ಪ್ರತಿಪಕ್ಷ ಪಾದಯಾತ್ರೆ | ಮುಡಾ, ವಾಲ್ಮೀಕಿ ನಿಗಮ ಹಗರಣ: ರಾಜ್ಯಪಾಲರಿಗೆ ದೂರು
x

ಪ್ರತಿಪಕ್ಷ ಪಾದಯಾತ್ರೆ | ಮುಡಾ, ವಾಲ್ಮೀಕಿ ನಿಗಮ ಹಗರಣ: ರಾಜ್ಯಪಾಲರಿಗೆ ದೂರು


ಮುಂಗಾರು ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿದ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ ಮತ್ತು ಮುಡಾ ಹಗರಣ ಸಂಬಂಧ ರಾಜಭವನಕ್ಕೆ ಪಾದಯಾತ್ರೆ ಮೂಲಕ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ.

ಮುಡಾ ಹಗರಣ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಬುಧವಾರ ಹಾಗೂ ಗುರುವಾರ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಬಿಗಿಪಟ್ಟು ಹಿಡಿದರು. ಬುಧವಾರ ಅಹೋರಾತ್ರಿ ಧರಣಿ ನಡೆಸಿದ್ದು, ಗುರುವಾರ ಇಡೀ ದಿನ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು.

ಮುಡಾ ಹಗರಣದ ಮೇಲೆ ಚರ್ಚೆ ನಡೆಯಲು ಅವಕಾಶ ಸಿಗದ ಕಾರಣ ಬಿಜೆಪಿ ಮತ್ತು ಜೆಡಿಎಸ್ ನಾಯಕರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಾಜಭವವನದ ಕಡೆ ಹೊರಟರು. ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರ ನೇತೃತ್ವದಲ್ಲಿ ಶಾಸಕರು ಮತ್ತು ಪರಿಷತ್ ಸದಸ್ಯರು ಜಾಥಾ ನಡೆಸಿದರು.

ʻʻದಲಿತರ ಹಣ ತಿಂದು ತೇಗಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧಿಕ್ಕಾರ, ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯಗೆ ಧಿಕ್ಕಾರʼʼ ಎಂಬ ಘೋಷಣೆಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಕೂಗಿದರು. ಪ್ರತಿಭಟನಾಕಾರ ಕೈಗಳಲ್ಲಿ ‘ಅತ್ತ ದಲಿತರ ದುಡ್ಡು ಲೂಟಿ ಇತ್ತ ಮುಡಾವೂ ಲೂಟಿ,’ ‘ಮುಡಾ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಸಚಿವ ಭೈರತಿ ಸುರೇಶ್ ಗೆ ಧಿಕ್ಕಾರ’ ಎಂದು ಬರೆದ ಪ್ಲಕಾರ್ಡ್ ಗಳಿದ್ದವು. ಬುಧವಾರ ಸಂಜೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದ ಕಾರ್ಯಕಲಾಪದ ನಂತರ ರಾಜ್ಯಪಾಲರನ್ನು ಭೇಟಿಯಾಗಿದ್ದರು.

Read More
Next Story