ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮುಡಾ ಪ್ರಕರಣ ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ನಾಯಕರು ಪಾದಯಾತ್ರೆ ನಡೆಸಿದ್ದರು. ಇದೀಗ ರಾಜ್ಯಪಾಲರು ಪ್ರಾಸಿಕ್ಯೂಷನ್ ಆದೇಶ ನೀಡಿರುವುದರಿಂದ ಪ್ರತಿಪಕ್ಷಗಳಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಇದೇ ಬ್ರಹ್ಮಾಸ್ತ್ರವನ್ನು ಬಳಸಿಕೊಂಡು ಹೋರಾಟಕ್ಕಿಳಿದಿರುವ ದೋಸ್ತಿ ಪಕ್ಷಗಳು ಸೋಮವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ-ಜೆಡಿಎಸ್ ನಾಯಕರು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ʻʻಸಿದ್ದರಾಮಯ್ಯನವರ ಸಮಾಜವಾದದ ಮುಖವಾಡ ಕಳಚಿ ಬಿದ್ದಿದೆ. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ" ಎಂದು ಒತ್ತಾಯಿಸಿದರು.
ʻʻಭ್ರಷ್ಟ ಕಾಂಗ್ರೆಸ್, ಭ್ರಷ್ಟ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ- ಜೆಡಿಎಸ್ ನಿರಂತರ ಹೋರಾಟ ನಡೆಸುತ್ತಿವೆ. ಈ ಹೋರಾಟ ಇದೀಗ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಮೈಸೂರಿನ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣಗಳು ಇದರಲ್ಲಿ ಪ್ರಮುಖವಾಗಿವೆ. ಮುಡಾದಡಿ 4ರಿಂದ 5 ಸಾವಿರ ಕೋಟಿಯ ನಿವೇಶನಗಳನ್ನು ನುಂಗಿ ಹಾಕಿದ್ದಾರೆ. ಇದನ್ನು ಖಂಡಿಸಿ, ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆʼʼ ಎಂದರು.
ʻʻಭಂಡತನ ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಆದರೆ, ಸಿದ್ದರಾಮಯ್ಯನವರು ಗೂಂಡಾಗಿರಿಗೆ ಇಳಿದಿದ್ದಾರೆ. ರಾಜ್ಯಪಾಲರ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಕೂಡಲೇ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಿದೆʼʼ ಎಂದು ಆಗ್ರಹಿಸಿದರು.
ʻʻಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಕಾಂಗ್ರೆಸ್ ಸರ್ಕಾರ ಇದೆ. ಹೈಕಮಾಂಡ್ ಕಾಪಾಡುವ, ಸಚಿವರು, ಶಾಸಕರು ಬೆನ್ನಿಗೆ ನಿಲ್ಲುವ ಭ್ರಮೆಯಿಂದ ಹೊರಕ್ಕೆ ಬನ್ನಿ. ಕಾನೂನನ್ನು ಎದುರಿಸಿ. ಪುಂಡಾಟಿಕೆ ಒಪ್ಪಲಾಗದು. ತಪ್ಪನ್ನು ಒಪ್ಪಿಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾನೂನು ಕ್ರಮ ಎದುರಿಸಿʼʼ ಎಂದು ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ʻʻಮುಡಾ ಹಗರಣದಲ್ಲಿ ಸಾವಿರಾರು ಕೋಟಿ ಲೂಟಿ ಆಗಿದೆ. ವಾಲ್ಮೀಕಿ ನಿಗಮದಲ್ಲೂ 187 ಕೋಟಿಯ ಹಗರಣ ಆಗಿದೆ. ಸಿದ್ದರಾಮಯ್ಯನವರು ಕುರ್ಚಿ ಬಿಡಬೇಕೆಂದು ಜನರು ಬಯಸುತ್ತಿದ್ದಾರೆ. ಲೂಟಿಕೋರ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು. ಅಪರಾಧಿ ಅಲ್ಲ ಎನ್ನಲು ವಿಧಾನಸಭೆಯ ಅಧಿವೇಶನದಲ್ಲಿ ಅವಕಾಶವಿತ್ತು. ಸ್ವಚ್ಛತೆಯನ್ನು ವಿಧಾನಸಭೆಯಲ್ಲೇ ಸ್ಪಷ್ಟಪಡಿಸದೆ ಓಡಿ ಹೋಗಿದ್ದೀರಿʼʼ ಎಂದು ಟೀಕಿಸಿದರು.
ʻʻಹೋರಾಟ ಮಾಡಲು ಮುಂದಾದ ಕಾಂಗ್ರೆಸ್ ಕಾನೂನು-ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತಿದೆ. ಕಾಂಗ್ರೆಸ್ಸಿಗರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ಕೂಡಲೇ ರಾಜ್ಯಪಾಲರ ಆಡಳಿತ ಜಾರಿಗೊಳಿಸಬೇಕು. ಲೂಟಿ, ಭ್ರಷ್ಟಾಚಾರ, ಕಳ್ಳತನ ಆದುದು ಜನರಿಗೂ ಮನವರಿಕೆ ಆಗಿದೆ. ರಾಜ್ಯಪಾಲರಿಗೆ ಬಿಜೆಪಿಯವರು ಮನವಿ, ದಾಖಲೆಗಳನ್ನು ಕೊಟ್ಟಿಲ್ಲ ಎಂದು ವಿವರಿಸಿದರು. ಯಡಿಯೂರಪ್ಪ ಅವರಿಗೆ ಒಂದು ಕಾನೂನು, ನಿಮಗೊಂದು ಕಾನೂನೇ? ಎಂದು ಪ್ರಶ್ನಿಸಿದರು.
ʻʻಜಾರ್ಜ್ ಫರ್ನಾಂಡಿಸ್, ಅಡ್ವಾಣಿ, ರಾಮಕೃಷ್ಣ ಹೆಗಡೆ ಅವರು ಆಪಾದನೆ ಬಂದಾಗ ರಾಜೀನಾಮೆ ಕೊಟ್ಟದ್ದನ್ನೂ ವಿವರಿಸಿದರು. ನಾಗೇಂದ್ರರಿಗೊಂದು ಕಾನೂನು, ನಿಮಗೊಂದು ಕಾನೂನೇ? ಎಂದು ಜನರೇ ಪ್ರಶ್ನಿಸುತ್ತಿದ್ದಾರೆ. 5.95 ಲಕ್ಷದ ಜಮೀನಿಗೆ 62 ಕೋಟಿ ಕೇಳುವುದು ಸರಿಯೇ? ಇದು ಬಿಜೆಪಿ- ಜೆಡಿಎಸ್ ಹೋರಾಟ. ಸಿಎಂ ರಾಜೀನಾಮೆ ಕೊಡುವವರೆಗೆ ಹೋರಾಟ ನಿಲ್ಲದುʼʼ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, ʻʻಮೇಲ್ನೋಟಕ್ಕೆ ದಾಖಲೆ ಲಭಿಸಿದರೆ ಸ್ವಯಂಪ್ರೇರಿತವಾಗಿ ತನಿಖೆಗೆ ಸೂಚನೆ ಕೊಡಲು ರಾಜ್ಯಪಾರಿಗೆ ಅವಕಾಶ ಇದೆ. ನೋಟಿಸ್‌ಗೆ ಸಿದ್ದರಾಮಯ್ಯನವರು ಉತ್ತರ ಕೊಟ್ಟಿಲ್ಲ. ರಾಜ್ಯಪಾಲರು ಕಾನೂನಾತ್ಮಕವಾಗಿ ನಡೆದುಕೊಂಡಿದ್ದಾರೆ. ಸಿದ್ದರಾಮಯ್ಯನವರು ನಿಜವಾಗಿ ಸತ್ಯ ಹರಿಶ್ಚಂದ್ರ ಆಗಲು ಗೌರವದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿದೆ. ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯದಿರಿʼʼ ಎಂದರು.
ಮಾಜಿ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ʻʻಮೂಡ ಹಗರಣ ಆಗಿದೆ ಎಂದಾಕ್ಷಣ ನಗರಾಭಿವೃದ್ಧಿ ಸಚಿವರು ಮೈಸೂರಿಗೆ ಧಾವಿಸಿ ಕಡತಗಳನ್ನು ಹೊತ್ತೊಯ್ದಿದ್ದಾರೆ. ಯಾತಕ್ಕೆಂದು ಕೇಳಿ? ರೆಕಾರ್ಡ್‌ಗಳನ್ನು, ಸಾಕ್ಷಿಯ ನಾಶ ಮಾಡುವ ಹಾಗಿದೆ. ಇದರ ಅರ್ಥ ಏನು? ಶಾಸಕರು, ಸಚಿವರು, ಕಾರ್ಯಕರ್ತರು ನಿಮ್ಮ ಜೊತೆ ಇದ್ದರೆ ಅನ್ಯಾಯ ನ್ಯಾಯ ಆಗುತ್ತದೆಯೇ? ದಾಖಲೆ ಸಹಿತ ನೀವು ಸಿಕ್ಕಿ ಹಾಕಿಕೊಂಡಿದ್ದೀರಿ. ನಿಮ್ಮ ಹೈಕಮಾಂಡ್ ಕೂಡ ಭ್ರಷ್ಟಾಚಾರದಲ್ಲಿ ಮುಳುಗೆದ್ದಿದೆ. ದಿಕ್ಕು ದೆಸೆಯಿಲ್ಲದೆ ಹುಚ್ಚು ಕುದುರೆಯಂತೆ ಕರ್ನಾಟಕ ಇವತ್ತು ನಡೆಯುವಂತಾಗಿದೆʼʼ ಎಂದು ಕಿಡಿಕಾರಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ‘ಗ್ಯಾರಂಟಿ’ ನಿಮಗೆ ಭ್ರಷ್ಟಾಚಾರ ನಡೆಸಲು ಕೊಟ್ಟ ಲೈಸನ್ಸ್ ಅಲ್ಲ. ಲೂಟಿ ಹೊಡೆದರೆ ಕೇಳುವಂತಿಲ್ಲ ಎಂಬುದು ಸರಿಯಲ್ಲ. ರೇಟ್ ಕಾರ್ಡ್ ಫಿಕ್ಸ್ ಮಾಡಲು ನಿಮಗೆ ಅನುಮತಿ ನೀಡಿಲ್ಲ. ರಾಜ್ಯದ ಜನರು ಭ್ರಷ್ಟಾಚಾರದ ವಿರುದ್ಧ ಇದ್ದಾರೆ. ನಿಮ್ಮ ಬ್ಲ್ಯಾಕ್‌ಮೇಲ್ ರಾಜಕಾರಣ ಬಿಡಿ, ಮುಖ್ಯಮಂತ್ರಿಗಳೇ ಕೂಡಲೇ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ. ತಪ್ಪೇ ಮಾಡಿಲ್ಲವೆಂದು ಸಾಬೀತಾದರೆ ಮತ್ತೆ ಸಿಎಂ ಆಗಬಹುದುʼʼ ಎಂದಿದ್ದಾರೆ.
ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಮಾತನಾಡಿ, ʻʻಮುಖ್ಯಮಂತ್ರಿ ರಾಜೀನಾಮೆ ಕೊಡುವವರೆಗೆ ಎನ್‌ಡಿಎ ಅಂಗಪಕ್ಷಗಳಾದ ನಾವು ಹೋರಾಟ ಮಾಡಲಿದ್ದೇವೆ. ಅಹಿಂದದಲ್ಲಿ ‘ದ’ ಎಂಬ ಅಕ್ಷರವನ್ನು ಸಿದ್ದರಾಮಯ್ಯನವರು ನುಂಗಿಹಾಕಿದ್ದಾರೆ. ಇನ್ನೆರಡು ಅಕ್ಷರಗಳನ್ನು ಯಾವತ್ತು ನುಂಗುವರೋ ಗೊತ್ತಿಲ್ಲ. ಮುಖ್ಯಮಂತ್ರಿಯವರು ಕೂಡಲೇ ರಾಜೀನಾಮೆ ಕೊಡಬೇಕುʼʼ ಎಂದು ಆಗ್ರಹಿಸಿದರು.