
ಬಿ.ಕೆ ಹರಿಪ್ರಸಾದ್
"ಬಡವರ ರಕ್ತ ಹೀರಿ ಈಗ ಸಂಭ್ರಮ, ಬಿಜೆಪಿಯದು ವಿಕೃತ ಮನಸ್ಸು": ಬಿ.ಕೆ. ಹರಿಪ್ರಸಾದ್ ವಾಗ್ದಾಳಿ
ಮೋದಿಯವರು ಜಿಎಸ್‌ಟಿ ಬಗ್ಗೆ ಕ್ಷಮೆ ಕೇಳುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ಅವರು ಬೊಗಳೆ ಬಿಡುತ್ತಿದ್ದಾರೆ. ಈ ಸಂಭ್ರಮಾಚರಣೆಯು ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗಿದೆ.
ಎಂಟು ವರ್ಷಗಳ ಕಾಲ ಬಡವರ ರಕ್ತ ಕುಡಿದು, ಅವರ ಬೆನ್ನುಮೂಳೆ ಮುರಿದವರು ಈಗ ಜಿಎಸ್‌ಟಿ ದರ ಇಳಿಸಿದ್ದಕ್ಕೆ ಉತ್ಸವ ಆಚರಿಸುತ್ತಿದ್ದಾರೆ. ಇದು ಅತ್ಯಂತ ಹಾಸ್ಯಾಸ್ಪದ, ಇವರದ್ದು ವಿಕೃತ ಮನಸ್ಸು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ದರ ಇಳಿಕೆ ಸಂಬಂಧ ಬಿಜೆಪಿ ನಡೆಸುತ್ತಿರುವ ಸಂಭ್ರಮಾಚರಣೆಯನ್ನು ಕಟುವಾಗಿ ಟೀಕಿಸಿದರು. "ಜಿಎಸ್‌ಟಿಯನ್ನು ತಂದಿದ್ದು ಯುಪಿಎ ಸರ್ಕಾರವಲ್ಲ. ಜನರ ಮೇಲೆ ಈ ದೊಡ್ಡ ಹೊರೆಯನ್ನು ಹಾಕಿದ ಮಹಾನುಭಾವರೇ ಬಿಜೆಪಿಗರು. ಕಳೆದ ಎಂಟು ವರ್ಷಗಳಲ್ಲಿ ಸಂಗ್ರಹವಾದ ಜಿಎಸ್‌ಟಿಯಲ್ಲಿ ಶೇ.50 ರಷ್ಟು ಪಾಲು ಬಡವರಿಂದಲೇ ಬಂದಿದೆ. ಬಡವರ ರಕ್ತ ಕುಡಿದವರು ಪ್ರಧಾನಿ ನರೇಂದ್ರ ಮೋದಿ," ಎಂದು ಹರಿಪ್ರಸಾದ್ ಆರೋಪಿಸಿದರು.
ಬಿಹಾರ ಚುನಾವಣೆ ಗಿಮಿಕ್
"ಮೋದಿಯವರು ಜಿಎಸ್‌ಟಿ ಬಗ್ಗೆ ಕ್ಷಮೆ ಕೇಳುತ್ತಾರೆ ಎಂದು ನಾವು ಭಾವಿಸಿದ್ದೆವು, ಆದರೆ ಅವರು ಬೊಗಳೆ ಬಿಡುತ್ತಿದ್ದಾರೆ. ಈ ಸಂಭ್ರಮಾಚರಣೆಯು ಕೇವಲ ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತಿರುವ ಗಿಮಿಕ್," ಎಂದು ಹರಿಪ್ರಸಾದ್ ಟೀಕಿಸಿದರು. "ಕರ್ನಾಟಕದಲ್ಲಿ ನಾವು ನೀಡಿದ ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿವೆ. ನಮ್ಮದು 'ಬಿಮಾರು' (ರೋಗಗ್ರಸ್ತ) ರಾಜ್ಯವಲ್ಲ. ಜಿಎಸ್‌ಟಿಯಿಂದ ಕಷ್ಟ ಅನುಭವಿಸಿದ ಜನರಿಗೆ ಇವರು ಏನು ಉತ್ತರ ಕೊಡುತ್ತಾರೆ?" ಎಂದು ಅವರು ಪ್ರಶ್ನಿಸಿದರು.
ಜಾತಿ ಸಮೀಕ್ಷೆಗೆ ವಿರೋಧವೇಕೆ? ಹೆಸರು ಬಹಿರಂಗಪಡಿಸಿ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (ಜಾತಿ ಗಣತಿ) ವ್ಯಕ್ತವಾಗುತ್ತಿರುವ ವಿರೋಧದ ಬಗ್ಗೆ ಮಾತನಾಡಿದ ಅವರು, "ಇದು ಜಾತಿ ಗಣತಿಯಲ್ಲ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ. 75 ವರ್ಷಗಳಿಂದ ಕೆಲವರು ಮಾತ್ರ ತುಪ್ಪ-ಬೆಣ್ಣೆ ತಿಂದಿದ್ದಾರೆ. ಈಗ ತಮ್ಮ ಪಾಲು ಎಲ್ಲಿ ತಪ್ಪಿಹೋಗುವುದೋ ಎಂಬ ಭಯದಿಂದ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ," ಎಂದು ಹರಿಪ್ರಸಾದ್ ಹೇಳಿದರು.
"ಯಾರು ಈ ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೋ, ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಿರಂಗಪಡಿಸಬೇಕು. ಜಾತಿಯ ಹೆಸರಿನಲ್ಲಿ ಸಾಮ್ರಾಜ್ಯ ಕಟ್ಟಿಕೊಂಡವರಿಗೆ ಈಗ ತೊಂದರೆಯಾಗುತ್ತದೆ ಎಂದು ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೇ ಈ ಸಮೀಕ್ಷೆ ಬಗ್ಗೆ ಘೋಷಿಸಿದ್ದೆವು. ಆಗ ವಿರೋಧಿಸದವರು ಈಗೇಕೆ ವಿರೋಧಿಸುತ್ತಿದ್ದಾರೆ?" ಎಂದು ಅವರು ಪ್ರಶ್ನಿಸಿದರು.
"ರಾಹುಲ್ ಗಾಂಧಿಯವರೇ ಈ ಸಮೀಕ್ಷೆ ನಡೆಸಬೇಕೆಂದು ತೀರ್ಮಾನಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಸಮೀಕ್ಷೆ ನಡೆಸುತ್ತಿರುವುದು ಅಭಿನಂದನಾರ್ಹ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ, ಯಾರು ಬೇಕಾದರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ನಾವು ನಾಗಪುರದವರಲ್ಲ," ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಪರೋಕ್ಷವಾಗಿ ಟೀಕಿಸಿದರು.