ಬಿಜೆಪಿ ಪ್ರತಿಭಟನೆ | ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್: ಆರ್ ಅಶೋಕ್ ವಾಗ್ದಾಳಿ
ಹುಬ್ಬಳಿ ಗಲಭೆ ಪ್ರಕರಣದ ಕೇಸುಗಳನ್ನು ವಾಪಸ್ ಪಡೆಯಿರಿ ಎಂದು ಅವರು ಸೂಚನೆ ನೀಡಿದರು, ಅದಕ್ಕೆ ಇವರು ವಾಪಸ್ ಪಡೆದಿದ್ದಾರೆ. ಮುಸ್ಲಿಮರ ಋಣ ತೀರಿಸುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದ್ದಾರೆ
ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಅವರ ಸೂಚನೆಗೆ ಮೇರೆಗೆ ಇವರು ಕಾರ್ಯನಿರ್ವಹಿಸುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸುಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ಪ್ರತಿಭಟಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ನಾಯಕರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅಶೋಕ, ಈ ಸರ್ಕಾರ ಭಯೋತ್ಪಾದಕರ ಸೂಚನೆ ಮೇರೆಗೆ ನಡೆಯುತ್ತಿದೆ. ಹುಬ್ಬಳಿಯಲ್ಲಿ ಹಾಕಿದ್ದ ಕೇಸುಗಳನ್ನು ವಾಪಸ್ ಪಡೆಯಿರಿ ಎಂದು ಅವರು ಸೂಚನೆ ನೀಡಿದರು, ಅದಕ್ಕೇ ಇವರು ವಾಪಸ್ ಪಡೆದಿದ್ದಾರೆ. ಮುಸ್ಲಿಮನರ ಋಣ ತೀರಿಸುತ್ತಿದ್ದಾರೆ ಎಂದರು.
ಇವರ (ಕಾಂಗ್ರೆಸ್ ನಾಯಕರ) ಬ್ರದರ್ಸ್ ಯಾರು? ಕುಕ್ಕರ್ ಬ್ಲಾಸ್ಟ್ ಮಾಡಿದ್ರೆ ಇವರ ಬ್ರದರ್ಸ್. ಎಲ್ಲಾ ಕಡೆ ಹಿಂದುಗಳನ್ನು ತುಳಿಯಲಾಗುತ್ತಿದೆ. ಗಣೇಶ ಹಬ್ಬಕ್ಕೆ ಪೊಲೀಸ್ ಅನುಮತಿ ಬೇಕು. ಸರ್ಕಾರ ಟಿಪ್ಪು ಆಡಳಿತ ಮಾಡುತ್ತಿದೆ. ಸಿದ್ದರಾಮಯ್ಯ ಮನೆ ದೇವರು ಟಿಪ್ಪು. ನಾಮ ಇಟ್ಟುಕೊಂಡು ಹೋದರೆ ನಾಮ ಗಿರಾಕಿನ ಅಂತಾ ಚೇಡಿಸ್ತಿದ್ರು, ಟ್ರಾನ್ಸಫರ್ಗೆ ಹೋದ್ರೆ ಜಿಲಾಬಿನಾ ಅನ್ನೋರು. ಈಗ ಸಿದ್ದರಾಮಯ್ಯ ಅವರೇ ಹೋಗಿ ಕುಂಕುಮ ಇಟ್ಟುಕೊಳ್ತಿದ್ದಾರೆ. ಜನ್ಮದಲ್ಲೇ ಅರ್ಚನೆ ಮಾಡಿಸಿರಲಿಲ್ಲ, ಈಗ ಮಾಡಿಸುತ್ತಿದ್ದಾರೆ. ಅವರು ಹೋಗುವ ಸಮಯ ಬಂದಿದೆ ಎಂದು ಅಶೋಕ್ ಕಿಡಿ ಕಾರಿದರು.
ಮೈಸೂರು ಏರ್ ಪೋರ್ಟ್ಗೆ ಚಾಮುಂಡೇಶ್ವರಿ ಹೆಸರು ಯಾಕೆ ಇಡಲಿಲ್ಲ? ನಾವು ಪ್ರತಿಭಟನೆ ಮಾಡಲಿಲ್ಲ ಎಂದರೆ ಟಿಪ್ಪು ಹೆಸರು ಇಡುತ್ತಿದ್ದರು. ಮುಸಲ್ಮಾನರ ತುಘಲಕ್ ಆಡಳಿತ ನಡೆಯುತ್ತಿದೆ. ಪ್ರತಿಭಟನೆ ಮುಗಿದ ಮೇಲೆ ರಾಜಭನಕ್ಕೆ ಹೋಗಿ ಸರ್ಕಾರದ ವಿರುದ್ದ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಸರ್ಕಾರದ ವಿರುದ್ದ ಇನ್ನು ಹೋರಾಟ ಮಾಡುತ್ತೇವೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.