ಪ್ರಜ್ವಲ್‌ ರೇವಣ್ಣ ಚಲನವಲನ ಮಾಹಿತಿಗೆ ಇಂಟರ್‌ಪೋಲ್‌  ನೊಟೀಸ್‌?
x

ಪ್ರಜ್ವಲ್‌ ರೇವಣ್ಣ ಚಲನವಲನ ಮಾಹಿತಿಗೆ ಇಂಟರ್‌ಪೋಲ್‌ ನೊಟೀಸ್‌?


ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪೆನ್‌ಡ್ರೈವ್‌ ಸೆಕ್ಸ್‌ ಸ್ಕಾಂಡಲ್‌ ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಪತ್ತೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂಟರ್‌ಪೋಲ್‌ ಮೂಲಕ ʼಬ್ಲೂಕಾರ್ನರ್‌ʼ ನೊಟೀಸ್‌ ಜಾರಿಗೆ ನಿರ್ಧರಿಸಿದೆ.

ಪೊಲೀಸ್‌ ತನಿಖೆಯ ಸುಳಿವು ಸಿಕ್ಕಿದ ತಕ್ಷಣ ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿ ಜರ್ಮನಿಗೆ ಪರಾರಿಯಾಗಿದ್ದ ಪ್ರಜ್ವಲ್‌ ದೇಶ ಬಿಟ್ಟು ದೇಶ ಸುತ್ತುತ್ತಿರುವ ಮಾಹಿತಿ ಮೇರೆಗೆ ಆತನ ವಿರುದ್ಧ ಇಂಟರ್‌ಪೋಲ್‌ ಮೂಲಕ ಬ್ಲೂಕಾರ್ನರ್‌ ನೊಟೀಸ್‌ ಹೊರಡಿಸಲು ಸಿಬಿಐಗೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಇಂಟರ್‌ಪೋಲ್‌ನ ನೋಡಲ್‌ ಸಂಸ್ಥೆಯಾಗಿರುವ ಸಿಬಿಐಗೆ ಯಾವುದೇ ತನಿಖಾ ಸಂಸ್ಥೆಗಳು ನೀಡುವ ದಾಖಲೆಗಳು ಮತ್ತು ಇತರ ಪುರಾವೆಗಳ ಆಧಾರದಲ್ಲಿ ರೆಡ್‌ ಕಾರ್ನರ್‌ ಅಥವಾ ಬ್ಲೂಕಾರ್ನರ್‌ ನೊಟೀಸ್‌ ಹೊರಡಿಸಲು ಅಧಿಕಾರವಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯನ್ನು ಇಂಟರ್‌ಪೋಲ್‌ ಮೂಲಕ ಪತ್ತೆ ಮಾಡಿ ಬಂಧಿಸಿ ಭಾರತಕ್ಕೆ ಒಪ್ಪಿಸಲು ರೆಡ್‌ಕಾರ್ನರ್‌ ನೊಟೀಸ್‌ಗೆ ಅವಕಾಶವಿದೆ. ಅದೇ ರೀತಿ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯ ಮಾಹಿತಿ, ಆತನ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಲು ಮಾತ್ರ ಬ್ಲೂಕಾರ್ನರ್‌ ನೊಟೀಸ್‌ ಹೊರಡಿಸಬಹುದಾಗಿದೆ.

ಸದ್ಯಕ್ಕೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅತಿದೊಡ್ಡ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್‌ ರೇವಣ್ಣನ ಚಲನವಲನದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಬ್ಲೂಕಾರ್ನರ್‌ ನೊಟೀಸ್‌ ಹೊರಡಿಸಲು ಸಿಬಿಐಗೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ನಿರ್ಧರಿಸಿದೆ ಎನ್ನಲಾಗಿದೆ. ಆತನ ಬಂಧನಕ್ಕೆ ರೆಡ್‌ಕಾರ್ನರ್‌ ನೊಟೀಸ್‌ ಹೊರಡಿಸಲು ಸಾಕಷ್ಟು ಸಮಯಾವಕಾಶ ಹಾಗೂ ದೋಷಾರೋಪಣಾ ಪಟ್ಟಿ ಮತ್ತಿತರ ದಾಖಲೆಗಳ ಅಗತ್ಯವಿದೆ ಹಾಗೂ ತಿಂಗಳುಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ, ಈಗಷ್ಟೇ ಪ್ರಕರಣದ ತನಿಖೆ ಆರಂಭವಾಗಿರುವುದರಿಂದ ಆತನ ಚಲನವಲನ ಮತ್ತು ಆತನಿರುವ ದೇಶ/ಸ್ಥಳದ ಬಗ್ಗೆ ಮಾಹಿತಿ ಪಡೆಯಲು ಬ್ಲೂಕಾರ್ನರ್‌ ನೊಟೀಸ್‌ ಹೊರಡಿಸುವ ಸಂಬಂಧ ನಿರ್ಧಾರ ಮಾಡಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೂ, ಪ್ರಜ್ವಲ್‌ ರೇವಣ್ಣ ಸಂಸದನಾಗಿದ್ದು ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿರುವುದರಿಂದ ಆತನ ಚಲನವಲನದ ಬಗ್ಗೆಕೇಂದ್ರತನಿಖಾ ಸಂಸ್ಥೆಗಳಿಗೆ ಮಾಹಿತಿಯಿರುತ್ತದೆ. ಕೇಂದ್ರದ ಇತರ ತನಿಖಾ ಸಂಸ್ಥೆಗಳಿಂದಲೂ ಮಾಹಿತಿ ಪಡೆಯುವ ಪ್ರಕ್ರಿಯೆ ನಡೆದಿದೆ. ಈಗಾಗಲೇ ಆತನ ವಿರುದ್ಧ ಲುಕ್‌ಔಟ್‌ ನೊಟೀಸ್‌ ಹೊರಡಿಸಿರುವುದರಿಂದ ಆತ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಪ್ರಜ್ವಲ್‌ ಈಗಾಗಲೇ ತನ್ನ ಎಕ್ಸ್‌ ಹ್ಯಾಂಡಲ್‌ ಮೂಲಕ ತನಿಖೆಗೆ ಹಾಜರಾಗಲು ಏಳು ದಿನಗಳ ಕಾಲ ಸಮಯ ಕೇಳಿದ್ದು, ಒಂದು ವೇಳೆ ಆತ ಏಪ್ರಿಲ್‌ ೮ರ ಅಂದಾಜಿಗೆ ಭಾರತಕ್ಕೆ ಬಂದರೆ ತನಿಖೆ ಸುಗಮವಾಗಲಿದೆ. ಆದರ, ಆತ ಭಾರತಕ್ಕೆ ಬರದೆ ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಆತನ ಚಲನಲನದ ನಿಗಾ ಅವಶ್ಯವಿದೆ ಎಂದು ಅಧಿಕಾರಿಯೊಬ್ಬರು "ದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

Read More
Next Story