
ಬೆಂಗಳೂರಿನಲ್ಲಿ ಹದಗೆಟ್ಟಿರುವ ರಸ್ತೆಗಳ ವಿರುದ್ಧ ಬಿಜೆಪಿ ಸೆ.24ರಂದು ಪ್ರತಿಭಟನೆ ನಡೆಸಲಿದೆ.
ಬೆಂಗಳೂರಿನ ಹದಗೆಟ್ಟ ರಸ್ತೆಗಳು: ಸರ್ಕಾರದ ವಿರುದ್ಧ ಸೆ.24ಕ್ಕೆ ಬಿಜೆಪಿ ರಾಜ್ಯಾದ್ಯಂತ 'ರಾಸ್ತಾ ರೋಕೋ'
ಹದಗೆಡುತ್ತಿರುವ ರಸ್ತೆಗಳನ್ನು ಖಂಡಿಸಿ, ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸೆ.24ರಂದು ಬೆಳಿಗ್ಗೆ 11 ಗಂಟೆಗೆ ಬಿಜೆಪಿ ಒಂದು ಗಂಟೆಯ 'ರಾಸ್ತಾ ರೋಕೋ' ಪ್ರತಿಭಟನೆ ನಡೆಸಲಿದೆ ಎಂದು ವಿಜಯೇಂದ್ರ ಘೋಷಣೆ ಮಾಡಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ರಸ್ತೆಗಳು ಹೊಂಡ-ಗುಂಡಿಗಳಿಂದ ತುಂಬಿ, ಮೂಲಸೌಕರ್ಯ ವ್ಯವಸ್ಥೆ ಕುಸಿದಿರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ರಾಜ್ಯ ಬಿಜೆಪಿ ಘಟಕವು ಸರ್ಕಾರದ ವಿರುದ್ಧ ಪ್ರತಿಭಟನೆಯ ಅಸ್ತ್ರವನ್ನು ಕೈಗೆತ್ತಿಕೊಂಡಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ, ಸೆಪ್ಟೆಂಬರ್ 24ರಂದು ರಾಜ್ಯದಾದ್ಯಂತ 'ರಾಸ್ತಾ ರೋಕೋ' ನಡೆಸುವುದಾಗಿ ಘೋಷಿಸಿದೆ
ಈ ಕುರಿತು ಘೋಷಣೆ ಮಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, "ಬೆಂಗಳೂರಿನ ಬಹುತೇಕ ರಸ್ತೆಗಳು ಗುಂಡಿಗಳಿಂದ ತುಂಬಿಹೋಗಿವೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಜನರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು, ಶಿವಮೊಗ್ಗ, ವಿಜಯಪುರ ಮತ್ತು ಕಲಬುರಗಿಯಂತಹ ಪ್ರಮುಖ ನಗರಗಳು ಸೇರಿದಂತೆ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸೆಪ್ಟೆಂಬರ್ 24ರಂದು ಬೆಳಿಗ್ಗೆ 11 ಗಂಟೆಯಿಂದ ಒಂದು ಗಂಟೆಗಳ ಕಾಲ 'ರಾಸ್ತಾ ರೋಕೋ' ನಡೆಸಲಾಗುವುದು," ಎಂದು ತಿಳಿಸಿದ್ದಾರೆ
ಉದ್ಯಮ ವಲಯದಿಂದಲೂ ಹೆಚ್ಚಿದ ಒತ್ತಡ
ರಸ್ತೆಗಳ ದುಸ್ಥಿತಿಯು ಕೇವಲ ಸಾರ್ವಜನಿಕರನ್ನಷ್ಟೇ ಅಲ್ಲದೆ, ಉದ್ಯಮ ವಲಯದ ಮೇಲೂ ಗಂಭೀರ ಪರಿಣಾಮ ಬೀರಿದೆ. ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿ.ವಿ. ಮೋಹನ್‌ದಾಸ್ ಪೈ ಮತ್ತು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರಂತಹ ಉದ್ಯಮ ಕ್ಷೇತ್ರದ ಪ್ರಮುಖರು, ರಸ್ತೆ ದುರಸ್ತಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಬಹಿರಂಗವಾಗಿ ಒತ್ತಾಯಿಸಿದ್ದಾರೆ.
ನಗರದ ಕುಸಿಯುತ್ತಿರುವ ಮೂಲಸೌಕರ್ಯದಿಂದಾಗಿ ವ್ಯಾಪಾರ-ವಹಿವಾಟುಗಳ ಮೇಲೆ ನೇರ ಪರಿಣಾಮ ಬೀರಲು ಆರಂಭಿಸಿದೆ. ಇದರ ಇತ್ತೀಚಿನ ಉದಾಹರಣೆಯೆಂಬಂತೆ, ಪ್ರಮುಖ ಲಾಜಿಸ್ಟಿಕ್ಸ್ ತಂತ್ರಜ್ಞಾನ ಕಂಪನಿಯಾದ ಬ್ಲ್ಯಾಕ್‌ಬಕ್, ತೀವ್ರ ಸಂಚಾರ ದಟ್ಟಣೆ ಮತ್ತು ಕಳಪೆ ರಸ್ತೆ ಪರಿಸ್ಥಿತಿಗಳನ್ನು ಉಲ್ಲೇಖಿಸಿ, ಹೊರ ವರ್ತುಲ ರಸ್ತೆಯ ಬೆಳ್ಳಂದೂರಿನಲ್ಲಿರುವ ತನ್ನ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸುವ ನಿರ್ಧಾರವನ್ನು ಪ್ರಕಟಿಸಿದೆ. ಇದು ನಗರದ ಮೂಲಸೌಕರ್ಯ ಬಿಕ್ಕಟ್ಟಿನ ಗಂಭೀರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಸರ್ಕಾರದ ಪ್ರತಿಕ್ರಿಯೆ: ದುರಸ್ತಿಗೆ ಒಂದು ತಿಂಗಳ ಗಡುವು
ಸಾರ್ವಜನಿಕರು ಮತ್ತು ಉದ್ಯಮ ವಲಯದಿಂದ ಹೆಚ್ಚುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ, ರಾಜ್ಯಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಲು ಒಂದು ತಿಂಗಳ ಕಠಿಣ ಗಡುವು ವಿಧಿಸಿದ್ದು, ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 31ರೊಳಗೆ ಬೆಂಗಳೂರನ್ನು ಗುಂಡಿಮುಕ್ತ ನಗರವನ್ನಾಗಿ ಮಾಡಲು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ ಎಂದು ತಿಳಿದುಬಂದಿದೆ.