BJP Infighting | ಬಿಎಸ್‌ವೈ ತೇಜೋವಧೆ ಯತ್ನ: ವರಿಷ್ಠರ ಜಾಣಮೌನಕ್ಕೆ ವಿಜಯೇಂದ್ರ ಕಿಡಿ
x

BJP Infighting | ಬಿಎಸ್‌ವೈ ತೇಜೋವಧೆ ಯತ್ನ: ವರಿಷ್ಠರ ಜಾಣಮೌನಕ್ಕೆ ವಿಜಯೇಂದ್ರ ಕಿಡಿ

ವಿಜಯೇಂದ್ರ ಅವರು ಗುರುವಾರ ಮೊಟ್ಟಮೊದಲ ಬಾರಿಗೆ ಪಕ್ಷದ ವರಿಷ್ಠರ ನಿಲುವಿನ ವಿರುದ್ಧವೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಬಣ ಬಡಿದಾಟಕ್ಕೆ ಹೊಸ ತಿರುವು ನೀಡಿದ್ದಾರೆ.


ರಾಜ್ಯ ಬಿಜೆಪಿಯ ಬಣ ಸಂಘರ್ಷ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಾ ರಾಜ್ಯಮಟ್ಟದಲ್ಲಿ ಪಕ್ಷವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಪರ ಮತ್ತು ವಿರೋಧಿ ಬಣಗಳಾಗಿ ಒಡೆದು ಹೋಳಾಗಿಸುತ್ತಿದೆ. ಈ ನಡುವೆ ವಿಜಯೇಂದ್ರ ಅವರು ಗುರುವಾರ ಮೊಟ್ಟಮೊದಲ ಬಾರಿಗೆ ಪಕ್ಷದ ವರಿಷ್ಠರ ನಿಲುವಿನ ವಿರುದ್ಧವೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಬಣ ಬಡಿದಾಟಕ್ಕೆ ಹೊಸ ತಿರುವು ನೀಡಿದ್ದಾರೆ.

ಗುರುವಾರ ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ ವೈ ವಿಜಯೇಂದ್ರ, “ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ, ಈ ಇಳಿ ವಯಸ್ಸಿನಲ್ಲೂ ಪಕ್ಷಕ್ಕಾಗಿ ಹಗಲಿರುಳೂ ದುಡಿಯುತ್ತಿರುವ ಬಿ ಎಸ್ ಯಡಿಯೂರಪ್ಪ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ, ಅವರ ತೇಜೋವಧೆ ಮಾಡಲಾಗುತ್ತಿದೆ. ಆದರೆ, ಪಕ್ಷದ ಭಿನ್ನಮತೀಯ ನಾಯಕರ ಅಂತಹ ಹೇಳಿಕೆಗಳಿಗೆ ಕಡಿವಾಣ ಹಾಕುವ, ಅವರ ಬಾಯಿಗೆ ಬೀಗ ಹಾಕುವ ಕೆಲಸವನ್ನು ಪಕ್ಷದ ವರಿಷ್ಠರು ಮಾಡದೇ ಇರುವುದು ದುರಾದೃಷ್ಟಕರ” ಎಂದು ಕಿಡಿಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿಯಾದ, ಪಕ್ಷವನ್ನು ಕಟ್ಟಿಬೆಳೆಸಿದ ಅಂತಹ ಹಿರಿಯರ ಬಗ್ಗೆ ಕೆಲವರು ಹಾದಿಬೀದಿಯಲ್ಲಿ ಅವಮಾನ ಮಾಡುತ್ತಿದ್ದಾರೆ. ಅದರಿಂದಾಗಿ ಪಕ್ಷದ ಕಾರ್ಯಕರ್ತರಿಗೆ ನೋವಾಗುತ್ತಿದೆ. ಪಕ್ಷಕ್ಕೆ ಹಾನಿಯಾಗುತ್ತದೆ. ಹಾಗಾಗಿ ಅಂತಹ ಹೇಳಿಕೆಯನ್ನು ಯಾರು ನೀಡಿದರೂ, ಅಂಥವರ ಬಾಯಿ ಮುಚ್ಚಿಸುವ, ಎಚ್ಚರಿಸುವ ಕೆಲಸ ಮಾಡಬೇಕಿತ್ತು. ಆದರೆ, ಪಕ್ಷದ ವರಿಷ್ಠರು ಅಂತಹ ಪ್ರಯತ್ನವನ್ನು ಮಾಡಿಲ್ಲ ಎಂಬುದು ದುರ್ದೈವದ ಸಂಗತಿ ಎಂದೂ ವಿಜಯೇಂದ್ರ ಹೇಳಿದ್ದಾರೆ.

ಪಕ್ಷಕ್ಕೆ ಯಡಿಯೂರಪ್ಪ ಅವರ ಕೊಡುಗೆ ಏನು? ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರವೇನು? ಎಂಬುದನ್ನು ಪಕ್ಷದ ವರಿಷ್ಠರು ಗಮನಿಸಬೇಕಲ್ಲವೇ? ಎಂದು ಪ್ರಶ್ನಿಸಿದ ವಿಜಯೇಂದ್ರ ಅವರು, ಯಡಿಯೂರಪ್ಪ ವಿರುದ್ಧ ಮಾತನಾಡುವವರಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಈ ಮೂಲಕ ನಾನು ಪಕ್ಷದ ವರಿಷ್ಠರಲ್ಲಿ ಮನವಿ ಮಾಡುತ್ತೇನೆ. ಈವರೆಗೆ ನಾನು ಮಾತನಾಡಬಾರದು ಎಂದು ಸುಮ್ಮನಾಗಿದ್ದೆ. ಆದರೆ, ಈ ಬೆಳವಣಿಗೆಗಳಿಂದ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರು ತಲೆ ಎತ್ತಿ ತಿರುಗಾಡದಂತಹ ವಾತಾವರಣ ಸೃಷ್ಟಿಯಾಗಿದೆ. ಪಕ್ಷದ ಕಾರ್ಯಕರ್ತರಿಗೆ ಅವಮಾನಿಸುವ ಅಧಿಕಾರ ಯಾರಿಗೂ ಇಲ್ಲ. ಆ ಹಿನ್ನೆಲೆಯಲ್ಲಿ ಬಹಿರಂಗವಾಗಿ ಮಾಧ್ಯಮಗಳ ಮೂಲಕವೇ ನಾನು ವರಿಷ್ಠರಿಗೆ ನಾನು ಮನವಿ ಮಾಡುತ್ತಿದ್ದೇನೆ ಎಂದು ಒತ್ತಾಯಿಸಿದರು.

ಆ ಮೂಲಕ ತಮ್ಮ ತಂದೆ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಸಾರ್ವಜನಿಕವಾಗಿ ಅವಮಾನಕರ, ತೇಜೋವಧೆಯ ಭಾಷೆಯಲ್ಲಿ ಮಾತನಾಡುತ್ತಿರುವ ಭಿನ್ನಮತೀಯ ನಾಯಕರ ಹೇಳಿಕೆಗಳಿಗೆ ಕಡಿವಾಣ ಹಾಕದೇ ಇರುವ ಪಕ್ಷದ ವರಿಷ್ಠರ ವಿರುದ್ಧ ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅವರು, ರಾಜ್ಯದ ತಟಸ್ಥ ಗುಂಪಿನವರ ಧೋರಣೆಯನ್ನೂ ಖಂಡಿಸಿದ್ದು, ಅವರೂ ಯಡಿಯೂರಪ್ಪ ಅವರ ತೇಜೋವಧೆಯ ವಿಷಯದಲ್ಲಿ ಮೌನಕ್ಕೆ ಶರಣಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Read More
Next Story