BJP Infighting | ಬಿಜೆಪಿ ಅಧ್ಯಕ್ಷ ವಿಜಯೇಂದ್ರಗೆ ಭಿನ್ನರ ಸೆಡ್ಡು; ಫೆ.20 ರಂದು ಅಭ್ಯರ್ಥಿ ಘೋಷಣೆ?
x
ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ ಯತ್ನಾಳ್‌

BJP Infighting | ಬಿಜೆಪಿ ಅಧ್ಯಕ್ಷ ವಿಜಯೇಂದ್ರಗೆ ಭಿನ್ನರ ಸೆಡ್ಡು; ಫೆ.20 ರಂದು ಅಭ್ಯರ್ಥಿ ಘೋಷಣೆ?

ಫೆ.20 ರಂದೇ ರಾಜ್ಯಾಧ್ಯಕ್ಷರ ಘೋಷಣೆ ಸಾಧ್ಯತೆ ಹಿನ್ನೆಲೆಯಲ್ಲಿ ತಟಸ್ಥ ಬಣದ ನಾಯಕರೊಂದಿಗೂ ಚರ್ಚೆ ಆರಂಭಿಸಿದ್ದು, ವಿಜಯೇಂದ್ರ ಅವರನ್ನು ಕೆಳಗಿಳಿಸಲು ತೀವ್ರ ಕಸರತ್ತು ನಡೆಸಲಾಗುತ್ತಿದೆ.


ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪಕ್ಷದಲ್ಲಿ ಭಿನ್ನರ ನಡೆ ಕುತೂಹಲ ಮೂಡಿಸಿದೆ. ಹಾಲಿ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಬಹಿರಂಗ ಸಮರಕ್ಕಿಳಿದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ಬಣದಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ.

ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ವರಿಷ್ಠರ ಮೇಲೆ ನಿರಂತರ ಒತ್ತಡ ಹೇರುವ ಜೊತೆಗೆ ತಂತ್ರಗಾರಿಕೆ ರೂಪಿಸುವಲ್ಲಿ ಯತ್ನಾಳ್‌ ಬಣದ ನಾಯಕರು ನಿರತರಾಗಿದ್ದಾರೆ. ಫೆ.20ರಂದೇ ರಾಜ್ಯಾಧ್ಯಕ್ಷರ ಘೋಷಣೆ ಸಾಧ್ಯತೆ ಹಿನ್ನೆಲೆಯಲ್ಲಿ ತಟಸ್ಥ ಬಣದ ನಾಯಕರೊಂದಿಗೂ ಚರ್ಚೆ ಆರಂಭಿಸಿದ್ದು, ವಿಜಯೇಂದ್ರ ಅವರನ್ನು ಕೆಳಗಿಳಿಸಲು ತೀವ್ರ ಕಸರತ್ತು ನಡೆಸಲಾಗುತ್ತಿದೆ. ಅಲ್ಲದೇ ಅಂದೇ ಭಿನ್ನರ ಬಣದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಫೆ.20 ರಂದು ಭಿನ್ನರ ಸಭೆ

ಒಂದೆಡೆ ಬಿ.ವೈ.ವಿಜಯೇಂದ್ರ ಅವರು ಎರಡನೇ ಅವಧಿಗೆ ಪುನರಾಯ್ಕೆಯಾಗುವ ವಿಶ್ವಾಸ ಹೊಂದಿದ್ದರೆ, ಇನ್ನೊಂದೆಡೆ ವಿಜಯೇಂದ್ರ ಅವರ ಬದಲಾವಣೆ ಕುರಿತು ಭಿನ್ನಮತೀಯ ನಾಯಕರು ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿ ಫೆ. 20ರಂದೇ ಯತ್ನಾಳ್‌ ಬಣ ಸಭೆ ನಡೆಸಲಿದೆ.

ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಅಥವಾ ಘೋಷಣೆ ಕುರಿತಾದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದೆ. ಒಂದು ವೇಳೆ ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಿದರೆ ಮುಂದಿನ ನಡೆಯ ಕುರಿತು ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಫೆ.20 ರಂದು ಯತ್ನಾಳ್‌ ಬಣದ ನಾಯಕ ಕುಮಾರ್‌ ಬಂಗಾರಪ್ಪ ಅವರ ನಿವಾಸದಲ್ಲಿ ಯತ್ನಾಳ್‌ ಬಣದ ನಾಯಕರ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಶೋಕಾಸ್ ನೋಟಿಸ್‌ಗೆ ಉತ್ತರಿಸುವ ಕುರಿತು ಚರ್ಚೆ

ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೀಡಿದ್ದ ಶೋಕಾಸ್ ನೋಟಿಸ್‌ಗೆ ಗಡುವು ಮುಗಿದರೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಉತ್ತರ ನೀಡದೇ ಇರುವುದು ಚರ್ಚೆ ಹುಟ್ಟು ಹಾಕಿದೆ. ಭಿನ್ನರ ಸಭೆಯಲ್ಲೇ ಶೋಕಾಸ್‌ ನೋಟಿಸ್‌ಗೆ ಪ್ರತಿಕ್ರಿಯೆ ನೀಡುವ, ಇಲ್ಲವೇ ನೇರವಾಗಿ ವರಿಷ್ಠರನ್ನು ಭೇಟಿಯಾಗುವ ಕುರಿತು ಚರ್ಚೆ ನಡೆಯಲಿದೆ.

ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು ಫೆ.10ರಂದು ನವದೆಹಲಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಮನೆಯ ಗೃಹಪ್ರವೇಶಕ್ಕೆ ಹೋಗಿದ್ದ ಸಂದರ್ಭದಲ್ಲೇ ವರಿಷ್ಠರು ಯತ್ನಾಳ್‌ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದರು. 72 ಗಂಟೆಗಳಲ್ಲಿ ನೋಟಿಸ್‌ಗೆ ಉತ್ತರ ನೀಡಬೇಕು. ಇಲ್ಲವಾದಲ್ಲಿ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಫೆ.13 ರಂದು ಗಡುವು ಮುಗಿದರೂ ಯತ್ನಾಳ್ ಅವರು ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿಲ್ಲ.ಹೀಗಾಗಿ ಅವರ ಮುಂದಿನ ನಡೆಯ ಕುರಿತು ಪಕ್ಷದಲ್ಲೇ ಚರ್ಚೆಗೆ ಗ್ರಾಸವಾಗಿದೆ.

ಈ ಮಧ್ಯೆ, ಪದೇ ಪದೇ ತಮಗೆ ಮಾತ್ರ ನೋಟಿಸ್‌ ನೀಡುತ್ತಿರುವ ವರಿಷ್ಠರ ಬಗ್ಗೆ ಯತ್ನಾಳ್‌ ಅವರು ಸಂಘ ಪರಿವಾರದ ನಾಯಕರಿಗೆ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಿನ್ನರಿಗೆ ತಟಸ್ಥ ಬಣ ಸಾಥ್‌

ಯತ್ನಾಳ್‌ ನೇತೃತ್ವದ ಭಿನ್ನರ ಬಣಕ್ಕೆ ತಟಸ್ಥ ಬಣದ ನಾಯಕರು ಕೂಡ ಸಾಥ್‌ ನೀಡಿರುವುದರಿಂದ ಬಿಜೆಪಿಯಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಲೇಬೇಕೆಂಬ ಯತ್ನಾಳ್‌ ಹೋರಾಟಕ್ಕೆ ತಟಸ್ಥ ಬಣದ ನಾಯಕರು ಪರೋಕ್ಷ ಬೆಂಬಲ ನೀಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ವಿಜಯೇಂದ್ರ ಅವರು ತಟಸ್ಥ ಬಣದ ವಿರುದ್ಧವೂ ಹರಿಹಾಯ್ದಿದ್ದರು. ಯತ್ನಾಳ್‌ ಬಣದ ನಾಯಕರು ತಮ್ಮ ಹಾಗೂ ತಮ್ಮ ತಂದೆ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಬಹಿರಂಗ ಟೀಕೆಗಿಳಿದರೂ ಹಿರಿಯ ನಾಯಕರ ಮೌನ ವಹಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಅಧ್ಯಕ್ಷರ ಏಕಪಕ್ಷೀಯ ನಿಲುವು, ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ಸರ್ವಾಧಿಕಾರಿ ಧೋರಣೆಯನ್ನು ಕೆಲ ನಾಯಕರು ಟೀಕಿಸಿದ್ದರು. ಸದ್ಯ ತಟಸ್ಥ ಬಣದಲ್ಲಿ ಜಿ.ಎಂ. ಸಿದ್ದೇಶ್ವರ್‌, ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ ಸದಾನಂದಗೌಡ, ವಿಪಕ್ಷ ನಾಯಕ ಆರ್‌.ಅಶೋಕ್‌, ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಶಾಸಕ ಅರವಿಂದ್‌ ಬೆಲ್ಲದ್‌, ಮಾಜಿ ಸಚಿವ ಶ್ರೀರಾಮುಲು ಗುರುತಿಸಿಕೊಂಡಿದ್ದಾರೆ.

ವಿಜಯೇಂದ್ರಗೆ ಯತ್ನಾಳ್‌ ಬಣ ಸೆಡ್ಡು

ಫೆ. 20 ರೊಳಗೆ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಯಲಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದ ಹಿನ್ನೆಲೆಯಲ್ಲಿ ಭಿನ್ನಮತೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣವು ವಿಜಯೇಂದ್ರ ಅವರಿಗೆ ಸೆಡ್ಡು ಹೊಡೆಯಲು ತಂತ್ರಗಾರಿಕೆ ಎಣಿಯುತ್ತಿದೆ.

"ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಈಗಾಗಲೇ ವರಿಷ್ಠರಿಗೆ ದೂರು ನೀಡಿದ್ದೇವೆ. ಫೆ.20 ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದು, ಸಭೆಯಲ್ಲಿ ಯತ್ನಾಳ್‌ ಅವರಿಗೆ ನೀಡಿರುವ ಶೋಕಾಸ್‌ ನೋಟಿಸ್, ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಘೋಷಣೆ, ಇತ್ಯಾದಿ ವಿಚಾರಗಳನ್ನು ಚರ್ಚಿಸಲಾಗುವುದು. ಬಿ.ವೈ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ವಿಶ್ವಾಸ ನಮಗಿದೆ" ಎಂದು ಯತ್ನಾಳ್‌ ಬಣದ ನಾಯಕ ಕುಮಾರ್‌ ಬಂಗಾರಪ್ಪ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

Read More
Next Story