ರಾಜ್ಯ ಸರ್ಕಾರ ಉರುಳಿಸಲು ಇಡಿ ಅಸ್ತ್ರ ಬಳಸಿದ ಬಿಜೆಪಿ: ಸಚಿವರ ಗಂಭೀರ ಆರೋಪ
x

krishna byregowda

ರಾಜ್ಯ ಸರ್ಕಾರ ಉರುಳಿಸಲು ಇಡಿ ಅಸ್ತ್ರ ಬಳಸಿದ ಬಿಜೆಪಿ: ಸಚಿವರ ಗಂಭೀರ ಆರೋಪ

ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡಲು ಕೇಂದ್ರ ಬಿಜೆಪಿ ಸರ್ಕಾರ ಇಡಿ, ಸಿಬಿಐ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದೊಡ್ಡ ಷಢ್ಯಂತ್ರ ನಡೆಸಿದೆ ಎಂದು ರಾಜ್ಯ ಸರ್ಕಾರ ಗಂಭೀರ ಆರೋಪ ಮಾಡಿದೆ.


ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡಲು ಕೇಂದ್ರ ಬಿಜೆಪಿ ಸರ್ಕಾರ ಇಡಿ, ಸಿಬಿಐ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದೊಡ್ಡ ಷಢ್ಯಂತ್ರ ನಡೆಸಿದೆ ಎಂದು ರಾಜ್ಯ ಸರ್ಕಾರ ಗಂಭೀರ ಆರೋಪ ಮಾಡಿದೆ.

ಗುರುವಾರ ಬೆಳಿಗ್ಗೆ ರಾಜ್ಯ ಸರ್ಕಾರದ ಐವರು ಪ್ರಮುಖ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಈ ಗಂಭೀರ ಆರೋಪ ಮಾಡಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಆಪರೇಷನ್ ಕಮಲ ತಂತ್ರ ನಡೆಸಿ ಯಶಸ್ವಿಯಾಗಿದ್ದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಈ ಬಾರಿ ಸದೃಢ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಇಡಿ, ಸಿಬಿಐ, ಐಟಿ ಮುಂತಾದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಮುಖ್ಯವಾಗಿ ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಇಡಿ ವಶಕ್ಕೆ ಪಡೆದಿರುವ ಕಾಂಗ್ರೆಸ್ ಮುಖಂಡರಿಗೆ ಇಡಿ ಅಧಿಕಾರಿಗಳು ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಮುಖರನ್ನು ಹೆಸರಿಸುವಂತೆ ಬೆದರಿಕೆ ಹಾಕಿದ್ದಾರೆ ಎಂದು ಸಚಿವರು ಆರೋಪ ಮಾಡಿದ್ದಾರೆ.

ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಕೆ ಜೆ ಜಾರ್ಜ್ ಹಾಗೂ ಸಂತೋಷ್ ಲಾಡ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಗಂಭೀರ ಆರೋಪ ಮಾಡಿದ್ದಾರೆ.

ವಾಲ್ಮೀಕಿ ನಿಗಮ ಪ್ರಕರಣದ ವಿಷಯದಲ್ಲಿ ಕೇಂದ್ರದ ಇಡಿ ಮತ್ತು ಸಿಬಿಐ ತನಿಖೆ ಕೈಗೆತ್ತಿಕೊಂಡಿರುವುದು ವಾಸ್ತವವಾಗಿ ತನಿಖೆ ನಡೆಸಿ ವಾಸ್ತವಾಂಶ ಹೊರತೆಗೆಯುವುದಲ್ಲ. ಬದಲಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಉದ್ದೇಶವಷ್ಟೇ. ಹಾಗಾಗಿಯೇ ತನಿಖೆಗೆ ಒಳಗಾಗಿರುವವರಿಗೆ ಪ್ರಕರಣದಲ್ಲಿ ಸರ್ಕಾರದ ಪ್ರಮುಖರು ಭಾಗಿಯಾಗಿದ್ದಾರೆ ಎಂದು ಹೇಳಿಕೆ ಕೊಡಿ. ಇಲ್ಲವಾದರೆ ಇಡಿಯ ತಾಕತ್ತು ಏನು ಎಂಬುದನ್ನು ನಿಮಗೆ ತೋರಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಲಾಗಿದೆ. ಈ ಆರೋಪವನ್ನು ನಾವು ಸುಮ್ಮನೆ ಊಹಾಪೋಹಕ್ಕೆ ಮಾಡುತ್ತಿಲ್ಲ. ಈ ಎಲ್ಲಕ್ಕೂ ದಾಖಲೆಗಳಿವೆ ಎಂದೂ ಸಚಿವರು ಹೇಳಿದರು.

ಸಿಎಂ, ಡಿಸಿಎಂ ಹೆಸರು ಹೇಳಿ ಬಿಟ್ಟುಬಿಡ್ತೀವಿ

ಇಡಿ ವಶದಲ್ಲಿರುವ ಮಾಜಿ ಸಚಿವರು ಮತ್ತು ಇತರರಿಗೆ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಪ್ರಮುಖರ ಹೆಸರು ಹೇಳುವಂತೆ ಇಡಿ ಒತ್ತಡ ಹಾಕುತ್ತಿದೆ. "ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಸೂಚನೆಯಂತೆ ಹಣ ಬಳಸಲಾಗಿದೆ. ಚುನಾವಣೆಗಾಗಿ ಈ ಹಣ ಬಳಸಿದ್ದೇವೆ ಎಂದು ಹೇಳಿಕೆ ನೀಡಿ, ನಿಮ್ಮನ್ನು ರಕ್ಷಿಸುತ್ತೇವೆ. ಬಿಟ್ಟುಬಿಡುತ್ತೇವೆ" ಎಂದು ಇಡಿ ಹೇಳಿದೆ. ಇದರಿಂದ ಇಡಿಯ ಉದ್ದೇಶವೇ ಸರ್ಕಾರದ ಪ್ರಮುಖರನ್ನು ಪ್ರಕರಣದಲ್ಲಿ ಸಿಲುಕಿಸಿ, ಸರ್ಕಾರವನ್ನು ಉರುಳಿಸುವುದು ಎಂಬುದು ಗೊತ್ತಾಗುತ್ತಿದೆ ಎಂದು ಸಚಿವರು ಹೇಳಿದರು.

ವಾಲ್ಮೀಕಿ ನಿಗಮದ ವಿಷಯದಲ್ಲಿ ಮೂರು ಕೋಟಿಗಿಂತ ಅಧಿಕ ಅಕ್ರಮ ನಡೆದಿರುವುದರಿಂದ ತನಿಖೆ ನಡೆಸಲು ತಮಗೆ ಅವಕಾಶವಿದೆ ಎನ್ನುವ ಸಿಬಿಐ, ಅದೇ ನಿಯಮವನ್ನು ದೇವರಾಜ ಅರಸು ಟರ್ಮಿನಲ್ ಪ್ರಕರಣದಲ್ಲಿ ಯಾಕೆ ಅನ್ವಯ ಮಾಡಿ ತನಿಖೆ ಕೈಗೆತ್ತಿಕೊಂಡಿಲ್ಲ? ಕೊರೋನಾ ಅಕ್ರಮದ ವಿಷಯದಲ್ಲಿ ಯಾಕೆ ತನಿಖೆ ನಡೆಸಲಿಲ್ಲ? ಎಂದು ಪ್ರಶ್ನಿಸಿದ ಸಚಿವರು, ದೇಶದಲ್ಲಿ ರಾಜಕೀಯ ಸೇಡಿನ ಅಸ್ತ್ರವಾಗಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿರುವ ಬಿಜೆಪಿಯ ಧೋರಣೆಯನ್ನು ಕಾಂಗ್ರೆಸ್ ಮಾತ್ರವಲ್ಲ; ಮಾಧ್ಯಮ ಸಂಸ್ಥೆಗಳು, ಸರ್ವೋಚ್ಛ ನ್ಯಾಯಾಲಯ ಕೂಡ ಹೇಳಿವೆ. ಇಂತಹ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಇದೀಗ ಕರ್ನಾಟಕ ಸರ್ಕಾರವನ್ನು ಉರುಳಿಸಲು ಬಿಜೆಪಿ ಇಡಿ ಮತ್ತು ಸಿಬಿಐಗಳನ್ನು ಛೂಬಿಟ್ಟಿದೆ ಎಂದು ಪುನರುಚ್ಛರಿಸಿದರು.

ಸಿಬಿಐ, ಇಡಿ ಮತ್ತು ಐಟಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ, ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಿದ ಸೇಡಿನ ರಾಜಕಾರಣ ಮತ್ತು ಉರುಳಿಸಿದ ಸರ್ಕಾರಗಳ ಪಟ್ಟಿಯನ್ನು ನೀಡಿದ ಸಚಿವರು, ಇಂತಹ ಪ್ರಯತ್ನಗಳಿಗೆ ಕರ್ನಾಟಕ ಸರ್ಕಾರ ತಕ್ಕ ಪ್ರತ್ಯುತ್ತರ ಕೊಡಲಿದೆ. ಇದನ್ನು ಎದುರಿಸುವುದು ನಮಗೆ ಗೊತ್ತಿದೆ. ಈ ವಿಷಯದಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದರು.

Read More
Next Story