
ಬಿಜೆಪಿ ನಾಯಕರತ್ತ ಫೋಕಸ್ ಆಗದ ಕ್ಯಾಮೆರಾ: ವಿಧಾನಸಭೆಲ್ಲಿ ಪ್ರತಿಪಕ್ಷ ತರಾಟೆ
ಇವರು (ಬಿಜೆಪಿ) ಸಂಸತ್ತಿನಲ್ಲಿ ಏನು ಮಾಡಿದ್ದಾರೆ, ನೋಡಿಕೊಳ್ಳಲಿ. ಇವರು ಹಿಂದೆ ಮಾಡಿದ ವ್ಯವಸ್ಥೆ ಈಗಲೂ ಮುಂದುವರಿದಿದೆ. ನಾವೇನೂ ಹೊಸದಾಗಿ ಏನೂ ಮಾಡಿಲ್ಲ ಎಂದ ಪ್ರಿಯಾಂಕ್ ಖರ್ಗೆ.
ವಿಧಾನಸಭೆಯ ಕಲಾಪಗಳ ನೇರ ಪ್ರಸಾರದಲ್ಲಿ ವಿಪಕ್ಷ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಹಾಗೂ ಅವರತ್ತ ಕ್ಯಾಮೆರಾಗಳನ್ನು ಫೋಕಸ್ ಮಾಡುತ್ತಿಲ್ಲ ಎಂಬ ವಿಚಾರ ವಿಧಾನಸಭೆ ಯಲ್ಲಿ ಮಂಗಳವಾರ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಯಿತು.
ಇದು ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣಕ್ಕೆ ಕಾರಣವಾಗಿ ಸದನವನ್ನು ಸ್ವಲ್ಪ ಕಾಲ ಮುಂದೂಡುವಂತಾಯಿತು.
ಪ್ರಶ್ನೋತ್ತರ, ಶೂನ್ಯ ವೇಳೆ ಕಲಾಪಗಳು ಮುಗಿದ ನಂತರ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕನ್ನಡದ ನಾಶವಾಗುತ್ತಿದೆ ಎಂಬ ವಿಷಯದ ಬಗ್ಗೆ ನಿಲುವಳಿ ಸೂಚನೆಯಡಿ ಪೂರ್ವಭಾವಿ ಪ್ರಸ್ತಾಪ ಮಾಡುತ್ತಿದ್ದ ಸಂದರ್ಭದಲ್ಲಿ ಎದ್ದುನಿಂತ ಬಿಜೆಪಿಯ ಉಪನಾಯಕ ಅರವಿಂದ ಬೆಲ್ಲದ್ ಅವರು ಕಲಾಪದ ನೇರ ಪ್ರಸಾರದಲ್ಲಿ ಪ್ರತಿಪಕ್ಷದ ಸದಸ್ಯರನ್ನು ಕಡೆಗಣಿಸಲಾಗಿದೆ. ಪ್ರತಿಪಕ್ಷ ನಾಯಕರು ಮಾತನಾಡುತ್ತಿದ್ದರೂ ನೇರ ಪ್ರಸಾರದಲ್ಲಿ ಅವರನ್ನು ತೋರಿಸುತ್ತಿಲ್ಲ. ಇದು ಸರಿಯಲ್ಲ. ನಿನ್ನೆ ಕಲಾಪ ಸಲಹಾ ಸಮಿತಿ ಸಭೆಯಲ್ಲೂ ಇದನ್ನು ಹೇಳಿದ್ದೇವೆ. ಆದರೂ ಪ್ರತಿಪಕ್ಷ ಸದಸ್ಯರ ವಿರುದ್ಧ ಸರ್ಕಾರದ ಈ ಧೋರಣೆ ಸರಿಯಿಲ್ಲ ಎಂದು ಏರುದನಿಯಲ್ಲಿ ಹೇಳಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತಿಪಕ್ಷದ ಸದಸ್ಯರುಗಳನ್ನು ನೇರ ಪ್ರಸಾರದ ಸಂದರ್ಭದಲ್ಲಿ ತೋರಿಸದೆ ಅಪಚಾರ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಸರಿಪಡಿಸಿ ಎಂದು ಒತ್ತಾಯಿಸಿದರು.
ಈ ಹಂತದಲ್ಲಿ ಮತ್ತೆ ಮಾತನಾಡಿದ ಬಿಜೆಪಿಯ ಅರವಿಂದ ಬೆಲ್ಲದ್ ಅವರು ಈ ಮೊದಲು ನೇರ ಪ್ರಸಾರವನ್ನು ವಾರ್ತಾ ಇಲಾಖೆಗೆ ವಹಿಸಲಾಗಿತ್ತು. ಈಗ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ನೀಡಲಾಗಿದೆ ಎಂಬ ಮಾಹಿತಿ ಇದೆ. ಇದು ಸರಿಯಲ್ಲ ಎಂದು ಹೇಳಿದಾಗ ಆಡಳಿತ ಪಕ್ಷದ ಸದಸ್ಯರೆಲ್ಲಾ ಎದ್ದುನಿಂತು ಅರವಿಂದ ಬೆಲ್ಲದ್ ಮಾತಿಗೆ ವಿರೋಧ ವ್ಯಕ್ತಪಡಿಸಿದರು. ಆಗ ಸದನದಲ್ಲಿ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳು ನಡೆದು ಗದ್ದಲದ ವಾತಾವರಣ ರೂಪುಗೊಂಡಿತು.
ಸಂಸತ್ತಿನಲ್ಲಿ ಬಿಜೆಪಿ ಏನು ಮಾಡಿದ್ದಾರೆ?
ಈ ಗದ್ದಲದಲ್ಲೇ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ , "ಇವರು (ಬಿಜೆಪಿ) ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಸಂಸತ್ತಿನಲ್ಲಿ ಏನು ಮಾಡಿದ್ದಾರೆ, ನೋಡಿಕೊಳ್ಳಲಿ. ಇವರು ಹಿಂದೆ ಮಾಡಿದ ವ್ಯವಸ್ಥೆ ಈಗಲೂ ಮುಂದುವರಿದಿದೆ. ನಾವೇನೂ ಹೊಸದಾಗಿ ಏನೂ ಮಾಡಿಲ್ಲ," ಎಂದು ವಿಪಕ್ಷ ಸದಸ್ಯರಿಗೆ ತಿರುಗೇಟು ಕೊಟ್ಟರು.
ಆಗ ಎದ್ದುನಿಂತ ಅರವಿಂದ ಬೆಲ್ಲದ್ ಅವರು, ಕಲಾಪ ಸಂದರ್ಭದಲ್ಲಿ ಕೆಲ ಸಚಿವರು ಅನಾವಶ್ಯಕವಾಗಿ ಮಾತನಾಡುತ್ತಾರೆ. ಅದನ್ನು ನಿಲ್ಲಿಸಿ, ಕಲಾಪದ ನೇರ ಪ್ರಸಾರದ ವ್ಯವಸ್ಥೆಯಲ್ಲಿ ಪ್ರತಿಪಕ್ಷದ ಸದಸ್ಯರನ್ನು ತೋರಿಸಿ ಎಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು. ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ ತಾರಕಕ್ಕೇರಿತು.
ಸಭಾಧ್ಯಕ್ಷ ಯು.ಟಿ. ಖಾದರ್ ಅವರು, "ತಾಂತ್ರಿಕವಾಗಿ ಏನು ಸಮಸ್ಯೆ ಇದೆ ಎಂಬುದನ್ನು ಗಮನಿಸಿ ಎಲ್ಲವನ್ನು ಸರಿಪಡಿಸುತ್ತೇನೆ," ಎಂದು ಸಮಾಧಾನ ಪಡಿಸಲು ಮುಂದಾದರಾದರೂ ವಿಪಕ್ಷ ಸದಸ್ಯರು ಈಗಲೇ ಎಲ್ಲವನ್ನು ಸರಿಪಡಿಸಿ, ಈ ರೀತಿ ವಿಪಕ್ಷ ಸದಸ್ಯರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಏರು ದನಿಯಲ್ಲಿ ಹೇಳಿದರು.
ಆಗ ಬಿಜೆಪಿಯ ಸುನೀಲ್‌ಕುಮಾರ್ ಅವರು, "ನಟ್ಟು ಬೋಲ್ಟ್ ಎಲ್ಲಿ ಲೂಸಾಗಿದೆ ನೋಡಿ," (ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಸಂದರ್ಭದಲ್ಲಿ ಚಿತ್ರೋದ್ಯಮದವರು ಸಹಕರಿಸುತ್ತಿಲ್ಲ ಎಂಬರ್ಥದಲ್ಲಿ ಮಾತನಾಡಿ, ನಟ್ಟು, ಬೋಲ್ಟು ಸರಿ ಮಾಡಲು ಗೊತ್ತಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು) ಎಂದಾಗ ಕಾಂಗ್ರೆಸ್‌ನ ನಾರಾಯಣಸ್ವಾಮಿ ಅವರು ವಿಪಕ್ಷ ಸದಸ್ಯರ ನಟ್ಟು ಬೋಲ್ಟ್ ಲೂಸಾಗಿದೆ ಎಂದು ಹೇಳಿದ್ದು ಮತ್ತೆ ಮಾತಿನ ಚಕಮಕಿ, ವಾಕ್ಸಮರಕ್ಕೆ ಕಾರಣವಾಯಿತು.
ಆಗ ಸದನದ ಗದ್ದಲವನ್ನು ನಿಯಂತ್ರಿಸಲು ಮುಂದಾದ ವಿಧಾನಸಭಾಧ್ಯಕ್ಷರು ,"ಎಲ್ಲರೂ ಕುಳಿತುಕೊಳ್ಳಿ, ನಾನು ಸರಿಪಡಿಸುತ್ತೇನೆ," ಎಂದು ಹಲವು ಬಾರಿ ಹೇಳಿದರಾದರೂ ಸದಸ್ಯರು ಅದಕ್ಕೆ ಕಿವಿಗೊಡದೆ ಆರೋಪ-ಪ್ರತ್ಯಾರೋಪಗಳಲ್ಲಿ ನಿರತರಾಗಿಯೇ ಇದ್ದರು.
ಆಗ ಪ್ರತಿಪಕ್ಷ ನಾಯಕ ಆರ್. ಅಶೋಕ್ ಎದ್ದು ನಿಂತು, " ಈ ರೀತಿ ಪ್ರತಿಪಕ್ಷ ಸದಸ್ಯರನ್ನು ಕಡೆಗಣಿಸುವುದು ಸರಿಯಲ್ಲ. ಮಾಧ್ಯಮದವರು ಇದ್ದಾರೆ, ಎಲ್ಲರೂ ಇದ್ದಾರೆ, ನಮಗೂ ಮಾತನಾಡುವ ಜವಾಬ್ದಾರಿ ಇದೆ. ಈ ರೀತಿ ಸರ್ಕಾರ ನಡೆದಕೊಳ್ಳುವುದು ಸರಿಯಲ್ಲ," ಎಂದಾಗ ಕಾಂಗ್ರೆಸ್‌ನ ಶಿವಲಿಂಗೇಗೌಡ ಎದ್ದುನಿಂತು ನೀವು ಹಿಂದೆ ಈ ರೀತಿ ಮಾಡಿದ್ದೀರಿ ಎಂದು ಹೇಳಿದ್ದು ಪ್ರತಿಪಕ್ಷ ಸದಸ್ಯರನ್ನು ಕೆರಳಿಸಿತು. ಆಗ ಮತ್ತೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಆಗ ಸಭಾಧ್ಯಕ್ಷರು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.