ಸಂವಿಧಾನ ಬದಲಿಸುವ ರಹಸ್ಯ ಕಾರ್ಯಸೂಚಿ ಸಂಸದರ ಬಾಯಿಂದ ಬರುತ್ತಿದೆ: ಸಿಎಂ ಸಿದ್ದರಾಮಯ್ಯ
x

ಸಂವಿಧಾನ ಬದಲಿಸುವ ರಹಸ್ಯ ಕಾರ್ಯಸೂಚಿ ಸಂಸದರ ಬಾಯಿಂದ ಬರುತ್ತಿದೆ: ಸಿಎಂ ಸಿದ್ದರಾಮಯ್ಯ

ಮನುವಾದ, ಮನುಸ್ಕೃತಿ ಮೇಲೆ ನಂಬಿಕೆ ಇಟ್ಟಿರುವ ಬಿಜೆಪಿಯವರು ಸಂವಿಧಾನ ಬದಲಿಸುವ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಅನಂತಕುಮಾರ್ ಹೆಗಡೆಯವರ ಬಾಯಿಂದ ಹೇಳಿಸುತ್ತಿದ್ದಾರೆ.


ಚಾಮರಾಜನಗರ: ಬಿಜೆಪಿಯ ಅನಂತ ಕುಮಾರ್ ಹೆಗಡೆ ಈ ಹಿಂದೆಯೂ “ನಾವು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಿಸಲು ಎಂಬ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಬಿಜೆಪಿಯವರು ಯಾಕೆ ಕ್ರಮ ಕೈಗೊಂಡಿಲ್ಲ" ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ತಾಲೂಕಿನ ಹೆಗ್ಗವಾಡಿಯಲ್ಲಿ ಮಾಜಿ ಸಂಸದ ಆರ್ ಧ್ರುವನಾರಾಯಣ ಅವರ ಸಮಾಧಿಗೆ ಪುಪ್ಪನಮನ ಸಲ್ಲಿಸಿ ಬಳಿಕ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಸಂಬಂಧ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು.

ಮನುವಾದ, ಮನುಸ್ಕೃತಿ ಮೇಲೆ ನಂಬಿಕೆ ಇಟ್ಟಿರುವ ಬಿಜೆಪಿಯವರು ಸಂವಿಧಾನ ಬದಲಿಸುವ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಅನಂತಕುಮಾರ್ ಹೆಗಡೆಯವರ ಬಾಯಿಂದ ಹೇಳಿಸುತ್ತಿದ್ದಾರೆ ಎಂದು ಟೀಕಿಸಿದರು.

ಸಂವಿಧಾನ ತಿದ್ದುಪಡಿ ಮಾಡಬೇಕಾದರೆ ಬಹುಮತದ ಅಗತ್ಯ ಇದೆ. ಹೀಗಾಗಿ 400 ಸ್ಥಾನಗಳನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು.

ಇನ್ನು ಸಿಎಎ ಜಾರಿ ಬಗ್ಗೆ ಮಾತನಾಡಿದ ಸಿಎಂ, ಇಷ್ಟು ದಿನ ಸುಮ್ಮನಿದ್ದವರು ಚುನಾವಣೆ ಸಮೀಪಿಸುತ್ತಿದ್ದಂತೆ ಸಿಎಎ ಜಾರಿ ಮಾಡಿದ್ದಾರೆ. ಧರ್ಮಾಧಾರಿತ ಪೌರತ್ವ ನೀಡುವುದು ಸರಿಯಲ್ಲ. ಹೀಗಾಗಿ ನಾವು ಸಿಎಎ ವಿರೋಧಿಸುತ್ತೇವೆ ಎಂದರು.

ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಆರೋಪ ಶುದ್ಧ ಸುಳ್ಳು. ನಮ್ಮ ನಾಡಿನ ಜನತೆಗೆ ಕುಡಿಯುವ ನೀರನ್ನು ಪೂರೈಕೆ ಮಾಡುವುದು ನಮ್ಮ ಜವಾಬ್ದಾರಿ. ತಮಿಳುನಾಡಿಗೆ ಒಂದು ತೊಟ್ಟು ನೀರು ಬಿಡಲು ಸಾಧ್ಯವಿಲ್ಲ ಎಂದರು.

ಇನ್ನು ಮೈಸೂರು ಬಿಜೆಪಿ ಟಿಕೆಟ್ ಕುರಿತಂತೆ ಮಾತನಾಡಿದ ಸಿ.ಎಂ, ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಾರೆ. ಅವರ ಗೆಲುವು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಯದುವೀರ್ ಅವರನ್ನು ಅಭ್ಯರ್ಥಿ ಮಾಡುವ ನಿರ್ಧಾರಕ್ಕೆ ಬಿಜೆಪಿ ಬಂದಿರಬಹುದು. ಆದರೆ ನಮಗೆ ಅಭ್ಯರ್ಥಿಯಾರಾಗುತ್ತಾರೆ ಎಂಬುವುದು ಮುಖ್ಯವಲ್ಲ. ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ ಎಂದರು.

Read More
Next Story