ನಿಗಮ- ಮಂಡಳಿ ನೇಮಕ ಕಗ್ಗಂಟು | ಸಿಎಂಗಿಂತ ಡಿಸಿಎಂಗೆ ʼಡಬಲ್ ಪವರ್ʼ!
x

ನಿಗಮ- ಮಂಡಳಿ ನೇಮಕ ಕಗ್ಗಂಟು | ಸಿಎಂಗಿಂತ ಡಿಸಿಎಂಗೆ ʼಡಬಲ್ ಪವರ್ʼ!

ನಿಗಮ ಮಂಡಳಿ ನೇಮಕಾತಿ ಸಮಿತಿ ಪತ್ಯೇಕ ಪಟ್ಟಿ ಮಾಡಿಕೊಂಡಿದ್ದು, ಅದರ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 75 ಜನರನ್ನು ಶಿಫಾರಸು ಮಾಡುವ ಅಧಿಕಾರ ನೀಡಲಾಗಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ 150 ಜನರನ್ನು ಶಿಫಾರಸು ಮಾಡುವ ಅವಕಾಶ ಮಾಡಲಾಗಿದೆ.


ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ ನಿಗಮ ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಮಾಡುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ʼಡಬಲ್ ಪವರ್ʼ ದೊರೆತಿರುವುದು ಪಕ್ಷದ ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ತಮಗೆ ನಿಗಮ ಮಂಡಳಿಯಲ್ಲಿ ಯಾವುದೇ ಸ್ಥಾನಮಾನ ನೀಡದಿರುವ ಬಗ್ಗೆ ಕಾರ್ಯಕರ್ತರು ನಾಯಕರ ವಿರುದ್ದ ಸಾಕಷ್ಟು ಅಸಮಾಧಾನ ಹೊರ ಹಾಕಿದ್ದಾರೆ. ಅದರ ಪರಿಣಾಮವಾಗಿ ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸಲು ಈಗಾಗಲೇ ಪಕ್ಷ ಹಾಗೂ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು, ವಿಧಾನಸಭಾ ಕ್ಷೇತ್ರವಾರು ಸಂಭಾವ್ಯರ ಪಟ್ಟಿ ಸಿದ್ದಪಡಿಸಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯ ಸಮಿತಿಗೆ ಕಳುಹಿಸಲಾಗಿದೆ.‌

ಈಗಾಗಲೇ ಈ ಸಮಿತಿ ಪ್ರತಿ ಕ್ಷೇತ್ರದಿಂದ ಬಂದಿರುವವರ ಪಟ್ಟಿ ಪರಿಶೀಲನೆ ಮಾಡಿದ್ದು, ಸರ್ಕಾರ ನೇಮಕ ಮಾಡಲು ನಿರ್ಧರಿಸಿರುವ ಸಂಖ್ಯೆಗೂ ಬಂದಿರುವ ಅರ್ಜಿಗಳಿಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಪತ್ತೆ ಮಾಡಿದೆ. ಇದರಿಂದ ಸಮಿತಿಯೇ ನೇರವಾಗಿ ಪಟ್ಟಿ ಅಂತಿಮಗೊಳಿಸಿದರೆ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಪ್ರತಿ ಶಾಸಕರು, ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಗಳು, ಸಂಸದರು, ಜಿಲ್ಲಾಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರಿಗೆ ಸೂಕ್ತ ಅಭ್ಯರ್ಥಿಗಳನ್ನು ಶಿಫಾರಸು ಮಾಡುವ ಅಧಿಕಾರ ನೀಡಿದೆ. ಸೆಪ್ಟಂಬರ್ 10 ರೊಳಗಗೆ ಎಲ್ಲರೂ ಶಿಫಾರಸು ಪಟ್ಟಿಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ನೇತೃತ್ವದ ಸಮಿತಿಗೆ ಕಳುಹಿಸಲು ಸೂಚಿಸಲಾಗಿದೆ ಎಂಬ ಮಾಹಿತಿ ಇದೆ.

ಯಾರಿಗೆ ಎಷ್ಟು ಅಧಿಕಾರ?

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಶಾಸಕರು, ಪರಾಜಿತ ಅಭ್ಯರ್ಥಿಗಳು, ಸಂಸದರು, ಜಿಲ್ಲಾಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಯಾರು ಎಷ್ಟು ಜನರಿಗೆ ಶಿಫಾರಸು ಮಾಡಬಹುದು ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಲ್ಲ ಜಿಲ್ಲಾ ಘಟಕ ಹಾಗೂ ಸಂಬಂಧ ಪಟ್ಟವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಂತೆ ಮುಖಂಡರುಗಳು ಸಮಿತಿಗೆ ಶಿಫಾರಸು ಮಾಡಲು ಈ ಕೆಳಕಂಡಂತೆ ಕೋಟಾ ನಿಗದಿಪಡಿಸಲಾಗಿದೆ.

ಸ್ಥಾನಮಾನಕೋಟಾ

ಶಾಸಕರು

136 x 3= 408

2023ರ ವಿಧಾನಸಭಾ ಪರಾಜಿತ ಅಭ್ಯರ್ಥಿಗಳು

88 x 2= 176

2024ರ ಲೋಕಸಭಾ ಸದಸ್ಯರು, ಪರಾಜಿತ ಅಭ್ಯರ್ಥಿಗಳು

28 x 2= 56

ರಾಜ್ಯಸಭಾ ಸದಸ್ಯರು

5 x 2= 10

ವಿಧಾನಪರಿಷತ್‌ ಸದಸ್ಯರು

35 x 1= 35

ಡಿಸಿಸಿ ಅಧ್ಯಕ್ಷರು

40 x 2= 80

ಮುಂಚೂಣಿ ಘಟಕ / ಸೆಲ್ / ವಿಭಾಗಗಳು

15 x 5= 75

ನಾಮನಿರ್ದೇಶನ ಸಮಿತಿ ಸದಸ್ಯರು

10 x 10 = 100

ಅಲ್ಲದೇ ನೇಮಕಾತಿ ಸಮಿತಿಗೆ ಹೆಸರುಗಳನ್ನು ಶಿಫಾರಸು ಮಾಡುವ ಸಮಯದಲ್ಲಿ ಈ ಕೆಳಕಂಡ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.

1. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರು ಮಹಿಳೆಯರನ್ನು ಒಳಗೊಂಡಿರಬೇಕು.

2. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದಂತೆ ಒಬಿಸಿ, ಎಸ್.ಸಿ/ಎಸ್.ಟಿ. ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯತೆ ನೀಡಬೇಕು.

3. ನಾಮ ನಿರ್ದೇಶನಕ್ಕೆ ಹೆಸರಿಸುವ ವ್ಯಕ್ತಿಯು ಕನಿಷ್ಟ 5 ವರ್ಷಗಳು ಪಕ್ಷದಲ್ಲಿ ಕೆಲಸ ಮಾಡಿರಬೇಕು ಹಾಗೂ ಅವರು ಹೊಂದಿರುವ ಕಾಂಗ್ರೆಸ್ ಸದಸ್ಯತ್ವ ಸಂಖ್ಯೆ ನಮೂದಿಸುವುದು.

4. ಅಂತಿಮಗೊಳಿಸಿದ ಪಟ್ಟಿಯನ್ನು 10-09-2024ರ ಒಳಗಾಗಿ ನಮ್ಮ ಸಮಿತಿಯ ಸದಸ್ಯರುಗಳಿಗೆ ಸಲ್ಲಿಸುವುದು.

ಎಲ್ಲಾ ಅಂಶಗಳನ್ನು ಪರಿಗಣಿಸಿ ಅದರಂತೆ ನಿಗದಿತ ಸಮಯದ ಒಳಗಾಗಿ ಸಂಬಂಧಪಟ್ಟ ಮುಖಂಡರು ನೀಡಬೇಕಾದ ಶಿಫಾರಸುಗಳನ್ನು ಹೆಸರು, ವಿಳಾಸ, ದೂರವಾಣಿ, ವರ್ಗ, ಪಕ್ಷದಲ್ಲಿ ಹೊಂದಿರುವ ಹುದ್ದೆ, ಪಕ್ಷದಲ್ಲಿ ಸಲ್ಲಿಸಿರುವ ಸೇವಾ ಅವಧಿಯೊಂದಿಗೆ ರಚಿಸಿದ ಪಟ್ಟಿಯನ್ನು ಸಲ್ಲಿಸಬೇಕು, ನಿಗದಿತ ಸಮಯದಲ್ಲಿ ಸಲ್ಲಿಸದಿದ್ದರೆ ಕೆಪಿಸಿಸಿ ವತಿಯಿಂದಲೇ ಉಳಿದ ಶಿಫಾರಸುಗಳನ್ನು ನೇರವಾಗಿ ಸಮಿತಿಗೆ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರು ಪತ್ರದಲ್ಲಿ ಸೂಚಿಸಿದ್ದಾರೆ.

ಆಕ್ಷೇಪಕ್ಕೆ ಕಾರಣ ಏನು?

ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬರೆದಿರುವ ಪತ್ರದ ಹೊರತಾಗಿ ನಿಗಮ ಮಂಡಳಿ ನೇಮಕಾತಿ ಸಮಿತಿ ಪತ್ಯೇಕ ಪಟ್ಟಿ ಮಾಡಿಕೊಂಡಿದ್ದು, ಅದರ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 75 ಜನರನ್ನು ಶಿಫಾರಸು ಮಾಡುವ ಅಧಿಕಾರ ನೀಡಲಾಗಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ 150 ಜನರನ್ನು ಶಿಫಾರಸು ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ 75 ಜನ, ಡಿಸಿಎಂ ಹುದ್ದೆಗೆ 75 ಜನರನ್ನು ಶಿಫಾರಸು ಮಾಡಲು ಅಧಿಕಾರ ನೀಡಲಾಗಿದ್ದು, ಇದು ಸಚಿವರು, ಶಾಸಕರು ಹಾಗೂ ಸಂಸದರ ಆಕ್ಷೇಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಸಚಿವರು ತಮ್ಮ ಕ್ಷೇತ್ರದ ಹೊರತಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯ ನಿರ್ವಹಿಸುವುದರಿಂದ ಅವರು ತಮ್ಮ ವಿಧಾನಸಭಾ ಕ್ಷೇತ್ರದ ಹೊರತಾಗಿಯೂ ತಮ್ನ ಉಸ್ತುವಾರಿ ಜಿಲ್ಲೆಯ ಕಾರ್ಯಕರ್ತರನ್ನು ಶಿಫಾರಸು ಮಾಡಲು ಯಾವುದೇ ಅವಕಾಶ ಇಲ್ಲದಂತಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಸಚಿವರುಗಳಿಗೆ ತಮ್ಮ ಕ್ಷೇತ್ರದ ಹೊರತಾಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕನಿಷ್ಠ 5 ಜನರನ್ನಾದರೂ ಶಿಫಾರಸು ಮಾಡುವ ಅವಕಾಶ ನೀಡಿದ್ದರೆ, ಜಿಲ್ಲೆಯ ಕಾರ್ಯಕರ್ತರಿಗೆ ನ್ಯಾಯ ಕೊಡಿಸಲು ಅವರಿಗೂ ಅವಕಾಶ ಸಿಕ್ಕಂತಾಗುತ್ತಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ‌.

ಕೆಪಿಸಿಸಿ ಅಧ್ಯಕ್ಷರು ಡಿಸಿಎಂ ಎರಡೂ ಸ್ಥಾನಗಳನ್ನು ಒಬ್ಬರೇ ಹೊಂದಿರುವುದರಿಂದ ಅವರು ಸಿಎಂ ಸಮನಾಗಿ 75 ಅರ್ಹರನ್ನು ಶಿಫಾರಸು ಮಾಡಲು ಅವಕಾಶ ನೀಡಬಹುದಿತ್ತು. ಈಗ ಎರಡೂ ಹುದ್ದೆಗಳಿಗೂ ಸಿಎಂ ಸಮಾನವಾದ ಸಂಖ್ಯೆಯ ಜನರನ್ನು ಶಿಫಾರಸು ಮಾಡಲು ಅವಕಾಶ ಮಾಡಿಕೊಂಡಿರುವುದು ಮುಖ್ಯಮಂತ್ರಿ ಸ್ಥಾನಕ್ಕೂ ಅವಮಾನ ಮಾಡಿದಂತಾಗುತ್ತದೆ ಎಂಬ ಮಾತುಗಳು ಪಕ್ಷದ ಕೆಲವು ಮುಖಂಡರ ವಲಯದಲ್ಲಿ ಕೇಳಿ ಬರುತ್ತಿವೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ನೇತೃತ್ವದ ಆಯ್ಕೆ ಸಮಿತಿಯೇ ಈ ತೀರ್ಮಾನ ತೆಗೆದುಕೊಂಡಿದೆಯೋ ಅಥವಾ ಸಮಿತಿ ಮೇಲೆ ಡಿಸಿಎಂ ಪ್ರಭಾವ ಬೀರಿದ್ದಾರೋ? ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದೇ ತಿಂಗಳು 13 ರಂದು ಡಾ. ಜಿ. ಪರಮೇಶ್ವರ ನೇತೃತ್ವದ ಸಮಿತಿ ಸಭೆ ನಡೆಯಲಿದ್ದು, ಅಂದಿನ ಸಭೆಯಲ್ಲಿ ಆಂತರಿಕವಾಗಿ ಎದ್ದಿರುವ ಆಕ್ಷೇಪಗಳಿಗೆ ಉತ್ತರ ಕಂಡುಕೊಳ್ಳುವ ಸಾಧ್ಯತೆ ಇದೆ.

Read More
Next Story