Vinay Somaiah| ಬಿಜೆಪಿ ಕಾರ್ಯಕರ್ತ  ವಿನಯ್ ಆತ್ಮಹತ್ಯೆ; ಸಿದ್ದರಾಮಯ್ಯ ಕಾನೂನು ಸಲಹೆಗಾರ ವಿರುದ್ಧ ದೂರು
x
ಆತ್ಮಹತ್ಯೆ ಮಾಡಿಕೊಂಡ ವಿನಯ್‌ ಸೋಮಯ್ಯ ಹಾಗೂ ಆರೋಪಿ ಸ್ಥಾನದಲ್ಲಿರುವ ಎ.ಎಸ್‌. ಪೊನ್ನಣ್ಣ

Vinay Somaiah| ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ; ಸಿದ್ದರಾಮಯ್ಯ ಕಾನೂನು ಸಲಹೆಗಾರ ವಿರುದ್ಧ ದೂರು

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.‌ ಪೊನ್ನಣ್ಣ ಹಾಗೂ ಅವರ ಆಪ್ತ ಕಾಂಗ್ರೆಸ್‌ ವಕ್ತಾರ ತೆನ್ನೀರಾ ಮಹೀನಾ ಅವರ ಹೆಸರು ನೇರವಾಗಿ ಥಳಕು ಹಾಕಿಕೊಂಡಿರುವುದು ರಾಜಕೀಯ ಅರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.


ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (39) ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.‌ ಪೊನ್ನಣ್ಣ ಹಾಗೂ ಅವರ ಆಪ್ತ ಕಾಂಗ್ರೆಸ್‌ ವಕ್ತಾರ ತೆನ್ನೀರಾ ಮಹೀನಾ ಅವರ ಹೆಸರು ನೇರವಾಗಿ ಥಳಕು ಹಾಕಿಕೊಂಡಿರುವುದು ರಾಜಕೀಯ ಅರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ವಿನಯ್ ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ವಿನಯ್ ಅವರು ಏಪ್ರಿಲ್ 4 ರಂದು ಬೆಳಗಿನ ಜಾವ 4.30ರ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದ್ದು, ಕುಟುಂಬದ ಜೊತೆಯೇ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.

ಇತ್ತೀಚೆಗೆ ವಿನಯ್ 'ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು' ಎಂಬ ಹೆಸರಿನ ವಾಟ್ಸಾಪ್ ಗ್ರೂಪ್‌ನ ಅಡ್ಮಿನ್ ಆಗಿದ್ದರು. ಇತ್ತೀಚೆಗಷ್ಟೇ ಈ ಗ್ರೂಪ್‌ನಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ನಾಯಕನ ಒಂದು ಆಕ್ಷೇಪಾರ್ಹ ಫೋಟೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು. ಈ ವಿಚಾರದಿಂದಾಗಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ವಿನಯ್ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಡೆತ್‌ನೋಟ್‌ನಲ್ಲಿ ಏನಿದೆ?

"ನನ್ನ ಆತ್ಮಹತ್ಯೆಗೆ ವಿರಾಜಪೇಟೆ ಶಾಸಕ ಪೊನ್ನಣ್ಣ ಆಪ್ತ ತೆನ್ನೀರಾ ಮಹೀನಾ ಕಾರಣ ಎಂದು ವಿನಯ್​ ಡೆತ್​​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ್ದಾರೆ. ನನ್ನ ಮೇಲೆ ಎಫ್​ಐಆರ್ ದಾಖಲಿಸಿ ಕಿಡಿಗೇಡಿ ಎಂದು ಕೊಡಗು ಜಿಲ್ಲೆಯಲ್ಲಿ ನನ್ನ ಬಗ್ಗೆ ತೆನ್ನೀರಾ ಅಪಪ್ರಚಾರ ಮಾಡಿದ್ದಾನೆ. ತೆನ್ನೀರಾ ಈ ಹಿಂದೆಯೂ ಹಲವರ ಆತ್ಮಹತ್ಯೆಗೆ ಕಾರಣವಾಗಿದ್ದಾನೆ," ಎಂದು ಬರೆದಿದ್ದಾರೆ.

ತಮ್ಮ ಅಂತಿಮ ಸಂದೇಶದಲ್ಲಿ,"ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ಹೇಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ," ಎಂದು ಡೆತ್ ನೋಟ್ ಮುಕ್ತಾಯಗೊಳಿಸಿದ್ದಾರೆ.

ಬಿಜೆಪಿ ಆರೋಪಗಳೇನು?

ವಿನಯ್ ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಇದನ್ನು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕಾಂಗಿಗಳ ದ್ವೇಷದ ರಾಜಕಾರಣಕ್ಕೆ ಅಂತ್ಯ ಇಲ್ಲವೇ? ಕೊಡಗಿನ ನಮ್ಮ ಕಾರ್ಯಕರ್ತನ ಮೇಲೆ ರಾಜಕೀಯ ಅಧಿಕಾರ ಬಳಸಿ ಕಿರುಕುಳ ನೀಡುತಿದ್ದ ಕಾಂಗ್ರೆಸ್ ಪಕ್ಷದ ನಡೆ ಅಕ್ಷಮ್ಯ . ಅಧಿಕಾರದ ಮದ ಏರಿದ ಕಾಂಗ್ರೆಸ್ ನಾಯಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಟಿ ರವಿ ಆರೋಪ ಮಾಡಿದ್ದಾರೆ.

"ವಿನಯ್ ಆತ್ಮಹತ್ಯೆ ದುಃಖದ ಸಂಗತಿ. ಈ ಪ್ರಕರಣದ ಪಾರದರ್ಶಕ ತನಿಖೆ ಅಗತ್ಯವಿದೆ. ಅವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸಾವಿನಲ್ಲಿ ನಲುಗಿರುವ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಂತಾಪ ಸೂಚಿಸಿದರು.

ಬಿಜೆಪಿ, ಕಾಂಗ್ರೆಸ್‌ ವಿರುದ್ದ ಹರಿಹಾಯ್ದ ಯತ್ನಾಳ್

ಉಚ್ಚಾಟಿತ ಶಾಸಕ ಯತ್ನಾಳ್ ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಎಕ್ಸ್‌ ಖಾತೆಯಲ್ಲಿ ಬಿಜೆಪಿ ನಡೆ ಕುರಿತು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಸರ್ಕಾರದ ವಿರುದ್ಧ, ನಾಯಕರ ವಿರುದ್ಧ ಆರೋಪ ಮಾಡಿದ್ದಾರೆ. ‘ಕೊಡಗಿನ ಬಿಜೆಪಿ ಕಾರ್ಯಕರ್ತರಾದ ವಿನಯ್ ಎಂಬುವವರು ಕಾಂಗ್ರೆಸ್ ನ ಕೆಲ ರಾಜಕಾರಣಿಗಳು ತಮ್ಮ ಅಧಿಕಾರವನ್ನು ಉಪಯೋಗಿಸಿ ಬೆದರಿಕೆಯೊಡ್ಡಿದ್ದ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ದುರದೃಷ್ಟಕರ. ಇಷ್ಟೆಲ್ಲಾ ಆಗುತ್ತಿದ್ದರೂ ಬಿಜೆಪಿ ಕರ್ನಾಟಕ ಘಟಕವು ವಿನಯ್ ಅವರಿಗೆ ಯಾವುದೇ ಕಾನೂನು ನೆರವು ನೀಡದೆ ಈಗ ಟ್ವಿಟ್ಟರ್‌ನಲ್ಲಿ ಆರ್ಭಟಿಸುತ್ತಿರುವುದು ಇವರ ಆದ್ಯತೆಗಳನ್ನು ತೋರಿಸುತ್ತದೆ. ಆಡಳಿತಾರೂಢ ಪಕ್ಷದ ಇಬ್ಬರು ಹಾಲಿ ಶಾಸಕರ ಪಾತ್ರವಿದೇ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ.

ಹಿಂದುತ್ವವಾದಿಗಳನ್ನು ಹಾಗೂ ಬಲಪಂಕ್ತೀಯರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅವರ ಕುಟುಂಬವನ್ನು, ಸ್ನೇಹಿತರನ್ನು ಬೆದರಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಕುಟಿಲ ರಾಜಕಾರಣವನ್ನು ತೋರಿಸುತ್ತದೆ. ಹಿಂದುತ್ವದ ಪರ ಮಾತನಾಡಿದವರನ್ನು ಮೂಲೆಗುಂಪು ಮಾಡಿ ಅವರನ್ನು ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡಿ ಆತ್ಮಹತ್ಯೆಗೆ ಪ್ರಚೋದನೆ ನೀಡುವವರನ್ನು ಸುಮ್ಮನೆ ಬಿಡಬಾರದು. ವಿನಯ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೆಯೇ ಅವರ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಪೊಲೀಸರು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲಿ. ಈಗಲಾದರೂ ಬಿಜೆಪಿ ನಾಯಕರು ಅಡ್ಜಸ್ಟ್ಮೆಂಟ್ ಮಾಡಿಕೊಳ್ಳದೆ ವಿನಯ್ ಆತ್ಮಕ್ಕೆ ಶಾಂತಿ ಸಿಗುವುದಕ್ಕಾಗಿ ಹೋರಾಟ ಮಾಡಲಿ. ಈ ಹೋರಾಟಕ್ಕೆ ನನ್ನ ಬೆಂಬಲವಿದೆ‘ ಎಂದು ಬರೆದುಕೊಂಡಿದ್ದಾರೆ.

ಸಿಎಂ ಕಾನೂನು ಸಲಹೆಗಾರರ ವಿರುದ್ಧ ದೂರು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ವಕ್ತಾರ ತೆನ್ನೀರ ಮಹಿನಾ, ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಮಂತರ್ ಗೌಡ ವಿರುದ್ಧ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿನಯ್ ಸೋಮಯ್ಯ​ ಸಹೋದರ ಜೀವನ್​ ಅವರು “ನನ್ನ ಸಹೋದರನಿಗೆ ಕಿರುಕುಳ ನೀಡಿದ್ದಾರೆ” ಎಂದು ಪೊಲೀಸರಿಗೆ 6 ಪುಟಗಳ ದೂರನ್ನು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಬಿಎನ್​ಎಸ್​ ಸೆಕ್ಷನ್ 108, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ತೆನ್ನೀರಾ ಮಹಿನಾ ಮತ್ತು ಇತರರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಪ್ರತಾಪ್‌ ಒತ್ತಾಯ

ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ವಿನಯ್‌ ಸೋಮಯ್ಯ ಆತ್ಮಹತ್ಯೆಗೆ ಕಾಂಗ್ರೆಸ್‌ ನಾಯಕರು ಕಾರಣ ಎಂದು ಖಂಡಿಸಿದ್ದಾರೆ. ಅವರ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ವಿನಯ್‌ ಅವರು ಬರೆದುಕೊಂಡಿದ್ದಾರೆ ಎನ್ನಲಾದ ವಾಟ್ಸಾಪ್‌ ಸಂದೇಶವನ್ನು ಲಗತ್ತಿಸಿದ್ದಾರೆ.

ಆರ್‌. ಅಶೋಕ್‌ ಆರೋಪ

ಕಳೆದ 2-3 ತಿಂಗಳಿಂದ ಎಸ್ಪಿ ಮೂಲಕ ಕೊಡಗಿನ ಕಾಂಗ್ರೆಸ್ ಶಾಸಕರು, ಶಾಸಕರ ಆಪ್ತ ತೆನ್ನೀರ ಮಹಿನಾ ವಿನಯ್ ಸೋಮಯ್ಯ ಅವರಿಗೆ ಕಿರುಕುಳ ನೀಡಿದ್ದಾರೆ. ಶಾಸಕರು ಧಮ್ಕಿ ಹಾಕಿದ್ದನ್ನು ವಿನಯ್ ಸೋಮಯ್ಯ ತಮ್ಮ ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ವಿನಯ್ ಸೋಮಯ್ಯ ಅವರು ಮಡಿಕೇರಿ ಬಿಟ್ಟು ಬೆಂಗಳೂರಿನ ಮನೆಗೆ ಬಂದರೂ ಪೊಲೀಸರು ಕಿರುಕುಳ ಮುಂದುವರೆದಿರುವುದು ಕಾಂಗ್ರೆಸ್ ಶಾಸಕರ ದ್ವೇಷ ಯಾವ ಮಟ್ಟಕ್ಕೆ ಇತ್ತು ಎನ್ನುವುದಕ್ಕೆ ಸಾಕ್ಷಿ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

"ಈ ಕೂಡಲೇ ಸರ್ಕಾರ ಎಸ್ಪಿ ಅವರನ್ನ ಕರ್ತವ್ಯದಿಂದ ಅಮಾನತು ಮಾಡಬೇಕು, ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಹಿಂದಿರುವ ಕಾಣದ 'ಕೈ'ಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಬೇಕು ಎಂದು ಸಿಎಂ ಹಾಗು ಗೃಹ ಸಚಿವ ಅವರನ್ನು ಆಗ್ರಹಿಸಿದ್ದಾರೆ.



(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್‌: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

Read More
Next Story