
ಬಿಜೆಪಿಯಿಂದ ʼವಕ್ಫ್ ಸಮರʼ ಜೋರು; ವಕ್ಫ್ ಗೆಜೆಟ್ ಅಧಿಸೂಚನೆ ರದ್ದತಿಗೆ ಆಗ್ರಹ
ಬಳ್ಳಾರಿಯ ಸಂಡೂರಿನಲ್ಲಿ ಬೀಡು ಬಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವ ಸರ್ಕಾರದ ಧೋರಣೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸೋಮವಾರ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕುಗಳಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ತಂಡೋಪತಂಡವಾಗಿ ರಸ್ತೆಗಿಳಿದು ಸರ್ಕಾರದ ವಿರುದ್ಧ ವಕ್ಫ್ ಸಮರ ಸಾರಿದರು.
ಉಪಚುನಾವಣೆ ನಡೆಯುತ್ತಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆಯ ಕಾವು ಜೋರಾಗಿತ್ತು. ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯದಲ್ಲಿರುವ ತುಘಲಕ್ ಸರ್ಕಾರ, ಲ್ಯಾಂಡ್ ಜಿಹಾದ್ ಹೆಸರಲ್ಲಿ ರೈತರನ್ನು ಬಲವಂತವಾಗಿ ಮತಾಂತರಕ್ಕೆ ತಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರೈತರೊಂದಿಗೆ ಸೇರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಬಳ್ಳಾರಿಯ ಸಂಡೂರಿನಲ್ಲಿ ಬೀಡು ಬಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮೈಸೂರು, ಬೆಂಗಳೂರು ಗ್ರಾಮಾಂತರ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಕೊಡಗು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರೈತರಿಗೆ ನೀಡಿರುವ ನೊಟೀಸ್ ಹಿಂಪಡೆಯಬೇಕು. ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಮಧ್ಯೆ, ಬಿಜೆಪಿ ಪ್ರತಿಭಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು, ನೀಡಿರುವ ಎಲ್ಲಾ ನೋಟೀಸ್‌ಗಳನ್ನು ಹಿಂಪಡೆಯುವುದಾಗಿ ಹೇಳಿದ್ದರೂ ಪ್ರತಿಭಟನೆ ಆಯೋಜಿಸಿರುವ ಬಿಜೆಪಿ ನಿಲುವನ್ನು ಟೀಕಿಸಿದರು. ಬಿಜೆಪಿಯ ಪ್ರತಿಭಟನೆಯ ಉದ್ದೇಶ ಸಂಪೂರ್ಣ ರಾಜಕೀಯವಾಗಿದ್ದು, ರೈತರ ಹಿತ ಕಾಪಾಡುವ ನಿಜವಾದ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಜಂಟಿ ಸದನ ಸಮಿತಿಗೆ ಅಶೋಕ್ ಪತ್ರ
ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸದಸನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ವಕ್ಫ್ ಬೋರ್ಡ್‌ಗೆ ಸಂಬಂಧಿಸಿ ನಡೆಯುತ್ತಿರುವ ಎಲ್ಲ ಆಸ್ತಿ ನೋಂದಣಿ, ತಿದ್ದುಪಡಿಗಳನ್ನು ಕೂಡಲೇ ನಿಲ್ಲಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.
ನರಗುಂದ ಮಾದರಿ ರೈತ ಬಂಡಾಯ; ಬೊಮ್ಮಾಯಿ
ಇನ್ನು ಶಿಗ್ಗಾವಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ರೈತರ ಜಮೀನು ಮುಟ್ಟಿದವರು ಯಾರೂ ಕುರ್ಚಿ ಮೇಲೆ ಕೂರಲು ಆಗುವುದಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ ಆಗಲಿದೆ. ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ವಕ್ಪ್ ಗೆಜೆಟ್ ಅಧಿಸೂಚನೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಶಿಗ್ಗಾವಿ ತಾಲೂಕಿನ ಸರ್ವೆ ನಂಬರ್ 417 ರಲ್ಲಿ ನೂರಾರು ಜನ ಬಡವರಿಗೆ ಸ್ಲಂ ಬೋರ್ಡ್ ನಿಂದ ಮನೆ ಕಟ್ಟಲು ಅನುಮತಿ ನೀಡಿದ್ದೇವೆ. ಈಗ ವಕ್ಪ್ ಆಸ್ತಿ ಅಂತ ದಾವೆ ಹೂಡಲಾಗಿದೆ. ಶಿಗ್ಗಾವಿ ಬಡವರಿಗೆ ತಲೆ ಮೇಲೆ ಸೂರು ಇಲ್ಲದಂತ ಮಾಡಲು ವಕ್ಪ್ ಬೋರ್ಡ್ ಹೊರಟಿದೆ ಎಂದು ಆರೋಪಿಸಿದರು.
ಈ ಹಿಂದೆ ಶಿಗ್ಗಾವಿಯಲ್ಲಿ 220 ಕೆವಿ ಸಾಮರ್ಥ್ಯದ ವಿದ್ಯುತ್ ಸ್ಟೇಷನ್ ಮಾಡಲು ಆ ಜಾಗ ವಕ್ಪ್ ಆಸ್ತಿ ಎಂದು ನಮೂದಾಗಿತ್ತು. ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿ ಗೆದ್ದಿದ್ದೇವೆ. ತಡಸ ಬಳಿಯ ಲಂಬಾಣಿ ತಾಂಡಾವಿರುವ 19 ಎಕರೆ ಜಮೀನನ್ನು ವಕ್ಪ್ ಆಸ್ತಿ ಎಂದು ಮಾಡಿದ್ದಾರೆ ಎಂದು ದೂರಿದರು.
ನಾನು ವಕ್ಪ್ ಬೋರ್ಡ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ, ಕಾಂಗ್ರೆಸ್ಸಿನ ಕೆಲವರು ವಕ್ಪ್ ಆಸ್ತಿ ನುಂಗಿದ್ದಾರೆ ಎಂದು ಚೀಟಿ ಕೊಟ್ಟರು. ಒತ್ತುವರಿ ತೆರವುಗೊಳಿಸಿ ವಾಪಸ್ ಪಡೆಯುವಂತೆ ಹೇಳಿದ್ದೆ. ಈಗ ಅದನ್ನೇ ಕಾಂಗ್ರೆಸ್‌ನವರು ತಿರುಚಿ ನಾನು ರೈತರ ಜಮೀನು ವಾಪಸ್ ಪಡೆಯಲು ಹೇಳಿದ್ದೆ ಎಂಬುದಾಗಿ ಬಿಂಬಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.