
BJP Infighting | ಬಿಜೆಪಿಯ ʼಸ್ವಚ್ಛ ಕರ್ನಾಟಕʼಕ್ಕೆ ಯತ್ನಾಳ್ ಉಚ್ಚಾಟನೆ ಮೊದಲ ಮೆಟ್ಟಿಲು?
ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ನಡೆಸಿರುವ ವಾಗ್ದಾಳಿಗಳಿಂದಾಗಿ ಪಕ್ಷದಿಂದ ಹೊರಬಿದ್ದಿದ್ದರೂ ಅವರು ಮಾಡಿರುವ ಆರೋಪಗಳು ತಲುಪಬೇಕಾದ ಗುರಿಯನ್ನು ತಲುಪಿವೆ! ಹಾಗಾಗಿ ಯತ್ನಾಳ್ ಪಾಲಿಗೆ ಈ ಶಿಸ್ತುಕ್ರಮ ತಾತ್ಕಾಲಿಕವಾಗಿ ಹಿನ್ನಡೆಯಾಗಿದ್ದರೂ ಅವರ ಉದ್ದೇಶ ಈಡೇರುವ ದಿನಗಳು ದೂರವಿಲ್ಲ ಎಂಬುದು ಬಿಜೆಪಿ ಆಂತರಿಕ ವಲಯದ ವಿಶ್ವಾಸ.
ರಾಜ್ಯ ಬಿಜೆಪಿಯ ಬಣ ಸಮರಕ್ಕೆ ಕೊನೆಗೂ ಹೈಕಮಾಂಡ್ ಬ್ರೇಕ್ ಬಿದ್ದಿದೆ. ಬಂಡಾಯ ಬಣದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟಿಸುವ ಮೂಲಕ ಕೇಂದ್ರ ಬಿಜೆಪಿ ಶಿಸ್ತುಸಮಿತಿ ಕಳೆದ ಒಂದೂವರೆ ವರ್ಷದಿಂದ ಭುಗಿಲೆದ್ದಿದ್ದ ಅಂತಃಕಲಹಕ್ಕೆ ವಿರಾಮ ನೀಡಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕವಾದ 2023ರ ನವೆಂಬರ್ ಈವರೆಗೆ ಅವರ ವಿರುದ್ಧ ಯತ್ನಾಳ್ ನಿರಂತರ ಬಂಡಾಯ ಬಾವುಟ ಹಾರಿಸುತ್ತಲೇ ಇದ್ದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರ ಅರ್ಹತೆಯನ್ನೇ ವ್ಯಂಗ್ಯವಾಡುವ ಮೂಲಕ ಪಕ್ಷದ ಹೈಕಮಾಂಡ್ ಆಯ್ಕೆಯ ವಿರುದ್ಧವೇ ಬಹಿರಂಗ ಸಮರ ಸಾರಿದ್ದರು.
ಕೇವಲ ಹೇಳಿಕೆಗಳಷ್ಟೇ ಅಲ್ಲದೆ, ವಕ್ಫ್ ಆಸ್ತಿ ವಿವಾದ, ಮುಡಾ ನಿವೇಶನ ಹಗರಣಗಳ ವಿಷಯದಲ್ಲಂತೂ ಬಿಜೆಪಿಯ ರಾಜ್ಯಾಧ್ಯಕ್ಷರು ಆಡಳಿತರೂಢ ಕಾಂಗ್ರೆಸ್ ನಾಯಕರೊಂದಿಗೆ ಕೈಜೋಡಿಸಿದ್ದಾರೆ. ಹೊಂದಾಣಿಕೆ ರಾಜಕಾರಣದ ಮೂಲಕ ಬಿಜೆಪಿ ಪಕ್ಷವನ್ನು ಸರ್ವನಾಶ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಮತ್ತಿತರ ಕೆಲವು ಅತೃಪ್ತ ನಾಯಕರ ತಂಡ ರಚಿಸಿಕೊಂಡು ಉತ್ತರ ಕರ್ನಾಟಕದಾದ್ಯಂತ ಪ್ರತ್ಯೇಕ ಪ್ರವಾಸ ಕೈಗೊಂಡು ವಕ್ಫ್ ಆಸ್ತಿ ವಿವಾದದ ಸಂತ್ರಸ್ತರ ಸಮೀಕ್ಷೆಯನ್ನೂ ನಡೆಸಿದ್ದರು. ಅಲ್ಲದೆ, ಆ ವೇಳೆ ಪಕ್ಷದ ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ಪಕ್ಷದ ಬ್ಯಾನರ್ ಅಡಿಯಲ್ಲೇ ತಮ್ಮ ಪ್ರವಾಸ ಕೈಗೊಳ್ಳುವ ಮೂಲಕ ತಮ್ಮದೇ ಅಸಲೀ ಬಿಜೆಪಿ ರಾಜ್ಯ ಘಟಕ ಎಂಬ ಹೇಳಿಕೆನ್ನೂ ನೀಡಿದ್ದರು.
ಅಲ್ಲದೆ, ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಆಗ್ರಹಿಸಿ ಪದೇಪದೆ ದೆಹಲಿ ಯಾತ್ರೆ ಕೈಗೊಂಡಿದ್ದ ಯತ್ನಾಳ್, ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದರು. ಜೊತೆಗೆ ರಾಜ್ಯಾಧ್ಯಕ್ಷರ ಚುನಾವಣೆಗೆ ತಮ್ಮ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿಯೂ ಘೋಷಿಸಿದ್ದರು. ಯತ್ನಾಳ್ ಬಣದ ಮತ್ತೊಬ್ಬ ಪ್ರಮುಖ ರಮೇಶ್ ಜಾರಕಿಹೊಳಿ ಅವರಂತೂ ಪಕ್ಷದ ರಾಜ್ಯಾಧ್ಯಕ್ಷರನ್ನು ಬಹಿರಂಗವಾಗಿ “ನಾಲಾಯಕ್, ಬಚ್ಚಾ” ಎಂದು ಏಕವಚನದಲ್ಲಿ ನಿಂದಿಸಿದ್ದರು.
ಸಹಜವಾಗೇ ಈ ಬೆಳವಣಿಗೆಗಳು ಕಳೆದ ಒಂದೂವರೆ ವರ್ಷದಿಂದ ರಾಜ್ಯದ ಜನತೆಗೆ ಪ್ರಹಸನದಂತೆ ಮನರಂಜನೆ ನೀಡಿದ್ದವು. ಅಲ್ಲದೆ, ರಾಜ್ಯ ಬಿಜೆಪಿಯಷ್ಟೇ ಅಲ್ಲದೆ, ಪಕ್ಷದ ಹೈಕಮಾಂಡ್ ಬಗ್ಗೆ ಕೂಡ ಪಕ್ಷದ ಕಾರ್ಯಕರ್ತರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವಂತಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನವೇ ನಗೆಪಾಟಲಿಗೀಡಾಗುವ ಮಟ್ಟಿಗೆ ಪಕ್ಷ ದುರ್ಬಲವಾಗಿಬಿಟ್ಟಿದೆಯೇ? ಎಂಬ ಪ್ರಶ್ನೆಗಳಿಗೂ ಈ ಬೆಳವಣಿಗೆಗಳು ಕಾರಣವಾಗಿದ್ದವು.
ಇದೀಗ ಕೊನೆಗೂ ಪಕ್ಷದ ಹೈಕಮಾಂಡ್ ತಡವಾಗಿಯಾದರೂ ಕಠಿಣ ಸಂದೇಶ ರವಾನಿಸದೆ. ಗಮನಾರ್ಹ ಸಂಗತಿ ಎಂದರೆ, ಪಕ್ಷದಲ್ಲಿ ಮುಜಗರ ಹುಟ್ಟಿಸುವ ತೀವ್ರ ಅಂತಃಕಲಹದ ಭಾಗವಾಗಿದ್ದ ವಿಜಯೇಂದ್ರ ಬಣದ ಎಂ ಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಮಾಜಿ ಶಾಸಕ ಬಿ ಪಿ ಹರೀಶ್ ಅವರಿಗೆ ಶಿಸ್ತು ಕ್ರಮದ ನೋಟಿಸ್ ನೀಡಿದ ಬೆನ್ನಲ್ಲೇ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಆದರೆ, ಈ ಶಿಸ್ತು ಕ್ರಮ ಯತ್ನಾಳ್ ಅವರಿಗೆ ಹೊಸದಲ್ಲ. ಈಗಾಗಲೇ ಪಕ್ಷ ವಿರೋಧಿ ಚಟುವಟಿಕೆಯ ಕಾರಣದ ಮೇಲೆ ಹಿಂದೊಮ್ಮೆ ಅವರು ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದರು. ಬಳಿಕ ಮತ್ತೆ ಮಾತೃಪಕ್ಷಕ್ಕೆ ವಾಪಸ್ಸಾಗಿದ್ದರು. ಆ ಹಿನ್ನೆಲೆಯಲ್ಲಿ ಇದೀಗ ಎರಡನೇ ಬಾರಿಯ ಶಿಸ್ತುಕ್ರಮಕ್ಕೆ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ? ಅವರ ಮುಂದಿನ ನಡೆ ಏನು? ಜೊತೆಗೆ ಅವರೊಂದಿಗೆ ಗುರುತಿಸಿಕೊಂಡಿರುವ ಪಕ್ಷದ ಮಾಜಿ ಸಚಿವರು, ಮಾಜಿ ಸಂಸದರು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ವಿಷಯದಲ್ಲಿ ಎತ್ತಿದ್ದ ದನಿ ಇನ್ನು ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ? ಎಂಬುದು ಕೂಡ ಕರ್ನಾಟಕ ಬಿಜೆಪಿಯ ಮುಂದಿನ ಸ್ಥಿತಿಗತಿಗಳನ್ನು ನಿರ್ಧರಿಸಲಿವೆ.
ಈ ನಡುವೆ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಯತ್ನಾಳ್ ಅವರ ಉಚ್ಛಾಟನೆಯ ಕ್ರಮಕ್ಕೆ, “ಈ ಬೆಳವಣಿಗೆ ಬಗ್ಗೆ ನಾನು ಸಂಭ್ರಮಪಡಲಾರೆ, ಬದಲಾಗಿ ಈ ಬೆಳವಣಿಗೆಯನ್ನು ದುರಾದೃಷ್ಟಕರವೆಂದು ದುಃಖಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ. ಅವರ ಈ ಮಾತುಗಳಲ್ಲಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸವಾಲು ಮತ್ತು ಪರಿಸ್ಥಿತಿಯ ಸುಳಿವು ಇದ್ದಂತಿದೆ.
ಪಕ್ಷದ ಶುದ್ಧೀಕರಣಕ್ಕೆ ಉಚ್ಛಾಟನೆ ತಂತ್ರ!
ಆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಹಂತಹಂತವಾಗಿ ಕರ್ನಾಟಕ ಬಿಜೆಪಿಯ ʼಸ್ವಚ್ಛ ಕರ್ನಾಟಕʼಕ್ಕೆ ಮುಂದಾಗಿದೆಯೇ? ಆ ಸುಳಿವಿನ ಹಿನ್ನೆಲೆಯಲ್ಲಿಯೇ ವಿಜಯೇಂದ್ರ ಅವರು ಈ ʼಸಂಭ್ರಮ ಪಡಲಾಗದʼ ತಮ್ಮ ಮನಸ್ಥಿತಿಯನ್ನು ಈ ಪ್ರತಿಕ್ರಿಯೆಯಲ್ಲಿ ವ್ಯಕ್ತಪಡಿಸಿರಬಹುದೆ? ಎಂಬ ಚರ್ಚೆಗಳೂ ಆರಂಭವಾಗಿವೆ.
ಮೊದಲು ಬಂಡಾಯದ ನಾಯಕನ ವಿರುದ್ಧ ಕ್ರಮಕೈಗೊಂಡು ಬಳಿಕ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ವಿಷಯವನ್ನು ಕೈಗೆತ್ತಿಕೊಳ್ಳುವ ಮೂಲಕ ಪಕ್ಷದ ʼಶುದ್ಧೀಕರಣʼ ಕೈಗೊಳ್ಳುವ ಸಾಧ್ಯತೆಗಳಿವೆ. ಅಂತಹ ಪ್ರಯತ್ನದ ತಂತ್ರವಾಗಿಯೇ ಇದೀಗ ಯತ್ನಾಳ್ ಉಚ್ಛಾಟನೆಯಾಗಿದೆ. ಮುಂದಿನ ಸರದಿ ರಾಜ್ಯಾಧ್ಯಕ್ಷರ ಬದಲಾವಣೆ ಎಂಬುದು ಬಿಜೆಪಿಯ ಆಂತರಿಕ ಮೂಲಗಳ ಮಾಹಿತಿ.
ಪಕ್ಷದ ಪ್ರಬಲ ಮತಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಯಡಿಯೂರಪ್ಪ ಮತ್ತು ಅವರ ಕುಟುಂಬದ ಪ್ರಭಾವ ಈಗಲೂ ಮುಂದುವರಿದಿದೆ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಲೇ ಇದ್ದ ಯತ್ನಾಳ್ ವಿರುದ್ಧ ಕ್ರಮ ಜರುಗಿಸದೇ ಏಕಾಏಕಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಮುಂದಾದರೆ ಅದು ಸಮುದಾಯದ ನಡುವೆ ಪಕ್ಷದ ಬಗ್ಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಬಹುದು. ಅಂತಿಮವಾಗಿ ಅದು ಚುನಾವಣೆಗಳಲ್ಲಿ ಪಕ್ಷಕ್ಕೆ ಮತ್ತಷ್ಟು ಹಿನ್ನಡೆಗೆ ಕಾರಣವಾಗಬಹುದು ಎಂಬುದು ಹೈಕಮಾಂಡ್ ಲೆಕ್ಕಾಚಾರ ಎನ್ನಲಾಗಿದೆ.
ಇದು ಹೈಕಮಾಂಡ್ ನಡೆಸಿರುವ ತಾಲೀಮು ಅಷ್ಟೇ!
ಪರಿವಾರದೊಂದಿಗೆ ನಿಕಟ ನಂಟು ಹೊಂದಿರುವ ಬಿಜೆಪಿಯ ಹಿರಿಯ ನಾಯಕರೊಬ್ಬರ ಪ್ರಕಾರ, “ಇದು ಆರಂಭಿಕ ಕ್ರಮ. ಪಕ್ಷವನ್ನು ದುರಸ್ತಿ ಮಾಡುವ ಮಹತ್ವರ ಹೆಜ್ಜೆಗೆ ಇದೊಂದು ತಂತ್ರವಾಗಿ ಯತ್ನಾಳ್ ಅವರನ್ನು ಉಚ್ಛಾಟಿಸಲಾಗಿದೆ. ಆದರೆ, ಈ ಹಿಂದೆಯೂ ಅವರನ್ನು ಉಚ್ಛಾಟಿಸಲಾಗಿತ್ತು, ಮತ್ತು ಬಳಿಕ ಪಕ್ಷಕ್ಕೆ ಹೈಕಮಾಂಡ್ ನಾಯಕರೇ ಖುದ್ದು ನಿಂತು ಮರುಸೇರ್ಪಡೆ ಮಾಡಿಕೊಂಡಿದ್ದರು. ಅಂದರೆ ಪಕ್ಷಕ್ಕೆ ದೊಡ್ಡ ಮತಬ್ಯಾಂಕ್ ಆಗಿರುವ ಪಂಚಮಸಾಲಿ ಸಮುದಾಯದ ನಾಯಕರಾಗಿ ಯತ್ನಾಳ್ ಅಗತ್ಯ ಮಹತ್ವದ್ದು ಎಂದರ್ಥ ಅಲ್ಲವೇ? ಈಗ ಕೂಡ ಸದ್ಯದ ಪರಿಸ್ಥಿತಿ ನಿಭಾಯಿಸುವ ತುರ್ತು ಉಪಾಯವಾಗಿ ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ. ಅದರರ್ಥ ಮುಂದೆ ಮೇಜರ್ ಸರ್ಜರಿ ನಡೆಯಲಿದೆ. ಅದಕ್ಕೆ ಇದು ಪೂರ್ವ ತಯಾರಿ ಅಷ್ಟೇ”.
ಅಂದರೆ; ಲಿಂಗಾಯತ ಸಮುದಾಯದ ಇಬ್ಬರು ನಾಯಕರ ನಡುವಿನ ಈ ದಾಯಾದಿ ಕಲಹದಲ್ಲಿ ಇಬ್ಬರನ್ನೂ ಬದಿಗೆ ಸರಿಸಿ ಮೂರನೆಯವರನ್ನು ರಂಗದ ಮೇಲೆ ತರಲು ಹೈಕಮಾಂಡ್ ನಡೆಸಿರುವ ತಾಲೀಮು ಇದು ಎಂಬುದು ಅವರ ಮಾತಿನ ಅರ್ಥ. ಅಂದರೆ, ಸದ್ಯದಲ್ಲೇ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಕೂಡ ಆಗಲಿದೆ.
ಅಂದರೆ; ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ನಡೆಸಿರುವ ವಾಗ್ದಾಳಿಗಳಿಂದಾಗಿ ಪಕ್ಷದಿಂದ ಹೊರಬಿದ್ದಿದ್ದರೂ ಅವರು ಮಾಡಿರುವ ಆರೋಪಗಳು ತಲುಪಬೇಕಾದ ಗುರಿಯನ್ನು ತಲುಪಿವೆ! ಹಾಗಾಗಿ ಯತ್ನಾಳ್ ಪಾಲಿಗೆ ಈ ಶಿಸ್ತುಕ್ರಮ ತಾತ್ಕಾಲಿಕವಾಗಿ ಹಿನ್ನಡೆಯಾಗಿದ್ದರೂ ಅವರ ಉದ್ದೇಶ ಈಡೇರುವ ದಿನಗಳು ದೂರವಿಲ್ಲ ಎಂಬುದು ಬಿಜೆಪಿ ಆಂತರಿಕ ವಲಯದ ವಿಶ್ವಾಸ.