧಕಿಯೊಬ್ಬರಿಂದ ದಸರಾ ಉದ್ಘಾಟನೆ ಮಾಡಿಸಬೇಕೆಂಬ ಪ್ರಸ್ತಾಪವನ್ನು ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ್ ಮುಂದಿಟ್ಟಿದ್ದರು.
ಕನ್ನಡಕ್ಕೆ ಸಂದ ಜಾಗತಿಕ ಗೌರವ
ಹಾಸನ ಮೂಲದ ಲೇಖಕಿ, ವಕೀಲೆ ಮತ್ತು ಹೋರಾಟಗಾರ್ತಿಯಾದ ಬಾನು ಮುಷ್ತಾಕ್ ಅವರ 'ಹಾರ್ಟ್ ಲ್ಯಾಂಪ್' ಎಂಬ ಕನ್ನಡ ಕಥಾ ಸಂಕಲನಕ್ಕೆ 2025ರ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿತ್ತು. ದೀಪಾ ಭಾಸ್ತಿ ಅವರು ಇದನ್ನು 'ಹಾರ್ಟ್ ಲ್ಯಾಂಪ್' (Heart Lamp) ಎಂದು ಇಂಗ್ಲಿಷ್‌ಗೆ ಅನುವಾದಿಸಿದ್ದರು. ಈ ಮೂಲಕ, ಬೂಕರ್ ಪ್ರಶಸ್ತಿ ಗೆದ್ದ ಮೊದಲ ಕನ್ನಡ ಕೃತಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು. ಈ ಜಾಗತಿಕ ಮನ್ನಣೆಯೇ ಅವರ ಆಯ್ಕೆಗೆ ಪ್ರಮುಖ ಕಾರಣವಾಗಿದೆ.
ಆಯ್ಕೆಯ ಮಹತ್ವ
ಬಾನು ಮುಷ್ತಾಕ್ ಅವರ ಆಯ್ಕೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಮಹಿಳಾ ಸಾಹಿತಿಗೆ ರಾಜ್ಯದ ಅತ್ಯುನ್ನತ ಸಾಂಸ್ಕೃತಿಕ ಉತ್ಸವದ ಉದ್ಘಾಟನೆಯ ಗೌರವ ನೀಡಿದಂತಾಗಿದೆ. ಜೊತೆಗೆ, 2017ರಲ್ಲಿ ಕೆ.ಎಸ್. ನಿಸಾರ್ ಅಹಮದ್ ಅವರ ನಂತರ ದಸರಾ ಉದ್ಘಾಟಿಸುತ್ತಿರುವ ಮುಸ್ಲಿಂ ಸಮುದಾಯದ ಎರಡನೇ ಗಣ್ಯ ವ್ಯಕ್ತಿ ಬಾನು ಮುಷ್ತಾಕ್ ಆಗಿದ್ದಾರೆ.
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರ ವರೆಗೆ, ಈ ಬಾರಿ 11 ದಿನಗಳ ಕಾಲ ನಡೆಯಲಿರುವ ದಸರಾ ಮಹೋತ್ಸವವು ಚಾಮುಂಡಿ ಬೆಟ್ಟದ ಮೇಲೆ ಬಾನು ಮುಷ್ತಾಕ್ ಅವರಿಂದ ಉದ್ಘಾಟನೆಗೊಳ್ಳುವುದರೊಂದಿಗೆ ವಿಧ್ಯುಕ್ತವಾಗಿ ಆರಂಭವಾಗಲಿದೆ. ಈ ಬಾರಿಯ ವಿಜಯದಶಮಿ ಮೆರವಣಿಗೆಯು ಗಾಂಧಿ ಜಯಂತಿಯ ದಿನದಂದೇ ನಡೆಯುವುದರಿಂದ, ಸ್ತಬ್ಧಚಿತ್ರಗಳಲ್ಲಿ ಮಹಾತ್ಮ ಗಾಂಧೀಜಿಯವರ ತತ್ವ ಮತ್ತು ಸಂದೇಶಗಳನ್ನು ಬಿಂಬಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.