ಕೇಂದ್ರದ ವಿರುದ್ಧದ ರಾಜ್ಯ ಸರ್ಕಾರದ ಪ್ರತಿಭಟನೆಗೆ ಕರ್ನಾಟಕ ಬಿಜೆಪಿ ಸೆಡ್ಡು
x
ವಿಧಾನಸೌಧ ಆವರಣದಲ್ಲಿ ಬಿಜೆಪಿ ನಾಯಕರಿಂದ ಪ್ರತಿಭಟನೆ (ಫೋಟೋ:x )

ಕೇಂದ್ರದ ವಿರುದ್ಧದ ರಾಜ್ಯ ಸರ್ಕಾರದ ಪ್ರತಿಭಟನೆಗೆ ಕರ್ನಾಟಕ ಬಿಜೆಪಿ ಸೆಡ್ಡು

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದಂತೆಯೇ ಅದಕ್ಕೆ ಪ್ರತಿಯಾಗಿ ಬಿಜೆಪಿ ಬೀದಿಗೆ ಇಳಿದಿದ್ದು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದೆ


ಬೆಂಗಳೂರು: ತೆರಿಗೆ ಮತ್ತು ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಂತೆಯೇ ಅದಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿ ಬೀದಿಗೆ ಇಳಿದಿದ್ದು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ.

ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್‌ ಅಶೋಕ್‌, “ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲೇ ಜಿನ್ನಾ ಸಂಸ್ಕೃತಿ ಅಂಟಿಕೊಂಡಿದೆ. ಹಾಗಾಗಿ, ದೇಶ ವಿಭಜನೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಸಂಸದ ಡಿಕೆ ಸುರೇಶ್‌ ಹಾಗೂ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿ ಮಾಡುತ್ತಿದೆ. ಮೋದಿ ಅವರು ಹತ್ತು ವರ್ಷ ಏನು ಬಿಡುಗಡೆ ಮಾಡಿದ್ದಾರೆ, ನೀವೇನು ಬಿಡುಗಡೆ ಮಾಡಿದ್ದೀರಿ ಅನ್ನುವ ದಾಖಲೆ‌ ಮುಂದಿಡಿ. ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲು 9 ತಿಂಗಳು ತೆಗೆದುಕೊಂಡಿದ್ದಾರೆ. ಅದಕ್ಕೆ ದಾಖಲೆ ನನ್ನ ಹತ್ತಿರ ಇದೆ ಎಂದು ಅವರು ಹೇಳಿದ್ದಾರೆ.

ರಾಮ ಮಂದಿರ ಆದ ರೀತಿ ನೋಡಿ ಕಾಂಗ್ರೆಸ್ನವರು ಹುಚ್ಚರ ರೀತಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಕೆರೆಗೋಡು ಪ್ರಕರಣದ ಬಳಿಕ ಇನ್ನೂ ಹುಚ್ಚು ಏರಿದೆ ಎಂದು ಅವರು ಹೇಳಿದರು.

ಡಿ ಕೆ ಸುರೇಶ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಎಲ್ಲರೂ ದೆಹಲಿಗೆ ಹೋಗಿದ್ದಾರೆ ಎಂದು ಆರೋಪಿಸಿದ ಅಶೋಕ್‌, ದೇಶದ್ರೋಹ ಹೇಳಿಕೆ ಮತ್ತು ಬರ ಪರಿಹಾರ ಬಿಡುಗಡೆ ವಿಳಂಬ ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್‌ನವರು ಈಗ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಸಿಎಂ ಕಚೇರಿಗೆ ಮುತ್ತಿಗೆ ಯತ್ನ

ಪ್ರತಿಭಟನೆ ವೇಳೆ ವಿಧಾನಸೌಧದ ದಕ್ಷಿಣ ದ್ವಾರದ ಮೂಲಕ ಬಿಜೆಪಿ ನಾಯಕರು ಮುಖ್ಯಮಂತ್ರಿಗಳ ಕಚೇರಿಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.

ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಇನ್ನೂ ಅನೇಕ ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Read More
Next Story