ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಜನಪರ ಉದ್ದೇಶವೂ ಇಲ್ಲ, ಜನರ ಸ್ಪಂದನೆಯೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
x

ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಜನಪರ ಉದ್ದೇಶವೂ ಇಲ್ಲ, ಜನರ ಸ್ಪಂದನೆಯೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್


“ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಜನಪರ ಉದ್ದೇಶ, ಅರ್ಥಗರ್ಭಿತ ಕಾರಣವಿಲ್ಲ ಹಾಗಾಗಿ ಜನರ ಸ್ಪಂದನೆಯೂ ಇಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.

ಗುರುವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ʻʻಎಸ್.ಎಂ ಕೃಷ್ಣ ಅವರು ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದ್ದರು. ಭಾರತವನ್ನು ಒಂದುಗೂಡಿಸಲು, ಬೆಲೆ ಏರಿಕೆ, ನಿರುದ್ಯೋಗ ಖಂಡಿಸಿ, ಭ್ರಷ್ಟಾಚಾರ ವಿರುದ್ಧ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದ್ದರು. ನಾವು ಗಣಿ ಲೂಟಿ ಖಂಡಿಸಿ ರಾಜ್ಯ ಹಾಗೂ ದೇಶದ ಸಂಪತ್ತು ರಕ್ಷಣೆಗೆ ಬಳ್ಳಾರಿ ಪಾದಯಾತ್ರೆ ಮಾಡಿದೆವು. ಕಾವೇರಿ ಜಲಾನಯನದ 10 ಜಿಲ್ಲೆಗಳಿಗೆ ನೀರು ಒದಗಿಸುವ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಪಾದಯಾತ್ರೆ ಮಾಡಿದ್ದೆವು. ಅವೆಲ್ಲವೂ ಜನಪರ ಉದ್ದೇಶಗಳನ್ನು ಹೊಂದಿದ್ದವು ಎಂದು ಹೇಳಿದರು.

ʻʻಆದರೆ ಈಗ ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆಯ ಸದ್ದಿದೆಯಾ? ಅವರ ಪಾದಯಾತ್ರೆಯ ವಿಚಾರವೇನು? ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಲಾಗದೇ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಪಾದಯಾತ್ರೆಯಲ್ಲಿ ಬೇರೆ ಏನಾದರೂ ಮಹತ್ವದ ವಿಚಾರವಿದೆಯೇ? ಅವರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆ ನೋಡುತ್ತಿದ್ದಾರೆ. ಅವರ ಪಾದಯಾತ್ರೆಗೆ ಜನರಿಂದ ಸ್ಪಂದನೆಯಿಲ್ಲ. ಪಾದಯಾತ್ರೆಯಲ್ಲಿ ಜನತಾದಳದ ಕಾರ್ಯಕರ್ತರೇ ಇಲ್ಲ. ಅವರು ಪಾದಯಾತ್ರೆಯಲ್ಲಿ ಹೊಡೆದಾಡಲಿ ಏನಾದರೂ ಮಾಡಿಕೊಳ್ಳಲಿʼʼ ಎಂದರು.

ʻʻರಾಮನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ಎಷ್ಟು ಜನ ಜೆಡಿಎಸ್ ಕಾರ್ಯಕರ್ತರು ಇದ್ದರು ಎಂಬುದನ್ನು ಮಾಧ್ಯಮಗಳ ಬಳಿ ಇರುವ ವಿಡಿಯೋಗಳಲ್ಲಿ ನೋಡಿ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಿಜೆಪಿ ಕಾರ್ಯಕರ್ತರನ್ನು ಪಾದಯಾತ್ರೆಗೆ ಕರೆಸಲಾಗಿದೆ. ಅವರಲ್ಲಿ ಹೊಂದಾಣಿಕೆ ಎಲ್ಲಿದೆ? ಒಗ್ಗಟ್ಟು ಎಲ್ಲಿದೆ? ಅವರ ನಡುವೆ ಸಮನ್ವಯತೆ ಇಲ್ಲ ಎಂದು ಅವರೇ ಹೇಳಿದ್ದಾರೆ. ಅವರು ಒಂದಾಗಿರಲಿ ಅಥವಾ ಬೇರೆಯಾಗಿರಲಿ ನಮಗೆ ಯಾವುದೇ ಅಭ್ಯಂತರವಿಲ್ಲʼʼ ಎಂದು ಹೇಳಿದರು.

ನನ್ನ ವಿರುದ್ಧದ ಕುಮಾರಸ್ವಾಮಿ ಆರೋಪಕ್ಕೆ ದಾಖಲೆ ಎಲ್ಲಿವೆ?

ʻʻಬಿಜೆಪಿ ಕಾಲದಲ್ಲಿ ಆಗಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ನಾವು ಕೇಳಿರುವ ಪ್ರಶ್ನೆಗಳಿಗೆ ಅವರು ಈ ಪಾದಯಾತ್ರೆ ವೇಳೆ ಉತ್ತರಿಸಿಲ್ಲ. ಕುಮಾರಸ್ವಾಮಿ ಅವರಿಗೆ ಪ್ರತ್ಯೇಕವಾಗಿ ಒಂದಷ್ಟು ಪ್ರಶ್ನೆ ಮಾಡಿದ್ದೇವೆ. ಅವರು ನನ್ನ ಬಗ್ಗೆ ನಮ್ಮ ಕುಟುಂಬದವರ ಬಗ್ಗೆ ಏನಾದರೂ ಟೀಕೆ ಮಾಡಲಿ. ಅವರು ನನ್ನ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ. ನಾನು ಅವರ ಸಹೋದರನ ಆಸ್ತಿ ಹೇಗೆ ಬಂತು?, ಎಲ್ಲಿಂದ ಬಂತು ಎಂಬುದನ್ನು ಬಿಚ್ಚಿಡಬೇಕಲ್ಲವೇ? ನನ್ನ ಮೇಲೆ ಅವರು ಅನೇಕ ಆರೋಪ ಮಾಡುತ್ತಿದ್ದಾರೆ. ಆ ಆರೋಪಗಳಿಗೆ ದಾಖಲೆ ಬೇಕಲ್ಲವೇ? ಅವರ ಅಕ್ರಮಗಳ ಬಗ್ಗೆ ಮಾಧ್ಯಮಗಳೇ ವರದಿ ಮಾಡುತ್ತಿವೆಯಲ್ಲʼʼ ಎಂದು ಕಿಡಿಕಾರಿದರು.

ಈ ವೇಳೆ ಮಾಧ್ಯಮದವರು, ಕುಮಾರಸ್ವಾಮಿ ಪಲಾಯನವಾದಿಯಾಗಿದ್ದಾರಾ ಎಂದು ಕೇಳಿದಾಗ, ʻʻಹಾಗೆಂದು ನಾನು ಹೇಳುತ್ತಿಲ್ಲ. ಕುಮಾರಸ್ವಾಮಿ ಅವರ ಬಾಯಲ್ಲಿ ಬಂದಿರುವ ಮಾತುಗಳನ್ನು ಮಂಡ್ಯದಲ್ಲಿ ತೋರಿಸಿದ್ದೇನೆʼʼ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್‌ ಅವರನ್ನು ಬ್ಲಾಕ್ ಅಂಡ್ ವೈಟ್ ಟಿವಿ ಹಾಗೂ ವಿಸಿಆರ್ ಶಿವಕುಮಾರ್ ಎಂದಿರುವ ಬಗ್ಗೆ ಕೇಳಿದಾಗ, ʻʻಅವರು ಏನಾದರೂ ಹೇಳಿಕೊಳ್ಳಲಿ. ಈ ಬಗ್ಗೆ ಕನಕಪುರಕ್ಕೆ ಬಂದು ವಿಚಾರಿಸಲಿ. ನಮ್ಮ ತಂದೆ, ತಾತ ಹುರುಳಿ ಅಳೆಯುತ್ತಿದ್ದರೋ, ರಾಗಿ ಅಳೆಯುತ್ತಿದ್ದರೋ, ಕಡಲೇಕಾಯಿ ಅಳೆಯುತ್ತಿದ್ದರೋ ಅವೆಲ್ಲವೂ ಬೇರೆ ವಿಚಾರ. ನಾವು ಈಗಲೂ ತಿನ್ನುವುದು ಹುರುಳಿ, ಕಡಲೇಕಾಯಿ ಎಣ್ಣೆ ಹಾಗೂ ರಾಗಿಯನ್ನೇ. ನಾವು ಬೇರೆ ಬೆಳೆಯುತ್ತಿದೆವು ಎಂದು ಹೇಳುವುದಿಲ್ಲ. ನಮ್ಮ ಆಸ್ತಿ ಎಷ್ಟಿತ್ತು ಎಂದು ನಮ್ಮ ಊರಿನಲ್ಲಿ ಕೇಳಲಿʼʼ ಎಂದರು.

ದೇವೇಗೌಡರು ನಿನ್ನೆ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, ʻʻತಮ್ಮ ಕುಟುಂಬದವರನ್ನು ರಕ್ಷಣೆ ಮಾಡಿಕೊಳ್ಳಲು ಅವರು ಹೋಗಲೇ ಬೇಕಲ್ಲವೇ? ನಮ್ಮ ವಿರುದ್ಧ ದೂರು ನೀಡಿ, ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಒಳಗೆ ಹಾಕಲೇಬೇಕು ಎಂಬ ಪ್ರಯತ್ನಗಳು ನಡೆಯುತ್ತಲೇ ಇವೆ. ನಾನು ಎಲ್ಲದಕ್ಕೂ ಸಿದ್ಧವಿದ್ದೇನೆʼʼ ಎಂದು ತಿಳಿಸಿದರು.

ಸಿಎಂ ಹಾಗೂ ಡಿಸಿಎಂ ಅವರನ್ನು ಚಕ್ರವ್ಯೂಹಕ್ಕೆ ಸಿಲುಕಿಸಿದರೆ ಸರ್ಕಾರ ಪತನ ಸುಲಭ ಎಂಬುದು ಅವರ ಲೆಕ್ಕಾಚಾರವೇ ಎಂದು ಕೇಳಿದಾಗ, ʻʻನಮ್ಮ ಹಳ್ಳಿ ಕಡೆಒಂದು ಮಾತು ಇದೆ, ದಿನಾ ಸಾಯುವವರಿಗೆ ಅಳುವವರಾರು? ಎಂದು... ದಿನಾ ಬೆಳಗ್ಗೆ ಇವರ ಗೋಳು ಇದ್ದದ್ದೆ. ಮುಂಚೆಯಿಂದಲೂ ಇದರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದು, ಈಗಲೂ ಹೋರಾಟ ಮುಂದುವರಿಸುತ್ತೇವೆʼʼ ಎಂದರು.

ಕುಮಾರಸ್ವಾಮಿ ಸಹೋದರನ ಆಸ್ತಿ ದಾಖಲೆ ಬಿಡುಗಡೆ ಮಾಡುತ್ತೀರಾ? ಎಂದು ಕೇಳಿದಾಗ, ʻʻಖಂಡಿತವಾಗಿಯೂ ಮಾಡಲೇಬೇಕು. ಅದಕ್ಕೆ ಶುಭದಿನ, ಶುಭ ಗಳಿಗೆ, ಶುಭ ನಕ್ಷತ್ರ ನೋಡಿ ಬಿಡುಗಡೆ ಮಾಡಬೇಕು. ಅದಕ್ಕಿಂತ ಮುಂಚೆ ನಮ್ಮ ಬಗ್ಗೆ ಮಾಡುತ್ತಿರುವ ಆರೋಪಗಳ ಬಗ್ಗೆ ದಾಖಲೆ ಬಿಚ್ಚಿ ಎಂದು ಹೇಳಿದ್ದೇನೆʼʼ ಎಂದು ತಿಳಿಸಿದರು.

Read More
Next Story