BJP Infighting | ವಕ್ಫ್‌ ವಿವಾದ: ಅಭಿಯಾನಕ್ಕೆ ಸ್ವಪಕ್ಷೀಯರ ಅಡ್ಡಿ; ಹೊಸ ತಂಡ ಕಟ್ಟುವ ಘೋಷಣೆ ಮಾಡಿದ ಯತ್ನಾಳ್‌
x
ಬೀದರ್‌ನಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಜನಜಾಗೃತಿ ಅಭಿಯಾನ ನಡೆಯಿತು

BJP Infighting | ವಕ್ಫ್‌ ವಿವಾದ: ಅಭಿಯಾನಕ್ಕೆ ಸ್ವಪಕ್ಷೀಯರ ಅಡ್ಡಿ; ಹೊಸ ತಂಡ ಕಟ್ಟುವ ಘೋಷಣೆ ಮಾಡಿದ ಯತ್ನಾಳ್‌

ವಕ್ಪ್ ವಿರುದ್ಧದ ಹೋರಾಟಕ್ಕೆ ರಾಜ್ಯವ್ಯಾಪಿ ಪ್ರವಾಸ ಕೈಗೊಳ್ಳುವ ತಂಡಗಳಲ್ಲಿ ಯತ್ನಾಳ್ ಹೆಸರು ಸೇರಿಸಿದ್ದರೂ ಪ್ರತ್ಯೇಕ ಹೋರಾಟದ ಮೂಲಕವೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಯತ್ನಾಳ್‌ ತೊಡೆ ತಟ್ಟಿದ್ದಾರೆ.


ವಕ್ಪ್ ಹಾಗೂ ಇನ್ನಿತರೆ ವಿಚಾರದಲ್ಲಿ ಬಿಜೆಪಿ ನಾಯಕರ ನಡುವಿನ ಒಳಜಗಳ ಮತ್ತೊಮ್ಮೆ ಬೀದಿಗೆ ಬಂದಿದೆ. ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮೊದಲಿನಿಂದಲೂ ಕಿಡಿಕಾರುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ತಮ್ಮ ನೇತೃತ್ವದಲ್ಲಿ ಹೊಸ ತಂಡ ಕಟ್ಟುವ ಘೋಷಣೆ ಮಾಡಿದ್ದಾರೆ.

ವಕ್ಪ್ ವಿರುದ್ಧದ ಹೋರಾಟಕ್ಕೆ ರಾಜ್ಯವ್ಯಾಪಿ ಪ್ರವಾಸ ಕೈಗೊಳ್ಳುವ ತಂಡಗಳಲ್ಲಿ ತಮ್ಮ ಹೆಸರು ಸೇರಿಸಿದ್ದರೂ, ಯತ್ನಾಳ್‌ ಮಂಗಳವಾರ ಪ್ರತ್ಯೇಕ ಹೋರಾಟದ ಮೂಲಕವೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ತೊಡೆ ತಟ್ಟಿದ್ದಾರೆ.

ಯತ್ನಾಳ್‌ ವಿರುದ್ಧ ಪೊಲೀಸರಿಗೆ ದೂರು

ಬೀದರ್ ನಿಂದ ಮಂಗಳವಾರ ಬಸನಗೌಡ ಪಾಟೀಲ್‌ ಯತ್ನಾಳ್‌ ಆರಂಭಿಸಿದ ಜನಜಾಗೃತಿ ಅಭಿಯಾನದಲ್ಲಿ ಬಿಜೆಪಿ ಬಣ ಸಂಘರ್ಷ ಜಗಜ್ಜಾಹೀರಾಗಿದೆ. ಯತ್ನಾಳ್ ಬಣದ ಅಭಿಯಾನದಿಂದ ಅಂತರ ಕಾಯ್ದುಕೊಂಡಿರುವ ಬೀದರ್ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷರು, ಯತ್ನಾಳ್ ವಿರುದ್ಧವೇ ಪೊಲೀಸ್ ಠಾಣೆ ದೂರು ನೀಡಿದ್ದಾರೆ.

"ಅನಾಮಿಕರು ಅನುಮತಿ ಪಡೆಯದೇ ಬಿಜೆಪಿ ಬ್ಯಾನರ್ ಅಡಿ ವಕ್ಪ್ ಹೋರಾಟ ಮಾಡುತ್ತಿದ್ದಾರೆ. ಕೂಡಲೇ ಪಕ್ಷದ ಬ್ಯಾನರ್ ತೆರವುಗೊಳಿಸಿ" ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಮಧ್ಯೆ ರಾಜ್ಯ ಬಿಜೆಪಿ ಕೂಡ "ಪಕ್ಷಕ್ಕೂ, ಯತ್ನಾಳ್ ಹೋರಾಟಕ್ಕೂ ಸಂಬಂಧವಿಲ್ಲ" ಎಂದು ಸ್ಪಷ್ಟಪಡಿಸಿದ್ದು, ಶಿಸ್ತುಕ್ರಮದ ಎಚ್ಚರಿಕೆ ನೀಡಿದೆ. ಆದರೆ, ಇದಾವುದಕ್ಕೂ ಜಗ್ಗದ ಯತ್ನಾಳ್ ಬಹಿರಂಗ ಸಭೆ ನಡೆಸಿ, ಹೊಸ ತಂಡ ಕಟ್ಟುವ ಸಂದೇಶ ರವಾನಿಸಿದ್ದಾರೆ.

ಒರಿಜಿನಲ್ ಕಾರ್ಯಕರ್ತರಲ್ಲ

"ಬಿಜೆಪಿಯಲ್ಲಿ ಇರುವವರೆಲ್ಲ ಒರಿಜನಲ್ ಕಾರ್ಯಕರ್ತರಲ್ಲ. ರಾತ್ರಿ ಕಾಂಗ್ರೆಸ್ ನಾಯಕರ ಜೊತೆ ಇರುತ್ತಾರೆ. ಬೆಳಿಗ್ಗೆ ಜೈಶ್ರೀರಾಮ್ ಎನ್ನುತ್ತಾರೆ. ಅಂತಹವರ ಸಹವಾಸವೇ ನಮಗೆ ಬೇಡ. ಹೊಸ ತಂಡ ಕಟ್ಟಿ ಪಕ್ಷವನ್ನು ಸಂಘಟಿಸೋಣ, ಯಾರೊಬ್ಬರು ತಲೆ ಕೆಡಿಸಿಕೊಳ್ಳಬೇಡಿ" ಎಂದು ನೆರೆದಿದ್ದ ಬೆಂಗಲಿಗರಿಗೆ ಹೇಳಿದ್ದಾರೆ.

"ಕಲಬುರಗಿಯಲ್ಲಿ ಪಕ್ಷದ ಬಹಳಷ್ಟು ಮುಖಂಡರು ಇಂದು ನಮ್ಮ ಜೊತೆ ಬರುವುದಿಲ್ಲ. ಆದರೆ, ಮುಂದೆ ಒಬ್ಬೊಬ್ಬರೇ ಬರುತ್ತಾರೆ. ಚುನಾವಣೆಗಳಲ್ಲಿ ಟಿಕೆಟ್ ಹಂಚಿಕೆ ಮಾಡುವ ಅಧಿಕಾರ ನಮ್ಮಲ್ಲೇ ಇರಲಿದೆ. ಈಗಿನ ರಾಜ್ಯಾಧ್ಯಕ್ಷರು ನನ್ನ ವಿರುದ್ದ ಹೈಕಮಾಂಡ್‌ಗೆ ಪತ್ರ ಬರೆಯುತ್ತಿರುವುದು, ದೂರು ನೀಡುವುದು ಹೊಸದೇನೂ ಅಲ್ಲ. ನನ್ನ ವಿರುದ್ದ ನೀಡಿರುವ ದೂರುಗಳೇ ಒಂದು ಕೊಠಡಿ ತುಂಬಿವೆ. ಆದರೆ ಅವರಿಂದ ನನ್ನನ್ನು ಏನೂ ಮಾಡಲು ಆಗುವುದಿಲ್ಲ" ಎಂದು ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ನೀಡಿದರು.

ರಾತ್ರಿಯಾದರೆ ಸಿಎಂ, ಡಿಸಿಎಂ ಮನೆಯಲ್ಲಿ ಇರುತ್ತಾರೆ!

"ಬಿ.ವೈ.ವಿಜಯೇಂದ್ರ ನಾಯಕತ್ವವನ್ನು ನಾವು ಒಪ್ಪುವುದೇ ಇಲ್ಲ. ಅವರು ಯಾವುದೇ ಹೋರಾಟ ಮಾಡಿಲ್ಲ. ವಿಜಯೇಂದ್ರ ವಕ್ಫ್ ವಿರುದ್ಧ ಎಲ್ಲಿ ಹೋರಾಟ ಮಾಡಿದ್ದಾನೆ? ಯಾವ ಹಳ್ಳಿಗೆ ಹೋಗಿ ರೈತರ ಮನವಿ ಸ್ವೀಕರಿಸಿದ್ದಾನೆ ತೋರಿಸಿ. ರಾತ್ರಿಯಾದರೆ ಡಿ.ಕೆ ಶಿವಕುಮಾರ್‌, ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಇರುತ್ತಾನೆ. ಎಲ್ಲಿ ರೈತರ ಪರವಾಗಿ ಹೋರಾಟ ಮಾಡಿದ್ದಾನೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಯತ್ನಾಳ್‌ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

"ಇನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ನೂರೆಂಟು ಪ್ರಕರಣಗಳಿವೆ. ಕಾಪಾಡೋ ಶಿವಪ್ಪ ಅಂತಾ ಡಿಸಿಎಂ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಇರುತ್ತಾರೆ. ಕಾಪಾಡೋ ಸಿದ್ದರಾಮಯ್ಯ ಅಂತಾ ಅವರ ಮನೆಗೂ ಹೋಗುತ್ತಾರೆ" ಎಂದು ಬಿಎಸ್‌ವೈ ವಿರುದ್ಧವೂ ವ್ಯಂಗ್ಯವಾಡಿದರು.

ಸೋಮವಾರ ಬೆಳಿಗ್ಗೆ ಬೀದರ್‌ನ ಧರ್ಮಾಪುರ ಗ್ರಾಮಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹಾಗೂ ಅವರ ತಂಡ ಭೇಟಿ ನೀಡಿದಾಗ ಸ್ಥಳೀಯ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಶಾಸಕ ಡಾಣ ಶೈಲೇಂದ್ರ ಬೆಲ್ದಾಳೆ ಹಾಗೂ ಯತ್ನಾಳ್‌ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದಿತ್ತು. ಜನಜಾಗೃತಿ ಅಭಿಯಾನ ಕುರಿತು ಪಕ್ಷದಿಂದ ಯಾವುದೇ ಮಾಹಿತಿ ನೀಡಿಲ್ಲ ಎಂದು ಯತ್ನಾಳ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಬಸನಗೌಡ ಯತ್ನಾಳ ನೇತೃತ್ವದ ಬಣ ನ.26 ರಿಂದ ಡಿ.25 ರವರೆಗೆ ವಕ್ಫ್‌ ಆಸ್ತಿಗಳ ಕುರಿತು ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.

Read More
Next Story