
ಜಿಬಿಎ ವ್ಯಾಪ್ತಿಯ ಹೊರಗೂ ಬಿಎಂಟಿಸಿ ಸೇವೆ; ಖಾಸಗಿ ಬಸ್ ಮಾಲೀಕರಲ್ಲಿ ಆತಂಕ ಸೃಷ್ಟಿಸಿದ ಪ್ರಸ್ತಾವ
ನಗರ ವ್ಯಾಪ್ತಿ ಮೀರಿ ಸಾರಿಗೆ ಸೌಲಭ್ಯ ವಿಸ್ತರಿಸುವ ಕುರಿತು ಬಿಎಂಟಿಸಿ ಆಡಳಿತ ಮಂಡಳಿಯು ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪ್ರಸ್ತಾವ ಸಲ್ಲಿಸಿರುವುದು ಖಾಸಗಿ ಬಸ್ ಮಾಲೀಕರಲ್ಲಿ ಆತಂಕ ಮೂಡಿಸಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಿಂದ 40ಕಿ.ಮೀ. ದೂರದವರೆಗೆ ನಗರ ಸಾರಿಗೆ ಬಸ್‌ಗಳ ಸಂಚಾರ ವಿಸ್ತರಿಸುವ ಬಿಎಂಟಿಸಿ ಪ್ರಸ್ತಾವವು ಖಾಸಗಿ ಬಸ್ ಮಾಲೀಕರ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ನಗರ ವ್ಯಾಪ್ತಿ ಮೀರಿ ಸಾರಿಗೆ ಸೌಲಭ್ಯ ವಿಸ್ತರಿಸುವ ಕುರಿತು ಬಿಎಂಟಿಸಿ ಆಡಳಿತ ಮಂಡಳಿಯು ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪ್ರಸ್ತಾವ ಸಲ್ಲಿಸಿರುವುದು ಖಾಸಗಿ ಬಸ್ ಮಾಲೀಕರಲ್ಲಿ ಆತಂಕ ಮೂಡಿಸಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಈಗಾಗಲೇ ನಷ್ಟ ಅನುಭವಿಸುತ್ತಿದ್ದೇವೆ ಎಂದು ಅಲವತ್ತುಕೊಂಡಿರುವ ಖಾಸಗಿ ಬಸ್ ಮಾಲೀಕರು ಇದೀಗ ಬಿಎಂಟಿಸಿ ಮಾರ್ಗ ವಿಸ್ತರಣೆ ಮತ್ತು ಅನಧಿಕೃತ ಟ್ರಿಪ್ ಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ವ್ಯಾಪ್ತಿ ಮೀರಿದಂತೆ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಖಾಸಗಿ ಬಸ್ ಮಾಲೀಕರಿಗೆ ಹೊಡೆತ ಬೀಳಲಿದೆ. ಹಾಗಾಗಿ ಬಿಎಂಟಿಸಿ ಸಲ್ಲಿಸಿರುವ ಪ್ರಸ್ತಾವವನ್ನು ಮರು ಪರಿಶೀಲಿಸಬೇಕು ಎಂಬುದು ಖಾಸಗಿ ಬಸ್ ಮಾಲೀಕರ ಒಕ್ಕೂಟದ ಆಗ್ರಹವಾಗಿದೆ.
ಬಿಎಂಟಿಸಿ ಹೇಳುವುದೇನು?
ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರ ಹೊರವಲಯ ಹಾಗೂ ಜಿಬಿಎ ವ್ಯಾಪ್ತಿ ಹಿಗ್ಗಿರುವುದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಾರಿಗೆ ಸಂಪರ್ಕವನ್ನು ನಗರ ವ್ಯಾಪ್ತಿ ದಾಟಿ 40 ಕಿ.ಮೀ. ವರೆಗೆ ಕಲ್ಪಿಸಬೇಕು. ಹೊರವಲಯಗಳಿಂದ ಬೆಂಗಳೂರಿಗೆ ಬಂದು ಹೋಗುವವರ ಸಂಖ್ಯೆ ಹೆಚ್ಚುತ್ತಿದ್ದು, ಇದರ ಪರಿಣಾಮ ನಗರ ಸಾರಿಗೆಗೆ ಭಾರೀ ಬೇಡಿಕೆ ಕೇಳಿ ಬರುತ್ತಿದೆ. ಹಾಗಾಗಿ ಜಿಬಿಎ ವ್ಯಾಪ್ತಿಯಿಂದ 40 ಕಿ.ಮೀ.ದೂರದವರೆಗೆ ಬಿಎಂಟಿಸಿ ಬಸ್ ಗಳನ್ನು ಕಾರ್ಯಾಚರಣೆಗೆ ಇಳಿಸಲು ಉದ್ದೇಶಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ. ಈಗಾಗಲೇ ಹಲವು ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ಗಳು 50-60ಕಿ.ಮೀ ದೂರದವರೆಗೂ ಸಂಚರಿಸುತ್ತಿವೆ. ಬಿಎಂಟಿಸಿ ಪ್ರಸ್ತಾವಕ್ಕೆ ಸಾರಿಗೆ ಇಲಾಖೆ ಅನುಮೋದನೆ ನೀಡಿದರೆ ಇದರ ವ್ಯಾಪ್ತಿ 100 ಕಿ.ಮೀ. ಆಗಲಿದೆ ಎನ್ನಲಾಗಿದೆ.
ಎಲ್ಲೆಲ್ಲಿ ಬಿಎಂಟಿಸಿ ಸಾರಿಗೆ ವಿಸ್ತರಣೆ?
ಬಿಎಂಟಿಸಿ ತನ್ನ ಕಾರ್ಯಾಚರಣೆ ಮಾರ್ಗ ವಿಸ್ತರಣೆಯ ಭಾಗವಾಗಿ ಕನಕಪುರ, ರಾಮನಗರ ಹಾಗೂ ತಮಿಳುನಾಡಿನ ಗಡಿಭಾಗದವರೆಗೆ ಬಸ್ ಸೌಲಭ್ಯ ವಿಸ್ತರಿಸಲು ನಿರ್ಧರಿಸಿದೆ.
ಈಗಾಗಲೇ ದೊಡ್ಡಬಳ್ಳಾಪುರ ತಾಲೂಕಿನ ಎಸ್.ಎಸ್.ಘಾಟಿ( 53 ಕಿ.ಮೀ), ಬೆಂಗಳೂರಿನಿಂದ ಮಾಗಡಿ(54 ಕಿ.ಮೀ), ದೇವನಹಳ್ಳಿ, ಹೊಸಕೋಟೆ, ಆನೇಕಲ್ ಹಾಗೂ ನೆಲಮಂಗಲಕ್ಕೆ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ಜಿಬಿಎ ವ್ಯಾಪ್ತಿಯಿಂದ 40 ಕಿ.ಮೀ. ದೂರದವರೆಗೆ ಸಂಚಾರ ವಿಸ್ತರಿಸಿದರೆ ಒಟ್ಟು ಕಾರ್ಯಾಚರಣೆ ವ್ಯಾಪ್ತಿ 80-100 ಕಿ.ಮೀ ಹಿಗ್ಗಲಿದೆ. ಬೆಳೆಯುತ್ತಿರುವ ನಗರಕ್ಕೆ ಅನುಗುಣವಾಗಿ ಸಾರಿಗೆ ಸೌಲಭ್ಯ ಒದಗಿಸುವುದು ಅನಿವಾರ್ಯ ಎಂಬುದು ಬಿಎಂಟಿಸಿ ಅಧಿಕಾರಿಗಳ ವಾದವಾಗಿದೆ.
ಬಿಎಂಟಿಸಿಗೆ ಬರಲಿವೆ ಹೆಚ್ಚುವರಿ ಬಸ್
ಬಿಎಂಟಿಸಿ ಸಂಸ್ಥೆಗೆ ಕೇಂದ್ರದ ಬೃಹತ್ ಕೈಗಾರಿಕಾ ಸಚಿವಾಲಯವು ಪಿಎಂ- ಇ- ಡ್ರೈವ್ ಯೋಜನೆಯಡಿ 4,500 ವಿದ್ಯುತ್ ಚಾಲಿತ ಬಸ್‌ಗಳನ್ನು ನೀಡಲಿದೆ. ಸದ್ಯ ಬಿಎಂಟಿಸಿ ಬಳಿ 6,800 ಬಸ್‌ಗಳಿದ್ದು, ಹೊಸ ವಿದ್ಯುತ್ ಚಾಲಿತ ಬಸ್ ಗಳು ಸೇರ್ಪಡೆಯಾದರೆ ಅವುಗಳ ಸಂಖ್ಯೆ 11,300 ಆಗಲಿವೆ. ಇದರಿಂದ ಇನ್ನಷ್ಟು ಹೆಚ್ಚು ಮಾರ್ಗಗಳಿಗೆ ಬಸ್ ಸೌಲಭ್ಯ ಒದಗಿಸಬಹುದು ಎಂಬುದು ಬಿಎಂಟಿಸಿ ಅಧಿಕಾರಿಗಳ ಅಭಿಪ್ರಾಯವಾಗಿದೆ. ಆದರೆ, ಬೆಂಗಳೂರು ಹೊರವಲಯದಲ್ಲಿ ನಿರ್ಮಾಣವಾಗಿರುವ ಹೊಸ ಬಡಾವಣೆಗಳಿಗೆ ಈವರೆಗೂ ಸಾರಿಗೆ ಸೌಲಭ್ಯ ಒದಗಿಸಿಲ್ಲ. ಹೀಗಿರುವಾಗ ನಗರ ವ್ಯಾಪ್ತಿಯಿಂದ 40ಕಿ.ಮೀ ಹೊರಗೆ ಸಂಚಾರ ವಿಸ್ತರಣೆ ಮಾಡುವ ನಿರ್ಧಾರ ಟೀಕೆಗೂ ಗುರಿಯಾಗಿದೆ.
ಖಾಸಗಿ ಬಸ್ ಮಾಲೀಕರ ವಿರೋಧ
ಬಿಎಂಟಿಸಿ ಸಲ್ಲಿಸಿರುವ ಪ್ರಸ್ತಾವಕ್ಕೆ ಖಾಸಗಿ ಬಸ್ ಚಾಲಕರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿಂದಿನಿಂದಲೂ ಕಾರ್ಯಾಚರಣೆ ನಡೆಸುತ್ತಿರುವ ಮಾರ್ಗಗಳಲ್ಲಿ ಬಿಎಂಟಿಸಿ ಪ್ರವೇಶದಿಂದಾಗಿ ಖಾಸಗಿ ಬಸ್ ಮಾಲೀಕರ ಆದಾಯಕ್ಕೆ ಹೊಡೆತ ಬಿದ್ದಿದೆ. ಬಿಎಂಟಿಸಿಯ ಈಗಿರುವ 25 ಕಿ.ಮೀ.ನಿಂದ 40 ಕಿ.ಮೀ. ವ್ಯಾಪ್ತಿಯ ಕಾರ್ಯಾಚರಣೆಗೆ ನಮ್ಮ ಅಭ್ಯಂತರವಿಲ್ಲ. ಆದರೆ, ಗ್ರೇಟರ್ ಬೆಂಗಳೂರು ವ್ಯಾಪ್ತಿಯಿಂದ 40 ಕಿ.ಮೀ.ಹೊರಗೆ ಕಾರ್ಯಾಚರಣೆ ವಿಸ್ತರಿಸುವುದರಿಂದ ಖಾಸಗಿ ಬಸ್‌ಗಳ ಓಡಾಟಕ್ಕೆ ಸಮಸ್ಯೆಯಾಗಲಿದೆ. ಹೊಸ ಪ್ರಸ್ತಾವದ ಪ್ರಕಾರ ಮಾಲೂರು, ತಮಿಳುನಾಡಿನ ಗಡಿಭಾಗಗಳಿಗೂ ನಗರ ಸಾರಿಗೆ ಬಸ್‌ಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಬಸ್ ಮಾಲೀಕರು ಎಲ್ಲಿಗೆ ಹೋಗಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ ಶರ್ಮಾ ಪ್ರಶ್ನಿಸುತ್ತಾರೆ.
ಈಗಾಗಲೇ 1,100 ಖಾಸಗಿ ಬಸ್‌ಗಳು ಬೆಂಗಳೂರು ಸುತ್ತಲಿನ ಜಿಲ್ಲೆಗಳಿಗೆ ಸಂಪರ್ಕ ಒದಗಿಸುತ್ತಿವೆ. ಬಿಎಂಟಿಸಿ ಸಂಚಾರ ವಿಸ್ತರಿಸುವುದರಿಂದ ನಮಗೆ ಹೆಚ್ಚು ನಷ್ಟ ಸಂಭವಿಸಲಿದೆ. ಹಾಗಾಗಿ ಪ್ರಸ್ತಾವವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಖಾಸಗಿ ಬಸ್ ಆಪರೇಟರ್‌ಗಳಿಗೆ ಸಮಸ್ಯೆ
ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ವ್ಯವಸ್ಥೆಯಲ್ಲಿನ ಅಸಮಾನತೆ ಕೂಡ ಖಾಸಗಿ ಬಸ್ ಆಪರೇಟರ್‌ಗಳಿಗೆ ಸಮಸ್ಯೆ ತಂದೊಡ್ಡಿದೆ. ಬೇರೆ ರಾಜ್ಯಗಳ ಖಾಸಗಿ ಬಸ್‌ಗಳಿಗೆ ಹೋಲಿಸಿದರೆ ರಾಜ್ಯದ ಖಾಸಗಿ ಬಸ್‌ಗಳು ಹೆಚ್ಚಿನ ತೆರಿಗೆ ಪಾವತಿಸಬೇಕು. ನಾಗಾಲ್ಯಾಂಡ್, ಅರುಣಾಚಲಪ್ರದೇಶದಲ್ಲಿ ನೋಂದಣಿಯಾದ ಬಸ್‌ಗಳು ರಾಜ್ಯದಲ್ಲಿ ಸಂಚರಿಸುತ್ತಿವೆ. ಸೂಕ್ತ ತಪಾಸಣೆ ನಡೆಸುತ್ತಿಲ್ಲ. ಸಾಕಷ್ಟು ನಿಯಮ ಉಲ್ಲಂಘಿಸುತ್ತಿದ್ದರೂ ಕೇಳುವವರಿಲ್ಲ. ಅನ್ಯ ರಾಜ್ಯಗಳ ಬಸ್‌ಗಳು ವಾರ್ಷಿಕ 60 ಸಾವಿರ ತೆರಿಗೆ ಪಾವತಿಸುವ ಮೂಲಕ ಸುಲಭವಾಗಿ ಕರ್ನಾಟಕ ಪ್ರವೇಶಿಸುತ್ತಿವೆ. ಇದರಿಂದ ಸ್ಥಳೀಯ ಬಸ್ ಆಪರೇಟರ್‌ಗಳಿಗೆ ವಾರ್ಷಿಕ 82 ಸಾವಿರದಿಂದ 1.58 ಲಕ್ಷ ನಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.