BJP Infighting | ಬಣ ಸಂಘರ್ಷ ಉಲ್ಬಣ: ಯತ್ನಾಳ್ ಉಚ್ಚಾಟನೆ ಮಾಡಿ ಬಿಸಾಕಿ ಎಂದ ರೇಣುಕಾಚಾರ್ಯ
ರಾಜ್ಯ ಬಿಜೆಪಿಯ ಬಣ ಸಂಘರ್ಷ ಉಲ್ಬಣಗೊಂಡಿದೆ. ಒಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ್ ಬಣ ಉತ್ತರಕರ್ನಾಟಕದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅವರ ಬೆಂಬಲಿಗರ ವಿರುದ್ಧ ಕಿಡಿಕಾರುತ್ತಿದ್ದರೆ, ಮತ್ತೊಂದು ಕಡೆ ವಿಜಯೇಂದ್ರ ಪರ ಅವರ ಬಣ ದೇವಾಲಯ ದರ್ಶನ ನಡೆಸುತ್ತಾ ಯತ್ನಾಳ್ ವಿರುದ್ಧ ಬೆಂಕಿಯುಗುಳುತ್ತಿದೆ.
ರಾಜ್ಯ ಬಿಜೆಪಿಯ ಬಣ ಸಂಘರ್ಷ ಉಲ್ಬಣಗೊಂಡಿದೆ. ಒಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ್ ಬಣ ಉತ್ತರಕರ್ನಾಟಕದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅವರ ಬೆಂಬಲಿಗರ ವಿರುದ್ಧ ಕಿಡಿಕಾರುತ್ತಿದ್ದರೆ, ಮತ್ತೊಂದು ಕಡೆ ವಿಜಯೇಂದ್ರ ಪರ ಅವರ ಬಣ ದೇವಾಲಯ ದರ್ಶನ ನಡೆಸುತ್ತಾ ಯತ್ನಾಳ್ ವಿರುದ್ಧ ಬೆಂಕಿಯುಗುಳುತ್ತಿದೆ.
ಶನಿವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಎಂ ಪಿ ರೇಣುಕಾಚಾರ್ಯ ನೇತೃತ್ವದ ವಿಜಯೇಂದ್ರ ಬಣ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ನಿಂದ ಸುಪಾರಿ ಪಡೆದು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ ಪಿ ರೇಣುಕಾಚಾರ್ಯ, ಹರತಾಳು ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿ ಸಿ ಪಾಟೀಲ್ ಅವರನ್ನೊಳಗೊಂಡ ಬಣ, ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಮುಡಾ ಪಾದಯಾತ್ರೆಗೆ ಬರಲಿಲ್ಲ. ಭ್ರಷ್ಟಾಚಾರವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಬ್ಲಾಕ್ ಮೇಲ್ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಬ್ಲಾಕ್ ಮೇಲ್ ರಾಜಕಾರಣಕ್ಕೆ ಇನ್ನು ಅವಕಾಶವಿಲ್ಲ. ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಬಿಸಾಕಿ. ಪಕ್ಷದೊಳಗಿನ ದುಷ್ಟ ಶಕ್ತಿ ಸಂಹಾರ ಆಗುತ್ತದೆ. ಯತ್ನಾಳ್ ಉಚ್ಚಾಟನೆ ಆಗಲಿದೆ, ಅವರದ್ದು ಮುಖವಾಡದ ಹಿಂದುತ್ವ ಎಂದಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಯತ್ನಾಳ್ ಕಾರಣ ಎಂದ ರೇಣುಕಾಚಾರ್ಯ, ‘‘ಮಿಸ್ಟರ್ ಇಲಿ, ನಿನ್ನ ಆಟ ನಡೆಯೋದಿಲ್ಲ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಫಿಕ್ಸಿಂಗ್ ಮಾಡಿ, ಬಿಜೆಪಿ ಸೋಲಿಸಿದೆ’’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ಹಿಂದುತ್ವದ ಮುಖವಾಡ ಧರಿಸಿದ್ದಾರೆ. ಅವರ ಹರಕು ಬಾಯಿಯಿಂದ ಬಿಜೆಪಿಗೆ ಉಪ ಚುನಾವಣೆಯಲ್ಲಿ ಸೋಲಾಯಿತು. ವಿಜಯಪುರದ ಪ್ರಭಾವಿ ಸಚಿವರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಶಿಗ್ಗಾವಿಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದರು. ಯತ್ನಾಳ್ ವಿರುದ್ಧ ಮಾತನಾಡಿದ್ದಕ್ಕೆ ನಿನ್ನೆಯಿಂದ ಬೆದರಿಕೆ ಕರೆಗಳು ಬರುತ್ತಿವೆ. ಬಸವಣ್ಣ ವಿಶ್ವಗುರು. ಅಂಥವರಿಗೆ ಅಪಮಾನ ಮಾಡಿರುವ ಯತ್ನಾಳ್ ವಿರುದ್ಧ ಮಠಾಧೀಶರು ದನಿ ಎತ್ತಬೇಕು. ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯಿಸಬೇಕು ಎಂದೂ ರೇಣುಕಾಚಾರ್ಯ ಹೇಳಿದರು.
ಮುಂದಿನ ದಿನಗಳಲ್ಲಿ ಮುರುಡೇಶ್ವರದಲ್ಲಿಯೂ ನಾವು ಮತ್ತೊಂದು ಸಭೆ ನಡೆಸುತ್ತೇವೆ. ಆ ಬಳಿಕ ದಾವಣಗೆರೆಯಲ್ಲಿ 3-4 ಲಕ್ಷ ಜನ ಸೇರಿಸಿ ಬಿಜೆಪಿ ನಾಯಕರ ಬೃಹತ್ ಸಮಾವೇಶ ನಡೆಸುತ್ತೇವೆ. ಜೊತೆಗೆ ಯತ್ನಾಳ್ ಉಚ್ಛಾಟನೆಗೆ ಆಗ್ರಹಿಸಿ ದೆಹಲಿಗೆ ನಿಯೋಗ ಹೋಗಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.
ಈ ನಡುವೆ, ಬಿ ವೈ ವಿಜಯೇಂದ್ರ ಅವರು ದೆಹಲಿಗೆ ತೆರಳಿದ್ದು, ತಮ್ಮ ವಿರುದ್ಧ ನಿರಂತರ ದಾಳಿ ನಡೆಸುತ್ತಿರುವ ಯತ್ನಾಳ್ ಮತ್ತು ಅವರ ಬಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಹೈಕಮಾಂಡ್ ನಾಯಕರ ಭೇಟಿಗಾಗಿ ಕಾದಿದ್ದಾರೆ ಎನ್ನಲಾಗಿದೆ.