Tejasvi Surya Wedding | ಬಿಜೆಪಿಯ ʻಮೋಸ್ಟ್ ಎಲಿಜಬಲ್ ಬ್ಯಾಚುಲರ್ʼ ತೇಜಸ್ವಿ ಸೂರ್ಯಗೆ ಕಂಕಣ ಭಾಗ್ಯ
x
ಹಸೆಮಣೆ ಏರಲು ಸಿದ್ಧರಾದ ಸಂಸದ ತೇಜಸ್ವಿ ಸೂರ್ಯ

Tejasvi Surya Wedding | ಬಿಜೆಪಿಯ ʻಮೋಸ್ಟ್ ಎಲಿಜಬಲ್ ಬ್ಯಾಚುಲರ್ʼ ತೇಜಸ್ವಿ ಸೂರ್ಯಗೆ ಕಂಕಣ ಭಾಗ್ಯ

ಸಂಸದ ತೇಜಸ್ವಿ ಸೂರ್ಯ ಅವರು ಗಾಯಕಿ, ಭರತನಾಟ್ಯ ಕಲಾವಿದೆ ಚೆನ್ನೈ ಮೂಲದ ಸಿವಶ್ರೀ ಸ್ಕಂದಕುಮಾರ್‌ ಅವರೊಂದಿಗೆ ಹಸೆಮಣೆ ಏರಲು ಸಿದ್ದತೆ ನಡೆಸುತ್ತಿದ್ದು, ಈಗಾಗಲೇ ಎರಡೂ ಕುಟುಂಬಗಳು ಈ ವಿವಾಹಕ್ಕೆ ಒಪ್ಪಿಗೆ ನೀಡಿದ್ದು, ಮಾರ್ಚ್ 4ಕ್ಕೆ ವಿವಾಹ ನಡೆಯಲಿದೆ ಎನ್ನಲಾಗಿದೆ.


Click the Play button to hear this message in audio format

ಬಿಜೆಪಿಯ 'ಯಂಗ್ ಆ್ಯಂಡ್ ಡೈನಾಮಿಕ್' ಮತ್ತು 'ಮೋಸ್ಟ್ ಎಲಿಜಬಲ್ ಬ್ಯಾಚುಲರ್' ಸಂಸದ ಎಂದೇ ಗುರುತಿಸಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಚೆನ್ನೈ ಮೂಲದ ಗಾಯಕಿ ಸಿವಶ್ರೀ ಜತೆ ಮುಂದಿನ ವರ್ಷ ಮಾರ್ಚ್ 4ರಂದು ತೇಜಸ್ವಿ ಸೂರ್ಯ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ತೇಜಸ್ವಿ ಸೂರ್ಯ ಅಥವಾ ಸಿವಶ್ರೀ ಸ್ಕಂದಪ್ರಸಾದ್ ವಿಷಯ ಬಹಿರಂಗಪಡಿಸಿಲ್ಲ. ವಿವಾಹ ನಡೆಯುವ ಸ್ಥಳ ಸೇರಿದಂತೆ ಹಲವು ಅಂಶಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.

ತೇಜಸ್ವಿ ಸೂರ್ಯ ಅವರಿಗೆ ಮದುವೆ ಯಾವಾಗ ಎನ್ನುವ ಪ್ರಶ್ನೆಗಳು ಬಹಳ ದಿನದಿಂದ ಕೇಳಿ ಬರುತ್ತಿದ್ದವು. ಆದರೆ ತಮ್ಮ ಮದುವೆ ವಿಚಾರವಾಗಿ ಅವರು ಎಂದಿಗೂ ಮಾತನಾಡಿರಲಿಲ್ಲ. ಇದೀಗ ಸದ್ದಿಲ್ಲದೇ, ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಂಸದ ತೇಜಸ್ವಿ ಸೂರ್ಯ ಅವರು ಗಾಯಕಿ, ಭರತನಾಟ್ಯ ಕಲಾವಿದೆಯಾಗಿರುವ ಚೆನ್ನೈ ಮೂಲದ ಸಿವಶ್ರೀ ಸ್ಕಂದಕುಮಾರ್‌ ಅವರೊಂದಿಗೆ ಹಸೆಮಣೆ ಏರಲು ಸಿದ್ದತೆ ನಡೆಸುತ್ತಿದ್ದು, ಈಗಾಗಲೇ ಎರಡೂ ಕುಟುಂಬಗಳು ಈ ವಿವಾಹಕ್ಕೆ ಒಪ್ಪಿಗೆ ನೀಡಿದ್ದು, ಮಾರ್ಚ್ 4ಕ್ಕೆ ವಿವಾಹ ಮುಹೂರ್ತ ನಿಗದಿಯಾಗಿದೆ ಎನ್ನಲಾಗಿದೆ.

ಸಿವಶ್ರೀ ಸ್ಕಂದಪ್ರಸಾದ್ ಯಾರು?

ಸಿವಶ್ರೀ ಸ್ಕಂದಪ್ರಸಾದ್ ಅವರು ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಶಾಸ್ತ್ರ ವಿಶ್ವವಿದ್ಯಾಲಯದಲ್ಲಿ ಬಯೋ ಎಂಜಿನಿಯರಿಂಗ್ ವಿಷಯದಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಅದರೊಂದಿಗೆ ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿ, ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪದವಿ ಪಡೆದು ಕೊಂಡಿದ್ದಾರೆ. ಇದರೊಂದಿಗೆ ಸೈಕ್ಲಿಂಗ್, ಟ್ರೆಕ್ಕಿಂಗ್ ವಾಕಥಾನ್‌ಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಸಿವಶ್ರೀ ಅವರ ಯೂಟ್ಯೂಬ್ ಚಾನೆಲ್‌ಗೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

ಯೂಟ್ಯೂಬ್‌ನಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಸಿವಶ್ರೀ ಸ್ಕಂದಕುಮಾರ್ ಕಳೆದ ಜನವರಿಯಲ್ಲಿ ರಾಮನವಮಿ ಸಂದರ್ಭದಲ್ಲಿ ಕನ್ನಡದ ಭಕ್ತಿಗೀತೆಯಾದ ಪೂಜಿಸಲೆಂದೇ ಹೂಗಳ ತಂದೆ ಹಾಡನ್ನು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹಾಡಿದ್ದರು. ಈ ಹಾಡಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಟ್ವಿಟ್ಟರ್‌ನಲ್ಲಿ ವೀಡಿಯೋ ಲಿಂಕ್ ಶೇರ್ ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕನ್ನಡದಲ್ಲಿ ಸಿವಶ್ರೀ ಸ್ಕಂದಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದು ಪ್ರಧಾನಿ ಬರೆದುಕೊಂಡಿದ್ದರು.

ತೇಜಸ್ವಿ ಸೂರ್ಯ ರಾಜಕೀಯ ಜೀವನ

ತೇಜಸ್ವಿ ಸೂರ್ಯ ಅವರ ರಾಜಕೀಯ ಪ್ರಯಾಣವು ಅವರ ಕಾಲೇಜು ಜೀವನದಲ್ಲಿಯೇ ಆರಂಭವಾಗಿತ್ತು. ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 26 ಸೆಪ್ಟೆಂಬರ್ 2020 ರಿಂದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಅಧ್ಯಕ್ಷರೂ ಆಗಿದ್ದರು. ತಮ್ಮ 29 ವರ್ಷಕ್ಕೆೆ ಬೆಂಗಳೂರು ಸಂಸದರಾಗಿ ಲೋಕಸಭೆಗೆ ಆಯ್ಕೆಯಾಗಿದ್ದ ತೇಜಸ್ವಿ ಸೂರ್ಯ ತಮ್ಮ 34ನೇ ವಯಸ್ಸಿಗೆ ಎರಡನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ತೇಜಸ್ವಿ ಸೂರ್ಯ ಅವರು ಸೈಕ್ಲಿಂಗ್‌, ವಾಕಥಾನ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಐರನ್ ಮ್ಯಾನ್ ಮ್ಯಾರಥಾನ್‌ನಲ್ಲಿ ಗೆಲ್ಲುವ ಮೂಲಕ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಮೊದಲ ಸಂಸದ ಎನಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಸಿವಶ್ರೀ ಅವರೂ ಭಾಗವಹಿಸಿದ್ದು ವಿಶೇಷ.

ತೇಜಸ್ವಿ ಸೂರ್ಯ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್‌ನಿಂದ BAL (ಬ್ಯಾಚುಲರ್ ಆಫ್ ಅಕಾಡೆಮಿಕ್ ಲಾ) ಮತ್ತು LLB ಎಂಬ ಎರಡು ಪದವಿಗಳನ್ನು ಪಡೆದಿದ್ದಾರೆ. 1990 ರಲ್ಲಿ ಜನಿಸಿದ ಸೂರ್ಯ ಅವರು 17 ನೇ ಲೋಕಸಭೆಯಲ್ಲಿ ಅತ್ಯಂತ ಕಿರಿಯ ಸಂಸದರಾಗಿದ್ದಾರೆ.

ಬಿಡುಬೀಸು ಹೇಳಿಕೆಗಳ ಸುತ್ತ

ತೇಜಸ್ವಿ ಸೂರ್ಯ ಅವರ ರಾಜಕೀಯ ಜೀವನದಲ್ಲಿ ವಿವಾದಗಳ ಪಾಲು ಇಲ್ಲದೇ ಇಲ್ಲ. ಬೀಸು ಹೇಳಿಕೆಗಳನ್ನೂ ನೀಡುವ ತೇಜಸ್ವಿ ಸೂರ್ಯ ಅನೇಕ ಬಾರಿ ವಿವಾದಗಳನ್ನು ಹುಟ್ಟುಹಾಕಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯ ವೇಳೆ, ತೇಜಸ್ವಿ ಸೂರ್ಯ ಅವರು ಚುನಾವಣೆಗಳು ಸಾಮಾನ್ಯ ಜನರ ದೇಶಭಕ್ತಿಯ ಪರೀಕ್ಷೆ ಎಂದು ಟ್ವೀಟ್ ಮಾಡಿದ್ದರು. ನರೇಂದ್ರ ಮೋದಿಯವರಿಗೆ ಮತ ಹಾಕುವವರು ರಾಷ್ಟ್ರೀಯವಾದಿಗಳು, ಇಲ್ಲದವರು ರಾಷ್ಟ್ರವಿರೋಧಿಗಳು ಎಂದು ಅವರು ಪರೋಕ್ಷವಾಗಿ ಹೇಳಿದ್ದರು. ಈ ಟ್ವೀಟ್‌ ಬಹಳಷ್ಟು ವಿವಾದಗಳನ್ನು ಸೃಷ್ಟಿ ಮಾಡಿತ್ತು.

ತೇಜಸ್ವಿ ಸೂರ್ಯ ಅವರನ್ನು ಸುತ್ತಿಕೊಂಡಿರುವ ಮತ್ತೊಂದು ಪ್ರಮುಖ ವಿವಾದವೆಂದರೆ, 2020 ರ ಆಗಸ್ಟ್‌ನಲ್ಲಿ ನಡೆದ ಬೆಂಗಳೂರು ಗಲಭೆಯಲ್ಲಿ ಅವರು ಹಿಂಸಾಚಾರವನ್ನು ಪ್ರಚೋದಿಸಿದ್ದರು ಮತ್ತು ಅಶಾಂತಿಯ ಸಮಯದಲ್ಲಿ ಕೋಮು ದ್ವೇಷವನ್ನು ಉತ್ತೇಜಿಸಿದರು ಎಂಬ ಆರೋಪ ಕೇಳಿಬಂದಿತ್ತು. ಆದರೂ ತೇಜಸ್ವಿ ಸೂರ್ಯ ಈ ಆರೋಪವನ್ನು ನಿರಾಕರಿಸಿದ್ದು, ಈ ಆರೋಪಗಳು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.

ತೇಜಸ್ವಿ ಸೂರ್ಯ ಇಂಡಿಗೋ ವಿಮಾನದಲ್ಲಿ ತುರ್ತು ನಿರ್ಗಮನದ ಬಾಗಿಲು ತೆಗೆದಿದ್ದ ವಿಚಾರ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ರಾಜ್ಯಸಭೆಯಲ್ಲಿ ಉತ್ತರಿಸಿರುವ ಕೇಂದ್ರ ವಿಮಾನಯಾನ ಸಚಿವಾಲಯ ಬೆಂಗಳೂರು ದಕ್ಷಿಣ ಸಂಸದರು ಆಕಸ್ಮಿಕವಾಗಿ ಇಂಡಿಗೋ ವಿಮಾನದ ಬಾಗಿಲನ್ನು ತೆರೆದಿದ್ದಾರೆ ಎಂದು ಸಂಸತ್‌ನಲ್ಲಿ ಹೇಳಿತ್ತು. ಅಲ್ಲದೆ ಈ ಅವಘಡದಲ್ಲಿ ತೇಜ್ವಸ್ವಿ ಸೂರ್ಯ ಉದ್ದೇಶಪೂರ್ವಕವಾಗಿ ತೆರೆದಿಲ್ಲ, ಅದೊಂದು ಆಕಸ್ಮಿಕ ಘಟನೆ, ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಖಚಿತಪಡಿಸಿದೆ ಎಂದು ಸಂಸತ್​ನಲ್ಲಿ ಸಚಿವಾಲಯ ತಿಳಿಸಿತ್ತು. ಈ ವಿಷಯಕ್ಕಾಗಿ ತೇಜಸ್ವಿ ಸೂರ್ಯ ಟ್ರೋಲ್‌ಗೆ ಒಳಗಾಗಿದ್ದರು.

ವಕ್ಫ್ ಬೋರ್ಡ್‌ ವಿವಾದದ ವೇಳೆ ರೈತರ ಆತ್ಮಹತ್ಯೆಗೂ ವಕ್ಫ್‌ ಬೋರ್ಡ್‌ ವಿವಾದಕ್ಕೂ ತಳಕು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ ವಿವಾದಕ್ಕೆ ಸಿಲುಕಿದ್ದರು. ಆ ಪ್ರಕರಣದಲ್ಲಿ ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಕೆಲವು ಕನ್ನಡ ನ್ಯೂಸ್ ಪೋರ್ಟಲ್‌ಗಳ ಸಂಪಾದಕರ ಜೊತೆಗೆ ತೇಜಸ್ವಿ ವಿರುದ್ಧ ಕೂಡ ಎಫ್‌ಐಆರ್‌ ದಾಖಲಿಸಲಾಗಿತ್ತು.

Read More
Next Story