
ಬಸವರಾಜ ಬೊಮ್ಮಾಯಿ
ಒಳ ಮೀಸಲಾತಿ; ಆಯೋಗಗಳ ವರದಿಗಳನ್ನು ನಿರ್ಲಕ್ಷಿಸಿದ ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಆಕ್ರೋಶ
3 ಆಯೋಗಗಳ ವರದಿಯನ್ನೂ ಪರಿಗಣಿಸಿಲ್ಲ. ಸುಪ್ರೀಂ ಕೋರ್ಟಿನ ನಿರ್ಧಾರವನ್ನೂ ತಿರಸ್ಕಾರ ಮಾಡಿದ್ದೀರಿ. ಕೇವಲ ರಾಜಕೀಯ ಲಾಭಕ್ಕಾಗಿ, ಮತಬ್ಯಾಂಕಿನ ಸುರಕ್ಷತೆಗಾಗಿ ಈ ಕೆಲಸ ಮಾಡಿದ್ದೀರಿ ಎಂದು ಬಸವರಾಜ್ ಬೊಮ್ಮಾಯಿ ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಿದ್ದು, ಸುಪ್ರೀಂ ಕೋರ್ಟ್ ಆದೇಶ ಮತ್ತು ವಿವಿಧ ಆಯೋಗಗಳ ವರದಿಗಳನ್ನು ಕಡೆಗಣಿಸಿ ಸಾಮಾಜಿಕ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೀಸಲಾತಿಯಿಂದ ವಂಚಿತರಾದ ಸಮುದಾಯಗಳಿಗೆ ನ್ಯಾಯ ಒದಗಿಸಲು ಬಿಜೆಪಿ ಹೋರಾಟ ನಡೆಸಲಿದೆ ಎಂದು ಅವರು ಘೋಷಿಸಿದರು.
ಶನಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವಿಷಯಗಳ ಬಗ್ಗೆ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿದರು.
ಒಳ ಮೀಸಲಾತಿ ಒಂದು "ರಾಜಕೀಯ ಪಂಚಾಯಿತಿ"
ಬೊಮ್ಮಾಯಿ ಅವರು ಸರ್ಕಾರದ ಒಳ ಮೀಸಲಾತಿ ನಿರ್ಧಾರವನ್ನು "ರಾಜಕೀಯ ಪಂಚಾಯಿತಿ" ಎಂದು ಜರಿದರು. "ಸರ್ಕಾರವು ನ್ಯಾ. ನಾಗಮೋಹನದಾಸ್, ನ್ಯಾ. ಸದಾಶಿವ ಆಯೋಗ, ಮತ್ತು ಮಾಧುಸ್ವಾಮಿ ವರದಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ. ಇದಕ್ಕೆ ಆಯೋಗಗಳನ್ನು ರಚಿಸುವ ಅಗತ್ಯವೇನಿತ್ತು?" ಎಂದು ಪ್ರಶ್ನಿಸಿದರು.
ಈ ನಿರ್ಧಾರವು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದ್ದು, ನಿಖರವಾದ ಡೇಟಾ ಇಲ್ಲದೆ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣ ಮಾಡಿಲ್ಲ. ಇದು ಕೇವಲ ಮತಬ್ಯಾಂಕ್ ಸುರಕ್ಷತೆಗಾಗಿ ಮಾಡಿದ ರಾಜಕೀಯ ತೀರ್ಮಾನ ಎಂದು ಆರೋಪಿಸಿದರು. ಅಲೆಮಾರಿಗಳಿಗೆ 1% ಮೀಸಲಾತಿ ನೀಡಬೇಕೆಂಬ ವರದಿಗಳನ್ನು ತಿರಸ್ಕರಿಸಲಾಗಿದೆ. ಆದಿ ಕರ್ನಾಟಕ, ಆದಿ ದ್ರಾವಿಡದಂತಹ ಸಮುದಾಯಗಳನ್ನು ಯಾವುದೇ ಗುಂಪಿಗೆ ಸೇರಿಸದೆ ಗೊಂದಲ ಸೃಷ್ಟಿಸಲಾಗಿದೆ. ಎಸ್‌ಸಿ ಬಲಗೈ ಮತ್ತು ಲಂಬಾಣಿ, ಬೋವಿ ಸಮುದಾಯಗಳು ಸೇರಿದಂತೆ ಯಾರೂ ಈ ನಿರ್ಧಾರದಿಂದ ಸಂತುಷ್ಟರಿಲ್ಲ ಎಂದು ಅವರು ಹೇಳಿದರು.
ಸರ್ಕಾರದ ಕ್ಷಮೆ ಯಾಚನೆಗೆ ಆಗ್ರಹ
"ನಮ್ಮ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಹೆಚ್ಚಿಸಿದ್ದನ್ನು ವಿರೋಧಿಸಿದ್ದ ಸಿದ್ದರಾಮಯ್ಯ, ಈಗ ಅದೇ ಆಧಾರದಲ್ಲಿ ಒಳ ಮೀಸಲಾತಿ ನೀಡಿದ್ದಾರೆ. ಅವರು ಈಗ ಆ ಸಮುದಾಯಗಳ ಕ್ಷಮೆ ಯಾಚಿಸಬೇಕು ಅಥವಾ ಮೀಸಲಾತಿ ಪ್ರಮಾಣವನ್ನು ಇನ್ನೊಂದು ಶೇಕಡ ಹೆಚ್ಚಿಸಿ ನ್ಯಾಯ ಒದಗಿಸಬೇಕು," ಎಂದು ಆಗ್ರಹಿಸಿದರು.
ಬಿಜೆಪಿಯ ಹೋರಾಟ ಮತ್ತು ಬೇಡಿಕೆಗಳು
ಸರ್ಕಾರವು ನ್ಯಾ. ನಾಗಮೋಹನದಾಸ್ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು, ಅಲೆಮಾರಿ ಸಮುದಾಯಕ್ಕೆ 1% ಮೀಸಲಾತಿ ನೀಡಬೇಕು ಮತ್ತು ಬೋವಿ, ಲಂಬಾಣಿ ಹಾಗೂ ಇತರ ಸಮುದಾಯಗಳ ಮೀಸಲಾತಿಯನ್ನು ಪರಿಷ್ಕರಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಸರ್ಕಾರ ಈ ಗೊಂದಲವನ್ನು ಬಗೆಹರಿಸದಿದ್ದರೆ, ಬಿಜೆಪಿ ಕಾನೂನು ಹೋರಾಟ ನಡೆಸಲಿದೆ ಎಂದು ಬೊಮ್ಮಾಯಿ ಎಚ್ಚರಿಸಿದರು.
ಜಿಎಸ್‌ಟಿ, ಇವಿಎಂ ದ್ವಂದ್ವ ನೀತಿ
"ಜಿಎಸ್‌ಟಿ ಕಡಿತ ವಿಚಾರದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿದೆ. ಅವರು ಜನರ ಪರವಾಗಿ ತೆರಿಗೆ ಕಡಿಮೆ ಮಾಡುವ ಮಾತನಾಡುತ್ತಾರೆ, ಆದರೆ ತಮ್ಮ ಪಾಲಿನ ತೆರಿಗೆಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ರಾಜ್ಯ ಸರ್ಕಾರದ ಒಂದು ಲಕ್ಷ ಕೋಟಿ ರೂ. ಹೆಚ್ಚುವರಿ ತೆರಿಗೆಯಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ," ಎಂದರು.
ಬ್ಯಾಲೆಟ್ ಪೇಪರ್ ಬಳಕೆ: "ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸುವ ನಿರ್ಧಾರವು, ಜನರನ್ನು 25 ವರ್ಷ ಹಿಂದಕ್ಕೆ ಕೊಂಡೊಯ್ಯುವ ಪ್ರಯತ್ನ. ಇದು ತಮ್ಮ ನಾಯಕರನ್ನು ಮೆಚ್ಚಿಸಲು ತೆಗೆದುಕೊಂಡ ತೀರ್ಮಾನ," ಎಂದು ವ್ಯಂಗ್ಯವಾಡಿದರು.
"ಸಂವಿಧಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿಗೆ ಅವಕಾಶವಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಗುತ್ತಿಗೆಯಲ್ಲಿ ಕೇವಲ ಮುಸ್ಲಿಮರಿಗೆ ಅವಕಾಶ ಕಲ್ಪಿಸುತ್ತಿದೆ. ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹದೇವಪ್ಪ ಅವರು ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಎಲ್ಲಿದೆ ಎಂದು ಹೇಳಲಿ," ಎಂದು ಆಗ್ರಹಿಸಿದರು.
"ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಮುಂದುವರಿದಿವೆ, ಆದರೆ ಸರ್ಕಾರ ಪ್ರಕರಣಗಳನ್ನು ದಾಖಲಿಸದೆ ಸಂಖ್ಯೆ ಕಡಿಮೆಯಾಗಿದೆ ಎಂದು ಸುಳ್ಳು ಹೇಳುತ್ತಿದೆ," ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮಾಜಿ ಶಾಸಕ ಪಿ. ರಾಜೀವ್ ಉಪಸ್ಥಿತರಿದ್ದರು.