
ಮೆಟ್ರೋ ರೈಲು ಹಾಗೂ ಬಿಎಂಟಿಸಿ ಬಸ್
ಮೆಟ್ರೋ ಟಿಕೆಟ್ ದರ ಹೆಚ್ಚಳ| ಬಿಎಂಟಿಸಿಗೆ 25 ಲಕ್ಷ ರೂ. ಹೆಚ್ಚುವರಿ ಲಾಭ
ಬಿಎಂಆರ್‌ಸಿಎಲ್ ಟಿಕೆಟ್ ದರ ಏರಿಕೆ ಮಾಡಿದ್ದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಯಾಗಿತ್ತು. ಇದರಿಂದ ಬಿಎಂಟಿಸಿಗೆ ನಿತ್ಯ ಎರಡು ಲಕ್ಷ ಪ್ರಯಾಣಿಕರು ಹೆಚ್ಚಳವಾಗಿದ್ದು 25 ಲಕ್ಷ ಲಾಭವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಕಳೆದ ಫೆಬ್ರವರಿಯಲ್ಲಿ ಪ್ರಯಾಣಿಕರಿಗೆ ಟಿಕೆಟ್ ದರ ಹೆಚ್ಚಳ ಮಾಡಿತ್ತು. ಆದರೆ ಇದು ಮೆಟ್ರೋಗೆ ಅನುಕೂಲವಾಗಿವುದರ ಬದಲು ಬಿಎಂಟಿಸಿಗೆ ಆದಾಯ ಹೆಚ್ಚಳದ ಮೂಲವಾಗಿದೆ.
ಬೆಂಗಳೂರಿನಲ್ಲಿ ದಿನನಿತ್ಯ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು ಮೆಟ್ರೋ ಹಾಗೂ ಬಿಎಂಟಿಸಿಯನ್ನು ಬಳಕೆ ಮಾಡುತ್ತಾರೆ. ಆದರೆ ಕಳೆದ ಫೆಬ್ರವರಿಯಲ್ಲಿ ಬಿಎಂಆರ್‌ಸಿಎಲ್ ಟಿಕೆಟ್ ದರ ಏರಿಕೆ ಮಾಡಿದ್ದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಇದರಿಂದ ಮೆಟ್ರೋಗೆ ಸ್ವಲ್ಪ ಹಿನ್ನೆಡೆಯಾಗಿದ್ದರೆ ಬಿಎಂಟಿಸಿಗೆ ನಿತ್ಯ ಎರಡು ಲಕ್ಷ ಪ್ರಯಾಣಿಕರು ಹೆಚ್ಚಳವಾಗಿದ್ದು ನಿತ್ಯ 25 ಲಕ್ಷ ಲಾಭ ತಂದುಕೊಡುತ್ತಿದೆ.
ನಿತ್ಯ 62 ಸಾವಿರ ಟ್ರಿಪ್ ಸಂಚಾರ
ಈ ಹಿಂದೆ ಬಿಎಂಟಿಸಿಯಲ್ಲಿ ನಿತ್ಯ ಸರಾಸರಿ 40 ಲಕ್ಷ ಪ್ರಯಾಣಿಕರ ಸಂಚಾರದಿಂದ ಒಂದು ದಿನದ ಆದಾಯ 6.90 ಕೋಟಿ ರೂ. ಇತ್ತು. ಆದರೆ ಮೆಟ್ರೋ ದರ ಏರಿಕೆ ಬಳಿಕ ನಿತ್ಯ ಸರಾಸರಿ 42 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು ಆದಾಯದಲ್ಲಿ 7.25 ಕೋಟಿ ರೂ.ಗೆ ಏರಿಕೆ ಆಗಿದೆ. ಅಷ್ಟೇ ಅಲ್ಲದೆ ನಿತ್ಯ ನಗರದಲ್ಲಿ 6,900 ಬಸ್‌ಗಳಿಂದ 54 ಸಾವಿರ ಟ್ರಿಪ್ ಮಾಡಲಾಗುತ್ತಿತ್ತು. ಇದೀಗ ಡಿಪೋದಲ್ಲಿದ್ದ ಹೆಚ್ಚುವರಿ 2 ಸಾವಿರ ಬಸ್‌ಗಳನ್ನು ರಸ್ತೆಗಿಳಿಸುವ ಮೂಲಕ 8 ಸಾವಿರ ಟ್ರಿಪ್ ಹೆಚ್ಚಳ ಮಾಡಿ, 54 ಸಾವಿರ ಇದ್ದ ಟ್ರಿಪ್‌ಗಳನ್ನ 62 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
2.3 ಲಕ್ಷ ಪ್ರಯಾಣಿಕರನ್ನು ಕಳೆದುಕೊಂಡ ಮೆಟ್ರೋ
ಫೆಬ್ರವರಿಯಲ್ಲಿ ಪ್ರಯಾಣ ದರ ಏರಿಕೆ ಮಾಡಿದ ನಂತರ ಬೆಂಗಳೂರು ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದ್ದು, ಬರೊಬ್ಬರಿ 2.3 ಲಕ್ಷ ಮಂದಿ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ದರ ಏರಿಕೆಯ ಮೊದಲು ಪ್ರತಿದಿನ ಸುಮಾರು 8.5 ಲಕ್ಷ ಪ್ರಯಾಣಿಕರು ನಿಯಮಿತವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ದರ ಏರಿಕೆ ಬಳಿಕ ಪ್ರಮಾಣಿಕರ ಸಂಖ್ಯೆ 6.3 ಲಕ್ಷಕ್ಕೆ ಇಳಿಕೆಯಾಗಿದೆ. ಆ ಮೂಲಕ ಬರೊಬ್ಬರಿ 2.3 ಲಕ್ಷ ಮಂದಿ ಓಡಾಟ ಕಡಿಮೆಯಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.