
ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಜಲ ಸಂರಕ್ಷಿತ ಗ್ರಾಮಗಳನ್ನು ರೂಪಿಸಲು ನೀಲನಕ್ಷೆ: ಪ್ರಿಯಾಂಕ್ ಖರ್ಗೆ
ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ನೀರು ಸರಬರಾಜು ಮಾಡುವ ಮಹತ್ತರ ಆಶಯದೊಂದಿಗೆ ಹೊಸ ಆರ್ಥಿಕ ವರ್ಷದಲ್ಲಿ ಹೊಸ ಹೆಜ್ಜೆ ಇರಿಸಲು ಚಿಂತನೆ ನಡೆಸಲಾಗಿದೆ.
ರಾಜ್ಯದಲ್ಲಿ ಜಲ ಸಂರಕ್ಷಿತ ಗ್ರಾಮಗಳನ್ನು ರೂಪಿಸಲು ಇಸ್ರೋ ಸೇರಿದಂತೆ ವಿವಿಧ ಸಂಸ್ಥೆಗಳು ಹಾಗೂ ತಜ್ಞರ ಸಲಹೆ ಪಡೆದು ನೀಲನಕ್ಷೆ ತಯಾರಿಸುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ನೀರು ಸರಬರಾಜು ಮಾಡುವ ಮಹತ್ತರ ಆಶಯದೊಂದಿಗೆ ಹೊಸ ಆರ್ಥಿಕ ವರ್ಷದಲ್ಲಿ ಹೊಸ ಹೆಜ್ಜೆ ಇರಿಸಲು ಚಿಂತನೆ ನಡೆಸಲಾಗಿದೆ. 2025-26ರ ಆಯವ್ಯಯದಲ್ಲಿ ನೀರು ಸರಬರಾಜು ಮೂಲಭೂತ ಸೌಕರ್ಯಗಳ ಸುಸ್ಥಿರ ಮತ್ತು ವೈಜ್ಞಾನಿಕ ಮಾಹಿತಿ ವ್ಯವಸ್ಥೆ ಆಧಾರಿತ ಮೊಬೈಲ್ ಮತ್ತು ವೆಬ್ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಘೋಷಣೆಯಾಗಿದ್ದು, ಈ ಸಂಬಂಧದಲ್ಲಿ ಕೈಗೊಳ್ಳಬೇಕಾದ ಹೊಸ ಯೋಜನೆಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ನೀರು ಸರಬರಾಜು ಇಲಾಖೆ ಹಾಗೂ ನರೇಗಾ ಇಲಾಖಾ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದು, ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆಗಳಾಗಬೇಕಾದ ಅಗತ್ಯತೆಯನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.
ನೀರಿನ ಮೂಲಗಳ ಅನ್ವೇಷಣೆ, ಜಲ ಸುಸ್ಥಿರತೆ, ಜಲ ಸಂರಕ್ಷಣೆ, ನೀರು ಕಲುಷಿತ, ನೀರು ಪೋಲಾಗುವುದನ್ನು ತಡೆಯುವಿಕೆ, ಮಳೆನೀರು ಸಂರಕ್ಷಣೆ, ನೀರಿನ ಮಿತ ಬಳಕೆ ಮುಂತಾದ ಆಶಯಗಳೊಂದಿಗೆ ʼಜಲ ಸಂರಕ್ಷಿತ ಗ್ರಾಮʼಗಳನ್ನು ರೂಪಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಜ್ಞರ ಸಲಹೆ ಪಡೆದು ನೀಲನಕ್ಷೆ ತಯಾರಿಸಲು ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಸ್ರೊ ಸಂಸ್ಥೆ ಉಪಗ್ರಹ ಆಧಾರಿತ ಅಂತರ್ಜಲ ಶೋಧನೆ ಮಾಡಿದ್ದು ಈ ಮಾಹಿತಿಯ ಲಾಭವನ್ನು ಪಡೆಯಲು ನಿರ್ದೇಶಿಸಿದ ಸಚಿವರು, ಜಿಲ್ಲಾ ಪಂಚಾಯತಿ ಅಧಿಕಾರಿಗಳೊಂದಿಗೆ ಭೂಗರ್ಭ ಇಲಾಖೆ, ಭಾರಿ ನೀರಾವರಿ ಹಾಗೂ ಸಣ್ಣ ಹಾಗೂ ಮಧ್ಯಮ ನೀರಾವರಿ ಇಲಾಖೆಗಳು, ಜಲಾನಯನ ಇಲಾಖೆ, ನಗರಾಭಿವೃದ್ಧಿ ಹಾಗೂ ಇನ್ನಿತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಮತ್ತು ಸರ್ಕಾರೇತರ ಸೇವಾ ಸಂಸ್ಥೆಗಳು ಹಾಗೂ ಇತರ ವಿಷಯ ತಜ್ಞರ ಸಲಹೆಗಳನ್ನು ಪಡೆದು ʼಜಲ ಸಂರಕ್ಷಿತ ಗ್ರಾಮʼಗಳನ್ನು ರೂಪಿಸಲು ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.