ಸಂವಿಧಾನ ಬದಲಾವಣೆ ಹೇಳಿಕೆ | ಅಂತರ ಕಾಯ್ದುಕೊಂಡ ಬಿಜೆಪಿ:‌ ಹೆಗಡೆ ಕೈ ತಪ್ಪುತ್ತಾ ಟಿಕೆಟ್?
x
ಅನಂತಕುಮಾರ್‌ ಹೆಗಡೆ | ಫೋಟೋ:FB/AnantkumarHegde

ಸಂವಿಧಾನ ಬದಲಾವಣೆ ಹೇಳಿಕೆ | ಅಂತರ ಕಾಯ್ದುಕೊಂಡ ಬಿಜೆಪಿ:‌ ಹೆಗಡೆ ಕೈ ತಪ್ಪುತ್ತಾ ಟಿಕೆಟ್?

ಬಿಜೆಪಿಗೆ ರಾಜ್ಯಸಭೆ, ಲೋಕಸಭೆ ಮತ್ತು ರಾಜ್ಯ ಸರ್ಕಾರಗಳಲ್ಲಿ ಬಹುಮತ ಬಂದರೆ ಸಂವಿಧಾನ ಬದಲಿಸುವುದಾಗಿ ಹೇಳಿರುವ ಬಿಜೆಪಿ ಸಂಸದ ಅನಂತಕುಮಾರ್‌ ಹೆಗಡೆಯ ಹೇಳಿಕೆಯಿಂದ ಪಕ್ಷವು ಅಂತರ ಕಾಯ್ದುಕೊಂಡಿದೆ.


ಉತ್ತರಕನ್ನಡದ ಸಂಸದ ಅನಂತಕುಮಾರ್‌ ಹೆಗಡೆ ಅವರು ಮತ್ತೊಮ್ಮೆ ವಿವಾದದ ಸೃಷ್ಟಿಸಿದ್ದು, ತಮಗೆ (ಬಿಜೆಪಿ) ಲೋಕಸಭೆ, ರಾಜ್ಯಸಭೆ, ಹಾಗೂ ರಾಜ್ಯಸರ್ಕಾರಗಳಲ್ಲೂ 2/3 ಬಹುಮತ ಬಂದರೆ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿದ್ದಾರೆ. ಆದರೆ, ಈ ಹೇಳಿಕೆ ವಿಷಯದಲ್ಲಿ ರಾಜ್ಯ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, ಅದು ಅನಂತಕುಮಾರ್‌ ಅವರ ವೈಯಕ್ತಿಕ ನಿಲುವು ಎಂದು ಹೇಳಿದೆ.

ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಅನಂತ್‌ ಕುಮಾರ್‌ ಹೆಗಡೆ ಅವರು ಸಂವಿಧಾನ ಬದಲಾವಣೆ ಮಾಡುವುದಾಗಿ ನೀಡಿರುವ ಹೇಳಿಕೆಯು ರಾಷ್ಟ್ರ ರಾಜಕಾರಣದಲ್ಲೂ ತೀವ್ರ ಸದ್ದು ಉಂಟು ಮಾಡಿದ್ದು, ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ್‌ ಖರ್ಗೆ, ರಾಹುಲ್‌ ಗಾಂಧಿ, ಮಾಜಿ ಕೇಂದ್ರ ಗೃಹಸಚಿವ ಪಿ ಚಿದಂಬರಂ ಮೊದಲಾದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅವರ ಆಂತರಿಕ ಹುನ್ನಾರವನ್ನು ಹೆಗಡೆ ಬಹಿರಂಗವಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಪಕ್ಷಗಳು ವಾಗ್ದಾಳಿ ತೀವ್ರವಾಗುತ್ತಿದ್ದಂತೆ, ಅನಂತಕುಮಾರ್‌ ಹೆಗಡೆ ಅವರ ಹೇಳಿಕೆಯೊಂದಿಗೆ ಅಂತರ ಕಾಪಾಡಿಕೊಂಡಿರುವ ರಾಜ್ಯ ಬಿಜೆಪಿ, ಅವರಿಂದ ವಿವರಣೆ ಕೇಳುವುದಾಗಿ ಹೇಳಿ ಟ್ವೀಟ್‌ ಮಾಡಿದೆ. ಈ ಹೇಳಿಕೆಯೇ ಹೆಗಡೆಯವರಿಗೆ ಟಿಕೆಟ್‌ ಕೈ ತಪ್ಪಲು ಮುಖ್ಯ ಕಾರಣವಾಗಬಹುದು ಎಂದು ಹೇಳಲಾಗಿದೆ.

ಕ್ಷೇತ್ರದಲ್ಲಿ ಇತ್ತೀಚೆಗೆ ಸಕ್ರಿಯರಾಗಿದ್ದ ಹೆಗಡೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಲವು ಸಂಸದರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದ್ದು, ಕಳೆದ ಐದು ವರ್ಷಗಳಿಂದ ಹಿನ್ನೆಲೆಗೆ ಸರಿದಿದ್ದ ಹೆಗಡೆ ಅವರಿಗೆ ಕೂಡಾ ಈ ಬಾರಿ ಟಿಕೆಟ್‌ ಸಿಗುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು.

ಐದು ವರ್ಷಗಳ ಹಿಂದೆ ಪ್ರಧಾನಿ ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸುವ ಅವಕಾಶ, ಕೊನೇ ಕ್ಷಣದಲ್ಲಿ ಕೈತಪ್ಪಿದ ಬಳಿಕ ಬಿಜೆಪಿಯ ಫೈರ್‌ ಬ್ರಾಂಡ್‌ ನಾಯಕರೆಂದೇ ಹೆಸರಾಗಿದ್ದ ಹೆಗಡೆ, ದಿಢೀರನೇ ತೆರೆಮರೆಗೆ ಸರಿದಿದ್ದರು. ಆ ಬಳಿಕ ವೈಯಕ್ತಿಕವಾಗಿ ಅನಾರೋಗ್ಯದ ಕಾರಣದಿಂದ ಹಾಸಿಗೆ ಹಿಡಿದಿದ್ದರು. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಳೆದ ಮೂರ್ನಾಲ್ಕು ತಿಂಗಳಿಂದ ಸಾರ್ವಜನಿಕವಾಗಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.

ಈ ನಡುವೆ ತಮಗೆ ಟಿಕೆಟ್‌ ಇಲ್ಲ ಎಂಬ ವರದಿಗಳ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ಮತ್ತೆ ತಮ್ಮ ಎಂದಿನ ಉಗ್ರ ಹಿಂದುತ್ವದ ಹೇಳಿಕೆಗಳಿಗೆ ಮರಳಿರುವ ಹೆಗಡೆ, ಚುನಾವಣಾ ಪ್ರಚಾರವನ್ನೂ ಸದ್ದಿಲ್ಲದೇ ಮಾಡುತ್ತಾ ಬಂದಿದ್ದಾರೆ. ಆದರೆ, ಇದೀಗ, ಸಂವಿಧಾನ ಬದಲಾಯಿಸುವ ಬಗ್ಗೆ ಬಹಿರಂಗವಾಗಿ ಮಾತನಾಡಿರುವುದು ಕೂಡಾ ವಿವಾದ ಸೃಷ್ಟಿಸಿ ಗಮನ ಸೆಳೆಯುವ ಉದ್ದೇಶದಿಂದ ಎಂದು ಸ್ಥಳೀಯ ಬಿಜೆಪಿ ಮೂಲಗಳು ಹೇಳಿವೆ.

ಅನಂತಕುಮಾರ್‌ ಹೆಗಡೆ ಹೇಳಿದ್ದೇನು?

“ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ 400 ಕ್ಕೂ ಹೆಚ್ಚು ಸೀಟುಗಳನ್ನು ಕೇಳಿದ್ದಾರೆ. ಯಾಕೆ ಈ ಬಾರಿ ನಿರ್ದಿಷ್ಟವಾಗಿ 400 ಸೀಟುಗಳನ್ನು ಕೇಳಿದ್ದಾರೆಂದರೆ, ನಮಗೆ (ಬಿಜೆಪಿ) ಲೋಕಸಭೆಯಲ್ಲಿ 2/3 ಬಹುಮತ ಇದೆ. ರಾಜ್ಯಸಭೆಯಲ್ಲಿ 2/3 ಬಹುಮತ ಇಲ್ಲ, ಅಲ್ಪ ಬಹುಮತ ಇದೆ. ರಾಜ್ಯ ಸರ್ಕಾರಗಳಲ್ಲಿ ನಮಗೆ ಬೇಕಾದ ಬಹುಮತ ಇಲ್ಲ. ಸಂವಿಧಾನವನ್ನು ಮೂಲಭೂತವಾಗಿ ಬದಲಾಗಬೇಕೆಂದರೆ ಈ ಬಹುಮತ ಬೇಕಿದೆ”

“ಕಾಂಗ್ರೆಸ್‌ ನವರು ಸಂವಿಧಾನದಲ್ಲಿ ಬೇಡದ್ದನ್ನು ಎಲ್ಲಾ ತುರುಕಿಸಿದ್ದಾರೆ. ಹಿಂದೂ ಸಮಾಜವನ್ನು ದಮನಿಸುವಂತಹ ಕಾನೂನನ್ನು ತರಲಾಗಿದೆ. ಇದೆಲ್ಲವನ್ನು ಬದಲಾಯಿಸಬೇಕಿದ್ದರೆ, ನಮಗೆ ಈ ಬಹುಮತ ಬೇಕಿದೆ. ರಾಜ್ಯಸಭೆಯಲ್ಲಿ ಮೊನ್ನೆ ರಾಜ್ಯದಿಂದ 3 ಕಾಂಗ್ರೆಸ್‌ನವರು ಕೂಡಾ ಗೆದ್ದಿದ್ದಾರೆ. ಲೋಕಸಭೆಯಲ್ಲಿ ನಾವು ಏನೇ ತಿದ್ದುಪಡಿ ಮಾಡಿದ್ದರು ಕಾಂಗ್ರೆಸ್‌ ನವರ ಸಂಖ್ಯೆ ಜಾಸ್ತಿಯಾದರೆ ರಾಜ್ಯಸಭೆಯಲ್ಲಿ ಅದು ಪಾಸ್‌ ಆಗುವುದಿಲ್ಲ”

“ಸಿಎಎ ಕಾನೂನು ಲೋಕಸಭೆಯಲ್ಲೂ ಪಾಸ್‌ ಆಗಿದೆ, ರಾಜ್ಯಸಭೆಯಲ್ಲಿ ಕಷ್ಟದಿಂದ ಪಾಸ್‌ ಆಗಿದೆ. ಆದರೆ, ರಾಜ್ಯಸರ್ಕಾರಗಳಿಂದ ಅದಕ್ಕೆ ಒಪ್ಪಿಗೆ ಬರಲೇ ಇಲ್ಲ. ಅದನ್ನು ಜಾರಿಗೆ ತರಬೇಕಿದೆ. ಇಲ್ಲದಿದ್ದರೆ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತದೆ. ಇಲ್ಲದಿದ್ದರೆ, ದೇಶದ್ರೋಹಿಗಳ ಆಡಂಬರವಾಗುತ್ತದೆ. ನಮಗೆ 20 ರಾಜ್ಯಗಳಲ್ಲಿ ಅಧಿಕಾರ ಸಿಕ್ಕಿದರೆ ರಾಜ್ಯ ಸರ್ಕಾರಗಳಲ್ಲೂ 2/3 ಬಹುಮತ ಸಿಕ್ಕಿದಂತಾಗುತ್ತದೆ. ಒಂದು ವೇಳೆ, ರಾಜ್ಯಸಭೆ, ಲೋಕಸಭೆ, ರಾಜ್ಯ ಸರ್ಕಾರಗಳಲ್ಲಿ ನಮಗೆ ಬಹುಮತ ಬಂದರೆ ಮುಂದೆ ಮಾರಿ ಜಾತ್ರೆ ಇದೆ. ಹಾಗಾಗಿ, ಪ್ರತಿಯೊಂದು ಸೀಟು ಕೂಡಾ ಅನಿವಾರ್ಯ” ಎಂದು ಅನಂತಕುಮಾರ್‌ ಹೆಗಡೆ ಅವರು ಹೇಳಿದ್ದಾರೆ.

ಹೆಗಡೆ ಉಚ್ಛಾಟನೆಗೆ ಆಗ್ರಹ

ಸಂವಿಧಾನವನ್ನು ಬದಲಾಯಿಸುವ ಅನಂತಕುಮಾರ ಹೆಗಡೆ ಅವರ ಹೇಳಿಕೆ ವೈಯಕ್ತಿಕ ಅಲ್ಲ, ಅದು ಆರ್‌ಎಸ್‌ಎಸ್‌-ಬಿಜೆಪಿಯ ಗುಪ್ತ ಅಜೆಂಡಾ ಎಂದು ಕಾಂಗ್ರೆಸ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

400 ಸೀಟ್ ಬಂದರೆ ಸಂವಿಧಾನ ಬದಲಿಸುತ್ತೇವೆ ಎನ್ನುವುದು ವಯಕ್ತಿಕ ಹೇಳಿಕೆಯಲ್ಲ, ಬಿಜೆಪಿ ಹಾಗೂ RSS ನವರ ಗುಪ್ತ ಅಜೆಂಡಾ ಎನ್ನುವುದು ಸ್ಪಷ್ಟ. ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ, ಗೌರವ ಇರುವುದೇ ಆದರೆ ಶೋಕಾಸ್ ನೋಟಿಸ್ ನೀಡುವ ಬದಲು ಕೂಡಲೇ ಪಕ್ಷದಿಂದ ಉಚ್ಚಾಟನೆ ಮಾಡುತ್ತಿತ್ತು. ನಿಜವಾಗಿಯೂ ಸಂವಿಧಾನದ ಮೇಲೆ ಕಾಳಜಿ ಇದ್ದರೆ ಕೂಡಲೇ ಅನಂತ್ ಕುಮಾರ್ ಹೆಗಡೆಯನ್ನು ಉಚ್ಚಾಟಿಸಲಿ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

“ಸಂವಿಧಾನ ಬದಲಿಸಲು 400 ಸ್ಥಾನಗಳು ಬೇಕು ಎಂಬ ಬಿಜೆಪಿ ಸಂಸದರ ಹೇಳಿಕೆ ನರೇಂದ್ರ ಮೋದಿ ಮತ್ತು ಅವರ ‘ಸಂಘ ಪರಿವಾರʼದ ಗುಪ್ತ ಉದ್ದೇಶಗಳ ಬಹಿರಂಗ ಘೋಷಣೆಯಾಗಿದೆ. ಬಾಬಾ ಸಾಹೇಬರ ಸಂವಿಧಾನವನ್ನು ನಾಶ ಮಾಡುವುದೇ ನರೇಂದ್ರ ಮೋದಿ ಮತ್ತು ಬಿಜೆಪಿಯ ಅಂತಿಮ ಗುರಿ” ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಪಕ್ಷದ ವರಿಷ್ಠರ ಬೆಂಬಲ ಇಲ್ಲದೆ ಅನಂತಕುಮಾರ ಹೆಗಡೆಯಂತಹ ಸಂಸದನೊಬ್ಬ ಈ ರೀತಿ ನಿರ್ಭೀತಿಯಿಂದ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ʼಸಂವಿಧಾನಕ್ಕೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಅನಂತ್ ಕುಮಾರ್ ಹೆಗಡೆ, ಅದೇ ಸಂವಿಧಾನದ ವಿರುದ್ಧ ಹೇಳಿಕೆ ನೀಡಿರುವುದು ಶಿಕ್ಷಾರ್ಹ ಅಪರಾಧ. ಕೂಡಲೇ ಹೆಗಡೆ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅವರನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಅಂತರ ಕಾಯ್ದುಕೊಂಡ ಬಿಜೆಪಿ

ಈ ಹಿಂದೆಯೂ ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಸದ ಅನಂತಕುಮಾರ ಹೆಗಡೆ ಅವರ ಇತ್ತೀಚಿನ ಹೇಳಿಕೆಗಳಿಂದ ಬಿಜೆಪಿಯು ಅಂತರ ಕಾಯ್ದುಕೊಂಡಿದೆ.

ಭಾರತದ ಸಂವಿಧಾನದ ಬಗ್ಗೆ ಅನಂತ್ ಕುಮಾರ್ ಹೆಗಡೆ ಅವರು ನೀಡಿರುವ ಹೇಳಿಕೆಗೂ ಭಾರತೀಯ ಜನತಾ ಪಕ್ಷದ ಅಧಿಕೃತ ನಿಲುವಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಪಕ್ಷದ ನಾಯಕ ಆರ್‌. ಅಶೋಕ್ ಹೇಳಿದ್ದಾರೆ.

ಹೆಗಡೆ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಟ್ವೀಟ್‌ ಮಾಡಿರುವ ಅವರು, “ಭಾರತೀಯ ಜನತಾ ಪಕ್ಷಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನ ಎಂದರೆ ಕೇವಲ ಒಂದು ಗ್ರಂಥವಲ್ಲ. ಸಂವಿಧಾನ ಅಂದರೆ ನಮ್ಮ ದೇಶದ ಸ್ವಾತಂತ್ಯಕ್ಕಾಗಿ ಹೋರಾಡಿದ, ಬಲಿದಾನಗೈದ ಅಸಂಖ್ಯಾತ ಮಹನೀಯರ ತ್ಯಾಗದ ದ್ಯೋತಕ, ಆಶಯಗಳ ಪ್ರತೀಕ. ಸಂವಿಧಾನಕ್ಕೆ ಅಪಚಾರ ಮಾಡುವ ಅಥವಾ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕೆಲಸವನ್ನ ಬಿಜೆಪಿ ಈ ಹಿಂದೆಯೂ ಮಾಡಿಲ್ಲ, ಮುಂದೆಂದಿಗೂ ಮಾಡುವುದೂ ಇಲ್ಲ. ಅಷ್ಟೇ ಅಲ್ಲ ಅಂತಹ ಮಾತು ಆಡುವುದನ್ನು ಸಹಿಸುವುದೂ ಇಲ್ಲ” ಎಂದು ಬರೆದಿದ್ದಾರೆ.

ಹೆಗಡೆಗೆ ದುಬಾರಿಯಾಗಲಿದೆಯಾ ಈ ಬಾರಿಯ ವಿವಾದ?

ಸದಾ ವಿವಾದಾತ್ಮಕ ಭಾಷಣಗಳಿಂದ ಹೆಚ್ಚು ಸುದ್ದಿಗೆ ಬರುವ ಅನಂತಕುಮಾರ್‌ ಹೆಗಡೆ ಅವರಿಗೆ ಸಂವಿಧಾನ ಬದಲಾವಣೆಯ ಹೇಳಿಕೆಗಳು ದುಬಾರಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಕ್ಷೇತ್ರದಲ್ಲಿ ಸಕ್ರಿಯರಿಲ್ಲದ ಕಾರಣ ಅವರ ಬದಲು ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿಯಲ್ಲಿ ಒತ್ತಡ ಕೇಳಿ ಬರುತ್ತಿರುವುದರ ನಡುವೆಯೇ ಈ ವಿವಾದಾತ್ಮಕ ಹೇಳಿಕೆಯು ಹೊರ ಬಿದ್ದಿದೆ. ಈಗಾಗಲೇ, ಹೆಗಡೆ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಪಕ್ಷವು ಟಿಕೆಟ್‌ ನೀಡುವ ಸಾಧ್ಯತೆ ಇಲ್ಲ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

ಬಿಜೆಪಿಯ 195 ಸ್ಥಾನಗಳ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಮೇಶ್ ಬಿಧುರಿ ಮತ್ತು ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮತ್ತು ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಹಲವಾರು ಸಂಸದರನ್ನು ಬದಲಾಯಿಸಲಾಗಿದೆ. ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ನಾಯಕತ್ವವನ್ನು ಮುಜುಗರಕ್ಕೀಡು ಮಾಡಿದ ಅಭ್ಯರ್ಥಿಗಳನ್ನು ಪಕ್ಷವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅವರಿಗೆ ಟಿಕೆಟ್ ನಿರಾಕರಣೆ ಮಾಡಿ ಸಾರ್ವಜನಿಕ ಜೀವನದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಸಂದೇಶವನ್ನು ರವಾನಿಸುತ್ತಿದೆ. ಈ ಹಿಂದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ಪ್ರಧಾನಿ ಹಲವು ಸಂದರ್ಭಗಳಲ್ಲಿ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದರು ಎಂದು ಪಕ್ಷದ ದೆಹಲಿ ಮೂಲವೊಂದು ತಿಳಿಸಿದೆ. ಅದಾಗ್ಯೂ, ಹೆಗಡೆಗೆ ಟಿಕೆಟ್‌ ನೀಡಿದರೆ, ಬಿಜೆಪಿ ವಿರುದ್ಧ ಹೆಗಡೆ ಹೇಳಿಕೆಯನ್ನೇ ವಿಪಕ್ಷಗಳು ಆಯುಧವಾಗಿ ಬಳಸುವ ಸಾಧ್ಯತೆ ಇದೆ.

ಅದಾಗ್ಯೂ, ಹೆಗಡೆ ಅವರು ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ, ಶೀಘ್ರದಲ್ಲೇ ಪಟ್ಟಿ ಹೊರಬೀಳುವ ನಿರೀಕ್ಷೆಯಿದೆ.

Read More
Next Story