
BJP Infighting | ಯತ್ನಾಳ್-ವಿಜಯೇಂದ್ರ ಮಧ್ಯೆ ʼಧರ್ಮ ದಂಗಲ್ʼ: ಪಕ್ಷದಿಂದ ಸಮುದಾಯಕ್ಕೆ ವಿಸ್ತರಿಸಿದ ಮೇಲಾಟ
ಬಿಜೆಪಿಯ ರಾಜ್ಯಾಧ್ಯಕ್ಷರ ಪಟ್ಟಕ್ಕಾಗಿ ಬಿಜೆಪಿಯ ಬಣಗಳ ನಡುವೆ ಆರಂಭವಾಗಿದ್ದ ಹಗ್ಗಜಗ್ಗಾಟ, ಇದೀಗ ಪಕ್ಷದ ವ್ಯಾಪ್ತಿಯನ್ನು ಮೀರಿ ಸಮುದಾಯಕ್ಕೆ ವಿಸ್ತರಿಸಿದೆ. ವೀರಶೈವ- ಲಿಂಗಾಯತ ಸಮುದಾಯದ ಮಟ್ಟದಲ್ಲಿ ತಮ್ಮ ಬೆಂಬಲ ಕ್ರೋಡೀಕರಿಸಿಕೊಳ್ಳಲು ಎರಡೂ ಬಣಗಳ ಮೇಲಾಟ ಬಿರುಸುಗೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಡುವಿನ ನಾಯಕತ್ವದ ಮೇಲಾಟ ಇದೀಗ ʼಧರ್ಮ ದಂಗಲ್ʼಗೆ ತಿರುಗಿದೆ.
ಭಿನ್ನಮತೀಯ ಚಟುವಟಿಕೆಗಳಿಂದ ಲಾಭ ಕಾಣದ ಯತ್ನಾಳ್ ಅವರು ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪ್ರಭಾವ ತಗ್ಗಿಸಲು ʼಧರ್ಮಾಸ್ತ್ರʼದ ಮೊರೆ ಹೋಗಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಇದೇ ಮಾ.4 ರಂದು ವೀರಶೈವ-ಲಿಂಗಾಯತ ಸಮುದಾಯದ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಅಂದೇ ಬಿ.ವೈ.ವಿಜಯೇಂದ್ರ ಬಣದ ಲಿಂಗಾಯತ ನಾಯಕರು ಕೂಡ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಮಾವೇಶ ನಡೆಸಲು ನಿರ್ಧರಿಸಿರುವುದು ಬಿಜೆಪಿಯ ಒಳಗೇ ʼಧರ್ಮ ದಂಗಲ್ʼಗೆ ಎಡೆ ಮಾಡಿಕೊಟ್ಟಂತಾಗಿದೆ.
ಬಿಎಸ್‌ವೈ ವಿರುದ್ಧ ʼಧರ್ಮಯುದ್ಧʼ
ಪಂಚಮಸಾಲಿ ಮೀಸಲಾತಿಗೆ ಬಿ.ಎಸ್.ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದರೆಂಬ ಕಾರಣ ಮುಂದಿಟ್ಟುಕೊಂಡು, ಯತ್ನಾಳ್ ಅವರು ಸಮುದಾಯದಲ್ಲಿ ಯಡಿಯೂರಪ್ಪರ ಪ್ರಭಾವ ತಗ್ಗಿಸಲು ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ್, ಸಿ.ಸಿ.ಪಾಟೀಲ್, ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಹಲವರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಮೀಸಲಾತಿ ಹೋರಾಟ ವಿಚಾರದಲ್ಲಿ ಅಸಮಾಧಾನವಿದ್ದು, ಸಮುದಾಯದಲ್ಲೂ ಅದನ್ನು ಅಚ್ಚೊತ್ತಲು ಯತ್ನಾಳ್ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಿ.ಎಸ್. ಯಡಿಯೂರಪ್ಪ ವಿರುದ್ಧ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ಸಂಬಂಧದ ಆರೋಪಗಳನ್ನು ತಳ್ಳಿ ಹಾಕಿದ್ದರು.
ಕೆಲವರು ವೈಯಕ್ತಿಕ ಕಾರಣಗಳಿಂದ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಪಂಚಮಸಾಲಿ ಹೋರಾಟಕ್ಕೆ ಅನ್ಯಾಯ ಮಾಡಿದರು ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲೇ ಪಂಚಮಸಾಲಿ ಸಮಾಜಕ್ಕೆ 3ಬಿ ಅಡಿ ಮೀಸಲಾತಿ ದೊರೆಯಿತು. ಈಗ 2ಎ ಸೇರ್ಪಡೆಗಾಗಿ ನಡೆಸುತ್ತಿರುವ ಹಕ್ಕೊತ್ತಾಯಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳುವ ಮೂಲಕ ವಿಜಯೇಂದ್ರ ಅವರು ಯತ್ನಾಳ್ ವಿರುದ್ಧ ಕಿಡಿಕಾರಿದ್ದರು.
ಯತ್ನಾಳ್‌ಗೆ ವಿಜಯೇಂದ್ರ ಬಣ ತಿರುಗೇಟು
ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವೀರಶೈವ-ಲಿಂಗಾಯತರ ಸಭೆಗೆ ಪ್ರತಿಯಾಗಿ ಬಿ.ವೈ.ವಿಜಯೇಂದ್ರ ಬಣದ ನಾಯಕ ಎಂ.ಪಿ.ರೇಣುಕಾಚಾರ್ಯ ಕೂಡ ಪ್ರತ್ಯೇಕ ವೀರಶೈವ-ಲಿಂಗಾಯತರ ಸಭೆ ನಡೆಸಿ, ತಿರುಗೇಟು ನೀಡಲು ಸಿದ್ಧತೆ ನಡೆಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದ ನೆಪದಲ್ಲಿ ಬೆಂಗಳೂರಿನ ಅವರ ನಿವಾಸದಲ್ಲೇ ರೇಣುಕಾಚಾರ್ಯ ಅವರು ಸಮುದಾಯದ ಪ್ರಮುಖರ ಸಭೆ ನಡೆಸಿದ್ದರು. ಆದರೆ, ಈ ಸಭೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಪ್ರಮುಖ ನಾಯಕರು ಯಾರೂ ಭಾಗವಹಿಸಿರಲಿಲ್ಲ. ಇದರಿಂದ ಬಿ.ವೈ.ವಿಜಯೇಂದ್ರ ಅವರಿಗೆ ಹಿನ್ನೆಡೆ ಉಂಟು ಮಾಡಿತ್ತು.
ಹಿತೈಷಿಗಳ ಸಭೆಗೆ ವಿಜಯೇಂದ್ರ ತಡೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪ್ರತೀಕಾರವಾಗಿ ವೀರಶೈವ ಲಿಂಗಾಯತ ಸಮುದಾಯದ ಸರಣಿ ಸಭೆಗಳನ್ನು ನಡೆಸಲು ನಿರ್ಧರಿಸಿದ್ದ ತಮ್ಮ ಬಣದ ನಾಯಕರಿಗೆ ವಿಜಯೇಂದ್ರ ಬ್ರೇಕ್ ಹಾಕಿದ್ದಾರೆ.
ʼಸಮಾಜದ ಹೆಸರಿನಲ್ಲಿ ಯಾರೂ ಕೂಡ ಸಭೆ ಮಾಡಬೇಡಿ, ಬದಲಿಗೆ ಪಕ್ಷ ಸಂಘಟನೆಗೆ ಒತ್ತು ನೀಡಿʼ ಎಂದು ಸಲಹೆ ನೀಡುವ ಮೂಲಕ ಸಮುದಾಯದ ಸಭೆ ನಡೆಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿರುವ ಅವರು, ಸಮ ಸಮಾಜ ಕಟ್ಟಿದ ಬಸವಣ್ಣನವರ ತತ್ವಸಿದ್ಧಾಂತದ ಮೂಲಕ ʼಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲುʼ ಎಂಬ ಧ್ಯೇಯ ಪಾಲಿಸಿದವರು ಬಿ.ಎಸ್.ಯಡಿಯೂರಪ್ಪ ಅವರು. ನನ್ನ ತಂದೆಯ ಆದರ್ಶಗಳನ್ನೇ ಪಾಲಿಸುತ್ತಿರುವ ನಾನು ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದವನು ಎಂಬ ಬಗ್ಗೆ ಕಾಳಜಿ ಪೂರ್ವಕ ಹೆಮ್ಮೆ ಇರಿಸಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಸಮಾಜದ ಆಶಯಕ್ಕೆ ಪೂರಕವಾಗಿ ಸರ್ವ ಸಮಾಜಗಳ ಬಗ್ಗೆ ಸಮಭಾವ ಇಟ್ಟುಕೊಂಡು ಒಟ್ಟು ಸಮಾಜದ ಏಳಿಗೆ ಹಾಗೂ ಅಭಿವೃದ್ಧಿಗಾಗಿ ಚಿಂತಿಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ನನ್ನ ಕೆಲವು ಹಿತೈಷಿಗಳು ನನ್ನ ಹಾಗೂ ನಮ್ಮ ತಂದೆಯವರ ಮೇಲಿನ ಅಭಿಮಾನದಿಂದಾಗಿ ವೀರಶೈವ ಲಿಂಗಾಯತ ಸಮುದಾಯದ ಸರಣಿ ಸಭೆ ನಡೆಸಲು ಹೊರಟಿದ್ದರು. ಇದು ನನ್ನ ಗಮನಕ್ಕೆ ಬಂದ ತಕ್ಷಣದಲ್ಲೇ ನಿಲ್ಲಿಸುವಂತೆ ಸೂಚಿಸಿದ್ದೇನೆ. ಸಭೆಗಳನ್ನು ಮಾಡುವುದರಿಂದ ಪಕ್ಷಕ್ಕೂ ಮುಜುಗರದ ಸನ್ನಿವೇಶ ಸೃಷ್ಟಿ ಆಗಲಿದೆ. ಸಮಾಜದ ಹೆಸರಿನಲ್ಲಿ ಸಭೆಗಳನ್ನು ಸಂಘಟಿಸುವ ಪ್ರಯತ್ನವನ್ನು ಕೂಡಲೇ ನಿಲ್ಲಿಸುವಂತೆ ವಿನಂತಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆ ದಾವಣಗೆರೆಯಲ್ಲಿ ಬಿ ಎಸ್ ಯಡಿಯೂರಪ್ಪ ಜನ್ಮದಿನಾಚರಣೆ ನೆಪದಲ್ಲಿ ತಮ್ಮ ಪರ ಶಕ್ತಿಪ್ರದರ್ಶನ ಸಮಾವೇಶ ನಡೆಸಲು ಮುಂದಾಗಿದ್ದ ತಮ್ಮ ಬಣದ ಎಂ ಪಿ ರೇಣುಕಾಚಾರ್ಯ ಮತ್ತಿತರಿಗೂ ವಿಜಯೇಂದ್ರ ಅವರು ಇದೇ ರೀತಿಯಲ್ಲಿ ಸಮಾವೇಶ ಘೋಷಣೆಯಾದ ಬೆನ್ನಲ್ಲೇ ತಡೆಯೊಡ್ಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವರಿಷ್ಠರ ಬಳಿಗೆ ಯತ್ನಾಳ್ ನಿಯೋಗ
ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಲುವಾಗಿಯೇ ಬಸನಗೌಡ ಪಾಟೀಲ್ ಯತ್ನಾಳ್ ಅವರು ವೀರಶೈವ-ಲಿಂಗಾಯತ ಸಮುದಾಯದ ಸಭೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಯತ್ನಾಳ್, ಸಮುದಾಯದ ಮುಖಂಡರ ಸಭೆ ನಡೆಸಿದ್ದರು. ವೀರಶೈವ-ಲಿಂಗಾಯತ ಸಮುದಾಯದ ಮುಖಂಡರನ್ನು ಒಗ್ಗೂಡಿಸಿ, ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಸುವಂತೆ ಹೈಕಮಾಂಡ್ ಬಳಿಗೆ ನಿಯೋಗ ಕೊಂಡೊಯ್ಯಲು ಆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ವಿಜಯೇಂದ್ರ ಅವರು ಯಾವುದೇ ಕಾರಣಕ್ಕೂ ಮತ್ತೊಮ್ಮೆ ರಾಜ್ಯಾಧ್ಯಕ್ಷ ಆಗಬಾರದು. ವೀರಶೈವ ಲಿಂಗಾಯತ ಸಮುದಾಯದ ಕೋಟಾದಲ್ಲಿ ಯತ್ನಾಳ್, ವಿ.ಸೋಮಣ್ಣ ಅಥವಾ ಬಸವರಾಜ ಬೊಮ್ಮಾಯಿ ಅವರಲ್ಲಿ ಯಾರಿಗಾದರೂ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲು ತೀರ್ಮಾನಿಸಲಾಗಿತ್ತು.
ಒಂದು ವೇಳೆ ಅನ್ಯ ಸಮುದಾಯಗಳಿಗೆ ಅಧ್ಯಕ್ಷ ಸ್ಥಾನ ಮೀಸಲಿಟ್ಟರೆ, ಪರಿಶಿಷ್ಟ ಜಾತಿಯಿಂದ ಅರವಿಂದ ಲಿಂಬಾವಳಿ, ಹಿಂದುಳಿದ ವರ್ಗಗಳ ಸಮುದಾಯದಿಂದ ಕುಮಾರ್ ಬಂಗಾರಪ್ಪ ಅಥವಾ ಸುನೀಲ್ ಕುಮಾರ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ, ಬಿಜೆಪಿಯ ರಾಜ್ಯಾಧ್ಯಕ್ಷರ ಪಟ್ಟಕ್ಕಾಗಿ ಬಿಜೆಪಿಯ ಬಣಗಳ ನಡುವೆ ಆರಂಭವಾಗಿದ್ದ ಹಗ್ಗಜಗ್ಗಾಟ, ಇದೀಗ ಪಕ್ಷದ ವ್ಯಾಪ್ತಿಯನ್ನು ಮೀರಿ ಸಮುದಾಯಕ್ಕೆ ವಿಸ್ತರಿಸಿದೆ. ವೀರಶೈವ- ಲಿಂಗಾಯತ ಸಮುದಾಯದ ಮಟ್ಟದಲ್ಲಿ ತಮ್ಮ ಬೆಂಬಲ ಕ್ರೋಡೀಕರಿಸಿಕೊಳ್ಳಲು ಎರಡೂ ಬಣಗಳ ಮೇಲಾಟ ಬಿರುಸುಗೊಂಡಿದೆ.