Petrol Price Hike | ಪೆಟ್ರೋಲ್‌ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
x

Petrol Price Hike | ಪೆಟ್ರೋಲ್‌ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ


Petrol Price Hike | ಸಿದ್ದರಾಮಯ್ಯ ಸರ್ಕಾರ ಸೆಸ್‌ ಮೂಲಕ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಮಾಡಿರುವುದನ್ನು ಖಂಡಿಸಿರುವ ಬಿಜೆಪಿ ದರ ಇಳಿಕೆಗೆ ಒತ್ತಾಯಿಸಿ ಜೂನ್ 17 (ಸೋಮವಾರ)ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಅಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ ನಡೆಯಲಿದೆ.

ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಈ ವಿಷಯವನ್ನು ತಿಳಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ತೈಲ ದರವನ್ನು ಏರಿಕೆ ಮಾಡಿದೆ. ಈ ಮೂಲಕ ಜನರ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿದ್ದಾರೆ ಎಂದು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಎಲ್ಲ ಬಗೆಯ ಬೆಲೆ ಏರಿಕೆಯ ಭಾಗ್ಯಗಳನ್ನು ನೀಡಿದೆ. ಹಾಲಿನ ದರ, ಆಲ್ಕೋಹಾಲ್ ದರ, ಸ್ಟಾಂಪ್ ಡ್ಯೂಟಿ, ಮಾರ್ಗಸೂಚಿ ದರ, ವಿದ್ಯುತ್ ದರ ಹಾಗೂ ಈಗ ತೈಲ ಬೆಲೆ ಏರಿಕೆ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಂದು ರೂಪಾಯಿ ಬೆಲೆ ಏರಿಕೆಯಾದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಕೂಟರ್ ಶವ ಯಾತ್ರೆ ಮಾಡಿದ್ದರು.15 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ. ಜನರ ಮೇಲೆ ಸೇಡು ತೀರಿಸಿಕೊಳ್ಳಲು ದರ ಏರಿಸಿದ್ದಾರೆ ಎಂದರು.

ಗ್ಯಾರಂಟಿಗಾಗಿ 55,೦೦೦ ರೂ. ಕೋಟಿ ಮೀಸಲಿಟ್ಟಿರುವುದರಿಂದ ಹಣ ಕೊರತೆಯಾಗಿ ಸಂಬಳ ಕೊಡಲು ದುಡ್ಡಿಲ್ಲ. ಆದ್ದರಿಂದ ಜನರ ಮೇಲೆ 3-4 ಸಾವಿರ ಕೋಟಿ ರೂ‌. ಹೊರೆ ಹಾಕಿ ತೈಲ ದರ ಏರಿಸಲಾಗಿದೆ. ಇದರಿಂದ ಸಹಜವಾಗಿ ತರಕಾರಿ, ಹಾಲು, ಹಣ್ಣು, ಕೊನೆಗೆ ಟೀ ಕಾಫಿಗೂ ದರ ಏರಲಿದೆ. ನಾಳೆಯಿಂದಲೇ ಆಟೊರಿಕ್ಷಾದವರು, ಗೂಡ್ಸ್ ಗಾಡಿಗಳು ದರ ಏರಿಕೆ ಮಾಡುತ್ತಾರೆ ಎಂದರು.

ಕಳ್ಳ ದಾರಿ ಮೂಲಕ ಸೇಡು

ನ್ಯಾಯವಾಗಿ ಮಾಡುವುದಿದ್ದರೆ ಬಜೆಟ್ಟಲ್ಲಿ ಸರ್ಕಾರ ತೈಲ ದರ ಏರಿಸಬೇಕಿತ್ತು. ಆದರೆ ಚುನಾವಣೆಯಲ್ಲಿ ಸೋತಿದ್ದರಿಂದ ನಂತರ ಕಳ್ಳ ದಾರಿಯಿಂದ ದರ ಏರಿಸಿ ಜನರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಸಂಸತ್ತಿನಲ್ಲಿ 100 ಸೀಟು ಪಡೆಯಲಾಗದ ಕಾಂಗ್ರೆಸ್ ಪೆಟ್ರೋಲ್ ದರವನ್ನು 100 ರೂಪಾಯಿಗೂ ಹೆಚ್ಚು ಮಾಡಿದೆ. ರಾಹುಲ್ ಗಾಂಧಿ ಹೇಳಿದಂತೆ ಟಕಾಟಕ್ ಎಂದು ತೈಲ ದರ ಏರಿಸಿದ್ದಾರೆ ಎಂದು ದೂರಿದರು.

ಜನರು ಮತ ನೀಡಿಲ್ಲ ಎಂಬ ಕಾರಣಕ್ಕೆ ಸರ್ಕಾರ ದರ ಏರಿಸಿದೆ. ಹಿಂದೆ ಬಿಜೆಪಿ ಸರ್ಕಾರ 7 ರೂ. ಕಡಿಮೆ ಮಾಡಿತ್ತು. ಕಾಂಗ್ರೆಸ್ ಗೆ ಮಾನವಿದ್ದರೆ ದರ ಏರಿಕೆ ವಾಪಾಸ್ ಪಡೆಯಲಿ ಎಂದು ಆಗ್ರಹಿಸಿದರು.

ಆಸ್ತಿ ಮಾರಾಟ

ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರ ಬಿಡಿಎ ಆಸ್ತಿಗಳ ಮಾರಾಟಕ್ಕೆ ಮುಂದಾಗಿದೆ. ಬಿಬಿಎಂಪಿ ಹಾಗೂ ಜಲಮಂಡಳಿಯ ಆಸ್ತಿಗಳನ್ನು ಕೂಡ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದ ಆರ್ಥಿಕ ಶಿಸ್ತನ್ನು ಸರ್ವನಾಶ ಮಾಡಿದ್ದಾರೆ. ಇನ್ನೂ ಒಂದು ವರ್ಷದಲ್ಲಿ ವಿಧಾನಸೌಧವನ್ನೂ ಅಡಮಾನ ಇಡುತ್ತಾರೆ ಎಂದರು.

ಸರ್ಕಾರಿ ನೌಕರರು ಮತ ನೀಡಿಲ್ಲವೆಂಬ ಕಾರಣಕ್ಕೆ ವೇತನ ಹೆಚ್ಚಿಸಿಲ್ಲ. 7 ನೇ ವೇತನ ಆಯೋಗದ ವರದಿ ಜಾರಿ 'ನಾಳೆ ಬಾ' ಎಂಬ ಸ್ಥಿತಿಗೆ ಬಂದಿದೆ. 143 ಶಾಸಕರ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಿದೆ. ಅದಕ್ಕಾಗಿ ತೈಲ ದರ ಏರಿಸಿದ್ದಾರೆ. ಇದರಿಂದ ಕಾಂಗ್ರೆಸ್ ಶಾಸಕರು ಕೂಡ ಬೇಸರಗೊಂಡಿದ್ದಾರೆ‌. ಜಿಲ್ಲಾ ಪಂಚಾಯತ್ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಗೆ ಪಾಠ ಕಲಿಸಲಿದ್ದಾರೆ ಎಂದರು.

Read More
Next Story