ಬಿಜೆಪಿಗರ ಮತಗಳ್ಳತನದಿಂದ ಕಾಂಗ್ರೆಸ್‌ಗೆ ಹಿನ್ನಡೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
x

 ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬಿಜೆಪಿಗರ ಮತಗಳ್ಳತನದಿಂದ ಕಾಂಗ್ರೆಸ್‌ಗೆ ಹಿನ್ನಡೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್


ಬಿಜೆಪಿ‌ಯವರು ಮಾಡಿದ ಮತಗಳ್ಳತನದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ಹಿನ್ನಡೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಉಡುಪಿಯ ಕೆ.ಎಂ.ಮಾರ್ಗ ಬಳಿಯಿರುವ ಎಲ್ಐಸಿ ಡೈಮಂಡ್ ಜುಬಿಲಿ ಹಾಲ್‌ನಲ್ಲಿ ಶುಕ್ರವಾರ ನಡೆದ ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ 50ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷದ ಶಕ್ತಿ ಕುಂದಿಲ್ಲ ಎಂದರು.

ವಿಧಾನಸಭೆ ಚುನಾವಣೆಯಲ್ಲಿ135 ಸೀಟುಗಳನ್ನು ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ನಮಗೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಯಿತು. ಇದಕ್ಕೆ ಕಾರಣ ಮತಗಳ್ಳತನ. ಮುಂದೆ ನಡೆಯುವ ಬಿಹಾರ‌ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವನ್ನು ಸೋಲಿಸುವ ಸಲುವಾಗಿ ಈಗಾಗಲೇ 85 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ. ಕೈಬಿಟ್ಟ ಮತದಾರರ ಪಟ್ಟಿಯನ್ನು ನೀಡದೆ, ಚುನಾವಣಾ ಆಯೋಗ ಪರೋಕ್ಷವಾಗಿ ಬಿಜೆಪಿ ಬೆಂಬಲಿಸುತ್ತಿದೆ ಎಂದು ಆರೋಪಿಸಿದರು.

ಭಾರತದ ಇತಿಹಾಸ ಬೇರೆ ಅಲ್ಲ, ಕಾಂಗ್ರೆಸ್ ಇತಿಹಾಸ ಬೇರೆ ಅಲ್ಲ, ನಮ್ಮ ಯುವಕರ ಸಾಮರ್ಥ್ಯ ಬೇರೆ ಅಲ್ಲ, ಕಾಂಗ್ರೆಸ್ ಪಕ್ಷದ ಸಾಮರ್ಥ್ಯ ಬೇರೆ ಅಲ್ಲ. ಇಂದು ನೀವೆಲ್ಲ 50ನೇ ವರ್ಷದ ಸಂಭ್ರಮದಲ್ಲಿದ್ದೀರಿ. 50 ವರ್ಷದ ಈ ದೇಶದ ಇತಿಹಾಸ, ಕಾಂಗ್ರೆಸ್ ಪಕ್ಷದ ಇತಿಹಾಸಕ್ಕೆ ಯುವ ಕಾಂಗ್ರೆಸ್ ಸಾಕ್ಷಿಯಾಗಿದೆ ಎಂದು‌ ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಪಕ್ಷಕ್ಕೆ ಕಳೆದ ಚುನಾವಣೆಯಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿರಬಹುದು. ಆದರೆ ಅದು ಶಾಶ್ವತವಲ್ಲ, ನಿಮ್ಮೆಲ್ಲರ ಈಗಿನ ಉತ್ಸಾಹ ನೋಡಿದರೆ ಮತ್ತೆ ಫಿನಿಕ್ಸ್ ಪಕ್ಷಿಯಂತೆ ಪಕ್ಷ ಪುಟಿದೇಳುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಎಲ್ಲರೂ ಕೊಟ್ಟ ಜವಾಬ್ದಾರಿ ನಿಭಾಯಿಸಬೇಕು. ಬಹಳಷ್ಟು ಯುವಕರಿಗೆ ತಮ್ಮ ಶಕ್ತಿಯ ಅರಿವಿಲ್ಲ‌. ಯಾರೋ ಮಾಡುವ ಟೀಕೆಗಳಿಗೆ ಹೆದರಬಾರದು. ನಿಮ್ಮ ಏರಿಯಾ, ಬೂತ್ ಮಟ್ಟದಲ್ಲಿ ನೀವು ಪ್ರಬಲವಾಗಿ ಬೆಳೆಯಬೇಕು. ನೀವು ಮಾಡುವ ಕೆಲಸಗಳು ಜನರ ಮನಸ್ಸನ್ನು ಗೆಲ್ಲಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸಮಾರಂಭದಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್, ಎಂ.ಎ.ಗಫೂರ್, ‌ಪ್ರಸಾದ್ ಕಾಂಚನ್, ರಮೇಶ್ ಕಾಂಚನ್, ಕಿಶನ್ ಶೆಟ್ಟಿ, ಹರೀಶ್ ಕಿಣಿ, ದೀಪಕ್ ಕೊಟ್ಯನ್, ಭುಜಂಗ ಶೆಟ್ಟಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Read More
Next Story