
ಅಕ್ಷರ ದೀವಿಗೆ ನಂದಿಸಲು ಹೊರಟ ಸರ್ಕಾರ; ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
ಕಾಂಗ್ರೆಸ್ ಸರ್ಕಾರ ಜ್ಞಾನ ಗಂಗೆಯ ಆಲಯಗಳನ್ನು ಬರಿದು ಮಾಡಿ ಅಕ್ಷರ ದೀವಿಗೆಯನ್ನು ನಂದಿಸಲು ಹೊರಟಿದೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಅವಧಿಯಲ್ಲಿ ಆರಂಭಿಸಿದ್ದ 10 ಹೊಸ ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, "ಕಾಂಗ್ರೆಸ್ ಸರ್ಕಾರ ಜ್ಞಾನ ಗಂಗೆಯ ಆಲಯಗಳನ್ನು ಬರಿದು ಮಾಡಿ ಅಕ್ಷರ ದೀವಿಗೆಯನ್ನು ನಂದಿಸಲು ಹೊರಟಿದೆ. 9 ವಿಶ್ವವಿದ್ಯಾಲಯಗಳಿಗೆ ಬೀಗ ಜಡಿಯಲು ಹೊರಟು ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿನ ಶಿಕ್ಷಣ ಭಾಗ್ಯ ಕಸಿಯಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಅವಿವೇಕತನದ ಪರಮಾವಧಿ" ಎಂದು ಕಿಡಿಕಾರಿದ್ದಾರೆ.
"ಶಿಕ್ಷಣದ ದೂರದೃಷ್ಟಿ ಹಾಗೂ ಉನ್ನತ ಶಿಕ್ಷಣದ ಹಕ್ಕು ಪ್ರತಿಯೊಬ್ಬ ವಿದ್ಯಾರ್ಥಿಗೆ ಸರಳ, ಸುಲಭವಾಗಿ ದೊರೆಯಬೇಕು ಎಂಬ ಮಹತ್ವದ ಉದ್ದೇಶದಿಂದ 9 ವಿಶ್ವವಿದ್ಯಾಲಯಗಳನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಗಿತ್ತು. ಇವುಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿಕೊಳ್ಳುವ ಕಾರಣಕ್ಕಾಗಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿದೆ. ಕಾಂಗ್ರೆಸ್ ಸರ್ಕಾರದ ಈ ನಿರ್ಧಾರ ಶಿಕ್ಷಣ ಹಾಗೂ ಅಭಿವೃದ್ಧಿ ವಿರೋಧಿಗೆ ಸಾಕ್ಷಿಯಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ದಕ್ಷಿಣ ಭಾರತದಲ್ಲಿ ಕರ್ನಾಟಕವು ʼಶಿಕ್ಷಣ ಕಾಶಿʼ ಎಂಬ ಹೆಗ್ಗಳಿಕೆ ಹೊಂದಿದೆ. ಅದಕ್ಕೆ ಹಿನ್ನಡೆ ಉಂಟು ಮಾಡುವ ನಿರ್ಧಾರಗಳನ್ನು ಈ ಹಿಂದಿನ ಯಾವ ಸರ್ಕಾರಗಳೂ ಕೈಗೊಂಡಿರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪಡೆಯಲು ಸಂಕಷ್ಟ ಎದುರಿಸುತ್ತಿದ್ದ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆರೆದಿದ್ದ ಹಾಸನ, ಚಾಮರಾಜನಗರ, ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಂಡ್ಯ, ಮಹರಾಣಿ ಕ್ಲಸ್ಟರ್, ನೃಪತುಂಗ ಸೇರಿದಂತೆ ಇತರ ಹಿಂದುಳಿದ ಪ್ರದೇಶಗಳ ವಿಶ್ವವಿದ್ಯಾಲಯಗಳನ್ನು ಮುಚ್ಚಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಕ್ರಮದ ಹಿಂದಿನ ಯೋಚನೆ ಶಿಕ್ಷಣ ವಿರೋಧಿ ನೀತಿಯ ವಿಕೃತ ನಡೆ ಎಂದು ಕಿಡಿಕಾರಿದ್ದಾರೆ.
ವಿಶ್ವವಿದ್ಯಾಲಯಗಳನ್ನು ಮುಚ್ಚುವ ಕುರಿತ ತನ್ನ ನಿರ್ಧಾರವನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಒಂಬತ್ತು ವಿಶ್ವವಿದ್ಯಾಲಯಗಳ ಅಸ್ತಿತ್ವವನ್ನು ಉಳಿಸಿ ಅಭಿವೃದ್ಧಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು ಎಂದು ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.