Namma Metro Fare Hike | ಪ್ರಯಾಣ ದರ ಏರಿಕೆಗೆ ಆಕ್ರೋಶ; ಪರಿಶೀಲನೆಗೆ ಮುಂದಾದ ಬಿಎಂಆರ್‌ಸಿಎಲ್‌
x
ಬಿಎಂಆರ್‌ಸಿಎಲ್‌ ಕಚೇರಿ

Namma Metro Fare Hike | ಪ್ರಯಾಣ ದರ ಏರಿಕೆಗೆ ಆಕ್ರೋಶ; ಪರಿಶೀಲನೆಗೆ ಮುಂದಾದ ಬಿಎಂಆರ್‌ಸಿಎಲ್‌

ಸಾಲ ಮರುಪಾವತಿಗಾಗಿ ಪ್ರಯಾಣ ದರ ಏರಿಕೆ ಮಾಡಿದ ಬಿಎಂಆರ್‌ಸಿಎಲ್‌ ಅಧಿಕಾರಿಗಳ ತಂತ್ರ ಇದೀಗ ನಿಗಮಕ್ಕೇ ತಿರುಗುಬಾಣವಾಗಿದ್ದು, ಪ್ರಯಾಣಿಕರ ಸಂಖ್ಯೆ ಇಳಿಕೆಯ ಜೊತೆಗೆ ಆದಾಯ ಕೂಡ ಕುಸಿಯುತ್ತಿದೆ.


ದುಪ್ಪಟ್ಟು ದರ ಏರಿಕೆಯಿಂದ ರೋಸಿ ಹೋಗಿರುವ ಪ್ರಯಾಣಿಕರು ಮೆಟ್ರೋ ಪ್ರಯಾಣದಿಂದ ಕ್ರಮೇಣ ದೂರ ಸರಿಯುತ್ತಿದ್ದಾರೆ. ಫೆ.9 ರಿಂದ ಇಲ್ಲಿಯವರೆಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಲಕ್ಷಗಟ್ಟಲೇ ಕುಸಿತ ಕಂಡಿರುವುದು ಬಿಎಂಆರ್‌ಸಿಎಲ್‌ಗೆ ತಲೆನೋವು ತಂದೊಡ್ಡಿದೆ.

ಫೆ.23 ರೊಳಗೆ (ಭಾನುವಾರ) ಮೆಟ್ರೋ ಪ್ರಯಾಣ ದರ ಇಳಿಸುವಂತೆ ʼಬೆಂಗಳೂರು ಉಳಿಸಿ ಅಭಿಯಾನʼದಡಿ ಸಂಯೋಜಿತವಾಗಿರುವ ʼಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆʼ ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಗಡುವು ನೀಡಿದೆ. ಒಂದು ವೇಳೆ ಪ್ರಯಾಣ ದರ ಇಳಿಕೆ ಮಾಡದಿದ್ದರೆ ಮೆಟ್ರೋ ಪ್ರಯಾಣ ಬಹಿಷ್ಕರಿಸಲು ವೇದಿಕೆ ನಿರ್ಧರಿಸಿದೆ. ಈಗಾಗಲೇ ಈ ಸಂಬಂಧ ಅಭಿಯಾನ ಕೂಡ ನಡೆಸಿರುವುದು ಮೆಟ್ರೋ ನಿಗಮದ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸಾಲ ಮರುಪಾವತಿಗಾಗಿ ಪ್ರಯಾಣ ದರ ಏರಿಕೆ ಮಾಡಿದ ಬಿಎಂಆರ್‌ಸಿಎಲ್‌ ಅಧಿಕಾರಿಗಳ ತಂತ್ರ ಇದೀಗ ನಿಗಮಕ್ಕೇ ತಿರುಗುಬಾಣವಾಗಿದ್ದು, ಪ್ರಯಾಣಿಕರ ಸಂಖ್ಯೆ ಇಳಿಕೆಯ ಜೊತೆಗೆ ಆದಾಯ ಕೂಡ ಕುಸಿಯುತ್ತಿದೆ.

ಮಾ.1ಕ್ಕೆ ದರ ಪರಿಶೀಲನಾ ಸಭೆ

ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರತಿಭಟನೆ, ಮೆಟ್ರೋ ಬಹಿಷ್ಕಾರ ಅಭಿಯಾನದ ಕೂಡ ಜೋರಾಗುತ್ತಿದ್ದಂತೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮತ್ತೆ ದರ ಪರಿಶೀಲಿಸಲು ಮುಂದಾಗಿದ್ದಾರೆ.

ಮಾ.1 ರಂದು ಪರಿಶೀಲನಾ ಸಭೆ ಏರ್ಪಡಿಸಿದ್ದು, ಸಾಧಕ –ಬಾಧಕಗಳು, ದರ ಪರಿಷ್ಕರಣೆಯ ಸಾಧ್ಯತೆಗಳ ಕುರಿತು ಅವಲೋಕನ ನಡೆಸಲಿದ್ದಾರೆ. ಫೆ.9 ರ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಫೆ.19 ರಂದು 7.6 ಲಕ್ಷ ಜನರು ಪ್ರಯಾಣಿಸಿದ್ದಾರೆ. ಇನ್ನು ಮೆಟ್ರೋ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಫೆ.18 ರಂದು ಪ್ರಯಾಣಿಕರ ಸಂಖ್ಯೆ 6.3 ಲಕ್ಷಕ್ಕೆ ಇಳಿದಿದ್ದರಿಂದ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಕಂಗಾಲಾಗಿದ್ದಾರೆ.

ಮೆಟ್ರೋ ಪ್ರಯಾಣ ದರ ಏರಿಕೆಗೆ ಮುನ್ನ ನಿತ್ಯ ಪ್ರಯಾಣಿಕರ ಸಂಖ್ಯೆ 8.50 ಲಕ್ಷದಿಂದ 9.50 ಲಕ್ಷದವರೆಗೆ ಇರುತ್ತಿತ್ತು.

ಅವೈಜ್ಞಾನಿಕ ದರ ಏರಿಕೆಗೆ ʼಮೆಟ್ರೋ ಮ್ಯಾನ್ʼ ಖಂಡನೆ

ಬೆಂಗಳೂರು ಮೆಟ್ರೋ ಪ್ರಯಾಣ ದರವನ್ನು ಏಕಾಏಕಿ ಶೇ 50-100 ರಷ್ಟು ಏರಿಕೆ ಮಾಡಿರುವ ಬಿಎಂಆರ್‌ಸಿಎಲ್‌ ಕ್ರಮಕ್ಕೆ ʼಮೆಟ್ರೋ ಮ್ಯಾನ್ʼ ಖ್ಯಾತಿಯ ಇ.ಶ್ರೀಧರನ್ ವಿರೋಧ ವ್ಯಕ್ತಪಡಿಸಿದ್ದರು. ಮೆಟ್ರೋ ಪ್ರಯಾಣ ದರವು ಬಸ್ ದರದ ಒಂದೂವರೆ ಪಟ್ಟು ಮಾತ್ರ ಇರಬೇಕು. ಅದನ್ನು ಮೀರಿದ ಹೆಚ್ಚಳವು ಮೆಟ್ರೋದಿಂದ ಜನರನ್ನು ವಿಮುಖರನ್ನಾಗಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮೆಟ್ರೋದಿಂದ ದೂರವಾಗುವ ಪ್ರಯಾಣಿಕರು ಸ್ವಂತ ವಾಹನಗಳನ್ನು ಅವಲಂಬಿಸಿದರೆ ರಸ್ತೆ ದಟ್ಟಣೆ ಮತ್ತಷ್ಟು ಹೆಚ್ಚಲಿದೆ. ಜೊತೆಗೆ ಮೆಟ್ರೋ ನಿಗಮ ಕೂಡ ನಷ್ಟಕ್ಕೆ ಜಾರಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಫೆ.9 ರಂದು ಮೆಟ್ರೋ ಪ್ರಯಾಣ ದರವನ್ನು ಬಿಎಂಆರ್ಸಿಎಲ್ ಅಧಿಕಾರಿಗಳು ಶೇ 50 ರಷ್ಟು ಹೆಚ್ಚಿಸಿದ್ದರು. 30 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ ಗರಿಷ್ಠ ದರ 60 ರೂ.ಗಳಿಂದ 90 ರೂ.ಗೆ ಏರಿಕೆಯಾಗಿತ್ತು. ಸ್ಮಾರ್ಟ್ ಕಾರ್ಡ್‌ಗಳಲ್ಲಿ ಬ್ಯಾಲನ್ಸ್ ಮೊತ್ತವನ್ನು 90 ರೂ.ಗೆ ಏರಿಕೆ ಮಾಡಿತ್ತು.

ಮೆಟ್ರೋ ಪ್ರಯಾಣ ದರವನ್ನು ರಾತ್ರೋರಾತ್ರಿ ಏರಿಸಿದ್ದಲ್ಲದೆ ಅವೈಜ್ಞಾನಿಕವಾಗಿ ಶೇ 70 ರಿಂದ 100 ರವರೆಗೆ ಹೆಚ್ಚಿಸಿದ್ದನ್ನು ಪ್ರಯಾಣಿಕರು ವಿರೋಧಿಸಿದ್ದರು. ಪ್ರಯಾಣ ದರ ಏರಿಕೆ ವಿಷಯ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೂ ಕಾರಣವಾಗಿತ್ತು.

ಪ್ರಯಾಣಿಕರಿಂದ ಹೆಚ್ಚು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಬಿಎಂಆರ್‌ಸಿಎಲ್‌, ಶೇ 100 ರಷ್ಟು ಏರಿಕೆಯಾಗಿರುವ ಕೆಲ ಸ್ಟೇಜ್‌ಗಳಲ್ಲಿ ಶೇ 10 ರಷ್ಟು ದರ ಇಳಿಕೆ ಮಾಡಿತ್ತು. ಆದರೂ ಬಹಳಷ್ಟು ಸ್ಟೇಜ್‌ಗಳಲ್ಲಿ ಪ್ರಯಾಣ ದರ ಇಳಿಕೆ ಆಗಿರಲಿಲ್ಲ. ಪ್ರಯಾಣಿಕರ ಆಕ್ರೋಶ ಯಥಾಸ್ಥಿತಿ ಮುಂದುವರಿದಿತ್ತು.

Read More
Next Story