ಜಿಲ್ಲಾಧಿಕಾರಿ ಪೌಝಿಯಾ  ಪಾಕಿಸ್ತಾನಿ ಎಂದ ಬಿಜೆಪಿ ಮುಖಂಡ ಎನ್. ರವಿಕುಮಾರ್: ಪಕ್ಷಕ್ಕೆ ಮುಜುಗರ, ವಿಷಾದ
x

ಜಿಲ್ಲಾಧಿಕಾರಿ ಪೌಝಿಯಾ 'ಪಾಕಿಸ್ತಾನಿ' ಎಂದ ಬಿಜೆಪಿ ಮುಖಂಡ ಎನ್. ರವಿಕುಮಾರ್: ಪಕ್ಷಕ್ಕೆ ಮುಜುಗರ, ವಿಷಾದ

ವಿವಾದದ ಹಿನ್ನೆಲೆಯಲ್ಲಿ 'ಫೆಡರಲ್​ ಕರ್ನಾಟಕ' ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಎಮ್​ಎಲ್​​ಸಿ ರವಿ ಕುಮಾರ್ ಅವರು, ಜಿಲ್ಲಾಧಿಕಾರಿ ಕುರಿತು ನೀಡಿರುವ ಹೇಳಿಕೆ ಬಗ್ಗೆ ವಿಷಾದವಿದೆ ಎಂದು ಹೇಳಿದ್ದಾರೆ.


ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಕಲಬುರಗಿ ಜಿಲ್ಲಾಧಿಕಾರಿ (ಡಿಸಿ) ಫೌಝಿಯಾ ತರನ್ನಂ ಅವರನ್ನು 'ಪಾಕಿಸ್ತಾನಿ' ಎಂದು ವ್ಯಂಗ್ಯವಾಗಿ ಕರೆದು ತೀವ್ರ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆಯು ರಾಜ್ಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ರವಿಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಾಗಿದೆ. ಐಎಎಸ್ ಅಧಿಕಾರಿಗಳ ಸಂಘವು ಈ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವು ಭಾರೀ ಚರ್ಚೆಗೆ ಗುರಿಯಾಗಿದೆ.

ವಿವಾದದ ಹಿನ್ನೆಲೆಯಲ್ಲಿ 'ಫೆಡರಲ್​ ಕರ್ನಾಟಕ' ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಎಮ್​ಎಲ್​​ಸಿ ರವಿ ಕುಮಾರ್ ಅವರು, ಜಿಲ್ಲಾಧಿಕಾರಿ ಕುರಿತು ನೀಡಿರುವ ಹೇಳಿಕೆ ಬಗ್ಗೆ ವಿಷಾದವಿದೆ ಎಂದು ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್​ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಅಗತ್ಯವೇ ಇಲ್ಲ,'' ಎಂದು ಹೇಳಿದ್ದಾರೆ.

ಮೇ 24ರಂದು ಕಲಬುರಗಿಯಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಎಂಎಲ್‌ಸಿ ಎನ್. ರವಿಕುಮಾರ್ ಭಾಗವಹಿಸಿದ್ದರು. ಈ ವೇಳೆ ಅವರು ಜಿಲ್ಲಾಧಿಕಾರಿ ಫೌಝಿಯಾ ತರನ್ನಂ ಅವರು ಕಾಂಗ್ರೆಸ್ ಪಕ್ಷದ ಸೂಚನೆಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. "ನನಗೆ ಗೊತ್ತಿಲ್ಲ, ಕಲಬುರಗಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿನ ಐಎಎಸ್ ಅಧಿಕಾರಿಯೋ, ನಿಮ್ಮ ಚಪ್ಪಾಳೆ ಅಬ್ಬರವನ್ನು ನೋಡಿದರೆ. ಜಿಲ್ಲಾಧಿಕಾರಿ ನಿಜವಾಗಿಯೂ ಪಾಕಿಸ್ತಾನದಿಂದ ಬಂದವರಂತಿದ್ದಾರೆ," ಎಂದು ರವಿಕುಮಾರ್ ವ್ಯಂಗ್ಯವಾಗಿ ಹೇಳಿದ್ದರು. ಈ ಹೇಳಿಕೆಯು ಫೌಝಿಯಾ ತರನ್ನಂ ಅವರ ಮುಸ್ಲಿಂ ಸಮುದಾಯದ ಹಿನ್ನೆಲೆಯನ್ನು ಗುರಿಯಾಗಿಸಿತ್ತು ಎಂದು ವ್ಯಾಪಕವಾಗಿ ಆರೋಪಿಸಲಾಗಿದೆ.

ಪ್ರಕರಣ ದಾಖಲು

ರವಿಕುಮಾರ್ ಅವರ ಈ ವಿವಾದಾತ್ಮಕ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಆರಂಭವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಖಚಿತಪಡಿಸಿದ್ದಾರೆ.

ಐಎಎಸ್ ಅಧಿಕಾರಿಗಳ ಸಂಘದ ಖಂಡನೆ

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಐಎಎಸ್ ಅಧಿಕಾರಿಗಳ ಸಂಘವು ರವಿಕುಮಾರ್ ಅವರಿಂದ "ಬೇಷರತ್ ಕ್ಷಮೆಯಾಚನೆ"ಗೆ ಒತ್ತಾಯಿಸಿದೆ. ಸಂಘ ಹೇಳಿಕೆ ನೀಡಿ , "ಫೌಝಿಯಾ ತರನ್ನಂ ಒಬ್ಬ ನಿಷ್ಕಳಂಕ ಖ್ಯಾತಿಯ ಐಎಎಸ್ ಅಧಿಕಾರಿಯಾಗಿದ್ದು, ಅವರ ಸಾರ್ವಜನಿಕ ಸೇವೆ ಮತ್ತು ರಾಜ್ಯಕ್ಕೆ ಸಲ್ಲಿಸಿದ ಕೊಡುಗೆ ಅಪಾರ. ರವಿಕುಮಾರ್ ಅವರ ಹೇಳಿಕೆಗಳು ಆಧಾರರಹಿತ ಮತ್ತು ಸಂಪೂರ್ಣವಾಗಿ ತರ್ಕರಹಿತ. ಇಂತಹ ಪ್ರಚೋದನಕಾರಿ ಮತ್ತು ಸುಳ್ಳು ಹೇಳಿಕೆಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಾರ್ವಜನಿಕ ಅಧಿಕಾರಿಗಳ ಘನತೆ ಕೆಡಿಸುವುದು ಮಾತ್ರವಲ್ಲದೇ, ಅವರ ಮಾನಸಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರುತ್ತವೆ ," ಎಂದು ಹೇಳಿದೆ.

ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಈ ವಿಚಾರದಲ್ಲಿ ಕಾನೂನು ಕ್ರಮ ಕೈಗೊಳ್ಳದೇ ಬೇರೆ ದಾರಿ ಇಲ್ಲ. ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ರಾಷ್ಟ್ರಮಟ್ಟದ ಅಧಿಕಾರಿಯಾಗಿದ್ದು, ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಆವರು ತಮ್ಮದೇ ಆದ ಘನತೆಯನ್ನು ಹೊಂದಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ. ಮಹಿಳಾ ಅಧಿಕಾರಿಯನ್ನು ಬಿಜೆಪಿಯವರು ನಡೆಸಿಕೊಳ್ಳುವ ರೀತಿ ಇದೇನಾ? ಈ ವಿಚಾರವಾಗಿ ಬಿಜೆಪಿ ನಾಯಕರು ಅದರಲ್ಲೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಕೇಂದ್ರ ಸಚಿವರುಗಳು ಪ್ರತಿಕ್ರಿಯೆ ನೀಡಬೇಕು,” ಎಂದು ಆಗ್ರಹಿಸಿದ್ದರು.

“ಅನೇಕ ಐಎಎಸ್ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿದ್ದಾರೆ. ಈ ವಿಚಾರವನ್ನು ಕಾನೂನು ದೃಷ್ಟಿಕೋನದಲ್ಲಿ ಪರಿಶೀಲನೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.

ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ವಿರೋಧ ವ್ಯಕ್ತಪಡಿಸಿದ್ದು, ''ಬಿಜೆಪಿ ನಾಯಕರಿಗೆ ಪಾಕಿಸ್ತಾನದ ಹೆಸರು ಹೇಳದಿದ್ದರೆ ತಿಂದಿದ್ದು ಜೀರ್ಣ ಆಗುವುದಿಲ್ಲ, ರಾತ್ರಿ ನಿದ್ದೆಯಲ್ಲೂ ಪಾಕಿಸ್ತಾನ ಪಾಕಿಸ್ತಾನ ಎಂದು ಕನವರಿಸುತ್ತಾರೋ ಏನೋ,'' ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿಕೆ ನೀಡಿ,'' ಐಎಎಸ್‌ ಅಧಿಕಾರಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿಷಾದನೀಯ. ಶಾಲಾ ಮಕ್ಕಳು ಕೂಡ ಹೀಗೆ ಮಾತನಾಡಲ್ಲ. ಸಾರ್ವಜನಿಕ ಜೀವನದಲ್ಲಿ ಇರಲು ಇಂಥವರು ಅನರ್ಹ,'' ಎಂದು ಹೇಳಿಕೆ ನೀಡಿದ್ದಾರೆ.

ವಿಷಾದ ವ್ಯಕ್ತಪಡಿಸಿದ ಎಮ್​​ಎಲ್​​ಸಿ ರವಿಕುಮಾರ್​​

ಜಿಲ್ಲಾಧಿಕಾರಿ ವಿರುದ್ಧ ನೀಡಿರುವ ಹೇಳಿಕೆಗೆ ರವಿಕುಮಾರ್ ಅವರು ಕ್ಷಮೆ ಕೇಳಿದ್ದಾರೆ. ' ದ ಫೆಡರಲ್​ ಕರ್ನಾಟಕ' ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಅಧಿಕಾರಿಯೊಬ್ಬರ ವಿರುದ್ಧ ಬಾಯಿತಪ್ಪಿ ಹೇಳಿರುವ ಹೇಳಿಕೆ ಬಗ್ಗೆ ನನಗೆ ಪಶ್ಚಾತಾಪವಿದೆ. ಈ ಬಗ್ಗೆ ಕ್ಷಮೆ ಕೇಳುವೆ. ಸಿಎಂ ಸಿದ್ದರಾಮಯ್ಯ ಅವರು ಐಎಎಸ್​ ಹಾಗೂ ಐಪಿಎಸ್​ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ್ದರು. ಅವರು ಕೂಡ ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಸವಾಲು ಹಾಕಿದ್ದಾರೆ.

Read More
Next Story