
ಬಸನಗೌಡ ಯತ್ನಾಳ್
BJP Infighting | ʼಹಿಂದೂ ಹುಲಿʼ ಯತ್ನಾಳ್ ಉಚ್ಛಾಟನೆ: ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಕಠಿಣಕ್ರಮ
ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಛಾಟಿಸಿ ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿ ಬುಧವಾರ ಆದೇಶ ಹೊರಡಿಸಿದೆ.
ʼಹಿಂದೂ ಹುಲಿʼ ಎಂದೇ ಜನಪ್ರಿಯರಾಗಿರುವ ಕಟ್ಟಾ ಹಿಂದುತ್ವವಾದಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭಾರತೀಯ ಜನತಾ ಪಕ್ಷದಿಂದ ಉಚ್ಛಾಟಿಸಲಾಗಿದೆ.
ವಿಜಯಪುರ ನಗರ ಬಿಜೆಪಿ ಶಾಸಕರಾಗಿರುವ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟಿಸಿ ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿ ಬುಧವಾರ ಆದೇಶ ಹೊರಡಿಸಿದೆ. ಶಿಸ್ತು ಪಾಲನಾ ಸಮಿತಿ ಎರಡು ಬಾರಿ ಷೋಕಾಸ್ ನೋಟಿಸ್ ನೀಡಿದ್ದರೂ ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆಂಬ ಕಾರಣ ನೀಡಿ ಉಚ್ಛಾಟನೆ ಮಾಡಿದೆ.
ಫೆ.10 ರಂದು ಎರಡನೇ ಬಾರಿ ಷೋಕಾಸ್ ನೋಟಿಸ್ ನೀಡಿದ್ದ ಶಿಸ್ತು ಸಮಿತಿಗೆ ಯತ್ನಾಳ್ ಅವರು ಉತ್ತರ ನೀಡಿದ್ದರು. ಆದರೆ, ಅವರ ಉತ್ತರ, ಸ್ಪಷ್ಟನೆಗೆ ಮಣೆ ಹಾಕದ ಸಮಿತಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಣ ಮೇಲುಗೈ ಸಾಧಿಸಿದಂತಾಗಿದೆ.
ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಮೂಲಕ ಇತರೆ ಬಣಗಳ ನಾಯಕರಿಗೂ ಬಿಜೆಪಿ ಹೈಕಮಾಂಡ್ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ವಿರುದ್ಧ ಯತ್ನಾಳ್ ನೇತೃತ್ವದ ಬಣ ಪದೇಪದೆ ಬಹಿರಂಗ ಹೇಳಿಕೆ, ಟೀಕೆಗಳನ್ನು ಮಾಡುವ ಮೂಲಕ ಪಕ್ಷಕ್ಕೆ ಮುಜುಗರ ತಂದಿತ್ತು. ಅಲ್ಲದೇ ಬಣ ಕಟ್ಟಿಕೊಂಡು ಪ್ರತ್ಯೇಕ ಸಭೆ, ರಾಜ್ಯ ಪ್ರವಾಸಗಳನ್ನೂ ಮಾಡಿದ್ದರು. ಷೋಕಾಸ್ ನೋಟಿಸ್ ನಂತರವೂ ಯತ್ನಾಳ್ ಅವರು ತಮ್ಮ ವರಸೆ ಬದಲಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಪಕ್ಷದಿಂದ ಉಚ್ಛಾಟಿಸುವ ಮೂಲಕ ಖಡಕ್ ಸಂದೇಶ ರವಾನಿಸಿದೆ.
ರಾಜ್ಯ ಬಿಜೆಪಿಯ ಎರಡು ಬಣಗಳ ಪ್ರಮುಖರಾದ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಮತ್ತೊಂದು ಬಣದ ಪ್ರಮುಖ ಯತ್ನಾಳ್ ಅವರಿಬ್ಬರೂ ದೆಹಲಿಯಲ್ಲಿ ಇರುವಾಗಲೇ ಈ ಉಚ್ಛಾಟನೆ ಆದೇಶ ಹೊರಬಿದ್ದಿರುವುದು ಗಮನಾರ್ಹ.
ಉಚ್ಛಾಟನೆ ಆದೇಶದಲ್ಲಿ ಏನಿದೆ?
"ಫೆ.10 ರಂದು ನೀಡಿದ್ದ ಷೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿಲ್ಲ. ಈ ಹಿಂದಿನ ಷೋಕಾಸ್ ನೋಟಿಸ್‌ಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಉತ್ತಮ ನಡವಳಿಕೆ ಭರವಸೆ ನೀಡಿದ್ದರೂ ನೀವು ಪಕ್ಷದ ಶಿಸ್ತನ್ನು ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ, ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಅವಧಿಗೆ ಉಚ್ಛಾಟಿಸಲು ನಿರ್ಧರಿಸಲಾಗಿದೆ. ಇಲ್ಲಿಯವರೆಗೆ ಪಕ್ಷದಲ್ಲಿ ಹೊಂದಿದ್ದ ಯಾವುದೇ ಹುದ್ದೆಯಿಂದ ನಿಮ್ಮನ್ನು ತೆಗೆದುಹಾಕಲಾಗಿದೆ" ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.