
ಹರೀಶ್ ಪೂಂಜಾ
High court News|ಕೋಮುದ್ವೇಷ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಶಾಸಕ ಹರೀಶ್ ಪೂಂಜಾ
ಮಂಗಳೂರಿನ ತೆಕ್ಕಾರು ನಿವಾಸಿ ಎಸ್.ಬಿ.ಇಬ್ರಾಹಿಂ ಸಲ್ಲಿಸಿರುವ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದತಿ ಕೋರಿ ಹರೀಶ್ ಪೂಂಜಾ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಕೋರಿ ಅವರ ಪರ ವಕೀಲರು ಹೈಕೋರ್ಟ್ ರಜಾಕಾಲೀನ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕೋಮುದ್ವೇಷ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಮಾಡುವಂತೆ ಕೋರಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ತೆಕ್ಕಾರು ನಿವಾಸಿ ಎಸ್.ಬಿ.ಇಬ್ರಾಹಿಂ ಸಲ್ಲಿಸಿರುವ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದತಿ ಕೋರಿ ಹರೀಶ್ ಪೂಂಜಾ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಅವರ ಪರ ವಕೀಲರು ಮಂಗಳವಾರ ನ್ಯಾಯಮೂರ್ತಿ ವಿ.ಶ್ರೀಶಾನಂದ ನೇತೃತ್ವದ ಏಕಸದಸ್ಯ ರಜಾಕಾಲೀನ ಪೀಠಕ್ಕೆ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಇದು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ಅರ್ಜಿ ವಿಚಾರಣೆಯು ಈ ನ್ಯಾಯಪೀಠದ ವ್ಯಾಪ್ತಿಗೆ ಒಳಪಡುವುದಿಲ್ಲ' ಎಂಬುದನ್ನು ಮೌಖಿಕವಾಗಿ ವ್ಯಕ್ತಪಡಿಸಿದ್ದಲ್ಲದೆ ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟು ಅರ್ಜಿಯನ್ನು ಇದೇ 8ಕ್ಕೆ ವಿಚಾರಣೆಗೆ ಪಟ್ಟಿ ಮಾಡುವಂತೆ ರಿಜಿಸ್ಟ್ರಾರ್‌ಗೆ ಆದೇಶಿಸಿತು.
ಪ್ರಕರಣವೇನು?
'ಹರೀಶ್ ಪೂಂಜಾ ಅವರು ಮೇ 3ರಂದು ತೆಕ್ಕಾರುವಿನ ಭಟ್ರಬೈಲಿನಲ್ಲಿ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು, ತುಳು ಭಾಷೆಯಲ್ಲಿ ಮಾತನಾಡುತ್ತಾ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಕೋಮು ದ್ವೇಷ ಹರಡುವ ಭಾಷಣ ಮಾಡಿದ್ದರು. ಅವರ ಭಾಷಣದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆಯಾಗಿದೆ ಎಂದು ಆರೋಪಿಸಿ ತೆಕ್ಕಾರಿನ ಎಸ್.ಬಿ.ಇಬ್ರಾಹಿಂ ಎಂಬುವರು ಉಪ್ಪಿನಂಗಡಿ ಠಾಣೆಯಲ್ಲಿ ಮೇ 4ರಂದು ದೂರು ದಾಖಲಿಸಿದ್ದರು.
ಶಾಸಕ ಹರೀಶ್ ಪೂಂಜ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 196 (ಧರ್ಮದ ಆಧಾರದಲ್ಲಿ ದ್ವೇಷ ಹರಡುವುದು), 353(2) (ದ್ವೇಷ ಹರಡಲು ಸುಳ್ಳು ಸುದ್ದಿ ಹಂಚಿಕೆ) ಆರೋಪದಡಿ ಪ್ರಕರಣ ದಾಖಲಾಗಿತ್ತು.