Mysore MUDA Scam | ಅಕ್ರಮದಲ್ಲಿ ಪ್ರತಿಪಕ್ಷ ನಾಯಕರೂ ಪಾಲುದಾರರು? ಸಿಎಂ ಸಿದ್ದರಾಮಯ್ಯ ದಾಖಲೆ ಬಿಡುಗಡೆ
x

Mysore MUDA Scam | ಅಕ್ರಮದಲ್ಲಿ ಪ್ರತಿಪಕ್ಷ ನಾಯಕರೂ ಪಾಲುದಾರರು? ಸಿಎಂ ಸಿದ್ದರಾಮಯ್ಯ ದಾಖಲೆ ಬಿಡುಗಡೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿವೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಅವರು ಮುಡಾದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರೇ ನಿವೇಶನಗಳನ್ನು ಪಡೆದಿದ್ದಾರೆ ಎಂದು ಶುಕ್ರವಾರ ದಾಖಲೆ ಬಿಡುಗಡೆ ಮಾಡಿದ್ದಾರೆ.


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿವೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಅವರು ಮುಡಾದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರೇ ನಿವೇಶನಗಳನ್ನು ಪಡೆದಿದ್ದಾರೆ ಎಂದು ಶುಕ್ರವಾರ ದಾಖಲೆ ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿರುವ ಸಿಎಂ ಸಿದ್ದರಾಮಯ್ಯ, ʻʻಯಾವುದೇ ಅಧಿಕೃತ ದಾಖಲೆಗಳಿಲ್ಲದೆ-ಅರೆ ಬರೆ ಪತ್ರಗಳನ್ನು ತೋರಿಸಿ ರಾಜ್ಯದ ಜನರ ಮುಂದೆ ಬಿಜೆಪಿ-ಜೆಡಿಎಸ್ ಜಂಟಿ ಡ್ರಾಮಾ ನಡೆಸಿವೆ. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ದೃಷ್ಟಿಯಿಂದ ನಡೆಸಿದ ಮುಂಗಾರು ಅಧಿವೇಶನದಲ್ಲಿ ಮುಡಾ ಹಗರಣವನ್ನು ದೊಡ್ಡ ವಿಚಾರವನ್ನಾಗಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಸದನದ ಸಮಯವೂ ವ್ಯರ್ಥ್ಯವಾಗುವಂತಾಯಿತು. ಇವರು ಸದನ ನಡೆಯಲು ಬಿಡದೇ ಎರಡು ದಿನಗಳ ಕಾಲ ಸದನದ ಬಾವಿಗಿಳಿದ ಪ್ರತಿಭಟನೆ ನಡೆಸಿದರು. ಹಾಗಾಗಿ ಇನ್ನೂ ಒಂದು ದಿನ ನಡೆಯಬೇಕಿದ್ದ ಕಲಾಪವನ್ನು ಮುಂಚಿತವಾಗಿಯೇ ಅಂತ್ಯಗೊಳಿಸಬೇಕಾಯಿತು. ಆದರೆ ವಾಸ್ತವವಾಗಿ ಈ ಮುಡಾ ನಿವೇಶನಗಳನ್ನು ಮೈಸೂರು ಭಾಗದ ಬಿಜೆಪಿ ಹಾಗೂ ಜೆಡಿಎಸ್ ನಾಯಕರೂ ಪಡೆದಿದ್ದಾರೆ. ಈ ನಿವೇಶನಗಳ ಹಂಚಿಕೆಯೂ ಬಿಜೆಪಿ ಅವಧಿಯಲ್ಲಿಯೇ ಆಗಿದೆ. ಆದರೆ ಈ ಬಗ್ಗೆ ಅವರು ಮಾತನಾಡುವುದಿಲ್ಲ ಏಕೆʼʼ ಎಂದು ಕಿಡಿಕಾರಿದರು.

ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮುಡಾ ನಿವೇಶನಗಳನ್ನು ಪಡೆದಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಸಿಎಂ, ಮುಡಾ ನಿವೇಶನ ಪಡೆದ ಪ್ರಮುಖ ಪಟ್ಟಿ ನೀಡಿದರು.

ಸಿಎಂ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಜೆಡಿಎಸ್ ಹಿರಿಯ ನಾಯಕ ಹಾಗೂ ಎಚ್‌ ಡಿ ಕುಮಾರಸ್ವಾಮಿ ಅವರ ಆಪ್ತರಾದ ಜಿ ಟಿ ದೇವೇಗೌಡ ಅವರು ಈರನಗೆರೆ ಗ್ರಾಮದ ಸರ್ವೇ ನಂಬರ್ 14/1ರಲ್ಲಿ 2 ಎಕರೆ 25 ಗುಂಟೆ ಜಮೀನು, ಮಾದಗಳ್ಳಿ ಗ್ರಾಮದ ಸರ್ವೇ ನಂಬರ್ 17ರಲ್ಲಿ 1 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಪಡೆದಿದ್ದಾರೆ.

ಬಿಜೆಪಿ ವಿಧಾನ ಪರಿಷತ್ ಸದಸ್ಯ, ಹಾಗೂ ಮುಡಾ ಹಗರಣದ ಬಗ್ಗೆ ಮೊಟ್ಟಮೊದಲಿಗೆ ದನಿ ಎತ್ತಿದ್ದ ಮಾಜಿ ಸಚಿವ ಎಚ್ ವಿಶ್ವನಾಥ್ ಅವರು ಬೆಲವತ್ತ ಗ್ರಾಮದಲ್ಲಿ ಸರ್ವೇ ನಂಬರ್ 32ರಲ್ಲಿ 0.05 ಎಕರೆ ಜಮೀನಿಗೆ ಬದಲಿಗೆ ನಿವೇಶನ ಪಡೆದಿದ್ದಾರೆ. ಎಚ್‌ ಡಿ ಕುಮಾರಸ್ವಾಮಿ ಅವರ ಮತ್ತೊಬ್ಬ ಪರಮಾಪ್ತ ಜೆಡಿಎಸ್ ನಾಯಕ ಸಾರಾ ಮಹೇಶ್‌ ಅವರು ಬೋಗಾದಿ ಗ್ರಾಮದಲ್ಲಿ ಸರ್ವೇ ನಂಬರ್‌ 170,171 ಮತ್ತು 173ರಲ್ಲಿ 2 ಎಕರೆ 11 ಗುಂಟೆ ಜಮೀನಿಗೆ ಹಾಗೂ ದಟ್ಟಗಳ್ಳಿ ಗ್ರಾಮದ ಸರ್ವೇ ನಂಬರ್ 130/3 ರಲ್ಲಿ 0.09 ಎಕರೆ ಜಮೀನಿಗೆ ನಿವೇಶನಗಳನ್ನು ಪಡೆದಿದ್ದಾರೆ.‌


ಅದರಂತೆ ಇನ್ನೂ ಅನೇಕ ಬಿಜೆಪಿ- ಜೆಡಿಎಸ್‌ ಮುಖಂಡರು ಮುಡಾ ನಿವೇಶನಗಳನ್ನು ಪಡೆದಿದ್ದು, ಜೆ.ಎಸ್.ಎಸ್. ಹೆಸರಿನವರು, ಕುಪ್ಪಲೂರು ಗ್ರಾಮದಲ್ಲಿ ಸರ್ವೇ ನಂಬರ್ 39/1 ಬಿ‌ಯಲ್ಲಿ 4 ಎಕರೆ 34 ಗುಂಟೆ ಜಮೀನಿಗೆ ನಿವೇಶನಗಳನ್ನು ಪಡೆದಿದ್ದಾರೆ. ಸಿ ಎನ್ ಮಂಜೇಗೌಡ ಅವರು ಹಿನಕಲ್ ಗ್ರಾಮದ ಸರ್ವೇ ನಂಬರ್ 337ರಲ್ಲಿ 1 ಎಕರೆ ಜಮೀನು, ದೇವನೂರು ಗ್ರಾಮದ ಸರ್ವೇ ನಂಬರ್ 91ರಲ್ಲಿ, 2 ಎಕರೆ 25 ಗುಂಟೆ ಜಮೀನು, ಕೆಸರೆ ಗ್ರಾಮದ ಸರ್ವೇ ನಂಬರ್ 450ರಲ್ಲಿ 4 ಎಕರೆ 15 ಗುಂಟೆ ಜಮೀನು ಹಾಗೂ ಮೈಸೂರಿನ ಸರ್ವೇ ನಂಬರ್ 86ರಲ್ಲಿ 7 ಎಕರೆ 08 ಗುಂಟೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಪಡೆದಿದ್ದಾರೆ.

ಯು ಎನ್‌ ಶೇಖರ್‌ ಅವರು ನಾಚನಹಳ್ಳಿ ಗ್ರಾಮದ ಸರ್ವೇ ನಂಬರ್ 20 ಮತ್ತು 24ರಲ್ಲಿ 1 ಎಕರೆ 26 ಗುಂಟೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಪಡೆದಿದ್ದಾರೆ. ಗಂಗರಾಜು ಅವರು ಹೂಟಗಳ್ಳಿ ಗ್ರಾಮದ ಸರ್ವೇ ನಂಬರ್ 40/1ರಲ್ಲಿ ಒಂದೂವರೆ ಗುಂಟೆ ಜಮೀನು, ಕುಪ್ಪಲೂರು ಗ್ರಾಮದ ಸರ್ವೇ ನಂಬರ್ 36/1ರಲ್ಲಿ 0.16 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಪಡೆದಿದ್ದಾರೆ. ಜೂ. ಮಹದೇವ ಸ್ವಾಮಿ ಅವರು ಹಿನಕಲ್ ಗ್ರಾಮದ ಸರ್ವೇ ನಂಬರ್ 255/1‌ ಮತ್ತು 257ರಲ್ಲಿ 0.34 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಪಡೆದಿದ್ದಾರೆ. ಜೂ ಶಿವಕುಮಾರ್‌ ಅವರು ಅಯ್ಯಜನಹುಂಡಿ ಗ್ರಾಮದ ಸರ್ವೇ ನಂಬರ್ 16ರಲ್ಲಿ 0.09 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಪಡೆದಿದ್ದಾರೆ ಹಾಗೂ ಬಿಜಿ ಎಸ್ ಅವರು ಮಳಲವಾಡಿ ಗ್ರಾಮದ ಸರ್ವೇ ನಂಬರ್ 7/1ಎನಲ್ಲಿ 0.11 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಪಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

Read More
Next Story