ಬಿಜೆಪಿ, ಜೆಡಿಎಸ್‌ನವರದು ಪಾಪ ವಿಮೋಚನೆ ಯಾತ್ರೆ: ಡಿಕೆ ಶಿವಕುಮಾರ್ ವ್ಯಂಗ್ಯ
x

ಬಿಜೆಪಿ, ಜೆಡಿಎಸ್‌ನವರದು ಪಾಪ ವಿಮೋಚನೆ ಯಾತ್ರೆ: ಡಿಕೆ ಶಿವಕುಮಾರ್ ವ್ಯಂಗ್ಯ


ʻʻಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಧಮ್ ಇಲ್ಲ. ಹೀಗಾಗಿ ಕೇವಲ ನನ್ನ ಮತ್ತು ಕುಮಾರಸ್ವಾಮಿ ಅವರ ವಿಚಾರವನ್ನೇ ಮಾಧ್ಯಮಗಳು ತೆಗೆದುಕೊಳ್ಳುತ್ತಿವೆ” ಎಂದು ಬಿಜೆಪಿ-ಜೆಡಿಎಸ್‌ ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಮಂಡ್ಯದ ಮೈಶುಗರ್ ಕಾರ್ಖಾನೆ ಮೈದಾನದಲ್ಲಿ ಮಂಗಳವಾರ ನಡೆದ ʼಜನಾಂದೋಲನ ಸಭೆʼಯಲ್ಲಿ ಮಾತನಾಡಿದ ಅವರು, ʻʻಬಿಜೆಪಿ, ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆಯು ಪಾಪ ವಿಮೋಚನೆಯ ಯಾತ್ರೆ. ನೀವು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೀರಿ. ಕುಮಾರಸ್ವಾಮಿ ಅವರೇ ನಿಮ್ಮ ಸಹೋದರರ ಆಸ್ತಿಪಟ್ಟಿ ಬಿಚ್ಚಿಡಿ ಎಂದರೂ ಬಿಚ್ಚಿಡುತ್ತಿಲ್ಲ. ನೀವು ಎಲ್ಲಿಗೆ ಬೇಕಾದರೂ ಚರ್ಚೆಗೆ ಕರೆಯಿರಿ ನಾನು ಸಿದ್ದನಿದ್ದೇನೆʼʼ ಎಂದು ಹೇಳಿದರು.

ರಾಜ್ಯದ ಬಡವರ ವಿರುದ್ಧದ ಪಾದಯಾತ್ರೆ

ʻʻಬಿಜೆಪಿ, ಜೆಡಿಎಸ್ ಪಾದಯಾತ್ರೆ ಮಾಡುತ್ತಿರುವುದು ನನ್ನ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧವಲ್ಲ. ಈ ರಾಜ್ಯದ ಬಡಜನರ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ. ಈ ರಾಜ್ಯದ ಜನ ಕಾಂಗ್ರೆಸ್ ಗೆ ಶೇ. 43 ರಷ್ಟು ಮತ ನೀಡಿ 136 ಸ್ಥಾನ ನೀಡಿದ್ದಾರೆ. ಮಂಡ್ಯದಲ್ಲಿ 7 ಸ್ಥಾನ ಕೊಟ್ಟಿದ್ದಾರೆ. ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇದನ್ನು ನಿಲ್ಲಿಸಲು ಸರ್ಕಾರ ಬೀಳಿಸುವ ಹುನ್ನಾರ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ ಅವರೇ ಸರ್ಕಾರ ಬೀಳಿಸುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ಅಶೋಕಣ್ಣ ನಿನಗೆ ಧಮ್ ಇಲ್ಲ. ವಿಜಯೇಂದ್ರಣ್ಣ ಕಾಂಗ್ರೆಸ್ ಪಕ್ಷದ ಭಿಕ್ಷೆಯಿಂದ ವಿಧಾನಸಭೆಗೆ ಬಂದಿದ್ದೀಯ. ನಾಗರಾಜ್ ಗೌಡನಿಗೆ ಟಿಕೆಟ್ ನೀಡಿದ್ದರೆ ನೀನು ಗೆಲ್ಲುತ್ತಿರಲಿಲ್ಲ. ಇದನ್ನು ಗಮನದಲ್ಲಿಟ್ಟುಕೋʼʼ ಎಂದು ಹೇಳಿದರು.

ʻʻಮಂಡ್ಯದ ಜನರ ಬದುಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಎಸ್.ಎಂ. ಕೃಷ್ಣ ಅವರ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತಾರೆ. ನಿಮಗೆ ಮಂಡ್ಯದ ನಾಯಕರಾದ ಮಾದೇಗೌಡರು ಹಾಗೂ ಕೃಷ್ಣ ಅವರ ಬಗ್ಗೆ ಮಾತನಾಡುವ ಹಕ್ಕಿಲ್ಲ. ರೈತರ ಮಕ್ಕಳ, ಕಾವೇರಿ ತಾಯಿಯ ನಾಡಿನ ರಕ್ಷಣೆಗಾಗಿ ಜನರು ನಮಗೆ 136 ಸ್ಥಾನ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ150 ಸ್ಥಾನ ಗೆಲ್ಲುತ್ತೇವೆ. ನಿಮ್ಮ ಕುತಂತ್ರ, ಕೇಂದ್ರ ಸರ್ಕಾರದ ಕುತಂತ್ರ ಜನರ ತೀರ್ಪಿನ ಮುಂದೆ ನಡೆಯುವುದಿಲ್ಲʼʼ ಎಂದು ವಾಗ್ದಾಳಿ ನಡೆಸಿದರು.

ʻʻಎಸ್.ಎಂ.ಕೃಷ್ಣ ಅವರು ಮದ್ದೂರಿನ ಸೋಮನಹಳ್ಳಿ, ಮಂಡ್ಯದ ತೂಬಿನಕೆರೆಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪನೆ ಮಾಡಿದರು. ಕುಮಾರಸ್ವಾಮಿ ಅವರೇ ಮೋದಿ ಅವರು ನಿಮ್ಮ ಮೇಲೆ ವಿಶ್ವಾಸವಿಟ್ಟು ಕೈಗಾರಿಕಾ ಮಂತ್ರಿ ಮಾಡಿದ್ದಾರೆ. ಮಂಡ್ಯ ಮತ್ತು ಹಾಸನ ಭಾಗದಲ್ಲಿ 10 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಕೈಗಾರಿಕೆ ಮಾಡುತ್ತೇನೆ ಎಂದು ಹೇಳಿದ್ದೀರ. ನಮ್ಮ ಜನರಿಗೆ ಉದ್ಯೋಗ ಸಿಗುತ್ತದೆ ಎಂದರೆ ನಾವು ನಿಮಗೆ ಸಹಕಾರ ನೀಡುತ್ತೇವೆ. ನಮ್ಮ ಯುವಕರಿಗೆ ಕೆಲಸ ನೀಡಪ್ಪ ಒಂದು ಕೋಟಿ ನಮಸ್ಕಾರ ಹೇಳುತ್ತೇನೆʼʼ ಎಂದರು.

ʻʻಕುಮಾರಸ್ವಾಮಿ ಅವರು ಈ ಹಿಂದೆ ತಾವೇ ನೀಡಿರುವ ಯು ಟರ್ನ್ ಹೇಳಿಕೆಗಳ ಬಗ್ಗೆ ಉತ್ತರ ನೀಡಲಿ. ಅವರು ನುಡಿದಂತೆ ನಡೆಯಲಿ, ಕೊಟ್ಟ ಮಾತು ತಪ್ಪುವುದನ್ನು ಬಿಡಲಿʼʼ ಎಂದು ಅವರು ವಾಗ್ದಾಳಿ ನಡೆಸಿದರು.

ಯೂಟರ್ನ್ ಕುಮಾರ, ಕ್ಷಣಕ್ಕೊಂದು ಮಾತು ಕ್ಷಣಕ್ಕೊಂದು ಬಣ್ಣ

ಈ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಅಶ್ವಥ್ ನಾರಾಯಣ್, ಯೋಗಿಶ್ವರ್ ಅವರು ಪರಸ್ಪರ ಆರೋಪ, ಪ್ರತ್ಯಾರೋಪ, ಯೂ ಟರ್ನ್ ಹೊಡೆದಿದ್ದ ಹೇಳಿಕೆಗಳನ್ನು ವಿಡಿಯೋ ಮೂಲಕ ತೆರೆಯ ಮೇಲೆ ಪ್ರದರ್ಶಿಸಿದ ಡಿ ಕೆ ಶಿವಕುಮಾರ್ ಅವರು, ʻʻಜನ ತೀರ್ಪು ನೀಡಿದ್ದಾರೆ. ಆದ ಕಾರಣಕ್ಕೆ ಗಂಡು ಭೂಮಿ ಮಂಡ್ಯದಲ್ಲಿ ಗೆಲುವು ಕಂಡಿದ್ದೀರಿ. ಇಲ್ಲಿಗೆ ಬಂದು ನಿಮ್ಮ ತಿರುವು-ಮುರುವು ಹೇಳಿಕೆಗಳ ಬಗ್ಗೆ ಉತ್ತರ ನೀಡಬೇಕು. ನಿಮ್ಮ ಅಮೃತದ ನುಡಿಮುತ್ತುಗಳನ್ನು ಈ ನೆಲದ ಮೇಲೆ ಉದುರಿಸಬೇಕು. ಯೂಟರ್ನ್ ಕುಮಾರ, ಕ್ಷಣಕ್ಕೊಂದು ಮಾತು ಕ್ಷಣಕ್ಕೊಂದು ಬಣ್ಣʼʼ ಎಂದು ಕುಮಾರಸ್ವಾಮಿ ಅವರನ್ನು ಛೇಡಿಸಿದರು.

ʻʻಮೋದಿ ಅವರ ಕೈ ಹಿಡಿದು ಕೇವಲ ಐದು ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಣ್ಣ ಹೇಳಿದ್ದರು. ಆದರೆ ಈಗ ನಾವು ಐದು ಜನ ಮಂತ್ರಿಗಳಿದ್ದೇವೆ, ನಾನು ಆ ರೀತಿ ಮಾತು ಕೊಡಲು ಮೂರ್ಖನೇ ಎಂದು ಹೇಳುತ್ತಿದ್ದಾರೆ. ಈ ಹೇಳಿಕೆಗಳಿಗೆ ಬಿಜೆಪಿ ಹಾಗೂ ಕುಮಾರಸ್ವಾಮಿ ಇಬ್ಬರೂ ಉತ್ತರ ಕೊಡಬೇಕು. 10 ನಿಮಿಷದಲ್ಲಿ ನಾನು ತೋರಿಸಿದ ಮೈತ್ರಿ ನಾಯಕರ ಮಾತುಗಳಿಗೆ ಉತ್ತರ ಕೊಡಲಿʼʼ ಎಂದು ಸವಾಲು ಹಾಕಿದರು.

ʻʻಕುಮಾರಸ್ವಾಮಿ ಅವರನ್ನು ಕಾವೇರಿ ನೀರಿನ ವಿಚಾರದ ಸಭೆಗೆ ಕರೆದಿದ್ದೆವು. ಅದಕ್ಕೆ ಅವರು ದ್ರಾಕ್ಷಿ, ಗೋಡಂಬಿ ತಿನ್ನಲು ಬರಬೇಕೆ? ಎಂದು ಕೇಳಿದ್ದರು. ಆದರೆ ಅದೇ ದಿನ ಪಾಂಡವಪುರದಲ್ಲಿ ಬಾಡೂಟದಲ್ಲಿ ಭಾಗವಹಿಸಿದ್ದರು. ಕಾವೇರಿ ನೀರು, ರೈತರು, ರಾಜ್ಯದ ಹಿತ ಅವರಿಗೆ ಮುಖ್ಯವಾಗಿರಲಿಲ್ಲ. ಕುಮಾರಣ್ಣ ಏನೂ ಬೇಕಾದರೂ ಮಾಡಿಕೊಳ್ಳಲಿ, ಆದರೆ ನಮಗೆ ಮಾತ್ರ ನಿಮ್ಮ ಹಿತ ಮುಖ್ಯʼʼ ಎಂದರು.

ʻʻ148 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಅಲ್ಲದೇ 64 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗಿದೆ. ಹೆಚ್ಚಾಗಿ ಸಮುದ್ರಕ್ಕೆ ಹರಿದು ಹೋದ ನೀರನ್ನು ಹಿಡಿದಿಡುವ ಸಲುವಾಗಿ ಮೇಕೆದಾಟು ಯೋಜನೆ ಸಾಕಾರಕ್ಕಾಗಿ ನಾವು ಪಾದಯಾತ್ರೆ ಮಾಡಿದ್ದೆವುʼʼ ಎಂದು ಹೇಳಿದರು.

ʻʻಕುಮಾರಸ್ವಾಮಿ ನನ್ನ ಕುಟುಂಬದ ಬಗ್ಗೆ ಮಾತನಾಡಲಿ ಎಂದೇ ಅವರ ಕುಟುಂಬದ ಬಗ್ಗೆ ಮಾತನಾಡುತ್ತಾ ಬರುತ್ತಿದ್ದೇನೆ. ನಿಮ್ಮ ಅತ್ತೆಯ ಕೆಐಡಿಬಿ ಭೂಮಿ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಇದೇ ಬಿಜೆಪಿಯವರು ನಿನ್ನ ಕುಟುಂಬಕ್ಕೆ ಹಂಚಿಕೆಯಾಗಿರುವ ಮುಡಾ ಸೈಟುಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲʼʼ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಮೇಲೆ ಮಾತ್ರ ನಂಬಿಕೆ

ಭಾಷಣದ ಮಧ್ಯೆ ವೇದಿಕೆಯ ಎಲ್ಇಡಿ ಮೂಲಕ ಮೈತ್ರಿ ನಾಯಕರ ಹೇಳಿಕೆಗಳ ವಿಡಿಯೋ ಪ್ರದರ್ಶಿಸಿದ ನಂತರ ಮಾತು ಮುಂದುವರೆಸಿದ ಡಿಕೆ ಶಿವಕುಮಾರ್, ʻʻಯಾರ ಮಾತನ್ನು ನಂಬಬೇಡಿ ಎಂದು ಸಚಿವ ಮಿತ್ರ ಪ್ರಿಯಾಖಕ್ ಖರ್ಗೆ ಅವರು ಹೇಳಿದರು. ಅವರ ಮಾತಿನಂತೆ ನನಗೆ ಮುನಿಯಪ್ಪ ಅವರು, ಚೆಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಯಾರ ಮೇಲೂ ನಂಬಿಕೆಯಿಲ್ಲ. ನನಗೆ ಕುಮಾರಸ್ವಾಮಿ ಅವರ ಮೇಲೆ, ಬೂಕನಕೆರೆ ಯಡಿಯೂರಪ್ಪ, ಯೋಗೀಶ್ವರ್, ಯತ್ನಾಳ್ ಮೇಲೆ ಮಾತ್ರ ನಂಬಿಕೆʼʼ ಎಂದು ವ್ಯಂಗ್ಯವಾಡಿದರು.

ವಿಜಯೇಂದ್ರ ನಿಮ್ಮ ತಂದೆ ರಾಜೀನಾಮೆ ಕೊಟ್ಟಿದ್ದೇಕೆ?

ʻʻವಿಜಯೇಂದ್ರ ನನ್ನನ್ನು ಭ್ರಷ್ಟಾಚಾರದ ಪಿತಾಮಹ ಎನ್ನುತ್ತೀಯಲ್ಲ. ನಿಮ್ಮ ತಂದೆ ಏತಕ್ಕೆ ರಾಜಿನಾಮೆ ನೀಡಿದರು. ಲಕ್ಷ್ಮೀವಿಲಾಸ್ ಬ್ಯಾಂಕ್ ನಲ್ಲಿ ದುಬೈಯಲ್ಲಿ ಖಾತೆ ತೆರೆದು ಕೋಟ್ಯಂತರ ರೂಪಾಯಿ ವರ್ಗಾವಣೆಯಾಯಿತಲ್ಲ ಇನ್ನೂ ಏಕೆ ನಿಮ್ಮ ಸರ್ಕಾರ ಇದರ ಬಗ್ಗೆ ತನಿಖೆ ಮಾಡಿಸಿಲ್ಲ. ನಿನ್ನಿಂದಾಗಿ ನಿಮ್ಮ ತಂದೆಯಿಂದ ಏಕೆ ರಾಜಿನಾಮೆ ನೀಡಿದರು. ತಂಗಿ ಮಕ್ಕಳು, ನೆಂಟರು ಸೇರಿದಂತೆ ಇತರರ ಹೆಸರಿನಲ್ಲಿ ಅಕ್ರಮ ನಡೆಯಿತಲ್ಲ ಅದರ ಬಗ್ಗೆ ಬಿಚ್ಚಿಡಲೇ? ಈ ವಿಚಾರಗಳೆಲ್ಲ ವಿಧಾನಸಭೆಯಲ್ಲಿ ಚರ್ಚೆಯಾಗಿ ದಾಖಲೆಗೆ ಹೋಗಬೇಕು. ಸರಿಯಾದ ಸಂದರ್ಭದಲ್ಲಿ ಇದರ ಬಗ್ಗೆ ಮಾತನಾಡುತ್ತೇನೆʼʼ ಎಂದರು.

Read More
Next Story