
ಬೆಂಗಳೂರಿನ ಗುರುದ್ವಾರಕ್ಕೆ ಬಾಂಬ್ ಸ್ಫೋಟ ಬೆದರಿಕೆ: ಇ-ಮೇಲ್‌ನಿಂದ ಹೆಚ್ಚಿದ ಆತಂಕ
ಹಿಂದೆ ನಗರದ ಸಿಟಿ ಸಿವಿಲ್ ಕೋರ್ಟ್, ಬೆಂಗಳೂರು ಮತ್ತು ಕಲಬುರಗಿ ವಿಮಾನ ನಿಲ್ದಾಣಗಳು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿ ಹಾಗೂ ಹಲವು ಶಾಲೆಗಳಿಗೂ ಇದೇ ರೀತಿ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು.
ನಗರದ ಹಲಸೂರು ಸಮೀಪದಲ್ಲಿರುವ ಪ್ರಸಿದ್ಧ ಗುರು ಸಿಂಗ್ ಸಭಾ ಗುರುದ್ವಾರಕ್ಕೆ ಇ-ಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಬಂದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಾಲ್ಕು ದಿನಗಳ ಹಿಂದೆ 'ರಾಜಗಿರಿ' ಎಂಬ ಹೆಸರಿನಿಂದ ಕಳುಹಿಸಲಾದ ಈ ಇ-ಮೇಲ್‌ನಲ್ಲಿ, ಗುರುದ್ವಾರದ ಶೌಚಾಲಯದಲ್ಲಿ ನಾಲ್ಕು ಆರ್‌ಡಿಎಕ್ಸ್ (RDX IED) ಬಾಂಬ್‌ಗಳನ್ನು ಇರಿಸಲಾಗಿದ್ದು, ಅವುಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ, ಗುರುದ್ವಾರದ ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದೆ. ಈ ಸಂಬಂಧ ಋಷಿಪಾಲ್ ಸಿಂಗ್ ಎಂಬುವವರು ನೀಡಿದ ದೂರಿನ ಅನ್ವಯ, ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮತ್ತು ಪರಿಶೀಲನೆ ನಡೆಸುತ್ತಿದ್ದಾರೆ.
ಹುಸಿ ಬೆದರಿಕೆಗಳ ಸರಣಿ
ಇತ್ತೀಚೆಗೆ ಬೆಂಗಳೂರಿನಲ್ಲಿ ಇಂತಹ ಹುಸಿ ಬಾಂಬ್ ಬೆದರಿಕೆಗಳ ಹಾವಳಿ ಹೆಚ್ಚಾಗಿದೆ. ಈ ಹಿಂದೆ ನಗರದ ಸಿಟಿ ಸಿವಿಲ್ ಕೋರ್ಟ್, ಬೆಂಗಳೂರು ಮತ್ತು ಕಲಬುರಗಿ ವಿಮಾನ ನಿಲ್ದಾಣಗಳು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿ ಹಾಗೂ ಹಲವು ಶಾಲೆಗಳಿಗೂ ಇದೇ ರೀತಿ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು.
ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ನಂತರ, ಇಂತಹ ಯಾವುದೇ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ಪೊಲೀಸರು ಹೆಚ್ಚಿನ ಕಟ್ಟೆಚ್ಚರ ವಹಿಸಿ ತನಿಖೆ ನಡೆಸುತ್ತಿದ್ದಾರೆ.