
Covid-19 Scam | ವೈರಸ್ ಗಿಂತ ಹೆಚ್ಚಾಗಿ ಬಿಜೆಪಿಯ ಭ್ರಷ್ಟಾಚಾರದಿಂದ ಜನ ಸತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ
ಕೊರೊನಾ ಕಾಲದಲ್ಲಿ ಬೆಡ್, ಪಿಪಿಇ, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ನಿಂದ ಹಿಡಿದು ಸ್ಯಾನಿಟೈಸರ್ ಮತ್ತು ಮಾಸ್ಕ್ ವರೆಗೆ ಪ್ರತಿಯೊಂದು ಸಾಮಗ್ರಿ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ದಾಖಲೆಗಳ ಸಮೇತ ಆ ಕಾಲದಲ್ಲಿ ನಾವು ಬಯಲಿಗೆಳೆದಿದ್ದೆವು.
ಜನರು ಕೊರೊನಾ ವೈರಸ್ ಗಿಂತ ಹೆಚ್ಚಾಗಿ ಬಿಜೆಪಿಯ ಭ್ರಷ್ಟಾಚಾರದ ವೈರಸ್ ನಿಂದ ಸತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೊನಾ ಕಾಲದ ಪಿಪಿಇ ಕಿಟ್ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ನೇರವಾಗಿ ಭಾಗಿಯಾಗಿದ್ದು, ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದೆ ಎಂದು ಅವರು ಹೇಳಿದ್ದಾರೆ.
ದುಡ್ಡು ನುಂಗಲು ಯತ್ನಿಸಿದ್ದನ್ನು ಇಡೀ ಕರ್ನಾಟಕ ಕಂಡಿದೆ
ನ್ಯಾಯಮೂರ್ತಿ ಡಿಕುನ್ಹಾ ಸಮಿತಿ ಕಳೆದ ಆಗಸ್ಟ್ ತಿಂಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಸುಮಾರು 1700ಕ್ಕೂ ಹೆಚ್ಚು ಪುಟಗಳ ತನಿಖಾ ವರದಿಯನ್ನು ಸಂಪುಟ ಉಪಸಮಿತಿ ಅಧ್ಯಯನ ನಡೆಸುತ್ತಿದೆ. ಅದು ನೀಡುವ ವರದಿಯನ್ನು ಸರ್ಕಾರ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಿದೆ. ಇದು ನಾವೇ ಬಯಲುಗೊಳಿಸಿರುವ ಹಗರಣ. ಕೊರೊನಾ ಕಾಲದಲ್ಲಿ ಅಸಹಾಯಕ ಜನರ ನೆರವಿಗೆ ಧಾವಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ರಕ್ಷಿಸಬೇಕಾದ ಹೊಣೆ ಸರ್ಕಾರದ್ದಾಗಿತ್ತು. ಆದರೆ ಜನ ಸರಿಯಾಗಿ ಚಿಕಿತ್ಸೆ ಇಲ್ಲದೆ ಸಾಯುತ್ತಿದ್ದ ಸಂದರ್ಭವನ್ನೂ ಬಳಸಿಕೊಂಡು ದುಡ್ಡು ನುಂಗಲು ಯತ್ನಿಸಿದ್ದನ್ನು ಇಡೀ ಕರ್ನಾಟಕ ಕಂಡಿದೆ ಎಂದು ಅವರು ಆರೋಪಿಸಿದ್ದಾರೆ.
ಭ್ರಷ್ಟಾಚಾರದ ದಂಧೆಯನ್ನು ಮುಂದುವರಿಸಿಕೊಂಡು ಹೋಗಿತ್ತು
ಕೊರೊನಾ ಕಾಲದಲ್ಲಿ ಬೆಡ್, ಪಿಪಿಇ, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ನಿಂದ ಹಿಡಿದು ಸ್ಯಾನಿಟೈಸರ್ ಮತ್ತು ಮಾಸ್ಕ್ ವರೆಗೆ ಪ್ರತಿಯೊಂದು ಸಾಮಗ್ರಿ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ದಾಖಲೆಗಳ ಸಮೇತ ಆ ಕಾಲದಲ್ಲಿ ನಾವು ಬಯಲಿಗೆಳೆದಿದ್ದೆವು. ಈ ಬಗ್ಗೆ ನಾನು ಸದನದ ಒಳಗೆ ಮತ್ತು ಹೊರಗೆ ಮಾತನಾಡಿದ್ದೆ. ಆದರೆ ಸರ್ಕಾರ ಅವುಗಳನ್ನೆಲ್ಲ ನಿರಾಕರಿಸುತ್ತಲೇ ತನ್ನ ಭ್ರಷ್ಟಾಚಾರದ ದಂಧೆಯನ್ನು ಮುಂದುವರಿಸಿಕೊಂಡು ಹೋಗಿತ್ತು ಎಂದು ಅವರು ತಿಳಿಸಿದ್ದಾರೆ.
ನಮ್ಮ ದೇಶದಲ್ಲಿರುವ ಕಂಪೆನಿಗಳು ಪಿಪಿಇ ಕಿಟ್ ಗಳನ್ನು 200 ರಿಂದ 300 ರೂಪಾಯಿ ದರದಲ್ಲಿ ಮಾರಾಟ ಮಾಡಲು ಸಿದ್ಧ ಇರುವಾಗ ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಸೇರಿಕೊಂಡು ಚೀನಾದ ಕಂಪೆನಿಯಿಂದ ರೂ.2,000ಕ್ಕೆ ಒಂದರಂತೆ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಿರುವುದನ್ನು ದಾಖಲೆ ಸಹಿತ ಕೊರೊನಾ ಕಾಲದಲ್ಲಿಯೇ ನಾವು ಹೇಳಿದ್ದೆವು ಎಂದು ತಿಳಿಸಿದ್ದಾರೆ.
ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ತನಿಖಾ ಸಮಿತಿ ನೀಡಿರುವ ವರದಿಯನ್ನು ನಾನಿನ್ನೂ ಪೂರ್ತಿ ಓದಿಲ್ಲ. ನನ್ನ ಪ್ರಕಾರ ಮಾಧ್ಯಮಗಳಲ್ಲಿ ವರದಿಯಾಗಿರುವುದು ಒಂದು ‘‘ಮಂಜುಗಡ್ಡೆಯ ಒಂದು ಸಣ್ಣ ತುದಿ’’ ಮಾತ್ರ. ಒಂದು ಅಂದಾಜಿನ ಪ್ರಕಾರ ಹತ್ತರಿಂದ ಹದಿನೈದು ಸಾವಿರ ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ. ತನಿಖಾ ಸಮಿತಿ ಆ ಎಲ್ಲ ದಾಖಲೆಗಳನ್ನು ಸಂಗ್ರಹಿಸಿರಬಹುದು ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರವೇ ನೇರ ಹೊಣೆ
ಕೊರೊನಾ ವೈರಸ್ ನಿಂದಾಗಿ ಸಂಭವಿಸಿದ ಸಾವಿನ ಬಗ್ಗೆ ಆಗಿನ ಸರ್ಕಾರ ಕೊಟ್ಟಿರುವ ಸಾವಿನ ಸಂಖ್ಯೆ ಏನೇ ಇರಬಹುದು. ನಮ್ಮ ಪ್ರಕಾರ ರಾಜ್ಯದಲ್ಲಿ ಮಕ್ಕಳು, ಮಹಿಳೆಯರು, ಯುವಜನರು 50,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾವಿಗೀಡಾಗಿದ್ದಾರೆ. ರಾಜ್ಯ ಸರ್ಕಾರ ಸಕಾಲದಲ್ಲಿ ಚಿಕಿತ್ಸೆ, ಔಷಧಿ ಮತ್ತು ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿದ್ದರೆ ಇಷ್ಟೊಂದು ಸಾವು ಖಂಡಿತ ಸಂಭವಿಸುತ್ತಿರಲಿಲ್ಲ. ಜನ ಕೊರೊನಾ ವೈರಸ್ ಗಿಂತ ಹೆಚ್ಚಾಗಿ ಬಿಜೆಪಿಯ ಭ್ರಷ್ಟಾಚಾರದ ವೈರಸ್ ನಿಂದ ಸತ್ತಿದ್ದಾರೆ. ಈ ಸಾವಿಗೆ 20019 ರಿಂದ 2023ರ ವರೆಗೆ ರಾಜ್ಯದಲ್ಲಿ ಇದ್ದ ಬಿಜೆಪಿ ನೇತೃತ್ವದ ಸರ್ಕಾರವೇ ನೇರ ಹೊಣೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಸಾವನ್ನು ಸಂಭ್ರಮಿಸುವ, ಹೆಣ ಬಿದ್ದಲ್ಲಿ ಓಡಿ ರಾಜಕೀಯದ ಬೇಳೆ ಬೇಯಿಸುವ ಬಿಜೆಪಿ ಮತ್ತು ಅದರ ನೇತೃತ್ವದ ಆಗಿನ ಸರ್ಕಾರ ಕೊರೊನಾ ಕಾಲದಲ್ಲಿಯೂ ಇದೇ ಕೆಲಸ ಮಾಡಿದೆ. ಜನ ಬೆಡ್, ವೆಂಟಿಲೇಟರ್, ಔಷಧಿ, ಪಿಪಿಇ ಕಿಟ್, ವ್ಯಾಕ್ಸಿನ್, ಮಾಸ್ಕ್, ಸ್ಯಾನಿಟೈಸರ್ ಇಲ್ಲದೆ ಸಾಯುತ್ತಿರುವಾಗ ಬಿಜೆಪಿಯವರು ಈ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ದುಡ್ಡು ಹೇಗೆ ಬಾಚಬಹುದು ಎನ್ನುವ ಲೆಕ್ಕದಲ್ಲಿ ತೊಡಗಿದ್ದು ಅತ್ಯಂತ ಅಮಾನವೀಯ ನಡವಳಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಯಡಿಯೂರಪ್ಪನವರ ಮಗ ವಿಜಯೇಂದ್ರ ತಾನೊಬ್ಬ ಮಹಾ ಸತ್ಯ ಹರಿಶ್ಚಂದ್ರನ ಮಗನಂತೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೂ ಆಡಳಿತದ ಸೂತ್ರ ವಿಜಯೇಂದ್ರನ ಕೈಯಲ್ಲಿಯೇ ಇತ್ತು. ಮುಖ್ಯಮಂತ್ರಿಯವರ ಸಹಿಯನ್ನು ತಾನೇ ಹಾಕುತ್ತಿದ್ದ ಎಂದು ಅವರ ಪಕ್ಷದ ನಾಯಕರೇ ಆರೋಪ ಮಾಡಿದ್ದಾರೆ. ಆದ್ದರಿಂದ ಕೊರೊನಾ ಭ್ರಷ್ಟಾಚಾರದಲ್ಲಿ ಅವರ ಪಾಲೂ ಇದೆ ಎಂದು ಅವರು ತಿಳಿಸಿದ್ದಾರೆ.
ಇನ್ನೊಬ್ಬ ಆರೋಪಿ ಶ್ರೀರಾಮುಲು ರಾಜಕೀಯ ಹುಟ್ಟು ಪಡೆದಿರುವುದೇ ಬಳ್ಳಾರಿಯ ಗಣಿ ಲೂಟಿಯ ಕೆಸರಲ್ಲಿ. ಇವರು ರಿಪಬ್ಲಿಕ್ ಆಫ್ ಬಳ್ಳಾರಿಯ ಗ್ಯಾಂಗ್ ಲೀಡರ್ ಜನಾರ್ಧನ ರೆಡ್ಡಿಯ ಶಿಷ್ಯಬಳಗಕ್ಕೆ ಸೇರಿದವರು. ಇವರಿಗೆ ರಾಜಕೀಯ ಎಂದರೆ ದುಡ್ಡು ನುಂಗುವುದಾಗಿದೆ. ಅದು ಕಬ್ಬಿಣದ ಅದಿರಾಗಬಹುದು ಇಲ್ಲವೇ ಕೊರೊನಾ ರೋಗಿಗಳನ್ನು ಉಳಿಸುವ ಪಿಪಿಇ ಕಿಟ್ ಆಗಿರಬಹುದು. ಅವರಿಗೆ ಜನರ ಪ್ರಾಣ, ಆರೋಗ್ಯ ಮುಖ್ಯ ಅಲ್ಲ, ಹಣ ಬಂದು ಜೇಬಿಗೆ ಬಿದ್ದರೆ ಸಾಕು. ಇಂತಹವರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಕೇಳುತ್ತಾ ಅಡ್ಡಾಡುತ್ತಿರುವುದು ನಾಚಿಕೆಗೇಡಿನ ಕೆಲಸವಾಗಿದೆ ಎಂದು ಅವರು ತಿಳಿಸಿದ್ದಾರೆ.
ಡಿಕುನ್ಹಾ ಸಮಿತಿ ವರದಿ ಆಧಾರದಲ್ಲಿ ಕ್ರಮಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ಕಾನೂನಿನ ಪ್ರಕ್ರಿಯೆ ಅವಸರದಲ್ಲಿ ನಡೆಯುವಂತಹದ್ದಲ್ಲ. ಅದು ಪೂರ್ಣಗೊಳ್ಳುವ ವರೆಗೆ ಕೊರೊನಾ ಸಾವಿಗೆ ನೇರ ಹೊಣೆಗಾರರಾಗಿರುವ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಹಾಗೂ ಶ್ರೀರಾಮುಲು ಇವರೆಲ್ಲ ತಮ್ಮ ಚುನಾವಣಾ ಪ್ರಚಾರವನ್ನು ತಕ್ಷಣ ನಿಲ್ಲಿಸಿ ಮನೆಗೆ ಹೋಗಬೇಕು. ಮಾನ ಮರ್ಯಾದೆ ಇದ್ದರೆ ತಮ್ಮ ಭ್ರಷ್ಟ ಮುಖವನ್ನು ಹೊತ್ತು ಕೊಂಡು ಜನರ ಬಳಿ ಮತಕೇಳಲು ಹೋಗಬಾರದು. ಜನರು ಕೂಡಾ ಇವರ ಸಭೆಗಳನ್ನು ಬಹಿಷ್ಕರಿಸಬೇಕು ಎಂದು ಅವರು ಆರೋಪಿಸಿದ್ದಾರೆ.