BJP Infighting | ಯಡಿಯೂರಪ್ಪ ಜನ್ಮದಿನ: ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಮುಹೂರ್ತ ನಿಗದಿ
ಫೆಬ್ರವರಿ 27ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕನಿಷ್ಟ 20 ಲಕ್ಷ ಜನ ಸೇರಿಸಿ ರಾಜ್ಯದ ಜನತೆಗೆ ಸಂದೇಶ ರವಾನಿಸಲಾಗುವುದು. ಜೊತೆಗೆ ಈ ಸಮಾವೇಶಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ವರಿಷ್ಠರನ್ನು ಕರೆದು ಬಲಪ್ರದರ್ಶನಕ್ಕೂ ವಿಜಯೇಂದ್ರ ಬಣದ ಶಾಸಕರು ನಿರ್ಧರಿಸಿದ್ದಾರೆ.
“ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪಲಾಗದು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ ಬೆನ್ನಲ್ಲೇ ದಾವಣಗೆರೆಯಲ್ಲಿ ಸಭೆ ನಡೆಸಿದ ಬಿಜೆಪಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ನೇತೃತ್ವದ ಬಣ, ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗಾಗಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದೆ.
ಈ ಮೊದಲು ಬಿ ಎಸ್ ಯಡಿಯೂರಪ್ಪ ಮತ್ತು ಬಿ ವೈ ವಿಜಯೇಂದ್ರ ಅವರ ಬೆಂಬಲಿಗರ ಸಮಾವೇಶದ ಹೆಸರಲ್ಲಿ ನಡೆಸಲು ಉದ್ದೇಶಿಸಿದ್ದ ಕಾರ್ಯಕ್ರಮವನ್ನು ಇದೀಗ ಯಡಿಯೂರಪ್ಪ ಜನ್ಮ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಮಾವೇಶ ಎಂದು ಘೋಷಿಸಲಾಗಿದೆ.
ಫೆಬ್ರವರಿ 27ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕನಿಷ್ಟ 20 ಲಕ್ಷ ಜನ ಸೇರಿಸಿ ರಾಜ್ಯದ ಜನತೆಗೆ ಸಂದೇಶ ರವಾನಿಸಲಾಗುವುದು. ಜೊತೆಗೆ ಈ ಸಮಾವೇಶಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ವರಿಷ್ಠರನ್ನು ಕರೆದು ಬಲಪ್ರದರ್ಶನಕ್ಕೂ ವಿಜಯೇಂದ್ರ ಬಣದ ಶಾಸಕರು ನಿರ್ಧರಿಸಿದ್ದಾರೆ.
ಯಡಿಯೂರಪ್ಪ ಅವರ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ನಡೆಸುವ ಮೂಲಕ ಎರಡು ವರ್ಷದ ಹಿಂದೆ ಅದೇ ದಾವಣಗೆರೆಯಲ್ಲಿ ನಡೆದಿದ್ದ ಸಿಎಂ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆ ಸಿದ್ದರಾಮೋತ್ಸವಕ್ಕೆ ಟಕ್ಕರ್ ಕೊಡಲು ಸಭೆಯಲ್ಲಿ ಚರ್ಚಿಸಲಾಗಿದೆ. ಅದೇ ಹೊತ್ತಿಗೆ, ಮುಂದಿನ ವಿಧಾನಸಭಾ ಚುನಾವಣೆಯವರೆಗೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡದೆ ವಿಜಯೇಂದ್ರ ಅವರನ್ನೇ ಮುಂದುವರಿಸುವಂತೆಯೂ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಲು ಕೂಡ ಭಾನುವಾರದ ಸಭೆಯಲ್ಲಿ ಮಾಜಿ ಶಾಸಕರು ಮತ್ತು ಸಚಿವರು ನಿರ್ಧರಿಸಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದ ಬಿ ಎಸ್ ಯಡಿಯೂರಪ್ಪ ಅವರು ಚುನಾವಣಾ ಕಣದಿಂದ ಮಾತ್ರ ಹಿಂದೆ ಸರಿದಿದ್ದಾರೆ; ವಿನಃ ರಾಜಕಾರಣದಿಂದ ಅಲ್ಲ. ಈಗಲೂ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ. ಅವರ ಜನ್ಮದಿನವನ್ನು ಈ ಬಾರಿ ದಾವಣಗೆರೆಯಲ್ಲಿ ಕನಿಷ್ಟ 20 ಲಕ್ಷ ಜನರನ್ನು ಸೇರಿಸಿ ಅದ್ದೂರಿಯಾಗಿ ಆಚರಿಸುವ ಮೂಲಕ ರಾಜ್ಯದ ಜನತೆಗೆ ಒಂದು ಸಂದೇಶ ರವಾನಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅಭಿಮಾನಿಗಳಾದ 55 ಮಂದಿ ಮಾಜಿ ಶಾಸಕರು ಮತ್ತು ಸಚಿವರು ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ. ಈ ನಿರ್ಧಾರದ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲು ಶೀಘ್ರವೇ ದೆಹಲಿಗೆ ನಿಯೋಗ ಹೋಗಲಾಗುವುದು. ಅಲ್ಲದೆ, ಸಮಾವೇಶದ ಎಲ್ಲಾ ಜವಾಬ್ದಾರಿ ನಿಭಾಯಿಸಲು ಹತ್ತು ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ವಿಜಯೇಂದ್ರ ಬಣದ ಮುಂಚೂಣಿಯಲ್ಲಿರುವ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ, ಹರತಾಳು ಹಾಲಪ್ಪ, ಎಸ್ ಎ ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಸೋಮಶೇಖರ ರೆಡ್ಡಿ, ಸೀಮಾ ಮಸೂತಿ, ಬೆಳ್ಳಿಪ್ರಕಾಶ್, ಜಗದೀಶ್ ಮೆಟಗುಡ್ಡ, ಪ್ರತಾಪ್ ಗೌಡ, ಅರುಣ್ಕುಮಾರ್ ಪೂಜಾರ, ಕೊಳ್ಳೇಗಾಲ ಮಹೇಶ್, ಸೇರಿದಂತೆ 20ಕ್ಕೂ ಹೆಚ್ಚು ಮಾಜಿ ಶಾಸಕರು ಮತ್ತು ಮಾಜಿ ಸಚಿವರು ಭಾಗವಹಿಸಿದ್ದರು.
ಭಾನುವಾರ ಬೆಳಿಗ್ಗೆ ತಾನೇ ಪಕ್ಷದಲ್ಲಿ ಬಣ ರಾಜಕಾರಣಕ್ಕೆ ಅವಕಾಶವೇ ಇಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಕಟ್ಟಪ್ಪಣೆ ಹೊರಡಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಬೆಂಬಲಿಗರೇ ಅದೇ ದಿನ ದಾವಣಗೆರೆಯಲ್ಲಿ ಸಭೆ ನಡೆಸಿ ಯಡಿಯೂರಪ್ಪ ಹುಟ್ಟುಹಬ್ಬದ ನೆಪದಲ್ಲಿ ಅವರ ಕುಟುಂಬದ ಪರ ಬಲಪ್ರದರ್ಶನಕ್ಕೆ ತೀರ್ಮಾನಿಸಿದ್ದಾರೆ. ಅಲ್ಲದೆ, ವಿಜಯೇಂದ್ರ ಅವರನ್ನು ಮುಂದಿನ ವಿಧಾನಸಭಾ ಚುನಾವಣೆಯವರೆಗೆ ರಾಜ್ಯಾಧ್ಯಕ್ಷರಾಗಿ ಮುಂದುವರಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದೂ ಸಭೆಯ ನೇತೃತ್ವ ವಹಿಸಿದ ಮುಖಂಡರೇ ಅಧಿಕೃತ ಹೇಳಿಕೆಯನ್ನೂ ನೀಡಿದ್ದಾರೆ.
ಅಂದರೆ, ಸ್ವತಃ ರಾಜ್ಯಾಧ್ಯಕ್ಷರ ಹೇಳಿಕೆಯ ಹೊರತಾಗಿಯೂ ಬಿಜೆಪಿಯ ಬಣ ರಾಜಕಾರಣ ಇನ್ನೂ ಉಲ್ಬಣಗೊಳ್ಳುವ ಸೂಚನೆಯನ್ನು ಅವರದೇ ಬೆಂಬಲಿಗರ ದಾವಣಗೆರೆಯ ಸಭೆ ನೀಡಿದೆ.
ವಿಜಯೇಂದ್ರ ʼಎಕ್ಸ್ʼನಲ್ಲಿ ಹೇಳಿದ್ದೇನು?
ಬಿ.ವೈ. ವಿಜಯೇಂದ್ರ ಅವರು ಭಾನುವಾರ ತಮ್ಮ ಎಕ್ಸ್ ಖಾತೆಯಲ್ಲಿ, “ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪಲಾಗದು. ಈ ನಿಟ್ಟಿನಲ್ಲಿ ಸಭೆ, ಸಮಾವೇಶಗಳನ್ನು ಮಾಡಲು ಯಾರೇ ಹೊರಟಿದ್ದರೂ ಕೂಡಲೇ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ವಿನಂತಿಸುವೆ' ಎಂದು ಹೇಳಿದ್ದರು.
'ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಇನ್ನಷ್ಟು ಬಲ ತುಂಬುವ ಕಾರ್ಯಕ್ರಮಳಡಿಯಲ್ಲಿ ಪಕ್ಷದ ಹಿರಿಯರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಎಲ್ಲ ಹಿರಿಯರೊಂದಿಗೆ ಅತೀ ಶೀಘ್ರದಲ್ಲೇ ಸಭೆ ಕರೆಯಲಿದ್ದೇನೆ' ಎಂದೂ ಅವರು ಹೇಳಿದ್ದರು.
'ಭಾರತೀಯ ಜನತಾ ಪಾರ್ಟಿ ಕೂಡು ಕುಟುಂಬವಿದ್ದಂತೆ, ಪಕ್ಷದ ಚೌಕಟ್ಟಿನಲ್ಲೇ ಪ್ರತಿಯೊಂದು ಸಭೆ, ಕಾರ್ಯಕ್ರಮಗಳು ನಡೆಯಬೇಕೇ ಹೊರತು ಪಕ್ಷದ ನಿಯಮ, ಧ್ಯೇಯಗಳನ್ನು ಬದಿಗೆ ಸರಿಸಿ ಯಾವುದೇ ಚಟುವಟಿಕೆಗಳನ್ನು ನಡೆಸುವುದು ಸಂಘಟನೆಯ ಆಶಯಕ್ಕೆ ಪೂರಕವಾಗಿಲ್ಲದಿರುವುದನ್ನು ವಿನಮ್ರತೆಯಿಂದ ಸಹೃದಯರಲ್ಲಿ ತಿಳಿಸಬಯಸುತ್ತೇನೆ' ಎಂದೂ ಅವರು ಹೇಳಿದ್ದರು.
ಶನಿವಾರ ದಾವಣಗೆರೆಯಲ್ಲಿ ಎಂ ಪಿ ರೇಣುಕಾಚಾರ್ಯ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ ನಡೆದ ತಮ್ಮ ಬೆಂಬಲಿಗರ ಸಭೆಯ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರ ಈ ಹೇಳಿಕೆ ಮಹತ್ವದ ಪಡೆದುಕೊಂಡಿತ್ತು.