ತುರ್ತು ಪರಿಸ್ಥಿತಿ ವಾರ್ಷಿಕೋತ್ಸವಕ್ಕೆ ಹಾಲಿನ ಬೆಲೆಯೇರಿಕೆ; ಬಿಜೆಪಿ ವ್ಯಂಗ್ಯ
ತುರ್ತು ಪರಿಸ್ಥಿತಿ ಹೇರಿಕೆಯ ವಾರ್ಷಿಕೋತ್ಸವ ಸಂಭ್ರಮಿಸಲು ಕಾಂಗ್ರೆಸ್ ಸರ್ಕಾಋ ನಂದಿನಿ ಹಾಲಿನ ದರವನ್ನ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ವಿಕೃತ ಸಂತೋಷ ಅನುಭವಿಸುತ್ತಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ..
ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಬಳಿಕ ಹಾಲಿನ ದರ ಏರಿಕೆ ಮಾಡಿರುವ ಸಂಬಂಧ ರಾಜ್ಯ ಬಿಜೆಪಿ ಟೀಕಾ ಪ್ರಹಾರ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಬಳಿಕ ಕೇವಲ 13 ತಿಂಗಳಿನಲ್ಲಿ ಹಾಲಿನ ದರವನ್ನ ಎರಡು ಬಾರಿ ಹೆಚ್ಚಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, " ಕಳೆದ ವರ್ಷ ಆಗಸ್ಟ್ ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ ಈಗ ಮತ್ತೊಮ್ಮೆ 2 ರೂಪಾಯಿ ಹೆಚ್ಚಾಗಿದೆ. ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ತರಕಾರಿ ಬೆಲೆಗಳಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ," ಎಂದು ಹೇಳಿದ್ದಾರೆ.
"ನಿಮಗೆ ಬಡವರು, ಮಾಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ," ಎಂದು ಒತ್ತಾಯಿಸಿದ್ದಾರೆ.
ಜನತೆ ಮೇಲೆ ಬೆಲೆ ಏರಿಕೆ ಬರೆ
ಲೋಕಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯನವರು ರಾಜ್ಯದ ಜನತೆಯ ಮೇಲೆ ಬೆಲೆ ಏರಿಕೆಯ ಬರೆಯನ್ನು ಹಾಕಲು ಹೊರಟಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಟೀಕಿಸಿದ್ದಾರೆ.ಮಲ್ಲೇಶ್ವರದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಜನರ ವಿರುದ್ಧ ವಿಷ ಕಾರುವ, ದ್ವೇಷ ಸಾಧಿಸುವ ಹಾದಿಗೆ ಸಿದ್ದರಾಮಯ್ಯನವರು ಹೊರಟಿದ್ದಾರೆ ಎಂದು ಟೀಕಿಸಿದರು. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದರು. ಪೆಟ್ರೋಲ್- ಡೀಸೆಲ್ ಬೆಲೆ ಏರಿಸಿದರು. ವಿದ್ಯುತ್ ದರ ಏರಿಸಿದ್ದಾರೆ. ಇವತ್ತು 10 ಮಾದರಿಯ ಹಾಲಿಗೆ ಪ್ರತಿ ಲೀಟರ್‍ಗೆ ಎರಡು ರೂ. ದರ ಹೆಚ್ಚಿಸಿದ್ದಾರೆ ಎಂದು ಆಕ್ಷೇಪಿಸಿದರು.
ಗ್ರಾಹಕರಿಗೆ ದರ ಏರಿಸಿದ್ದಾರೆ. ಈ ಹಾಲಿನ ಹೆಚ್ಚುವರಿ ದರವನ್ನು ರೈತರಿಗೆ ನೀಡಲಾಗುವುದೇ ಎಂಬ ಬಗ್ಗೆ ಸಿದ್ದರಾಮಯ್ಯನವರು ಸ್ಪಷ್ಟಪಡಿಸಲಿ ಎಂದು ಅವರು ಒತ್ತಾಯಿಸಿದರು. 2 ರೂಪಾಯಿಯನ್ನು ನೇರವಾಗಿ ರೈತರಿಗೆ ಕೊಡುತ್ತೀರಾ ಎಂಬ ಬಗ್ಗೆ ರಾಜ್ಯ ಸರಕಾರ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು.
ರೈತರಿಗೆ ದ್ರೋಹ ಮಾಡುವ ಮತ್ತು ಗ್ರಾಹಕರಿಗೆ ಬರೆ ಹಾಕುವ ಕಾರ್ಯವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು. ಪಶು ಆಹಾರದ ದರವನ್ನೂ ಏರಿಸಲಾಗಿದೆ. ಇದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು. ರೈತರು ಖರೀದಿಸುವ ಪಶು ಆಹಾರದ ಬೆಲೆ ಕಡಿಮೆ ಮಾಡಬೇಕು; ಹೆಚ್ಚಿಸಿದ ದರವನ್ನು ನೇರವಾಗಿ ರೈತರಿಗೇ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತದೆ ಎಂಬುದಾಗಿ ತಿಳಿಸಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಸಭಾ ಚುನಾವಣೆಗೆ ಮೊದಲು ರೈತರಿಗೆ ಕೊಡಬೇಕಾದ ಹಾಲು ಪ್ರೋತ್ಸಾಹಧನ 682 ಕೋಟಿಗೂ ಹೆಚ್ಚು ಬಾಕಿ ಇತ್ತು. ಅದು ಈಗ 800 ಕೋಟಿಗೆ ಬಂದು ನಿಂತಿದೆ. ಈ ಸರಕಾರವು ಅವರೇ ಹೇಳಿಕೊಂಡಂತೆ ರೈತರಿಗೆ ಚಿಪ್ಪು, ಚೆಂಬನ್ನು ಕೊಡುತ್ತಿದೆ ಎಂದು ವ್ಯಂಗ್ಯವಾಡಿದರು.