
ಕೊಲೆ ಯತ್ನ ಆರೋಪ: ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ
ರಶೀದ್ ಮುತ್ಯಾ ಅವರನ್ನು ಗ್ರಾಮದಿಂದ ಗಡಿಪಾರು ಮಾಡಬೇಕು ಹಾಗೂ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಗುರುವಾರ ಸಂಜೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದರು.
ಹಲ್ಲೆ ಹಾಗೂ ಕೊಲೆ ಯತ್ನದ ಆರೋಪದ ಮೇರೆಗೆ ಚಿತ್ತಾಪುರ ಕ್ಷೇತ್ರದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರನ್ನು ಜೇವರ್ಗಿ ತಾಲೂಕಿನ ನೆಲೋಗಿ ಠಾಣೆ ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ. ಅಫಜಲಪುರ ತಾಲೂಕಿನ ಶಿರವಾಳ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ರಾಠೋಡ್ ಅವರನ್ನು ವಶಕ್ಕೆ ಪಡೆದು ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಾಟಿ ವೈದ್ಯರಾಗಿರುವ ರಶೀದ್ ದಸ್ತಗೀರ್ ಇನಾಮದಾರ (ರಶೀದ್ ಮುತ್ಯಾ) ಅವರು ದೇವರ ಹೆಸರಿನಲ್ಲಿ ಅಮಾಯಕ ಜನರನ್ನು ವಂಚಿಸುತ್ತಿದ್ದಾರೆ ಎಂದು ಮಣಿಕಂಠ ರಾಠೋಡ್ ಆರೋಪಿಸಿದ್ದರು. ಅಲ್ಲದೆ, ರಶೀದ್ ಮುತ್ಯಾ ಅವರನ್ನು ಗ್ರಾಮದಿಂದ ಗಡಿಪಾರು ಮಾಡಬೇಕು ಹಾಗೂ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಗುರುವಾರ ಸಂಜೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ವೇಳೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಗಲಾಟೆಯಲ್ಲಿ ರಶೀದ್ ಮುತ್ಯಾ ಅವರ ಕಾರು ಚಾಲಕ ಜುಬೇರ್, ಭಾಗೇಶ ಹಾಗೂ ಸ್ವತಃ ರಶೀದ್ ಅವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯಿಂದ ಗಾಯಗೊಂಡ ಇವರನ್ನು ತಕ್ಷಣ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ದೂರು ಮತ್ತು ಬಂಧನ
ಗಾಯಾಳು ಭಾಗೇಶ ಅವರು ನೀಡಿದ ದೂರಿನ ಅನ್ವಯ, ನೆಲೋಗಿ ಪೊಲೀಸರು ಮಣಿಕಂಠ ರಾಠೋಡ್ ವಿರುದ್ಧ ಕೊಲೆ ಯತ್ನ (Attempt to Murder) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ನಂತರ ರಾತ್ರಿ 10 ಗಂಟೆ ಸುಮಾರಿಗೆ ಅಫಜಲಪುರದ ಶಿರವಾಳ ಕ್ರಾಸ್ ಬಳಿ ಕಲಬುರಗಿಯತ್ತ ತೆರಳುತ್ತಿದ್ದ ಮಣಿಕಂಠ ರಾಠೋಡ್ ಅವರನ್ನು ನೆಲೋಗಿ ಪಿಎಸ್‌ಐ ಚಿದಾನಂದ ಸವದಿ ನೇತೃತ್ವದ ತಂಡ ಬಂಧಿಸಿದೆ.

