ಪಬ್ಲಿಕ್‌ ಪರೀಕ್ಷೆ ಗೊಂದಲ | ವರ್ಷಪೂರ್ತಿ ಮಕ್ಕಳನ್ನು ಕಾಡಿದ ಶಿಕ್ಷಣ ಇಲಾಖೆಯ ಗುಮ್ಮ!
x

ಪಬ್ಲಿಕ್‌ ಪರೀಕ್ಷೆ ಗೊಂದಲ | ವರ್ಷಪೂರ್ತಿ ಮಕ್ಕಳನ್ನು ಕಾಡಿದ ಶಿಕ್ಷಣ ಇಲಾಖೆಯ ಗುಮ್ಮ!


ರಾಜ್ಯದ 5, 8, 9 ಮತ್ತು 11ನೇ ತರಗತಿ ಪಬ್ಲಿಕ್‌ ಪರೀಕ್ಷೆ(ಬೋರ್ಡ್‌ ಪರೀಕ್ಷೆ) ರದ್ದು ಮಾಡಿದ ಹೈಕೋರ್ಟ್‌ ಆದೇಶದ ವಿರುದ್ಧ ರಾಜ್ಯ ಸರ್ಕಾರ ಗುರುವಾರ ಮೇಲ್ಮನವಿ ಸಲ್ಲಿಸಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರದ ಎನ್‌ಇಪಿಗೆ ಬದಲಾಗಿ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರ, ಅದೇ ಎನ್‌ ಇಪಿಯ ಭಾಗವಾಗಿ ಜಾರಿಗೆ ಬಂದ ಪಬ್ಲಿಕ್‌ ಪರೀಕ್ಷೆಯನ್ನು ಮಾತ್ರ ಯಾಕೆ ಸಮರ್ಥಿಸಿಕೊಳ್ಳುತ್ತಿದೆ ಎಂಬುದು ನಿಗೂಢವಾಗಿದೆ.

ರಾಜ್ಯ ಸರ್ಕಾರ ಎಸ್‌ಇಪಿ ಜಾರಿಗಾಗಿ ರಚಿಸಲಾಗಿರುವ ಸಮಿತಿಯಲ್ಲಿರುವ ಶಿಕ್ಷಣ ತಜ್ಞರೂ ಸೇರಿದಂತೆ ಬಹುತೇಕ ಶಿಕ್ಷಣ ಪರಿಣಿತರು ಐದನೇ ತರಗತಿಯಿಂದಲೇ ಪಬ್ಲಿಕ್‌ ಪರೀಕ್ಷೆ ಅಥವಾ ಬೋರ್ಡ್‌ ಪರೀಕ್ಷೆ ಜಾರಿ ಮಾಡುವುದು ಅಗತ್ಯವಿಲ್ಲ. ಇದು ಮಕ್ಕಳಿಗೆ ಹೊರೆ ಎಂಬ ಅಭಿಪ್ರಾಯ ಹೊಂದಿದ್ದಾರೆ.

ಆ ಹಿನ್ನೆಲೆಯಲ್ಲಿಯೇ, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವುದು ಮಕ್ಕಳ ಮುಕ್ತ ಕಲಿಕೆಗೆ ಮಾರಕ. ಮಕ್ಕಳ ಮೇಲೆ ಅನಗತ್ಯ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಇಂತಹ ಪರೀಕ್ಷೆಗಳು ಕಾರಣವಾಗುತ್ತವೆ. ಎನ್‌ ಇಪಿಯ ಭಾಗವಾಗಿ ಜಾರಿಗೆ ಬಂದಿರುವ ಪಬ್ಲಿಕ್‌ ಪರೀಕ್ಷೆಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಕೈಬಿಡಬೇಕು. ಹಾಗಾಗಿ ಸರ್ಕಾರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದೆ, ತೀರ್ಪನ್ನು ಒಪ್ಪಿಕೊಂಡು ಮಕ್ಕಳ ಉಲ್ಲಾಸದ ಕಲಿಕೆಗೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೂ ಆರಂಭವಾಗಿತ್ತು.

ಆದರೆ, 5, 8 ಮತ್ತು 9ನೇ ತರಗತಿಗೆ ಪರೀಕ್ಷೆಗಳು ಸೋಮವಾರದಿಂದಲೇ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪಬ್ಲಿಕ್‌ ಪರೀಕ್ಷೆ ರದ್ದು ಮಾಡಿ ಹೈಕೋರ್ಟ್‌ ಹೊರಡಿಸಿದ್ದ ಆದೇಶ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಬುಧವಾರ ಹೈಕೋರ್ಟ್‌ ಆದೇಶ ಹೊರಬೀಳುತ್ತಿದ್ದಂತೆ ಪರೀಕ್ಷೆಗೆ ಇನ್ನು ನಾಲ್ಕು ದಿನ ಇರುವಾಗ ಮುಂದೆ ಏನು ಮಾಡುವುದು ಎಂಬ ಆತಂಕಕ್ಕೆ ಒಳಗಾಗಿದ್ದರು.

ಎನ್‌ ಇಪಿ ಬೇಡ, ಪಬ್ಲಿಕ್‌ ಪರೀಕ್ಷೆ ಬೇಕು?

ವಾಸ್ತವವಾಗಿ, ಕೇಂದ್ರ ಸರ್ಕಾರದ ಎನ್‌ಇಪಿ ಅಡಿಯಲ್ಲಿ ಶಿಕ್ಷಣ ಇಲಾಖೆ ಪಬ್ಲಿಕ್‌ ಪರೀಕ್ಷೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಜಾರಿಗೆ ತಂದಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಅದನ್ನು ಯಥಾ ಪ್ರಕಾರ ಮುಂದುವರಿಸಿದೆ. ಆದರೆ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ರಾಜ್ಯ ಪಠ್ಯಕ್ರಮದ ಶಾಲೆಗಳು ಈ ಪರೀಕ್ಷೆಯನ್ನು ವಿರೋಧಿಸಿದ್ದವು. ಪಠ್ಯಕ್ರಮದಲ್ಲಿ ಇರುವ ವ್ಯತ್ಯಾಸದ ಹಿನ್ನೆಲೆಯಲ್ಲಿ ಮುಖ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪಬ್ಲಿಕ್‌ ಪರೀಕ್ಷೆಯನ್ನು ವಿರೋಧಿಸಿದ್ದವು.

ಆದರೆ, ಕೇಂದ್ರ ಸರ್ಕಾರದ ಎನ್‌ಇಪಿಯನ್ನು ಸನಾತನವಾದಿ ಶಿಕ್ಷಣ ಪದ್ಧತಿ ಎಂದು ತಿರಸ್ಕರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಅದೇ ಎನ್‌ಇಪಿಯ ಅಡಿಯಲ್ಲಿ ಆರಂಭಿಸಿರುವ ಈ ಪಬ್ಲಿಕ್‌ ಪರೀಕ್ಷೆಯನ್ನು ಯಾಕೆ ಕೈಬಿಡದೆ, ಮುಂದುವರಿಸಲು ಆಸಕ್ತಿ ವಹಿಸುತ್ತಿದೆ? ಎಂಬುದು ಶಿಕ್ಷಣ ತಜ್ಞರ ಪ್ರಶ್ನೆ.

“5,8,9 ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ವಿಧಾನಮಂಡಲದಲ್ಲಿ ಚರ್ಚೆ ನಡೆಸಲಿಲ್ಲ. ಶಿಕ್ಷಣದ ಭಾಗೀದಾರರೊಂದಿಗೆ ಸಮಾಲೋಚನೆ ಮಾಡಲಿಲ್ಲ. ಏಕಪಕ್ಷೀಯವಾಗಿ ಕೇವಲ ಅಧಿಸೂಚನೆ ಮೂಲಕ ತಿದ್ದುಪಡಿ ಮಾಡುವುದು ಸಂವಿಧಾನ ವಿರೋಧಿ ನೀತಿಯಲ್ಲವೇ?” ಎಂದು ಶಿಕ್ಷಣ ತಜ್ಞ ಡಾ ಶ್ರೀಪಾದ್ ಭಟ್ ಪ್ರಶ್ನಿಸಿದ್ದಾರೆ.

“ಮುಖ್ಯವಾಗಿ ಎನ್ ಇಪಿ 2020ಯನ್ನು ವಿರೋಧಿಸಿದ ಕಾಂಗ್ರೆಸ್, ಆಗ 'ಕೇಂದ್ರ ಬಿಜೆಪಿ ಸರ್ಕಾರವು ಸಂಸತ್ತಿನಲ್ಲಿ ಚರ್ಚೆ ಮಾಡಲಿಲ್ಲ, ರಾಜ್ಯ ಬಿಜೆಪಿ ಸರ್ಕಾರವು ವಿಧಾನ ಮಂಡಲದಲ್ಲಿ ಚರ್ಚೆ ಮಾಡಲಿಲ್ಲ' ಎಂದು ಪ್ರತಿಭಟಿಸಿತ್ತು. ಈಗ ತಾನು ಅಧಿಕಾರಕ್ಕೆ ಬಂದ ನಂತರ ಸ್ವತಃ ತಾನೇ ಆ ರೀತಿ ನಡೆದುಕೊಳ್ಳುವುದು ಸರಿಯೇ?, ಮತ್ತು ಎನ್ ಇಪಿಯನ್ನು ವಿರೋಧಿಸುವ ಕಾಂಗ್ರೆಸ್ ಸರ್ಕಾರ ಪಬ್ಲಿಕ್ ಪರೀಕ್ಷೆ ನಡೆಸಬೇಕೆಂದು ಹೇಳಿದ ಅದರ ಶಿಫಾರಸ್ಸನ್ನು ಜಾರಿಗೊಳಿಸುತ್ತಿರುವುದು ಎಂತಹಾ ವ್ಯಂಗ್ಯ ಮತ್ತು ವೈರುಧ್ಯ? ವಿರೋಧಾಭಾಸ?” ಎಂದು ಅವರು ಪ್ರಶ್ನಿಸಿದ್ದಾರೆ.

ಪಠ್ಯ ವರ್ಸಸ್‌ ವರ್ಕ್‌ ಬುಕ್?

ಈ ನಡುವೆ ಶಿಕ್ಷಕರಲ್ಲೂ ಸಾಕಷ್ಟು ಗೊಂದಲಗಳಿವೆ. ಶಿಕ್ಷಣ ಇಲಾಖೆಯ ಗೊಂದಲಕಾರಿ ನಡವಳಿಕೆಗಳೇ ಇದಕ್ಕೆ ಕಾರಣ. ಪಬ್ಲಿಕ್ ಪರೀಕ್ಷೆ ನಡೆಸುವುದಾಗಿ ಕಳೆದ ಶೈಕ್ಷಣಿಕ ವರ್ಷದಲ್ಲೇ ತೀರ್ಮಾನವಾಗಿದ್ದರೂ ಪೂರಕ ಪಠ್ಯಪುಸ್ತಕ ಮತ್ತು ವರ್ಕ್‌ ಬುಕ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಲೇ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಿವಾದಿತ ಪಠ್ಯಪುಸ್ತಕ ರದ್ದು ಮಾಡಿ ಹೊಸ ಪಠ್ಯಗಳನ್ನು ಸೇರಿಸಲಾಯಿತು. ಆದರೆ, ಅದಕ್ಕೆ ಪೂರಕವಾಗಿ ವರ್ಕ್‌ ಬುಕ್‌ ಮಾತ್ರ ಶಾಲೆಗಳಿಗೆ ಸರಬರಾಜು ಮಾಡಲೇ ಇಲ್ಲ.

ಹಾಗಾಗಿ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಲು ಯಾವುದನ್ನು ಆಧಾರವಾಗಿ ಪರಿಗಣಿಸಬೇಕು ಎಂಬ ಗೊಂದಲ ಶಿಕ್ಷಕರಲ್ಲಿ ಕೊನೇ ಕ್ಷಣದವರೆಗೆ ಮುಂದುವರಿದಿದೆ.

ಸೆಮಿಸ್ಟರ್‌ ಪದ್ಧತಿ ಗೊಂದಲ

ಎಂಟನೇ ತರಗತಿಗೆ ಈ ವರ್ಷದಿಂದ ಸೆಮಿಸ್ಟರ್‌ ಪದ್ಧತಿ ಎಂದು ಆರಂಭದಲ್ಲಿ ಶಿಕ್ಷಣ ಇಲಾಖೆ ಸೂಚಿಸಿತ್ತು. ಅದರಂತೆ ಶಿಕ್ಷಕರು ಸೆಮಿಸ್ಟರ್‌ ಪ್ರಕಾರವೇ ಪರೀಕ್ಷೆಗಳನ್ನು ನಡೆಸಲು ಬೋಧನೆ ಮಾಡಿದ್ದರು. ಆದರೆ, ಪಬ್ಲಿಕ್‌ ಪರೀಕ್ಷೆ ಕೆಲವೇ ದಿನ ಇರುವಾಗ ಇಲಾಖೆ, ಆ ಪರೀಕ್ಷೆಗೆ ಇಡೀ ವರ್ಷದ ಪಠ್ಯವನ್ನು ಪರಿಗಣಿಸಿ ಪ್ರಶ್ನೆ ಪತ್ರಿಕೆ ತಯಾರಿಸಲಾಗಿದೆ. ಹಾಗಾಗಿ ಎರಡನೇ ಸೆಮಿಸ್ಟರ್‌ ಪಠ್ಯ ಮಾತ್ರವಲ್ಲದೆ, ಮೊದಲ ಸೆಮಿಸ್ಟರ್‌ ಪಠ್ಯದಲ್ಲೂ ಮಕ್ಕಳು ಪರೀಕ್ಷೆ ಬರೆಯಲು ಸಜ್ಜುಗೊಳಿಸಿ ಎಂದಿತ್ತು!

ಕೊನೇ ಕ್ಷಣದಲ್ಲಿ ಇಲಾಖೆ ಈ ರೀತಿಯ ಸೂಚನೆ ನೀಡುವ ಮೂಲಕ ಮಕ್ಕಳ ಮಾನಸಿಕ ಒತ್ತಡಕ್ಕೂ, ಶಿಕ್ಷಕರ ಗೊಂದಲಕ್ಕೂ ಕಾರಣವಾಯಿತು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಖಾಸಗಿ ಶಾಲೆಯೊಂದರ ಹೈಸ್ಕೂಲು ಶಿಕ್ಷಕರು.

ಮಕ್ಕಳಿಂದ ಫೀ ವಸೂಲಿ!

ಈ ನಡುವೆ ಪರೀಕ್ಷೆ ಬರೆಯುವ ಮಕ್ಕಳಿಗೆ ಕೇವಲ ಪ್ರಶ್ನೆ ಪತ್ರಿಕೆಯನ್ನು ಮಾತ್ರ ಇಲಾಖೆ ಸರಬರಾಜು ಮಾಡಲಿದೆ. ಉತ್ತರ ಪತ್ರಿಕೆಗಳನ್ನು ಮಕ್ಕಳೇ ತರಬೇಕು ಎಂಬ ವಿದ್ಯಾರ್ಥಿ ವಿರೋಧಿ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಹೊರಡಿಸಿ ಮತ್ತೊಂದು ಗೊಂದಲ ಸೃಷ್ಟಿಸಿತು. ಶಾಲಾ ಮುಖ್ಯಸ್ಥರು ಮಕ್ಕಳ ಪೋಷಕರೊಂದಿಗೆ ಚರ್ಚಿಸಿ, ಕೆಲವೊಮ್ಮೆ ಸ್ವಯಂ ನಿರ್ಧಾರದ ಮೇಲೆ ಮಕ್ಕಳು ನಿತ್ಯ ಉತ್ತರಪತ್ರಿಕೆ ಹಿಡಿದುಕೊಂಡು ಬರುವ ಬದಲು ಶಾಲೆಯಿಂದಲೇ ಕೊಡುವುದು ಅನುಕೂಲ ಎಂದು ತೀರ್ಮಾನಿಸಿ ಮಕ್ಕಳಿಂದ ಉತ್ತರ ಪತ್ರಿಕೆಗಾಗಿ ಪ್ರತ್ಯೇಕ ಶುಲ್ಕ ವಸೂಲಿ ಮಾಡಿದರು. ಪ್ರತಿ ಮಕ್ಕಳಿಗೆ ರೂ.80-150 ರವರೆಗೆ ಉತ್ತರ ಪತ್ರಿಕೆಗಾಗಿ ವಸೂಲಿ ಮಾಡಲಾಗಿದೆ. ಆ ಮೂಲಕ 14 ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂಬ ಕಡ್ಡಾಯ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿ ಇಲಾಖೆ ನಡೆದುಕೊಂಡಿದೆ.

ಇಲಾಖೆಯ ಗೊಂದಲಗಳ ಕುರಿತು ಪ್ರತಿಕ್ರಿಯೆ ಪಡೆಯಲು ರಾಜ್ಯ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಪರೀಕ್ಷಾ ವಿಭಾಗ ಮುಖ್ಯಸ್ಥರನ್ನು ದ ಫೆಡರಲ್‌ ಕರ್ನಾಟಕ ಸಂಪರ್ಕಿಸಲು ʼದ ಫೆಡರಲ್‌ ಕರ್ನಾಟಕʼ ಪ್ರಯತ್ನಿಸಿತಾದರೂ ಇಬ್ಬರೂ ಅಧಿಕಾರಿಗಳು ಕರೆ ಸ್ವೀಕರಿಸಲಿಲ್ಲ.

ಒಟ್ಟಾರೆ, ಪಬ್ಲಿಕ್ ಪರೀಕ್ಷೆಯ ವಿಷಯದಲ್ಲಿ ವರ್ಷಪೂರ್ತಿ ಮಕ್ಕಳ ಕಲಿಕೆಗೆ ವ್ಯತಿರಿಕ್ತವಾಗಿ ಗೊಂದಲಕಾರಿ ನಡವಳಿಕೆಯನ್ನೇ ಅನುಸರಿಸಿದ ಶಿಕ್ಷಣ ಇಲಾಖೆ, ಇದೀಗ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೊನೇ ಕ್ಷಣದಲ್ಲಿ ಮೇಲ್ಮನವಿ ಸಲ್ಲಿಸುವ ಮೂಲಕ ಮಕ್ಕಳು ಮತ್ತು ಪೋಷಕರಷ್ಟೇ ಅಲ್ಲದೆ ಶಿಕ್ಷಕರ ಅಸಮಾಧಾನ ಮತ್ತು ಆಕ್ರೋಶಕ್ಕೂ ಈಡಾಗಿದೆ.

Read More
Next Story