ಬಿಜೆಪಿ-ಜೆಡಿಎಸ್ ನಾಯಕರು, ಸರ್ಕಾರ ಬೀಳಿಸುವುದನ್ನೇ ರಾಜ್ಯದ ಅಭಿವೃದ್ಧಿ ಎಂದುಕೊಂಡಿದ್ದಾರೆ: ಕೃಷ್ಣ ಬೈರೇಗೌಡ
ಸರ್ಕಾರ ಬೀಳಿಸುವುದನ್ನೇ ರಾಜ್ಯದ ಅಭಿವೃದ್ಧಿ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಿಳಿದುಕೊಂಡಿರುವ ಹಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರು, ಶೀಘ್ರದಲ್ಲೇ ಸರ್ಕಾರ ಬಿದ್ದುಹೋಗುತ್ತದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೃಷ್ಣ ಬೈರೇಗೌಡ ಅವರು, ʻʻಬಿಜೆಪಿ -ಜೆಡಿಎಸ್ ಒಟ್ಟಾಗಿ ಆಪರೇಷನ್ ಮಾಡಿ ಜನರಿಂದ ಆಯ್ಕೆಯಾದ ಸರ್ಕಾರವನ್ನು ಬೀಳಿಸುವ ಪುರುಷಾರ್ಥಕ್ಕೆ ಜನ ಇವರನ್ನು ಆಯ್ಕೆ ಮಾಡಿ ಕಳಿಸಿರೋದುʼʼ ಎಂದು ಕಿಡಿಕಾರಿದ್ದಾರೆ.
ʻʻಅವರು ಸರ್ಕಾರ ಬೀಳಿಸುವುದನ್ನೇ ರಾಜ್ಯದ ಅಭಿವೃದ್ಧಿ ಎಂದು ತಿಳಿದಿರುವ ಹಾಗಿದೆ. ಸರ್ಕಾರ ಬೀಳಿಸೋದು ಇರಲಿ, ಕೇಂದ್ರದಿಂದ ಯಾವೆಲ್ಲಾ ಯೋಜನೆಯನ್ನು ಇವರು ರಾಜ್ಯಕ್ಕೆ ತಂದಿದ್ದಾರೆ? ಇವರಿಂದ ರಾಜ್ಯಕ್ಕೆ ಕೊಡುಗೆ ಏನು? ಮೊದಲು ತಿಳಿಸಲಿ. ಆಪರೇಷನ್ ಕಮಲ ಮಾಡುವುದೇ ದೊಡ್ಡ ಕೊಡುಗೆಯಾ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.
ʻʻಇವರ ವೈಫಲ್ಯ ಮುಚ್ಚಿಹಾಕಲು ಜನರ ಗಮನ ಬೇರೆಡೆ ಸೆಳೆಯಲು ಪಾದಯಾತ್ರೆ ನಡೆಸಲಾಗುತ್ತಿದೆ. ಕುಮಾರಸ್ವಾಮಿ ಅವರು ನಮ್ಮ ಭದ್ರಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸಲಿ ಸಾಕು, ನಾನು ಅವರಿಗೆ ಕೈಮುಗಿಯುತ್ತೇನೆʼʼ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸೋಮವಾರ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪ್ರವಾಹ ಮತ್ತು ಭೂಕುಸಿತ ಪ್ರದೇಶಗಳಿಗೆ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿದ್ದಾರೆ.