B'LORE INFRASTRUCTURE | ಎಂ.ಬಿ ಪಾಟೀಲ್- ಪಿಯೂಷ್ ಗೋಯಲ್ ಜಟಾಪಟಿ
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಬೆಂಗಳೂರು ಕುರಿತು ಸರ್ಕಾರ ತೋರುತ್ತಿರುವ ಅನಾದರದಿಂದ ಅನೇಕ ಹೂಡಿಕೆದಾರರು ರಾಜ್ಯದಿಂದ ದೂರ ಸರಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಬೆಂಗಳೂರು ಕುರಿತು ಕಾಂಗ್ರೆಸ್ ಸರ್ಕಾರ ತೋರುತ್ತಿರುವ ಅನಾದರದಿಂದ ಅನೇಕ ಹೂಡಿಕೆದಾರರು ರಾಜ್ಯದಿಂದ ದೂರ ಸರಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಕೈಗಾರಿಕಾ ಹಾಗೂ ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅವರು, 'ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ತುಮಕೂರಿನಲ್ಲಿ ಕೈಗಾರಿಕಾ ಟೌನ್‌ಶಿಪ್ ನಿರ್ಮಿಸಲು ಕೇಂದ್ರ ಸರ್ಕಾರ ನಿರಂತರ ಬೆಂಬಲ ನೀಡುತ್ತಿದೆ. ಆದರೆ, ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಗುಣಮಟ್ಟದ ಮೂಲಸೌಕರ್ಯ, ಉತ್ತಮ ರಸ್ತೆ ನಿರ್ಮಿಸಿಲ್ಲ. ಬೆಂಗಳೂರು ನಗರವು ನಿರ್ಲಕ್ಷ್ಯಕ್ಕೆ ಒಳಗಾಗಿದೆ' ಎಂದು ಕಿಡಿಕಾರಿದ್ದಾರೆ.
'ವಾಸ್ತವವಾಗಿ, ಸಚಿವ ಎಂ.ಬಿ.ಪಾಟೀಲ ಹಾಗೂ ಅವರ ಕಾಂಗ್ರೆಸ್ ಸರ್ಕಾರವು ಭಾರತದ ಪ್ರಗತಿಯನ್ನು ಅಪಹಾಸ್ಯ ಮಾಡುವ ಬದಲು ತುಮಕೂರು ಟೌನ್‌ಶಿಪ್ ಅನ್ನು ಸಿಲಿಕಾನ್ ವ್ಯಾಲಿ ಮಾಡಲು ಪ್ರಯತ್ನಿಸಬೇಕು' ಎಂದು ಅವರು ಪೋಸ್ಟ್ ಮಾಡಿದ್ದಾರೆ.
'ತುಮಕೂರು ಟೌನ್‌ಶಿಪ್‌ಗೆ ಸಂಬಂಧಿಸಿದ ಭೂಸ್ವಾಧೀನದ ಬಿಕ್ಕಟ್ಟನ್ನು ರಾಜ್ಯ ಸರ್ಕಾರ ಬಗೆಹರಿಸಿಲ್ಲ. ಹೀಗಾಗಿ, ಈ ಟೌನ್‌ಶಿಪ್ ಅತಂತ್ರಗೊಂಡಿದೆ. ವಾಸ್ತವವಾಗಿ, ರಾಜ್ಯ ಸರ್ಕಾರದ ವಿಳಂಬ ಮತ್ತು ಬೆಂಬಲದ ಕೊರತೆಯಿಂದಾಗಿ ಕರ್ನಾಟಕದಿಂದ ಹಲವು ಹೂಡಿಕೆದಾರರು ಬೇರೆ ರಾಜ್ಯಕ್ಕೆ ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ, ಸಾವಿರಾರು ಉದ್ಯೋಗಗಳು ಹಾಗೂ ಕೋಟ್ಯಂತರ ರೂಪಾಯಿ ಹೂಡಿಕೆಗಳು ಅನ್ಯ ರಾಜ್ಯಗಳ ಪಾಲಾಗಿವೆ' ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವರ ಟೀಕೆಗೆ ತಿರುಗೇಟು ನೀಡಿರುವ ಕೈಗಾರಿಕಾ ಹಾಗೂ ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್, "ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಎಂಬ ಖ್ಯಾತಿ ಇದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅದನ್ನು ಮರೆತಿರಬೇಕು. ಆದ್ದರಿಂದ ತಮ್ಮದೇ ಆದ ಸಿಲಿಕಾನ್ ವ್ಯಾಲಿ ಅಭಿವೃದ್ಧಿಪಡಿಸುವ ಮಾತನ್ನಾಡಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
"ಭಾರತ ನಮ್ಮ ದೇಶ, ಬೆಂಗಳೂರು ಕೂಡ ಈ ದೇಶದಲ್ಲೇ ಇದೆ ಎಂಬುದನ್ನು ಅವರು ಮರೆಯಬಾರದು. ಬೆಂಗಳೂರನ್ನು ಒಂದೇ ದಿನದಲ್ಲಿ ಕಟ್ಟಿಲ್ಲ. ಅದಕ್ಕೆ ಹಲವು ದಶಕ, ಶತಮಾನಗಳೇ ಹಿಡಿದಿವೆ" ಎಂದು ಕೇಂದ್ರ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.