
ಸಚಿವ ದಿನೇಶ್ ಗುಂಡೂರಾವ್.
The Federal Interview | ಕರಾವಳಿಯಲ್ಲಿ ಎಷ್ಟು ಹೆಣ ಬೀಳಲಿವೆ ಎಂದು ಬಿಜೆಪಿಯವರು ಕಾಯುತ್ತಿರುತ್ತಾರೆ: ಸಚಿವ ದಿನೇಶ್ ಗುಂಡೂರಾವ್
ಹಿಂದೂಗಳು ಸತ್ತರೆ ಮಾತ್ರ ಬಿಜೆಪಿಯವರು ಮುಂದೆ ಬರುತ್ತಾರೆ. ಮುಸ್ಲಿಮರು ಸತ್ತರೆ ಬರುವುದಿಲ್ಲ. ನಾವು ಕೋಮುರಾಷ್ಟ್ರ ಆಗಬಾರದು. ಹಾಗಾದರೆ ನಮಗೂ ಪಾಕಿಸ್ತಾನಕ್ಕೂ ಯಾವ ವ್ಯತ್ಯಾಸವಿರುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರು ಜನರನ್ನು ಕೆರಳಿಸಿ, ಕರಾವಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಸರ್ಕಾರದ ಅವಧಿಯಲ್ಲೇ ರೌಡಿ ಶೀಟರ್ ತೆರೆದ ಬಿಜೆಪಿಯವರು ಈಗ ಸುಹಾಸ್ ಶೆಟ್ಟಿಯನ್ನು ಹುತಾತ್ಮನಂತೆ ಬಿಂಬಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ಯ ಗುಂಡೂರಾವ್ ಆರೋಪಿಸಿದ್ದಾರೆ.
'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರು ಮಾಡುತ್ತಿರುವ ರಾಜಕಾರಣವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಕರಾವಳಿಯಲ್ಲಿ ಎಷ್ಟು ಹೆಣ ಬೀಳಲಿವೆ ಎಂದು ಬಿಜೆಪಿಯವರು ಕಾಯುತ್ತಿರುತ್ತಾರೆ. ಹಿಂದೂಪರ ಸಂಘಟನೆಗಳು ಇದರ ರಾಜಕೀಯ ಲಾಭ ಪಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಮರು ಸತ್ತರೆ ಬರುವುದಿಲ್ಲ, ಕ್ರಿಶ್ಚಿಯನ್ನರು ಸತ್ತರೆ ಬರುವುದಿಲ್ಲ. ಹಿಂದೂಗಳು ಸತ್ತರೆ ಮಾತ್ರ ಬಿಜೆಪಿಯವರು ಮುಂದೆ ಬರುತ್ತಾರೆ. ನಾವು ಕೋಮುರಾಷ್ಟ್ರ ಆಗಬಾರದು. ಆಗ ನಮಗೂ ಪಾಕಿಸ್ತಾನಕ್ಕೂ ಯಾವ ವ್ಯತ್ಯಾಸವಿರುವುದಿಲ್ಲ ಎಂದು ಹೇಳಿದರು.
ಪೆರೇಶ್ ಮೆಸ್ತಾ ಕೊಲೆಯಾದಾಗ ಕರಾವಳಿ ಭಾಗದಲ್ಲಿ ಗಲಾಟೆ ಎಬ್ಬಿಸಿದರು. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ದೊಂಬಿ ಮಾಡಲು ಹೊರಟಿದ್ದರು. ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು, ಇನ್ನು ಒಂದೆರಡು ಹೆಣಗಳು ಬೀಳಬೇಕು ಎಂದು ಆಲೋಚಿಸಿದ್ದರು ಎಂದು ಆರೋಪಿಸಿದರು.
ತಮ್ಮ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿದ ಶಾಸಕ ಹರೀಶ್ ಪೂಂಜಾ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ನನ್ನ ಮೇಲೆ ವೈಯಕ್ತಿಕ ಟೀಕೆ ಮಾಡಬಾರದು. ಅದು ಅವರ ಸಂಸ್ಕೃತಿ ತೋರಿಸುತ್ತದೆ. ಅದೇ ಅವರ ಸಮುದಾಯದ ಬಗ್ಗೆ ಬೇರೆಯವರು ಮಾತನಾಡಿದ್ದರೆ, ಸಾವಿರ ಜನರನ್ನು ಕಳಿಸಿ ಬೆಂಕಿ ಹಚ್ಚಿಸುತ್ತಿದ್ದರು ಎಂದು ಕಿಡಿಕಾರಿದರು.
ಸರ್ಕಾರದಿಂದಲೇ ಅಂಬ್ಯುಲೆನ್ಸ್ ಸೇವೆ
ಖಾಸಗಿ ಸಂಸ್ಥೆಯ ಹಿಡಿತದಲ್ಲಿರುವ 108 ಅಂಬ್ಯುಲೆನ್ಸ್ ಗಳ ನಿರ್ವಹಣೆಯನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗುವುದು ಎಂದು ಅರೋಗ್ಯ ಸಚಿವ ದಿನೇಶ್ರಾ ಗುಂಡೂರಾವ್ ಹೇಳಿದರು.
108 ಅಂಬ್ಯುಲೆನ್ಸ್‌ಗಳನ್ನು ಇಲ್ಲಿಯವರೆಗೆ ಖಾಸಗಿ ಸಂಸ್ಥೆ ಜಿ ವಿ ಕೆ ಸಂಸ್ಥೆ ನಿರ್ವಹಿಸುತ್ತಿದೆ. ಆದರೆ, ಈ ಸೇವೆಯಲ್ಲಿ ಸಾಕಷ್ಟು ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರವೇ ನಿರ್ವಹಣೆ ಮಾಡಲಿದೆ. ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಕಮಾಂಡ್ ಸೆಂಟರ್ ನ ಪ್ರಾಯೋಗಿಕ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
108 ಅಂಬ್ಯುಲೆನ್ಸ್‌ಗಳ ಸೇವೆ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯವಾದದ್ದು. ಖಾಸಗಿ ಏಜೆನ್ಸಿಯಿಂದ ಇದರ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಸರ್ಕಾರದಿಂದ ಏಜೆನ್ಸಿಗೆ ಹಣ ಪಾವತಿಯಾದರೂ, ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿರಲಿಲ್ಲ. 108 ಅಂಬ್ಯುಲೆನ್ಸ್‌ಗಳ ಮಾಲೀಕತ್ವ ಸರ್ಕಾರದ ಬಳಿಯೇ ಇದ್ದರೂ ನಿಯಂತ್ರಣ ಕಷ್ಟ ಸಾಧ್ಯವಾಗುತ್ತಿತ್ತು. ಅಂಬ್ಯುಲೆನ್ಸ್‌ಗಳಿಗೆ ಡಿಸೇಲ್, ಪೆಟ್ರೋಲ್ ಹಾಗೂ ವಾಹನ ಚಾಲಕರ ವೇತನ ಸರ್ಕಾರವೇ ನೀಡುತ್ತಿತ್ತು. ಆದರೆ, ಏಜೆನ್ಸಿ ಕೇವಲ ಒಂದು ಕಮಾಂಡ್ ಸೆಂಟರ್ ಮೂಲಕ ನಿರ್ವಹಣೆ ಮಾಡುತ್ತಿತ್ತು. ಈಗ ಖಾಸಗಿ ಏಜೆನ್ಸಿಯ ಬದಲು ಆರೋಗ್ಯ ಇಲಾಖೆಯೇ ನಡೆಸಿದರೆ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ಉಳಿತಾಯವಾಗಲಿದೆ. ಅಲ್ಲದೇ ವ್ಯವಸ್ಥೆಯಲ್ಲೂ ಸುಧಾರಣೆ ತರಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಉತ್ತರಿಸಲಿ
ಭಾರತ ಹಾಗೂ ಪಾಕಿಸ್ತಾನ ನಡುವಿನ ಕದನ ವಿರಾಮದ ಬಗ್ಗೆ ನಮ್ಮ ಪ್ರಶ್ನೆ ಇಲ್ಲ, ಆದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಿಂದ ಕದನ ವಿರಾಮ ಘೋಷಣೆಯಾದ ಬಗ್ಗೆ ಪ್ರಶ್ನೆ ಇದೆ. ಇದಕ್ಕೆ ಪ್ರಧಾನಿ ನರೇಂದ್ರಮೋದಿಯವರು ಉತ್ತರ ಕೊಡಬೇಕು. ಯಾವ ಕಾರಣದಿಂದ ಕದನ ವಿರಾಮವಾಯಿತು? ಏನೇನು ಷರತ್ತು ಹಾಕಲಾಗಿದೆ ಎಂಬ ಮಾಹಿತಿ ನೀಡಬೇಕು ಎಂದರು.