ಪ್ರಲ್ಹಾದ ಜೋಶಿ ಸಹೋದರನ ವಂಚನೆ ಪ್ರಕರಣ; ವಿವರಣೆ ಕೇಳಿದ ಬಿಜೆಪಿ ವರಿಷ್ಠರು
x

ಪ್ರಲ್ಹಾದ ಜೋಶಿ ಸಹೋದರನ ವಂಚನೆ ಪ್ರಕರಣ; ವಿವರಣೆ ಕೇಳಿದ ಬಿಜೆಪಿ ವರಿಷ್ಠರು

ವಾಲ್ಮೀಕಿ ಹಾಗೂ ಮುಡಾ ಹಗರಣಗಳ ವಿರುದ್ದ ಬಿಜೆಪಿ ಹೋರಾಟ ನಡೆಸುತ್ತಿದೆ. ಹೀಗಿರುವಾಗ ಬಿಜೆಪಿ ಪ್ರಭಾವಿ ನಾಯಕರ ಕುಟುಂಬದ ವಿರುದ್ಧ ಆರೋಪ ಕೇಳಿ ಬಂದಿರುವುದು ಸರಿಯಲ್ಲ. ಭ್ರಷ್ಟಾಚಾರ ವಿರುದ್ಧದ ನಮ್ಮ ಹೋರಾಟಕ್ಕೆ ಇಂತಹ ಪ್ರಕರಣಗಳು ತಿರುಗುಬಾಣವಾಗಲಿವೆ ಎಂದು ಬಿಜೆಪಿ ವರಿಷ್ಠರು ಆತಂಕ ವ್ಯಕ್ತಪಡಿಸಿದ್ದಾರೆ.


ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸುವ ಆಮಿಷ ತೋರಿ 2 ಕೋಟಿ ರೂ. ವಂಚಿಸಿದ್ದ ಆರೋಪದಡಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹೋದರ ಗೋಪಾಲ್‌ ಜೋಶಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದು ಬಿಜೆಪಿಗೆ ಮುಜುಗರ ತಂದೊಡ್ಡಿದೆ.

ವಂಚನೆ ಪ್ರಕರಣದ ಕುರಿತು ಪ್ರಲ್ಹಾದ ಜೋಶಿ ಅವರಿಂದ ಬಿಜೆಪಿ ವರಿಷ್ಠರು ವಿವರಣೆ ಕೇಳಿರುವುದಾಗಿ ಮೂಲಗಳು ತಿಳಿಸಿವೆ.

ವಾಲ್ಮೀಕಿ ಹಾಗೂ ಮುಡಾ ಹಗರಣಗಳ ವಿರುದ್ದ ಬಿಜೆಪಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದೆ. ಹೀಗಿರುವಾಗ ಬಿಜೆಪಿ ಪ್ರಭಾವಿ ನಾಯಕರ ಕುಟುಂಬದ ವಿರುದ್ಧ ಆರೋಪ ಕೇಳಿ ಬಂದಿರುವುದು ಸರಿಯಲ್ಲ. ಭ್ರಷ್ಟಾಚಾರ ವಿರುದ್ಧದ ನಮ್ಮ ಹೋರಾಟಕ್ಕೆ ಇಂತಹ ಪ್ರಕರಣಗಳು ತಿರುಗುಬಾಣವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಬಿಜೆಪಿ ನಾಯಕರೇ ಹಗರಣಗಳಲ್ಲಿ ಸಿಲುಕಿ ಸುದ್ದಿಯಾಗುತ್ತಿರುವುದು ಸಹಿಸಲಾಗದು ಎಂದು ವರಿಷ್ಠರು ಅಸಮಾಧಾನ ಹೊರಹಾಕಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ ಜನರ ಮನಸ್ಸಿನಿಂದ ದೂರವಾಗಿಲ್ಲ. ಆಗಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುಟುಂಬದ ವಿರುದ್ದ ಆರೋಪ ಕೇಳಿ ಬಂದಿದೆ. ಇದರಿಂದ ಪಕ್ಷದ ಹೋರಾಟಕ್ಕೆ ಹಿನ್ನೆಡೆಯಾಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರ ಜಾರ್ಖಂಡ್ ವಿಧಾನಸಭೆಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಕಾಂಗ್ರೆಸ್ ಆಡಳಿತದ ಹುಳುಕುಗಳನ್ನು ಚುನಾವಣೆಯಲ್ಲಿ ಪ್ರಸ್ತಾಪಿಸಲು ಪಕ್ಷ ಸಿದ್ಧತೆ ನಡೆಸಿತ್ತು. ಆದರೆ, ಈಗ ಪ್ರಲ್ಹಾದ ಜೋಶಿ ಕುಟುಂಬದ ಪ್ರಕರಣದಿಂದ ಸ್ವಲ್ಪ ಹಿನ್ನಡೆಯಾಗಿರುವುದು ನಿಜ. ಪ್ರತಿಪಕ್ಷಗಳಿಗೆ ಇದೇ ಚುನಾವಣಾ ಅಸ್ತ್ರ ಆಗುವ ಸಾಧ್ಯತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳಂಕ ಅಂಟಿಸುವ ವಿಫಲ ಪ್ರಯತ್ನ

ಪ್ರಲ್ಹಾದ ಜೋಶಿ ಕುಟುಂಬದ ವಿರುದ್ಧ ಕೇಳಿಬಂದಿರುವ ಆರೋಪ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಜೋಶಿ ಅವರಿಗೆ ಸಂಬಂಧಪಡದ ಪ್ರಕರಣದಲ್ಲಿ ಅವರ ಹೆಸರನ್ನು ಥಳುಕು ಹಾಕಿರುವುದು ಕಾಂಗ್ರೆಸ್ಸಿಗರು ವಿಕೃತ ಮನಸ್ಸಿಗೆ ಸಾಕ್ಷಿಯಾಗಿದೆ. ಸಚಿವ ದಿನೇಶ್‌ ಗುಂಡೂರಾವ್ ಅವರು ಅಸಂಬದ್ಧವಾಗಿ ಜೋಶಿ ಅವರು ರಾಜೀನಾಮೆಗೆ ಒತ್ತಾಯಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಆರೋಪಿತ ಗೋಪಾಲ ಜೋಷಿ ಅವರೊಂದಿಗೆ ಕಳೆದ 32 ವರ್ಷಗಳಿಂದಲೂ ಸಂಪರ್ಕ ಕಡಿದುಕೊಂಡು ಯಾರೊಂದಿಗೂ ತಮ್ಮ ಸಂಬಂಧ ಬೆರೆಸದಂತೆ ಪ್ರಲ್ಹಾದ್ ಜೋಶಿ ಅವರು ನ್ಯಾಯಾಲಯದಲ್ಲಿ 2013ರಲ್ಲೇ ತಡೆಯಾಜ್ಞೆ ತಂದಿದ್ದಾರೆ. ಅಲ್ಲದೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ವಿವರವಾಗಿ ಸ್ಪಷ್ಟಪಡಿಸಿದ್ದಾರೆ. ಇಷ್ಟಾಗಿಯೂ ಮುಡಾ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಂತೆ ಹತ್ತು ಹಲವು ಹಗರಣಗಳಲ್ಲಿ ಸಿಲುಕಿ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಹಾಗೂ ಇತರ ಮಂತ್ರಿಗಳು ನೈತಿಕತೆ ಗಾಳಿಗೆ ತೂರಿ ತಮ್ಮ ಸ್ಥಾನಗಳಿಗೆ ಭಂಡತನದಿಂದ ಅಂಟಿ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹತಾಶೆಯ ಅಂಚಿಗೆ ತಲುಪಿರುವ ಕಾಂಗ್ರೆಸ್ಸಿಗರು ಜೋಶಿ ಅವರ ವಿಚಾರದಲ್ಲಿ ‘ಮೊಸರಿನಲ್ಲಿ ಕಲ್ಲು ಹುಡುಕಲು ಹೊರಟಿದ್ದಾರೆ'. ಜೋಶಿ ಅವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಮಸಿ ಅಂಟಿಸಿಕೊಂಡವರಲ್ಲ. ಅವರ ಸಾಮರ್ಥ್ಯ ಹಾಗೂ ಅನುಭವ ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟದಲ್ಲಿ ಮಹತ್ವದ ಸ್ಥಾನ ನೀಡಿದ್ದಾರೆ. ಇದನ್ನು ಸಹಿಸದ ಕೆಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಜೋಶಿ ಅವರಿಗೆ ಕಳಂಕ ಅಂಟಿಸುವ ವಿಫಲ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಆಧಾರ ರಹಿತ ಆರೋಪಗಳಿಂದ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತರಬಹುದು ಎಂದು ಕಾಂಗ್ರೆಸ್ಸಿಗರು ಅಂದುಕೊಂಡಿದ್ದರೆ ಅದು ಕೇವಲ ಅವರ ಭ್ರಮೆ ಅಷ್ಟೇ ಎಂದು ಕಿಡಿಕಾರಿದ್ದಾರೆ.

ಆರೋಪಿ ಗೋಪಾಲ ಜೋಶಿ ಬಂಧನ

ಲೋಕಸಭೆ ಚುನಾವಣೆ ಟಿಕೆಟ್‌ ಆಮಿಷ ತೋರಿ ಮಾಜಿ ಶಾಸಕರಿಂದ 2 ಕೋಟಿ ಹಣ ಪಡೆದು ವಂಚಿಸಿದ ಆರೋಪ ಹೊತ್ತಿರುವ ಗೋಪಾಲ್‌ ಜೋಶಿಯನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ನಾಗಠಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ ಫೂಲ್‌ ಸಿಂಗ್‌ ಚವ್ಹಾಣ್‌ ಅವರಿಂದ 2 ಕೋಟಿ ರೂ. ಪಡೆದು ಗೋಪಾಲ್‌ ಜೋಶಿ ವಂಚಿಸಿದ್ದ ಕುರಿತು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿತ್ತು. ಗೋಪಾಲ್‌ ಜೋಶಿ ನಾಪತ್ತೆಯಾಗಿದ್ದರು. ಶನಿವಾರ ಮಧ್ಯಾಹ್ನ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ನಾಲ್ವರನ್ನು ಈವರೆಗೆ ಬಂಧಿಸಲಾಗಿದೆ.

Read More
Next Story